ಸುಳ್ಯ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ ಮೂರು ವರ್ಷಗಳಲ್ಲಿ ಅರೆಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ನಿರಂತರ ಪ್ರಯತ್ನ, ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಹತ್ತು ಹಲವು ಸಾಧನೆಗಳ ಮೂಲಕ ಯಶಸ್ವಿಯಾಗಿ ಅವಧಿಯನ್ನು ಪೂರ್ತಿ ಮಾಡಿದ ತೃಪ್ತಿ ಇದೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಲಕ್ಷ್ಮೀ ನಾರಾಯಣ ಕಜೆಗದ್ದೆ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಲ್ಪಾವಧಿ, ಮಧ್ಯಮ ದೀರ್ಘಾವದಿ ಹೀಗೆ ವಿವಿಧ

ಹಂತಗಳಲ್ಲಿ ಯೋಜನೆ ರೂಪಿಸಿ ಕಾರ್ಯಪ್ರವೃತ್ತರಾಗಿದ್ದೆವು. ಕೋವಿಡ್ ಮಹಾಮಾರಿಯ ಮಧ್ಯೆಯೂ ಭಾಷೆ, ಸಂಸ್ಕೃತಿಯ ನಿರಂತರ ಚಟುವಟಿಕೆ, ಪ್ರಯತ್ನ ನಡೆಸಿದ್ದೇವೆ ಅರೆಭಾಷೆ ಪದಕೋಶ, ಅರೆಭಾಷೆ ಪಾರಂಪರಿಕ ವಸ್ತುಕೋಶ, ಅರೆಭಾಷೆ ವಿಶ್ವ ಕೋಶವನ್ನು ತಯಾರಿಸಿ ಬಿಡುಗಡೆ ಮಾಡಿದ್ದೇವೆ. ಪ್ರಾದೇಶಿಕ ಭಾಷೆಗಳಲ್ಲಿ ಇದು ಮೊದಲ ವಿಶ್ವಕೋಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಈ ಪುಸ್ತಕಗಳಿಗೆ ಐಎಸ್ಬಿಎನ್ ನಂಬರ್ ದೊರೆತು ಅಂತಾರಾಷ್ಟ್ರೀಯ ಮಾನ್ಯತೆಯೊಂದಿಗೆ ಪುಸ್ತಕಗಳು ಪ್ರಕಟಗೊಂಡಿದೆ. ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ 36 ತಿಂಗಳಲ್ಲಿ162 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ನಮ್ಮ ಅವಧಿಯಲ್ಲಿ ಮಂಗಳೂರು ವಿವಿಯಲ್ಲಿ ಅರೆಭಾಷೆ ಸಂಶೋಧನಾ ಕೇಂದ್ರ ಸ್ಥಾಪನೆ ಆಗಿದೆ. ಅಕಾಡೆಮಿಯ ವತಿಯಿಂದ 30 ಪುಸ್ತಕಗಳನ್ನು ಪ್ರಕಟಿಸಲಾಗಿದೆ. ಪುಸ್ತಕಗಳ ಡಿಜಿಟಲೀಕರಣ ನಡೆಸಲಾಗಿದೆ. ಅರೆಭಾಷೆ ಸಾಧಕರ ಬದುಕು ಬರೆಹದ ಕುರಿತು ಡಾಕ್ಯುಮೆಂಟರಿ ತಯಾರಿಸಿ ಬಿಡುಗಡೆ ಮಾಡಲಾಗಿದೆ. ಡಿಸೆಂಬರ್ 15 ರಂದು ರಾಜ್ಯದ 18 ಕಡೆಗಳಲ್ಲಿ ಅರೆಭಾಷೆ ದಿನಾಚರಣೆ ನಡೆಸಲಾಗಿದೆ. 6 ಮಂದಿ ಅರೆಭಾಷೆ ಸಾಧಕರ ಕುರಿತ ಅರೆಭಾಷೆ ಸಾಧಕರ ಮಾಲೆ ಪುಸ್ತಕವಾಗಿ ಪ್ರಕಟವಾಗಿದೆ. ಸುಳ್ಯದಲ್ಲಿ ಅರೆಭಾಷೆ ಸಂಸ್ಕೃತಿ ಗ್ರಾಮ ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗಿತ್ತು. ಆದರೆ ಡೀಮ್ಡ್ ಫಾರೆಸ್ಡ್ ಸಮಸ್ಯೆಯಿಂದ ಕೆಲಸ ವಿಳಂಬವಾಗಿದೆ ಎಂದು ಅವರು ಹೇಳಿದರು. ಅರೆಭಾಷೆಯಲ್ಲಿ ನಾಟಕ, ಯಕ್ಷಗಾನ ರಚನೆ ಮಾಡಲಾಗಿದ್ದು

ರಂಗಭೂಮಿ, ಯಕ್ಷಗಾನ, ಸುಗಮ ಸಂಗೀತ, ಗಮಕ, ಚಿತ್ರಕಲೆ ಮೂಲಕ ಅರೆಭಾಷೆಯ ಬೆಳವಣಿಗೆಗೆ ಪ್ರಯತ್ನ ನಡೆಸಲಾಗಿದೆ. ಅಕಾಡೆಮಿಯ ಅರೆಭಾಷೆಯ ಫೆಲೋಶಿಪ್ ಯೋಜನೆಯನ್ವಯ ಹಿಂದಿನ ಅವಧಿಯ 9 ಮತ್ತು ಪ್ರಸ್ತುತ ಸಾಲಿನಲ್ಲಿ 2 ಫೆಲೋಶಿಪ್ ಪೂರ್ತಿ ಮಾಡಲಾಗಿದೆ. ದಕ್ಷಿಣ ಕನ್ನಡ, ಕೊಡಗು, ಬೆಂಗಳೂರುಗಳಲ್ಲಿ ಒಟ್ಟು 15 ಸಂಸ್ಕೃತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು 800 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದಾರೆ. ಹೊಸ ಲೇಖಕರ ತಯಾರಿಗೆ ಎರಡು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗಿದೆ.ಅರೆಭಾಷಾ ತ್ರೈ ಮಾಸಿಕ ಪತ್ರಿಕೆ ಹಿಂಗಾರದ ಚಂದಾದಾರರನ್ನು ಹೆಚ್ಚಿಸಲಾಗಿದೆ. ಅರೆಭಾಷೆಗೆ ಐ.ಎಸ್.ಒ ಮಾನ್ಯತೆ ಪಡೆಯಲು ಪ್ರಯತ್ನ ನಡೆಸಲಾಗಿದೆ. ಅರೆಭಾಷೆ ಸಾಹಿತ್ಯ ಸಮ್ಮೇಳನ, ಒಂದು ರಾಷ್ಟ್ರೀಯ ವಿಚಾರ ಸಂಕಿರಣ, 8 ಆನ್ ಲೈನ್ ಉಪನ್ಯಾಸ, 10 ವಿಶೇಷ ಉಪನ್ಯಾಸ ಆಯೋಜಿಸಲಾಗಿದೆ. ವಾದ್ಯ ಪರಿಕರಗಳ ವಿತರಣೆ, ಕಾಲೇಜುಗಳಲ್ಲಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘ ರಚನೆ ಮತ್ತಿತರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಲಕ್ಷ್ಮೀನಾರಾಯಣ ಕಜೆಗದ್ದೆ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಅಕಾಡೆಮಿಯ ಮಾಜಿ ಸದಸ್ಯರಾದ ಪುರುಷೋತ್ತಮ ಕಿರ್ಲಾಯ, ಕುಸುಮಾಧರ.ಎ.ಟಿ, ಜಯಪ್ರಕಾಶ್ ಮೋಂಟಡ್ಕ, ಕಿರಣ್ ಕುಂಬಳಚೇರಿ ಉಪಸ್ಥಿತರಿದ್ದರು.