ಸುಳ್ಯ: ಸಾಮಾಜಿಕ ಪರಿವರ್ತನೆಯ ಹರಿಕಾರ ಡಿ. ದೇವರಾಜ ಅರಸುರವರು ತನ್ನ ದೂರಸೃಷ್ಟಿತ್ವದ ಮೂಲಕ ರಾಜ್ಯದಲ್ಲಿ ಬದಲಾವಣೆ ತಂದಿದ್ದಾರೆ. ವಸತಿ ನಿಲಯಗಳನ್ನು ಸ್ಥಾಪಿಸುವ ಮೂಲಕ ಹೆಣ್ಣು ಮಕ್ಕಳ ಶಿಕ್ಷಣ ಆದ್ಯತೆ ನೀಡುವುದಲ್ಲದೆ ಹೆಣ್ಣು ಮಕ್ಕಳಿಗೆ ಸ್ವತಂತ್ರವಾಗಿ ಬದುಕಲು ಕಲಿಸಿಕೊಟ್ಟವರು ದೇವರಾಜ ಅರಸುರವರು ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಸುಳ್ಯದ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ನಡೆದ
ಹಿಂದುಳಿದ ವರ್ಗಗಳ ಧೀಮಂತ ನಾಯಕ ರಾಜ್ಯ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ೧೦೯ನೇ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ, ಸಮಾರಂಭದ ಅದ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜದ ತಳಮಟ್ಟದವರಿಗೂ ಶಿಕ್ಷಣ ಸಿಗಬೇಕು ಮತ್ತು ಚಿಂತೆ ರಹಿತವಾದ ಶಿಕ್ಷಣ ಎಲ್ಲಾರಿಗೂ ಸಿಗಬೇಕು ಎನ್ನುವ ಉದ್ದೇಶದಿಂದ ವಸತಿ ನಿಲಯಗಳನ್ನು ತೆರೆದರು. ಇದರಿಂದ ಬಡವರು ಶಾಲೆಗೆ ಹೋಗಿ ಶಿಕ್ಷಣ ಪಡೆಯುವಂತಾದರು. ಹೆಣ್ಣು ಮಕ್ಕಳು ಸ್ವಾತಂತ್ರವಾಗಿ ಬದುಕಲು ಕಲಿಸಿಕೊಟ್ಟದು ವಸತಿ ನಿಲಯಗಳು. ಹೆಣ್ಣು ಮಕ್ಕಳಿಗೆ ವಸತಿ ನಿಲಯಗಳು ಸುರಕ್ಷಿತ ಸ್ಥಳವಾಗಿದೆ ಎಂದರು.
ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಮಾತನಾಡಿ ದೇವರಾಜ ಅರಸು ಅವರು ತನ್ನ ಅಧಿಕಾರದ ಅವಧಿಯಲ್ಲಿ ದೂರದೃಷ್ಟಿ ಯೋಜನೆಗಳ ಮೂಲಕ ರಾಜ್ಯವನ್ನು ಬದಲಾವಣೆ ಮಾಡಿದ್ದಾರೆ. ಉಳುವವನೇ ಭೂಮಿಯ ಒಡೆಯ ಅಲ್ಲದೇ ಶಿಕ್ಷಣ, ವಸತಿ ನಿಲಯ, ಮೂಲಭೂತ ಸೌಕರ್ಯ, ಐಟಿ ಬಿಟಿ ಕ್ಷೇತ್ರಗಳಲ್ಲಿ ಆಮೂಲಾಗ್ರ ಬದಲಾವಣೆ ತರುವ ಮೂಲಕ ಕ್ರಾಂತಿ ಮಾಡಿದ್ದಾರೆ ಎಂದರು.
ಸಮಾರಂಭದಲ್ಲಿ ವಿದ್ಯಾರ್ಥಿ ದೀಕ್ಷಿತಾ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ತಹಸೀಲ್ದಾರ್ ಮಂಜುನಾಥ್. ಜಿ, ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ, ನಗರ ಪಂಚಾಯಿತಿ ಸದಸ್ಯರಾದ ಶರೀಫ್ ಕಂಠಿ, ಶಶಿಕಲಾ ನೀರಬಿದಿರೆ, ಕಿಶೋರಿ ಶೇಟ್, ರಿಯಾಝ್ ಕಟ್ಟೆಕ್ಕಾರ್, ಶಿಲ್ಪಾ ಸುದೇವ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ವಿದ್ಯಾರ್ಥಿ ನಿಲಯದಲ್ಲಿದ್ದುಕೊಂಡು ಕಲಿತು ತಾಲೂಕಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿನಿಯರನ್ನು ಮತ್ತು ಅಡುಗೆ ಸಿಬ್ಬಂದಿಯವರನ್ನು ಸನ್ಮಾನಿಸಲಾಯಿತು.
ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಗೀತಾ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಮೇಲ್ವಿಚಾರಕಿ ಲತಾ ಕುಮಾರಿ ವಂದಿಸಿದರು. ಮೇಲ್ವಿಚಾರಕಿಗಳಾದ ದೀಪಿಕಾ ಮತ್ತು ಗೀತಾ ಕಾರ್ಯಕ್ರಮ ನಿರೂಪಿಸಿದರು.