ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡುದಾರರಿಗೆ ವಿತರಿಸಲು ಹೆಚ್ಚುವರಿ ಅಕ್ಕಿ ಲಭ್ಯವಾಗದೆ ಇರುವುದರಿಂದ, ತಲಾ ಐದು ಕೆಜಿ ಅಕ್ಕಿ ಬದಲು ಹಣ ನೀಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆಹಾರ ಮತ್ತು ನಾಗರಿಕ
ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ, ‘ಭಾರತೀಯ ಆಹಾರ ನಿಗಮ(ಎಫ್ಸಿಐ)ದ ದರದಂತೆ ಪ್ರತಿ ಕೆಜಿ ಅಕ್ಕಿಗೆ 34 ರೂ.ಗಳಂತೆ(ಒಬ್ಬ ಸದಸ್ಯರಿಗೆ 170ರೂ.) ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗಳಿಗೆ ಜು.1ರಿಂದಲೆ ಜಾರಿಗೆ ಬರುವಂತೆ ಹಣ ಜಮೆ ಮಾಡಲಾಗುವುದು ಎಂದು ಹೇಳಿದರು. ನಾವು ಜನತೆಗೆ ಮಾತು ಕೊಟ್ಟಂತೆ ಅಕ್ಕಿ ಪಡೆಯಲು ಸಾಕಷ್ಟು ಪ್ರಯತ್ನ ಮಾಡಿದೆವು. ಅಕ್ಕಿ ಲಭ್ಯವಾಗದ ಹಿನ್ನಲೆಯಲ್ಲಿ ಹಣ ನೀಡಲು ನಿರ್ಧರಿಸಲಾಯಿತು. ತಾತ್ಕಾಲಿಕವಾಗಿ ಹಣ ನೀಡುವ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು, ಅಕ್ಕಿಯ ಲಭ್ಯತೆ ಖಾತರಿ ಪಡಿಸಿಕೊಂಡ ಬಳಿಕ ಅಕ್ಕಿಯನ್ನೆ ವಿತರಿಸಲಾಗುವುದು. ಇದಕ್ಕಾಗಿ, ಟೆಂಡರ್ ಕರೆಯಲಾಗುವುದು. ಎಪಿಎಲ್ ಕಾರ್ಡುದಾರರಿಗೆ ವಿತರಿಸಲು ಅಗತ್ಯವಿರುವ 20 ಸಾವಿರ ಮೆಟ್ರಿಕ್ ಟನ್ ಅಕ್ಕಿಯನ್ನು ನಾವು ಖರೀದಿ ಮಾಡಿ ವಿತರಿಸುತ್ತೇವೆ ಎಂದು ಮುನಿಯಪ್ಪ ಹೇಳಿದರು.
ರಾಜ್ಯದಲ್ಲಿ 85 ಲಕ್ಷ ಬಿಪಿಎಲ್ ಕಾರ್ಡುಗಳಿದ್ದು, ಈ ಪೈಕಿ ಶೇ.95ರಷ್ಟು ಬಿಪಿಎಲ್ ಕಾರ್ಡುದಾರರ ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಆಗಿದೆ. ಇನ್ನು ಉಳಿದಿರುವುದನ್ನು ಆದಷ್ಟ ಬೇಗ ಮಾಡಿಸಿ, ಅರ್ಹರ ಖಾತೆಗಳಿಗೆ ಹಣ ಜಮೆ ಮಾಡುತ್ತೇವೆ ಎಂದು ಮುನಿಯಪ್ಪ ಹೇಳಿದರು.