ಮಂಗಳೂರು: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು 2025ನೇ ಸಾಲಿನ ಪ್ರಶಸ್ತಿಯನ್ನು ಘೋಷಿಸಲಾಗಿದ್ದು ಮಾರ್ಚ್ 14ರಂದು ಮಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿಯನ್ನು ವಿತರಿಸಲಾಗುವುದು. ಪ್ರಶಸ್ತಿಯು 50 ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ ಎಂದು
ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಂಶೋಧಕ ಪುತ್ತೂರು ಆನಂತರಾಜ ಗೌಡ, ಅರೆಭಾಷೆ ಸಂಘಟಕಿ ಹಾಗೂ ಸಮಾಜ ಸೇವಕಿ ಲೋಕೇಶ್ವರಿ ವಿನಯಚಂದ್ರ ಹಾಗೂ ಅರೆಭಾಷೆ ಸಾಹಿತಿ ಕಟ್ರತನ ಲಲಿತಾ ಆಯ್ಯಣ್ಣ ಇವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಆಕಾಡೆಮಿಯು ಪುಸ್ತಕ ಪ್ರಕಟಣೆಗಾಗಿ ಆಹ್ವಾನ ನೀಡಿದ್ದು, ವಿವಿಧ ಲೇಖಕರು ಸಲ್ಲಿಸಿರುವ ಪುಸ್ತಕಗಳಲ್ಲಿ ಆಯ್ದ 12 ಪುಸ್ತಕಗಳ ಬಿಡುಗಡೆಯೂ ಈ ಸಂದರ್ಭದಲ್ಲಿ ನಡೆಯಲಿದೆ. ಇದರಲ್ಲಿ ಹಿರಿಯ ಸಾಹಿತಿ ಪಿ.ಜಿ. ಅಂಬೆಕಲ್ ಅವರ ಕತಾ ಸಂಕಲನ ಚಿನ್ನಕ್ಕನ ಕಿರಿಕಿರಿ, ಎಡಕೇರಿ ವಿಶ್ವನಾಥ್ ಅವರ ಕವನ ಸಂಕಲನ ಮೊಟ್ನ ಪರಿಮಳ, ಕದ್ರಿತ ಲಲಿತಾ ಅಯ್ಯಣ್ಣ ಅವರ ಲೇಖನಗಳ ಸಂಗ್ರಹ ಶಾಸ್ತ್ರ ಸಂಪದ, ಎಂ.ಜಿ ಕಾವೇರಮ್ಮನವರ ಲೇಖನಗಳ ಸಂಗ್ರಹ ಜೊಂಗೆ, ಸುಶ್ಮಿತಾ ಉಗ್ರಾಣಿಮನೆ ಇವರ ಕವನ ಸಂಕಲನ ನೆನ್ನುನ ನಡಿಗೆಲಿ, ಎ.ಕೆ. ಹಿಮಕರ ಇವರ ವಿಚಾರ ಸಾಹಿತ್ಯ ಅರೆಭಾಷೆ ಗೌಡರ ಕಾರಣಿಕದ ದೈವಗ, ಸೂರ್ತಲೆ ವಾರಿಜ ಅವರ ಕತಾ ಸಂಕಲನ ಅರ್ಸು ಮತ್ತೆ ಪ್ರಧಾನಿನ ಕತೆ, ರೇಣುಕಾ ಮುಕ್ಕಾಟ ಅವರ ಕಾದಂಬರಿ ಮುತ್ತು, ಓಂಶ್ರೀ ದಯಾನಂದ ಕೂಡಕಂಡಿ ಅವರ ಕತಾ ಸಂಕಲನ ಚಾಂಪನ ನೆಂಪುನ ಬುತ್ತಿ, ಪ್ರಾಪ್ತಿ ಗೌಡ ಅವರ ಪ್ರಬಂಧ ಸಂಕಲನ ವಿಮಲವ್ವನ ಮೂರು ಪಿಳ್ಳಿಕೆ, ಜಾನಕಿ ಬೈತಡ್ಕ ಅವರ ಕವನ ಸಂಕಲನ ಸೆರಗ್ಲಿ, ಕಾರ್ತಿಪದೇಲ ಇವರ ಕತಾ ಸಂಕಲನ ಸಣ್ಣುನ ಕತೆಗೆ ಪುಸ್ತಕಗಳು ಸೇರಿವೆ.
ಅರೆಭಾಷೆ ಅಕಾಡೆಮಿಯು ಇದೇ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲಾವಿದರಿಗೆ ವಾದ್ಯ ಪರಿಕರಗಳನ್ನು ವಿತರಿಸಲಾಗುವುದು ಎಂದು ಸದಾನಂದ ಮಾವಜಿ ತಿಳಿಸಿದ್ದಾರೆ.

ಸ್ಪೀಕರ್ ಯು.ಟಿ.ಖಾದರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಪ್ರಶಸ್ತಿ ಪ್ರದಾನ ಮಾಡುವರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ್ ತಂಗಡಗಿ ಪುಸ್ತಕ ಬಿಡುಗಡೆ ಮಾಡುವರು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗು ವಿರಾಜಪೇಟೆ ಶಾಸಕರಾದ ಎ.ಎಸ್.ಪೊನ್ನಣ್ಣ ವಾದ್ಯ ಪರಿಕರಗಳ ವಿತರಣೆ ಮಾಡುವರು. ಲಯನ್ಸ್ ಮಾಜಿ ಗವರ್ನರ್ ಎಂ.ಬಿ.ಸದಾಶಿವ ಅಭಿನಂದನಾ ಭಾಷಣ ಮಾಡುವರು. ಅರೆಭಾಷೆ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಅಧ್ಯಕ್ಷತೆ ವಹಿಸುವರು.ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ಭಾಗೀರಥಿ ಮುರುಳ್ಯ, ಮಂಥರ್ ಗೌಡ, ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ, ಮಂಜುನಾಥ ಭಂಡಾರಿ, ವಿವಿಧ ನಿಗಮ ಹಾಗೂ ಮಂಡಳಿಗಳ ಅಧ್ಯಕ್ಷರಾದ ಟಿ.ಎಂ.ಶಾಹಿದ್ ತೆಕ್ಕಿಲ್, ಎಂ.ಎ.ಗಫೂರ್, ಹರೀಶ್ ಕುಮಾರ್, ಶಾಲೆಟ್ ಲವೀನಾ ಪಿಂಟೋ, ಮಮತಾ ಗಟ್ಟಿ ವಿವಿಧ ಅಕಾಡೆಮಿಗಳ ಅಧ್ಯಕ್ಷರು ಭಾಗವಹಿಸಲಿದ್ದಾರೆ ಎಂದು ಸದಾನಂದ ಮಾವಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









