ಸುಳ್ಯ:ಬಹು ಕಾಲದ ಬೇಡಿಕೆಯಾದ ಅರಂತೋಡು ಗ್ರಾಮದ ಅರಮನೆಗಯ ಎಂಬಲ್ಲಿ ಸಂಪರ್ಕ ಸೇತಯವೆ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ. ಕಾಮಗಾರಿಗೆ ಆಡಳಿತಾತ್ಮಕ ಮಂಜೂರಾತಿಗೆ ಸರಕಾರಕ್ಕೆ ಅಂದಾಜು ಪಟ್ಟಿಯ ಪ್ರಸ್ತಾವನೆ ಸಲ್ಲಿಸಲಾಗಿದೆ. ಉಪಶಮನ ನಿಧಿ(ಮಿಟಿಗೇಷನ್ ಫಂಡ್)ಯಡಿ ಅರಮನೆಗಯದಲ್ಲಿ ಸಂಪರ್ಕ ಸೇತುವೆ ನಿರ್ಮಾಣಕ್ಕೆ 1.75 ಕೋಟಿ ಅನುದಾನವನ್ನು ಮಂಜೂರು ಮಾಡಿ
ಜಿಲ್ಲಾಧಿಕಾರಿಗಳ ಕಚೇರಿಯ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯು ಅನುಮೋದನೆ ನೀಡಿದೆ. ಅರಮನೆಗಯ ಸೇತಯವೆಯ ಕಾಮಗಾರಿಯು ಒಂದು ಕೋಟಿಗಿಂತ ಹೆಚ್ಚು ಅಂದಾಜು ಮೊತ್ತ ಇರುವುದರಿಂದ ಆರ್ಥಿಕ ಇಲಾಖೆಯ ಪ್ರತ್ಯಾ ಯೋಜನೆಯಂತೆ ಕಾಮಗಾರಿಗೆ ಆಡಳಿತಾತ್ಮಕ ಮಂಜೂರಾತಿಯನ್ನು ಪಡೆಯಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಲೋಕೋಪಯೋಗಿ ಇಲಾಖೆಯ ಸುಳ್ಯ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೆ.ಗೋಪಾಲ್ ಮಾಹಿತಿ ನೀಡಿದ್ದಾರೆ.

ರಾಜ್ಯ ವಿಪತ್ತು ಉಪಶಮನ ನಿಧಿಯಡಿ ದ.ಕ.ಜಿಲ್ಲೆಗೆ ಬಿಡುಗಡೆಯಾದ ಅನುದಾನದಲ್ಲಿ ಅರಮನೆಗಯ ಸಂಪರ್ಕ ಸೇತುವೆ ಸೇರಿದಂತೆ 19 ಕಾಮಗಾರಿಗಳನ್ನು ನಡೆಸಲು ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮಂಜೂರಾತಿ ನೀಡಲಾಗಿದೆ. ಸುಳ್ಯ ತಾಲೂಕಿನಲ್ಲಿ 233.5 ಲಕ್ಷದಲ್ಲಿ ಒಟ್ಟು 4 ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗಿದೆ. ಇತರ ಕಾಮಗಾರಿಗಳಾದ ದೇವಚಳ್ಳ ಗ್ರಾಮದ ಶೆಟ್ಟಿಯಡ್ಕ- ಕರಂಗಲ್ಲು ರಸ್ತೆಯ ಕೂಡಿಗೆಯಲ್ಲಿ ಕಾಲು ಸಂಕ ನಿರ್ಮಾಣಕ್ಕೆ 40 ಲಕ್ಷ, ಕೊಲ್ಲಮೊಗ್ರ ಗ್ರಾಮದ ಕೋನಡ್ಕ-ಕೊಂದಾಳ ರಸ್ತೆಯ ಕೊಂದಾಳ ಎಂಬಲ್ಲಿ ಕಾಲು ಸಂಕ ರಚನೆಗೆ 15 ಲಕ್ಷ, ಆಲೆಟ್ಟಿ ಗ್ರಾಮದ ಮಾಣಿಮರ್ಧು- ಕೋನಂಪಾರೆ ರಸ್ತೆಯಲ್ಲಿ ಮೋರಿ ರಚನೆಗೆ 3.50 ಲಕ್ಷ ಅನುದಾನ ಮಂಜೂರಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಗೋಪಾಲ್ ಮಾಹಿತಿ ನೀಡಿದರು.
ಅರಮನೆಗಯದಲ್ಲಿ ಜನರ ಸಂಚಾರಕ್ಕೆ ಶಾಶ್ವತ ಪರಿಹಾರ ಮಾಡಬೇಕು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿತ್ತು. ಈ ಹಿನ್ನಲೆಯಲ್ಲಿ ಪ್ರಸ್ತಾವನೆ ಕಳಿಸಿ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಆಗಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ.