*ಅನಿಲ್ ಎಚ್.ಟಿ.
ಕರ್ನಾಟಕ ಅರೆಭಾಷೆ ಸಾಹಿತ್ಯ ಸಂಸ್ಕೃತಿ ಅಕಾಡೆಮಿ ಅಧ್ಯಕ್ಷರಾಗಿ ಲಕ್ಷೀನಾರಾಯಣ ಕಜೆಗದ್ದೆ ನೇಮಕ ಎಂಬ ಸುದ್ದಿ ನೋಡುತ್ತಿದ್ದಂತೆಯೇ ಹಲವರಿಗೆ ಅಚ್ಚರಿಯಾಗಿತ್ತು. ಯಾರಿದು ಹೊಸ ವ್ಯಕ್ತಿ? ಹೇಗೆ ನಿಭಾಯಿಸುತ್ತಾರೆ ಅಕಾಡೆಮಿಯನ್ನು ಎಂಬುದೇ ಮೊದಲ ಪ್ರಶ್ನೆಯಾಗಿತ್ತು
ಇಂಥ ಲಕ್ಷೀನಾರಾಯಣ ಕಜೆಗದ್ದೆ ಘಟ್ಟ ಹತ್ತಿ ಮಡಿಕೇರಿಗೆ ಬಂದು 3 ವರ್ಷಗಳ ಕಾಲ ಅರೆಭಾಷೆ ಸಾಹಿತ್ಯ ಸಂಸ್ಕೃತಿ ಅಕಾಡೆಮಿಯನ್ನು ಅಧ್ಯಕ್ಷರಾಗಿ ಮುನ್ನಡೆಸಿದರು.
ಕಜೆಗದ್ದೆ ಎಂಬ ಅಪರಿಚಿತ ವ್ಯಕ್ತಿ ಇದೀಗ 3 ವರ್ಷಗಳ ಬಳಿಕ ಅಕಾಡೆಮಿ ಅಧ್ಯಕ್ಷರಾಗಿ ನಿರ್ಗಮಿಸುವ ಸಂದರ್ಭ ಎಲ್ಲರಿಗೂ ಪರಿಚಿತರಾಗಿಬಿಟ್ಟರು. ಎಲ್ಲರಿಗೂ ಆತ್ಮೀಯರಾಗಿಬಿಟ್ಟಿದ್ದರು. ಕಜೆಗದ್ದೆ ಎಂಬ ಹೆಸರೇ ಎಲ್ಲರ ಮನಸ್ಸಿಗೆ ಕುಷಿ ಕೊಡುವ ವ್ಯಕ್ತಿತ್ವದ್ದಾಗಿತ್ತು. ವಿವಾದವನ್ನು ಮೈ ಮೇಲೆ ಎಳೆದುಕೊಳ್ಳದೇ, ತನ್ನ ಪಾಡಿಗೆ ತಾನು ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಾ ಸಾಗಿದ ಲಕ್ಷ್ಮೀನಾರಾಯಣ ಕಜೆಗದ್ದೆ ಅಕಾಡೆಮಿಗೆ ಒಂದು

ನಿರ್ದಿಷ್ಟ ರೂಪು ಕೊಟ್ಟರು. ಯೋಜನೆಗಳಿಗೆ ದಾರಿ ತೋರಿಸಿದರು.
ಸರಿಯಾಗಿ ಹೇಳಬೇಕೆಂದರೆ, ಅಕಾಡೆಮಿಯೊಂದು 10 ವರ್ಷಗಳಲ್ಲಿ ಮಾಡಬಹುದಾದ ಕೆಲಸ, ಯೋಜನೆಗಳನ್ನು ತನ್ನ ತಂಡದೊಂದಿಗೆ ಕೇವಲ 3 ವರ್ಷಗಳಲ್ಲಿ ಕಜೆಗದ್ದೆ ಪೂರೈಸಿದ ಸಾಧನೆ ತೋರಿದರು.
ಕೋವಿಡ್ ಕಾರಣದಿಂದಾಗಿ 1 ವರ್ಷ ವ್ಯರ್ಥವಾದರೂ ಉಳಿದ 2 ವರ್ಷಗಳಲ್ಲಿ ಅಕಾಡೆಮಿಯ ಅಧ್ಯಕ್ಷರು ಮತ್ತು ತಂಡದ ಸದಸ್ಯರ ಕಾರ್ಯವೈಖರಿ ಶ್ಲಾಘನೀಯವಾಗಿತ್ತು.
ಮಡಿಕೇರಿಯ ಕಾಫಿ ಕೖಪಾ ಕಟ್ಟಡದ ಜಿಲ್ಲಾ ಬಿಜೆಪಿ ಕಛೇರಿಯಿಂದ ಕರೆದರೂ ಕೇಳುವಷ್ಟು ದೂರದಲ್ಲಿದ್ದರೂ ರಾಜಕೀಯ ಸೋಂಕು ತಗುಲದಂತೆ ಸೂಕ್ಷ್ಮವಾಗಿ ಅಕಾಡೆಮಿಯ ಕೆಲಸ ಕಾರ್ಯ ನಿಭಾಯಿಸಿದರು.2019 ರ ಅಕ್ಟೋಬರ್ ನಿಂದ 2022 ರ 14 ರವರೆಗಿನ ಕಾಲಾವಧಿಯಲ್ಲಿ ಸುಮಾರು 190 ಕಾರ್ಯಕ್ರಮಗಳನ್ನು ಅಕಾಡೆಮಿ ವತಿಯಿಂದ ಜಾರಿಗೊಳಿಸಿದರು. ಅರೆಭಾಷೆ ಸಾಹಿತ್ಯ, ಅಂಚೆಲಕೋಟೆ, ಚಲನಚಿತ್ರ, ಸಾಕ್ಷ್ಯ ಚಿತ್ರ, ಅರೆಭಾಷೆ ಪುಸ್ತಕಗಳ ಡಿಜಟಲೀಕರಣ, ರಂಗಭೂಮಿ ಚಟುವಟಿಕೆ, ಸುಗಮಸಂಗೀತ, ತಾಳಮದ್ದಲೆ, ಚಿತ್ರಕಲಾ ಶಿಬಿರ .. ಒಂದೇ ಎರಡೇ ನೂರಾರು ಚಟುವಟಿಕೆಗಳ ಸಾರಥಿ

ಕಜೆಗದ್ದೆಯಾಗಿದ್ದರು. ಪ್ರಾರಂಭದಲ್ಲಿ ಇಂವ ಘಟ್ಟದ ಕೆಳಗಿನವ.. ಇಂವ ನಮ್ಮವ ಅಲ್ಲ ಎಂದು ಕೊಡಗಿನಲ್ಲಿ ಕೇಳಿಬಂದಿದ್ದ ಕೆಲವು ಕೂಗುಗಳಿಗೆ ಕಜೆಗದ್ದೆ ತನ್ನ ಕಾರ್ಯವೈಖರಿ ಮೂಲಕವೇ ಉತ್ತರ ನೀಡಿದರು. ಘಟ್ಟ ಇಳಿಯುವಾಗ ಕೊಡಗಿನವರು ಇಂವ ನಂಮವ. ಇಂವ ನಮ್ಮವ ಎಂಬ ಶ್ಲಾಘನೆಗೆ ಪಾತ್ರರಾದರು.
ಅರೆಭಾಷೆಯಲ್ಲಿ ಮೂಡಿಬಂದ ಸಾಹೇಬರು ಬಂದವೇ ನಾಟಕ ರಾಜ್ಯವ್ಯಾಪಿ ಯಶಸ್ನಿ ಪ್ರದರ್ಶನ ಕಂಡು ದಾಖಲೆ ಮಾಡಿತು. 7 ಸಾವಿರ ಮಂದಿ 16 ತಿರುಗಾಟದ ಪ್ರದರ್ಶನದಲ್ಲಿ ಈ ನಾಟಕ ನೋಡಿದ್ದು ಗಮನಾಹ೯..
3 ಸಾರ್ಥಕ ವರ್ಷಗಳ ಅಧ್ಯಕ್ಷಗಾದಿಯ ನೇತೖತ್ವ ಮುಗಿಸಿ ಘಟ್ಟ ಇಳಿದು ಹೊರಡುವ ಹೊತ್ತಿನಲ್ಲಿಯೂ ಕಜೆಗದ್ದೆ ವಿಶೇಷವಾದದ್ದನ್ನು ನೀಡಿದ್ದಾರೆ.
ಅರೆಭಾಷೆ ಅಕಾಡೆಮಿ ಸಾಧನೆಯ ಹಾದಿ.. ಎಂಬ ದಾಖಲಾರ್ಹ ಕೖತಿಯನ್ನು ಅತ್ಯಂತ ಅಂದವಾಗಿ ಮುದ್ರಿಸಿ ಭವಿಷ್ಯಕ್ಕೆ ಅಕಾಡೆಮಿಯ ಕಾರ್ಯಯೋಜನೆ ಹೇಗಿರಬೇಕು. ತಮ್ಮ ಅವಧಿಯಲ್ಲಿ ಹೇಗೆ ಕೆಲಸ ಮಾಡಿದ್ದೇವು ಎಂಬ ಹೆಜ್ಜೆ ಗುರುತನ್ನು ದಾಖಲಿಸಿದ್ದಾರೆ.
ಸರ್ಕಾರಿ ಅಕಾಡೆಮಿಯ ಸೀಮಿತ ಚೌಕಟ್ಟಿನಲ್ಲಿಯೂ ಅತ್ಯಂತ ವಿಭಿನ್ನವಾಗಿ ಹೊಸ ಪ್ರಯೋಗಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿ ಅರೆಭಾಷೆ ಅಕಾಡೆಮಿಗೆ ಕಾಯಕಲ್ಪ ನೀಡಿದ ಕೀರ್ತಿ ಖಂಡಿತಾ ಕಜೆಗದ್ದೆಗೆ ಸೇರಲೇಬೇಕು.

ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷನಾಗಿ ನಾನು ಆಹ್ವಾನಿಸಿದ ಕಾರ್ಯಕ್ರಮಕ್ಕೆ ಸುಳ್ಯದಿಂದ ಬಂದು ಸಮಯದ ಮಿತಿಯರಿತು ಹಿತ ಮತ್ತು ಮಿತವಾಗಿ ಮಾತನಾಡಿದ ಕಜೆಗದ್ದೆ ಜತೆ ಅನೇಕ ಕಾರ್ಯಕ್ರಮಗಳನ್ನು ಜಾನಪದ ಪರಿಷತ್‌ನಿಂದ ಆಯೋಜಿಸಬೇಕೆಂಬ ಯೋಜನೆ ಇದೀಗ ಮೂಲೆಗುಂಪಾಗಿದೆ.ಮುಂದಿನ ವಷ೯ ಮತ್ತೆ ಅಕಾಡೆಮಿಗೆ ಹೊಸ ಅಧ್ಯಕ್ಷರು, ಸದಸ್ಯರು ನೇಮಕಗೊಳ್ಳುತ್ತಾರೆ. ಆದರೆ ಕಜೆಗದ್ದೆಯಂಥ ಚಿಂತನಶೀಲರು ಅಕಾಡೆಮಿಗೆ ದೊರಕಲಿ ಎಂಬುದೇ ಈಗಿನ ಆಶಯ. ಸಾಧನೆಯ ಹಾದಿ ಕೖತಿಯನ್ನು ಅಧಿಕಾರವಾಧಿಯ ಕೊನೇ ದಿನ.. ಕೊನೇ ಕ್ಷಣ… ನನ್ನನ್ನು ಹುಡುಕಿಕೊಂಡು ಬಂದಿದ್ದ ಲಕ್ಷ್ಮೀನಾರಾಯಣ ಕಜೆಗದ್ದೆ ಮೊದಲು ಬಂದಾಗ ಹೇಗೆ ಮಂದಸ್ಮಿತರಾಗಿದ್ದರೋ ಹಾಗೇ ಪಟ್ಟ ಮತ್ತು ಘಟ್ಟ ಇಳಿಯುವ, ಸಂದರ್ಭವೂ ಕಂಡು ಬಂದರು.

ಕೈ ಹಿಡಿದುಕೊಂಡು ಪುಸ್ತಕವಿತ್ತು ಹೋಗುತ್ತೇನೆ ಹಾಗಾದರೆ ಎಂದಾಗ ಬೇಸರವಾಯಿತು..
ಹೋಗುತ್ತೇನೆ ಎನ್ನದಿರಿ.. ಬರುತ್ತೇನೆ ಎನ್ನಿ ಎಂದೆ ಕುಶಲವಾಗಿ..
ಕಜೆಗದ್ದೆ ಎಂಬ ಗೆಳೆಯ ಘಟ್ಟವನ್ನೇರಿ.. ದೂರದೂರಕ್ಕೆ .
ಎತ್ತರೆತ್ತರಕ್ಕೆ ಸಾಗಲಿ.. ಮನದಲ್ಲಿಯೇ ಇರುವ ಇನ್ನೂ ಹೊಸ ಹೊಸ ಯೋಜನೆಗಳು.. ನನಸಾಗಲಿ ಎಂದು ಹಾರೈಕೆ.
ಅಪ್ಪಟ ಸ್ನೇಹಕ್ಕೆ ಥ್ಯಾಂಕ್ಯು ಕಜೆಗದ್ದೆ.. ಶುಭವಾಗಲಿ.. !!!

(ಅನಿಲ್ ಎಚ್.ಟಿ. ಹಿರಿಯ ಪತ್ರಕರ್ತರು ಹಾಗು ಅಂಕಣಕಾರರು.ಕಲೆ, ಸಾಹಿತ್ಯ, ಸಾಂಸ್ಕೃತಿಕ ವಿಶ್ಲೇಷಕರು)
1 comment
ಅನಿಲ್ ಹೇಳಿದ ಮಾತುಗಳೆಲ್ಲ ಸತ್ಯ.
ಕಜೆಗದ್ದೆಯವರ ಸಾಧನೆಯನ್ನು ಹತ್ತಿರದಿಂದ ನೋಡಿ, ಮೆಚ್ಚಿದವ ನಾನು. ಅಭಿನಂದನೆಗಳು.