ಸುಳ್ಯ:ಸುಮಾರು 300 ವರುಷಗಳ ಬಳಿಕ ಅರಂಬೂರಿನ ಮಣ್ಣಿನಲ್ಲಿ ಕಲಿಯುಗದ ಪ್ರತ್ಯಕ್ಷ ದೈವ ಶ್ರೀ ವಯನಾಟ್ ಕುಲವನ್ ದೈವ ಅವತರಿಸಿ ಭಕ್ತರನ್ನು ಹರಸಲಿದೆ. ಮೂರು ಶತಮಾನಗಳ ಬಳಿಕ
ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ನಡೆಯುವ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವಕ್ಕೆ ಶೃಂಗಾರಗೊಂಡು ಅದ್ದೂರಿಯಾಗಿ ಅಣಿಯಾಗಿದೆ ಅರಂಬೂರು. ಪಯಸ್ವಿನಿ ತಟದ ಪ್ರಶಾಂತ ಸುಂದರ ಪರಿಸರದ ಶ್ರೀ ವಯನಾಟ್ ಕುಲವನ್ ದೈವಸ್ಥಾನದ ಅಂಗಣದಲ್ಲಿ ನಾಳೆಯಿಂದ ನಾಲ್ಕು ದಿನಗಳ ಕಾಲ
ಮಹೋತ್ಸವ ವೈಭವ. ಈ ವೈಭವಕ್ಕೆ ಸಾಕ್ಷಿಯಾಗಲು, ನಾಡಿಗೇ ನಾಡೇ ಕಾತರದಿಂದ ಕಾಯುತಿದೆ.ಕಲಿಯುಗದ ಪ್ರತ್ಯಕ್ಷ ದೈವ ಶ್ರೀ ವಯನಾಟ್ ಕುಲವನ್ ಹಾಗೂ ಇತರ ದೈವಗಳನ್ನು ಕಣ್ತುಂಬಿಕೊಳ್ಳಲು ಜನ ಸಾಗರವೇ ಹರಿದು ಬರಲಿದೆ. ಮಾ.15ರಿಂದ 18ರ ತನಕ ನಡೆಯುವ 4 ದಿನಗಳ ದೈವಂಕಟ್ಟು ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ಪೂರ್ತಿಯಾಗಿದೆ. ಸುಳ್ಯ ನಗರ ಸಮೀಪ ಪರಿವಾರ ಕಾನದಿಂದಲೇ ತಳಿರು ತೋರಣಗಳು, ಬಂಟಿಂಗ್ಸ್, ದೈವಗಳ ಆಕರ್ಷಕ ಪ್ಲೆಕ್ಸ್, ಬ್ಯಾನರ್ಗಳು, ಝಗಮಗಿಸುವ ಲೈಟಿಂಗ್ಸ್ಗಳಿಂದ ಅಲಂಕಾರ ಮಾಡಲಾಗಿದೆ. ಅಲ್ಲಲ್ಲಿ ತಲೆ ಎತ್ತಿರುವ

ದ್ವಾರಗಳು ಸ್ವಾಗತ ಕಮಾನುಗಳು, ದೈವಗಳ ಚಿತ್ರಗಳು ಅತ್ಯಾಕಕರ್ಷಕವಾಗಿ ಮೂಡಿ ಬಂದಿದ್ದು ಜನ ಮನ ಸೆಳೆಯುತಿದೆ. ದಾರಿಯುದ್ದಕ್ಕೂ ಆಕರ್ಷಕವಾಗಿ ಶೃಂಗಾರಗೊಂಡಿದ್ದು ದೈವಸ್ಥಾನದಲ್ಲಿ ಎಲ್ಲಾ ಸಿದ್ಧತೆಗಳು ಪೂರ್ತಿಯಾಗಿದೆ. ದೈವಂಕಟ್ಟು ಉತ್ಸವಕ್ಕೆ ಮರಕ್ಕಳ, ಉಗ್ರಾಣ ವ್ಯವಸ್ಥೆ, ಕಾರ್ಯಾಲಯ, ಭಕ್ತರಿಗೆ ಕುಳಿತುಕೊಳ್ಳುವ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ, ಅಲಂಕಾರ ಕೆಲಸಗಳು ಸೇರಿದಂತೆ ವಿವಿಧ ಸಿದ್ಧತೆಗಳನ್ನು ನಡೆಸಲಾಗಿದೆ.
ಕುತ್ತಿಕೋಲು ಶ್ರೀ ತಂಬೂರಾಟಿ ಭಗವತಿ ಕ್ಷೇತ್ರದ ಪರಿಧಿಯಲ್ಲಿ ಬರುವ ಸುಳ್ಯ ಪ್ರಾದೇಶಿಕ ಸಮಿತಿ ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನ ಸುಮಾರು 20 ವರ್ಷಗಳ ಹಿಂದೆ ಪುನರ್ ಪ್ರತಿಷ್ಠಾ ಮಹೋತ್ಸವ ನಡೆದಿತ್ತು.ಇದೀಗ ದೈವಸ್ಥಾನದಲ್ಲಿ ಕೆಲವೊಂದು ಅಭಿವೃದ್ಧಿ ಕಾರ್ಯಗಳು ನಡೆದು ದೈವಂಕಟ್ಟು ಮಹೋತ್ಸವಕ್ಕೆ ಅಣಿಯಾಗಿದೆ. ಸುಮಾರು 300 ವರ್ಷಗಳ ಬಳಿಕ ಇಲ್ಲಿ ದೈವಂಕಟ್ಟು ಉತ್ಸವ ನಡೆಯಲಿದೆ.
ದೈವಂಕಟ್ಟು ಮಹೋತ್ಸವಕ್ಕೆ ಸಕಲ ಸಿದ್ಧತೆ ನಡೆಸಲಾಗಿದೆ ಎಂದು ದೈವಂಕಟ್ಟು ಮಹೋತ್ಸವ ಸಮಿತಿಯ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಪ್ರಧಾನ ಕಾರ್ಯದರ್ಶಿ ಪವಿತ್ರನ್ ಗುಂಡ್ಯ ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ.

ಮಹೋತ್ಸವ ಕಾರ್ಯಕ್ರಮ:
ಮಾ.15ರಂದು ಶನಿವಾರ ಪೂ.10 ರಿಂದ ಹಸಿರುವಾಣಿ ಮೆರವಣಿಗೆ ಶ್ರೀ ಮೂಕಾಂಬಿಕ ಭಜನಾ ಮಂದಿರದ ವಠಾರದಿಂದ ಹೊರಡಲಿದೆ.
ವಿವಿಧ ಕಡೆಗಳಿಂದ ಆಗಮಿಸಿದ ಹಸಿರುವಾಣಿ ಭಜನಾ ಮಂದಿರದಿಂದ ಮೆರವಣಿಗೆ ಮೂಲಕ ಕ್ಷೇತ್ರಕ್ಕೆ ಆಗಮಿಸಲಿದೆ.ಪೂ.ಗಂಟೆ 11.15 ರಿಂದ 12.20ರ ಒಳಗೆ ಕಲವರ ನಿರಕ್ಕಲ್ (ಉಗ್ರಾಣ ತುಂಬುವುದು).ರಾತ್ರಿ 7.00 ರಿಂದ ಶ್ರೀ ವಿಷ್ಣುಮೂರ್ತಿ ಸಪರಿವಾರ ದೈವಗಳಿಗೆ ಕೂಡುವುದು.ರಾತ್ರಿ 10 ರಿಂದ ಶ್ರೀ ಕೊರ್ತಿಯಮ್ಮನ ಕೋಲಗಳು ರಾತ್ರಿ 1.30 ರಿಂದ ಶ್ರೀ ಪೊಟ್ಟನ್ ದೈವ.
ಮಾ.16ರಂದು ಆದಿತ್ಯವಾರ ಪೂ.9ರಿಂದ ಶ್ರೀ ವಿಷ್ಣುಮೂರ್ತಿ ದೈವ ಪೂ.10:30 ರಿಂದ ಶ್ರೀ ಚಾಮುಂಡಿಯಮ್ಮ, ಮಧ್ಯಾಹ್ನ ಗಂಟೆ 12.30ರಿಂದ ಶ್ರೀ ಗುಳಿಗ ದೈವ,ಸಂಜೆ 6ರಿಂದ
ಕೈವೀದ್ ನಂತರ ಶ್ರೀ ವಯನಾಟ್ ಕುಲವನ್ ಹಾಗೂ ಸಪರಿವಾರ ದೈವಗಳಿಗೆ ಕೂಡುವುದು.

ಮಾ.17ರಂದು ಸೋಮವಾರ ಅಪರಾಹ್ನ 2 ರಿಂದ ಶ್ರೀ ಕಾರ್ನವನ್ ದೈವದ ವೆಳ್ಳಾಟಂ ಅಪರಾಹ್ನ 4 ರಿಂದ ಶ್ರೀಕೋರಚ್ಚನ್ ದೈವದ ವೆಳ್ಳಾಟಂ, ಸಂಜೆ 7ರಿಂದ ಶ್ರೀಕಂಡನಾರ್ ಕೇಳನ್ ದೈವದ ವೆಳ್ಳಾಟಂ,ರಾತ್ರಿ 11ರಿಂದ ನಂತರ ಬಪ್ಪಿಡಲ್, ಶ್ರೀ ವಿಷ್ಣುಮೂರ್ತಿದೈವಕ್ಕೆ ಕೂಡುವುದು. ರಾತ್ರಿ 12 ರಿಂದ ಶ್ರೀವಯನಾಟ್ ಕುಲವನ್ ದೈವದ ವೆಳ್ಳಾಟಂ.
ಮಾ.18 ಮಂಗಳವಾರ ಪೂರ್ವಾಹ್ನ 9ರಿಂದ ಶ್ರೀ ಕಾರ್ನವನ್ ದೈವ 11ರಿಂದ ಶ್ರೀ ಕೋರಚ್ಚನ್ ದೈವ, ಮಧ್ಯಾಹ್ನ 1.00 ರಿಂದ ಶ್ರೀ ಕಂಡನಾರ್ ಕೇಳನ್ ದೈವ ಸಂಜೆ ಗಂಟೆ 4ರಿಂದ ಶ್ರೀ ವಯನಾಟ್ ಕುಲವನ್ ದೈವ ಸೂಟೆ ಸಮರ್ಪಣೆ. ಸಂಜೆ 5 ರಿಂದ ಶ್ರೀ ವಿಷ್ಣುಮೂರ್ತಿ ದೈವ ರಾತ್ರಿ 1ರಿಂದ ಮರ ಪಿಳರ್ಕಲ್ ನಂತರ ಕೈವೀದ್ ನಡೆಯಲಿದೆ.
