ಸುಳ್ಯ:ರಾಷ್ಟ್ರೀಯ ಕಬಡ್ಡಿ ಪಂದ್ಯಾಕೂಟದಲ್ಲಿ ಅತ್ಯಂತ ರೋಚಕ ಪಂದ್ಯಕ್ಕೆ ಪ್ರೆಂಡ್ಸ್ ಕ್ಲಬ್ ಕಡಬ ಹಾಗೂ ಅನ್ನ ಪೂರ್ಣೆಶ್ವರಿ ಬೆಂಗಳೂರು ಮಧ್ಯೆ ನಡೆದ ಲೀಗ್ ಹಂತದ ಕೊನೆಯ ಪಂದ್ಯ ಸಾಕ್ಷಿಯಾಯಿತು.ಅತ್ಯಂತ ಜಿದ್ದಾಜಿದ್ದಿನ ಹೊರಾಟದಲ್ಲಿ ಅನ್ನಪೂರ್ಣೇಶ್ವರಿ ಬೆಂಗಳೂರು ತಂಡ ಅಮೋಘ ಗೆಲುವು ದಾಖಲಿಸಿತು.ಕೊನೆಯ ಕ್ಷಣದ ವರೆಗೂ ಹೋರಾಟ ನಡೆಸಿದ ಫ್ರೆಂಡ್ಸ್ ಕ್ಲಬ್ ಕಡಬ ತಂಡವನ್ನು 47-42 ಅಂತರದಲ್ಲಿ ಸೋಲಿಸಿದ ಅನ್ನ ಪೂರ್ಣೇಶ್ವರಿ ತಂಡ ಗೆದ್ದು ಬೀಗಿತು. ಸುಳ್ಯದಲ್ಲಿ ನಡೆಯುತ್ತಿರುವ ಪ್ರೊ ಮಾದರಿಯ ರಾಷ್ಟ್ರೀಯ ಕಬಡ್ಡಿ ಪಂದ್ಯಾಟದಲ್ಲಿ

ಪುರುಷ ವಿಭಾಗದಲ್ಲಿ ಪೂಲ್ ಡಿ ವಿಭಾಗದ ಪಂದ್ಯದಲ್ಲಿ ಅನ್ನ ಪೂರ್ಣೇಶ್ವರಿ ತಂಡ ಎರಡನೇ ಜಯ ದಾಖಲಿಸಿತು. ತುಂಬಿದ ಗ್ಯಾಲರಿಯಲ್ಲಿ ಪ್ರೇಕ್ಷಕರ ಹರ್ಷೋದ್ಘಾರದ ಮಧ್ಯೆ ಸಾಗಿದ ಪಂದ್ಯ ಪ್ರತಿ ಹಂತದಲ್ಲಿಯೂ ರೋಚಕ ಕ್ಷಣಗಳನ್ನು ಉಣ ಬಡಿಸಿತು. ಮೊದಲ ಅವಧಿಯಲ್ಲಿ ಬೆಂಗಳೂರು ಮುನ್ನಡೆ ಸಾಧಿಸಿದರೂ ಕಡಬ ತಂಡ ಅದ್ಭುತವಾಗಿ ತಿರುಗಿಬಿದ್ದಿತು. ಕಡಬ ತಂಡದ ನೀಳಕಾಯದ ಆಟಗಾರ ಗೊಬ್ಬು ಅವರ ಅದ್ಭುತ ಆಟ ಪ್ರೇಕ್ಷಕರನ್ನು ರಂಜಿಸಿತು. ಅನ್ನಪೂರ್ಣೇಶ್ವರಿ ತಂಡದ ಧರಣೀಧರ ಅಂಕಗಳನ್ನು ಬಾಚಿ ಬೆಂಗಳೂರು ತಂಡಕ್ಕೆ ಮುನ್ನಡೆ ಒದಗಿಸಿದರು. ಆಕರ್ಷಕ ದಾಳಿ ಹಾಗೂ ನಿಖರ ಹಿಡಿತಗಳ ಮೂಲಕ ಎರಡೂ ತಂಡಗಳು ಕಬಡ್ಡಿಯ ರಸದೌತಣ ನೀಡಿದರು.ಆರಂಭದಿಂದಲೂ ಬೆಂಗಳೂರು ತಂಡ ಮುನ್ನಡೆ ಕಾಯ್ದುಕೊಂಡರೂ ಕಡಬ ನೆಕ್ ಟು ನೆಕ್ ಫೈಟ್ ನೀಡಿತು. ಎರಡನೇ ಅವಧಿಯಲ್ಲಿಯೂ ತೀವ್ರ ಪೈಪೋಟಿ, ಸಮಬಲದ ಹೋರಾಟ ಮುಂದುವರಿದು ಅಂತಿಮವಾಗಿ ಬೆಂಗಳೂರು ರೋಚಕ ಜಯ ದಾಖಲಿಸಿತು. ಭರ್ಜರಿ ದಾಳಿ ಮತ್ತು ಹಿಡಿತಗಳ ಮೂಲಕ
ಎರಡು ತಂಡಗಳು ಅಂಕಣ ತುಂಬಿದರು.
ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘ ಸುಳ್ಯ ಹಾಗೂ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಪಂದ್ಯಾಟ ಸಂಘಟನಾ ಸಮಿತಿಯ ಆಶ್ರಯದಲ್ಲಿ ರಾಷ್ಟ್ರೀಯ ಅಮೆಚೂರ್ ಕಬಡ್ಡಿ ಫೆಡರೇಷನ್ ಮತ್ತು ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ 3 ದಿನಗಳ ಪುರುಷರ ಮತ್ತು ಮಹಿಳೆಯರ ಪ್ರೊ ಮಾದರಿಯ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಚಾಂಪಿಯನ್ಶಿಪ್ ಸುಳ್ಯದ ಚೆನ್ನಕೇಶವ ದೇವಸ್ಥಾನದ ಸಮೀಪದ ಪ್ರಭು ಮೈದಾನದಲ್ಲಿ ವಿಶೇಷವಾಗಿ ತಯಾರಿಸಲಾದ ಇಂಡೋರ್ ಸ್ಟೇಡಿಯಂನ ಮ್ಯಾಟ್ ಅಂಕಣದಲ್ಲಿ ನಡೆಯುತಿದೆ.







