ಸುಳ್ಯ:ವಿದ್ಯಾ ಮಾರ್ಗ, ಭಕ್ತಿ ಮಾರ್ಗ, ಜ್ಞಾನ ಮಾರ್ಗ, ವೈಜ್ಞಾನಿಕ ಮಾರ್ಗದ ಮೂಲಕ ವಿಕಾಸನವಾದುದು ನಮ್ಮ ಸನಾತನ ಸಂಸ್ಕೃತಿ. ವೇದ ಅಧ್ಯಯನವು ಭಾರತೀಯ ಸಂಸ್ಕೃತಿಯ ಉಳಿವಿಗೆ ಪೂರಕ ಎಂದು ಕಾಂಚಿ ಕಾಮಕೋಟಿ ಪೀಠಾಧಿಪತಿ ಜಗದ್ಗುರು ಶ್ರೀ ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ ಮಹಾಸ್ವಾಮಿ ಹೇಳಿದರು.
ಅವರು ಶನಿವಾರ ಅರಂಬೂರು ಭಾರದ್ವಾಜಾಶ್ರಮದ
ನವೀಕೃತ ಶ್ರೀ ಕಾಂಚಿಕಾಮಕೋಟಿ ವೇದವಿದ್ಯಾಲಯವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.ನಾವು ಧರ್ಮವನ್ನು ರಕ್ಷಣೆ ಮಾಡಿದರೆ ಧರ್ಮ ನಮ್ಮನ್ನು ರಕ್ಷಣೆ ಮಾಡುತ್ತದೆ. ವಿದ್ಯಾರ್ಥಿಗಳು ವೈಜ್ಞಾನಿಕ, ರಾಜಕೀಯ, ಸಾಮಾಜಿಕ ಶಿಕ್ಷಣ ನೀಡುವ ಲೌಖಿಕ ಶಿಕ್ಷಣದ ಜೊತೆಗೆ ನಮ್ಮ ಧರ್ಮ, ಪುರಾಣ, ಸಂಸ್ಕೃತಿ, ಸಂಸ್ಕಾರ ಕಲಿಸುವ ಧಾರ್ಮಿಕ ಶಿಕ್ಷಣವನ್ನು ಪಡೆಯಬೇಕು. ವೇದಾಧ್ಯಯನ ಮಾಡುವುದು ಭಾರತದ ಸಂಸ್ಕೃತಿ ಎಂದ ಅವರು ಭಾರತೀಯ ಜೀವನ ಕ್ರಮ ವೇದ ಮಾರ್ಗದಲ್ಲಿ ಇರಬೇಕು. ಎಲ್ಲಾ ಸಂಪತ್ತಿಗಿಂತಲೂ ಧರ್ಮ ಮುಖ್ಯ. ಆದುದರಿಂದ ಮಾನವನ ಬದುಕು ಧರ್ಮ, ಸಂಪ್ರದಾಯ, ಸಂಸ್ಕೃತಿಯಿಂದ ಕೂಡಿರಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ಪರಿಸರದ ೨೫ ವಸಂತ ವೇದ ಪಾಠಶಾಲೆಗಳನ್ನು, ನಿರಂತರ ವೇದ ಪಾಠಶಾಲೆಗಳನ್ನು ಹಾಗೂ ವೇದ ವಿದ್ವಾಂಸರನ್ನು ಕಾಂಚಿ ಪೀಠಾಧಿಪತಿಗಳು ಗೌರವಿಸಿದರು. ಅಲ್ಲದೇ ವೇದ ವಿದ್ಯಾಲಯದಲ್ಲಿ ಕಲಿತು ಉನ್ನತ ಅಧ್ಯಯನ ನಡೆಸಿದ ವಿದ್ಯಾರ್ಥಿಗಳನ್ನು ಗೌರವಿಸಿದರು.
ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷ ಟಿ.ಶ್ಯಾಮ್ ಭಟ್,ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್, ಭಾರದ್ವಾಜಾಶ್ರಮದ ವ್ಯವಸ್ಥಾಪಕ ರವಿಶಂಕರ್ ಭಟ್, ಗೋವಿಂದರಾಜ್ ಭಾರದ್ವಾಜ್, ಕಶೆಕೋಡಿ ಸೂರ್ಯನಾರಾಯಣ ಭಟ್ ಮೊದಲಾದವರನ್ನು ಸನ್ಮಾನಿಸಲಾಯಿತು. ವೇದವಿದ್ಯಾಲಯದ ವೆಂಕಟೇಶ್ವರ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು.













