ಸುಳ್ಯ:ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಸಿದ್ಧಗೊಂಡ ‘ಅಪ್ಪ’ ಅರೆಭಾಷೆ ನಾಟಕದ ಪ್ರಥಮ ಪ್ರದರ್ಶನ ನಾಳೆ (ನ.27ರಂದು) ಸುಳ್ಯ ನೆಹರೂ ಸ್ಮಾರಕ ಮಹಾವಿದ್ಯಾಲಯದಲ್ಲಿ ನಾಟಕದ ಪ್ರಥಮ ಪ್ರದರ್ಶನ ನಡೆಯಲಿದೆ. ನ.30 ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಅರೆಭಾಷೆ ಅಕಾಡೆಮಿಯ
ಗೌರವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ.
ಅರೆಭಾಷೆ ಅಕಾಡೆಮಿ ಸದಸ್ಯ ಹಾಗೂ ರಂಗನಿರ್ದೇಶಕ ಲೋಕೇಶ್ ಊರುಬೈಲು ರಚನೆ ಮತ್ತು ನಿರ್ದೇಶನ ಮಾಡಿರುವ ಅಪ್ಪ ನಾಟಕವನ್ನು
ಅರೆಭಾಷೆ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ಸದಸ್ಯ ಸಂಚಾಲಕ ಚಂದ್ರಶೇಖರ ಪೇರಾಲು ಹಾಗೂ ಇತರ ಸಹಕಾರದಲ್ಲಿ ನಿರ್ಮಿಸಲಾಗಿದೆ. ಪ್ರಥಮ ಪ್ರದರ್ಶನವನ್ನು ನ.27ರಂದು ಸಂಜೆ 5ಕ್ಕೆ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಉದ್ಘಾಟಿಸುವರು. ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ತುಕಾರಾಮ ಏನೆಕಲ್, ರಂಗನಿರ್ದೇಶಕರಾದ ಬಾಸುಮಾ ಕೊಡಗು, ಜೀವನ್ ರಾಂ ಸುಳ್ಯ, ಕಾಲೇಜಿನ ಪ್ರಾಂಶುಪಾಲ ಎಂ.ಎಂ. ರುದ್ರಕುಮಾರ್ ಭಾಗವಹಿಸಲಿದ್ದಾರೆ.

ಗ್ರಾಮೀಣ ಸೊಗಡಿನ ಅಚ್ಚ ಅರೆಭಾಷೆಯ ನಾಟಕ ‘ಅಪ್ಪ ಜನರ ಬದುಕಿನ ನೈಜ ಚಿತ್ರಣವನ್ನು, ಮಾನವ ಸಂಬಂಧಗಳನ್ನು, ಕೃಷಿ ಬದುಕಿನ ತಲ್ಲಣಗಳನ್ನು ಪ್ರಸ್ತುತಪಡಿಸುತ್ತದೆ. ಒಂದು ತಲೆಮಾರಿನಿಂದ ಇನ್ನೊಂದು
ತಲೆಮಾರಿಗೆ ಆಗುವ ಬದಲಾವಣೆಯ ಪಲ್ಲಟಗಳನ್ನು ಅತ್ಯಂತ ಸರಳ ಮತ್ತು ಸ್ವಾರಷ್ಯಕರವಾಗಿ ವಿವರಿಸಲಾಗಿದೆ. ತೀರಾ ಸಾಮಾನ್ಯ ಕೃಷಿ ಕುಟುಂಬದ ಯಜಮಾನ ‘ಅಪ್ಪ’ನನ್ನು ಕೇಂದ್ರ ಪಾತ್ರವಾಗಿರಿಸಿಕೊಂಡು ಹಳೆಯ ಮತ್ತು ಹೊಸ ತಲೆಮಾರಿನ ಕೊಂಡಿಯಾದ ಅಪ್ಪ ಮತ್ತು ಮಗನ ನಡುವಿನ ಸಂಬಂಧಗಳೇ ನಾಟಕದ ಕಥಾ ಹಂದರ. ಇಪ್ಪತ್ತಕ್ಕೂ ಹೆಚ್ಚು ಕಲಾವಿದರು ನಾಟಕದ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅರೆಭಾಷಿಕರ ಗ್ರಾಮೀಣ ಜೀವನ, ಕೃಷಿ ಬದುಕು, ಆಚಾರ ವಿಚಾರ ಹಾಗೂ ಸಂಸ್ಕೃತಿಗಳ ವಾಸ್ತವ ಚಿತ್ರಣ ಅತ್ಯಂತ ನವಿರಾಗಿ ಪ್ರಸ್ತುತಪಡಿಸಲಾಗಿದೆ. ರಂಗಾಸಕ್ತರಿಗೆ ಪ್ರವೇಶ ಉಚಿತವಾಗಿರುತ್ತದೆ ಎಂದು ಅರೆಭಾಷೆ ಅಕಾಡೆಮಿಯ ಪ್ರಕಟಣೆ ತಿಳಿಸಿದೆ.












