ಸುಳ್ಯ:ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯ ಸುಳ್ಯ ಪೊಲೀಸ್ ಠಾಣೆಯ ವತಿಯಿಂದ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಜಾಗೃತಿ ಜಾಥಾ ಡಿ.29ರಂದು ಸುಳ್ಯದಲ್ಲಿ ನಡೆಯಿತು. ಸುಳ್ಯ ಜ್ಯೋತಿ ವೃತ್ತದಿಂದ ಗಾಂಧಿನಗರ ತನಕ ಜಾಥಾ ನಡೆದು ಅಪರಾಧ ತಡೆಗೆ ಜಾಗೃತಿ ಮೂಡಿಸಲಾಯಿತು. ಜ್ಯೋತಿ ವೃತ್ತದಿಂದ ಆರಂಭಗೊಂಡ ಜಾಗೃತಿ ಜಾಥಾಕ್ಕೆ
ಸುಳ್ಯ ವೃತ್ತ ನಿರೀಕ್ಷಕರಾದ ಮೋಹನ್ ಕೊಠಾರಿ ಚಾಲನೆ ನೀಡಿದರು. ಸುಳ್ಯ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಈರಯ್ಯ ದೂಂತೂರು, ಉಪನಿರೀಕ್ಷಕರಾದ ಸರಸ್ವತಿ, ಸುಳ್ಯ ಕೈಗಾರಿಕೆ ಮತ್ತು ವಾಣೀಜ್ಯೋದ್ಯಮಿಗಳ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಕಾರ್ಯದರ್ಶಿ ಡಿ.ಎಸ್.ಗಿರೀಶ್, ದ.ಕ.ಜಿಲ್ಲಾ ಮೀಫ್ ಉಪಾಧ್ಯಕ್ಷ ಕೆ.ಎಂ.ಮುಸ್ತಫ, ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಆನಂದ ಖಂಡಿಗ, ರೋಟರಿ ಕ್ಲಬ್ ಸುಳ್ಯ ಸಿಟಿಯ ಅಧ್ಯಕ್ಷ ಗಿರೀಶ್ ನಾರ್ಕೋಡು, ಪ್ರಮುಖರಾದ ಸಿಎ ಗಣೇಶ್ ಭಟ್ ಪಿ, ಅಬ್ದುಲ್ ಹಮೀದ್ ಜನತಾ,ಗಿರಿಜಾ ಶಂಕರ ತುದಿಯಡ್ಕ, ಮುಕುಂದ ನಾರ್ಕೋಡು, ಶಿವಪ್ರಕಾಶ್, ರಿಕ್ಷಾ ಚಾಲಕ ಮಾಲಕ ಸಂಘದ ಪದಾಧಿಕಾರಿಗಳಾದ ರಾಧಾಕೃಷ್ಣ ಬೈತ್ತಡ್ಕ, ವಿಜಯಕುಮಾರ್ ಉಬರಡ್ಕ ಮತ್ತಿತರರು ಉಪಸ್ಥಿತರಿದ್ದರು.

ಸುಳ್ಯ ಪೊಲೀಸ್ ಠಾಣಾ ವತಿಯಿಂದ ನಡೆದ ಅಪರಾಧ ತಡೆ ಮಾಸಾಚರಣೆ ಜಾಗೃತಿ ಜಾಥಾಕ್ಕೆ ವರ್ತಕರ ಸಂಘ ಸುಳ್ಯ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ತಾಲೂಕು, ರೋಟರಿ ಕ್ಲಬ್ ಸುಳ್ಯ ಸಿಟಿ, ರೋಟರಿ ಕ್ಲಬ್ ಸುಳ್ಯ,ಕಾರು ಮಾಲೀಕರು, ಚಾಲಕರ ಸಂಘ ಸುಳ್ಯ, ಆಟೋ ಮಾಲೀಕರು ಚಾಲಕರ ಸಂಘ ಸುಳ್ಯ ಸೇರಿ ವಿವಿಧ ಸಂಘ ಸಂಸ್ಥೆಗಳು ಸಹಕಾರ ನೀಡಿದ್ದರು. ವಿವಿಧ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಜಾಥಾದಲ್ಲಿ ಭಾಗವಹಿಸಿದ್ದರು. ಅಪರಾಧ ತಡೆ ಕುರಿತು. ಧ್ವನಿ ವರ್ಧಕದ ಮೂಲಕ ಮಾಹಿತಿ ಬಿತ್ತರಿಸಿ, ಕರಪತ್ರ ಹಂಚಿ ಸಂದೇಶ ನೀಡಿ ಜಾಗೃತಿ ಮೂಡಿಸಲಾಯಿತು. ಪೋಲಿಸ್ ಇಲಾಖೆಯ ವತಿಯಿಂದ ಡಿ.1ರಿಂದ 31ರ ತನಕ ತಿಂಗಳು ಪೂರ್ತಿ ಅಪರಾಧ ತಡೆ ಮಾಸಾಚರಣೆ ನಡೆಸಲಾಗುತ್ತಿದ್ದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತಿದೆ.

ಹೂ ನೀಡಿ ಜಾಗೃತಿ:
ಹೆಲ್ಮೆಟ್ ಹಾಕದೆ ದ್ವಿಚಕ್ರ ವಾಹನ ಚಲಾಯಿಸಿದವರಿಗೆ, ಸೀಟ್ ಬೆಲ್ಟ್ ಹಾಕದೆ ವಾಹನ ಚಲಾಯಿಸಿದವರಿಗೆ ಗುಲಾಬಿ ಹೂವು ನೀಡಿ ಜಾಗೃತಿ ಮೂಡಿಸಲಾಯಿತು. ಮುಂದೆ ಈ ರೀತಿಯ ಕಾನೂನು ಉಲ್ಲಂಘನೆ ಮಾಡದಂತೆ ಎಚ್ಚರಿಕೆ ನೀಡಲಾಯಿತು. ನಗರದ ರಸ್ತೆಯಲ್ಲಿ ಅನಧಿಕೃತ ಪಾರ್ಕಿಂಗ್ ಮಾಡಿದವರಿಗೆ, ರಾಂಗ್ ಸೈಡ್ ಪಾರ್ಕಿಂಗ್ ಮಾಡಿದವರಿಗೆ ಹಾಗೂ ಅಡ್ಡಾದಿಡ್ಡಿ ವಾಹನ ನಿಲ್ಲಿಸಿದವರಿಗೂ ಎಸ್ಐ ಈರಯ್ಯ ಅವರ ನೇತೃತ್ವದಲ್ಲಿ ಹೂ ನೀಡುವ ಮೂಲಕ ಜಾಗೃತಿ ಮೂಡಿಸಲಾಯಿತು.









