ಮಡಿಕೇರಿ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಪ್ರಕಟಿಸಲಾಗಿರುವ ಅರೆಭಾಷೆ ವಿಶ್ವಕೋಶ ಹಾಗೂ ಗ್ರಾಂಥಿಕ ಕನ್ನಡ ಮತ್ತು ಅರೆಭಾಷೆ ತೌಲನಿಕ ವ್ಯಾಕರಣ, ಅರೆಭಾಷೆ ಕೈಪಿಡಿ, ನಾಟಕ ಕತೆ, ಲಲಿತ ಪ್ರಬಂಧ, ಅರೆಭಾಷೆ ಸಾಧಕರ ಮಾಲೆ ಸೇರಿದಂತೆ ಒಟ್ಟು 14 ಪುಸ್ತಕಗಳನ್ನು ನಗರದ ಭಾರತೀಯ ವಿದ್ಯಾಭವನದಲ್ಲಿ ಗುರುವಾರ ಬಿಡುಗಡೆ ಮಾಡಲಾಯಿತು. ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ
ಮೈಸೂರು ವಿಶ್ವವಿದ್ಯಾಲಯ ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಹಾ.ತಿ.ಕೃಷ್ಣೇಗೌಡ ವೈವಿದ್ಯತೆಯಲ್ಲಿ ಏಕತೆ ಹೊಂದಿರುವ ಭಾರತ ದೇಶದಲ್ಲಿ ಸಂಸ್ಕೃತಿಯ ಜ್ಞಾನವನ್ನು ಗಳಿಸಿಕೊಂಡು ಹೋಗಬೇಕು. ಆ ನಿಟ್ಟಿನಲ್ಲಿ ಅರೆಭಾಷೆ ಅಕಾಡೆಮಿ ವತಿಯಿಂದ ಹೊರತರಲಾಗಿರುವ ‘ವಿಶ್ವಕೋಶ’ ಪುಸ್ತಕವು ಒಂದು ಗ್ರಂಥವಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು
ಅರೆಭಾಷೆ ಅಕಾಡೆಮಿಯಿಂದ ಪ್ರಕಟಿಸಲಾಗಿರುವ ಪುಸ್ತಕ ಕುರಿತು ಮಾತನಾಡಿದ ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ವಿಶ್ವನಾಥ ಬದಿಕಾನ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯವು ಕೊಡಗು, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಪ್ರದೇಶದಲ್ಲಿ ವಿಭಿನ್ನವಾಗಿದೆ. ಆ ನಿಟ್ಟಿನಲ್ಲಿ ಈಗ ಪ್ರಕಟಿಸಲಾಗಿರುವ ಪುಸ್ತಕಗಳು ಸಹ ಆಯಾಯ ಪ್ರದೇಶದ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಒಳಗೊಂಡಿದೆ ಎಂದು ಅವರು ಹೇಳಿದರು.
ಅರೆಭಾಷೆ ಅಕಾಡೆಮಿಯಿಂದ ಹೊರತರಲಾದ ಪುಸ್ತಕಗಳು ಅರೆಭಾಷೆ ಸಂಸ್ಕೃತಿ ಮತ್ತು ಇತಿಹಾಸವನ್ನು ತಿಳಿದುಕೊಳ್ಳುವ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಒಳಗೊಂಡಿದೆ. ಆ ದಿಸೆಯಲ್ಲಿ ಎಲ್ಲರೂ ಅರೆಭಾಷೆಯನ್ನು ಕಟ್ಟಿ ಬೆಳೆಸುವಂತಾಗಬೇಕು. ಪದಕೋಶ, ವಿಶ್ವಕೋಶ, ಪಾರಂಪರಿಕ ವಸ್ತುಕೋಶ ಹೀಗೆ ಹಲವು ಪುಸ್ತಕಗಳು ಜತನ ಮಾಡಿಕೊಂಡು ಓದುವ ಪುಸ್ತಕವಾಗಿದೆ ಎಂದು ವಿಶ್ವನಾಥ ಬದಿಕಾನ ಅವರು ನುಡಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಲಕ್ಷ್ಮೀ ನಾರಾಯಣ ಕಜೆಗದ್ದೆ ಅಧ್ಯಕ್ಷತೆ ವಹಿಸಿದ್ದರು.
ಮೈಸೂರು ಶೇಷಾದ್ರಿಪುರಂ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಲಾವಣ್ಯ ಸಿ,ಪಿ., ಕೊಟ್ಟಕೇರಿಯನ ಮಾತನಾಡಿದರು.
ಕಟ್ರತನ ಲಲಿತಾ ಅಯ್ಯಣ್ಣ (ಗೂಡಿಗೆ ಮರಳಿದ ಹಕ್ಕಿ), ಲೀಲಾ ದಾಮೋದರ ಕುಂದಲ್ಪಾಡಿ(ಗುಬ್ಬಿ ಗೂಡಿನ ಚಿಲಿಪಿಲಿ), ಅರೆಭಾಷೆ ಪ್ರಬಂಧ, ಅರೆಭಾಷೆ ಪದ್ಯ, ಅರೆಭಾಷೆ ಕೈಪಿಡಿ ಇತರ ಪುಸ್ತಕ ಬಿಡುಗಡೆ ಮಾಡಲಾಯಿತು.
ಅರೆಭಾಷೆ ಅಕಾಡೆಮಿ ಪ್ರಕಟಿತ 14 ಪುಸ್ತಕಗಳು, ಅಕಾಡೆಮಿಯ ದಶವರ್ಷ ಸ್ಮರಣ ಸಂಚಿಕೆ ಹಾಗೂ ಚಿತ್ರಕಲಾ ಶಿಬಿರದ ನೆನಪಿನ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.
ಅರೆಭಾಷೆ ಸಾಧಕರ ಮಾಲೆ ಪುಸ್ತಕ ಬರೆದಿರುವ ಬಾರಿಯಂಡ ಜೋಯಪ್ಪ, ಅಮೆ ಪಾಲಾಕ್ಷ, ಡಾ.ಪೂವಪ್ಪ ಕಣಿಯೂರು, ಡಾ.ಅನುರಾಧ ಕುರುಂಜಿ, ಅಕಾಡೆಮಿ ಸದಸ್ಯರಾದ ಬೈತಡ್ಕ ಜಾನಕಿ ಬೆಳ್ಯಪ್ಪ, ಸ್ಮಿತಾ ಅಮೃತರಾಜ್, ಚೊಕ್ಕಾಡಿ ಪ್ರೇಮ ರಾಘವಯ್ಯ, ಧನಂಜಯ ಅಗೋಳಿಕಜೆ, ಡಾ.ದಯಾನಂದ ಕೂಡಕಂಡಿ, ಎ.ಟಿ.ಕುಸುಮಾಧರ, ಜಯಪ್ರಕಾಶ್ ಮೊಂಟಡ್ಕ, ಪುರುಷೋತ್ತ ಕಿರ್ಲಾಯ, ಡಾ.ಪುರುಷೋತ್ತಮ ಕರಂಗಲ್ಲು, ಕಿರಣ್ ಕುಂಬಳಚೇರಿ, ಭರತೇಶ್ ಅಲಸಂಡೆಮಜಲು, ರಿಜಿಸ್ಟ್ರಾರ್ ಚಿನ್ನಸ್ವಾಮಿ ಉಪಸ್ಥಿತರಿದ್ದರು.