*ಡಾ.ಸುಂದರ ಕೇನಾಜೆ.
ಹಳಗನ್ನಡ ಸಾಹಿತ್ಯ ಪರಂಪರೆಗೆ ಬೆನ್ನುಡಿಯನ್ನೂ ಹೊಸಗನ್ನಡ ಸಾಹಿತ್ಯದ ಭವಿಶ್ಯಕ್ಕೆ ಮುನ್ನುಡಿಯನ್ನು ಬರೆದ ಮುದ್ದಣ(ನಂದಳಿಕೆ ಲಕ್ಷ್ಮೀನಾರಾಯಣಪ್ಪ(ಯ್ಯ)ನನ್ನು ಮುಂಬೆಳಕಾಗಿಸುವುದಕ್ಕೆ ಕನ್ನಡ ಸಾರಸ್ವತ ಲೋಕ ಶ್ರಮಿಸಿದ ಪರಿ ಶ್ಲಾಘನೀಯವಾದುದು. ಸ್ವತಃ ತನ್ನನ್ನು ಗುರುತಿಸುವ ಕಾಲ ಮತ್ತು ಕಾಳಜಿ ಎರಡರಿಂದಲೂ ದೂರ ಉಳಿದು ಆಕಾಲಿಕವಾಗಿ ಕಳೆದು ಹೋದ ಪ್ರತಿಭಾ ಸಂಪನ್ನನ ಕೆಲಸವನ್ನು ಜತನವಾಗಿ ಕಾಪಿಡುವ, ಅದನ್ನು ಕನ್ನಡ ಸಾರಸ್ವತ ಚರಿತ್ರೆಯಲ್ಲಿ ಉನ್ನತವಾಗಿ ಒಳಗೊಳ್ಳುವಂತೆ ಮಾಡುವ ಕಾರ್ಯವನ್ನು ಕನ್ನಡ ವಿದ್ವದ್ಜನರು ಹೆಮ್ಮೆಯಿಂದಲೇ ಮಾಡುತ್ತಾ ಬಂದಿದ್ದಾರೆ. ಕವಿಯೋರ್ವನ
ಕಾಯಕ ಆತನ ಬದಕಿನ ನಂತರವೂ ಜನಮಾನಸದಲ್ಲಿ ನಿಲ್ಲಲು ಅದರ ಎಳೆಯನ್ನು ಹಿಡಿದೆಳೆಡೆಯುವ ಆಸಕ್ತ ವರ್ಗ ಬೇಕೆನ್ನುವುದಕ್ಕೆ ಮುದ್ದಣನ ಹಿನ್ನಲೆಯಲ್ಲಿ ನಡೆಸಿದ ಕನ್ನಡ ಮನಸ್ಸುಗಳ ಕೆಲಸಗಳೇ ಸಾಕ್ಷಿ. ಕೇವಲ ಮೂವತ್ತೊಂದು (೧೮೭೦ ರಿಂದ ೧೯೦೧) ವರ್ಷ ಬದುಕಿ, ಕನ್ನಡ ಸಾಹಿತ್ಯದ ಸಂಧಿಕಾಲದ ಗಡಿರೇಖೆಯನ್ನು ಗುರುತಿಸಿದ ಮುದ್ದಣನೇ ನಿರೀಕ್ಷಿಸದ ಗೌರವ, ಅಭಿಮಾನ ಹರಿದು ಬಂದದ್ದು ಸತ್ಯ. ಅದಕ್ಕೆ ಆತನ ಕೃತಿಗಳ ಮೌಲ್ಯದಷ್ಟೇ ಆತನ ಬದುಕಿನ ಮೇಲಿನ ಅನುಕಂಪವೂ ಕಾರಣವಾಯಿತು. ಕನ್ನಡದ ಸಾಹಿತಿಗಳು ಮತ್ತು ಸಂಘಟಕರು ಮುದ್ದಣನಿಗೆ ಸಲ್ಲಿಸಿದ ಗೌರವಾದರಗಳು ಅನನ್ಯವಾದುವು. ಈ ಸಾಹಿತಿ-ಸಂಘಟಕರಲ್ಲಿ ಕೆಲವು ವರ್ಷಗಳಿಂದ ತೊಡಗಿಸಿಕೊಂಡ ಇಬ್ಬರನ್ನು ಸಾಂದರ್ಭಿಕವಾಗಿ ದಾಖಲಿಸುತ್ತಿದ್ದೇನೆ.
ಮುದ್ದಣ ತೀರಿಕೊಂಡಾಗ ಆತನ ಹೆಸರಿನಲ್ಲಿ ಪ್ರಕಟಗೊಳ್ಳದ ಕೃತಿಗಳೂ ಸೇರಿ, ಐದು ಕೃತಿಗಳ ಬಗ್ಗೆ ಕನ್ನಡದ ಬಹುಶ್ರುತ ವಿದ್ವಾಂಸರು ಬಹುದೊಡ್ಡ ಚರ್ಚೆ, ತರ್ಕ, ನಿರ್ಣಯಗಳನ್ನು ಮಾಡಿದ್ದಾರೆ. ಆತನ ಕೃತಿಯ ಮೌಲ್ಯಗಳನ್ನು ಒರೆಗೆ ಹಚ್ಚಿದ್ದಾರೆ. ಆದರೆ ಈ ಎಲ್ಲ ಚರ್ಚೆ, ವಿಮರ್ಶೆಗಳು ಮತ್ತು ಮುದ್ದಣನ ಐದೂ ಕೃತಿಗಳು ಕ್ರೋಢೀಕೃತವಾಗಿ ಒಂದೆಡೆ ಸಿಗುವ ಕೆಲಸವೊಂದು ಇತ್ತೀಚೆಗೆ ನಡೆದಿದೆ. ಆ ಮೂಲಕ ಮುದ್ದಣನನ್ನು ಮತ್ತೊಮ್ಮೆ ಅಪ್ಯಾಯಾಮಾನವಾಗಿ ನೋಡಲು ಸಾಧ್ಯವಾಗಿಸಿದೆ. ಹಿರಿಯ ವಿದ್ವಾಂಸ ಪ್ರೊ.ಎ.ವಿ ನಾವಡರ ಸಂಪಾದನೆಯ “ಮುದ್ದಣ ಕೃತಿ ಕರಜನ” ಮುದ್ದಣನ ವ್ಯಕ್ತಿತ್ವ ಮತ್ತು ಆತನ ಕಾವ್ಯ ಪ್ರತಿಭೆಯನ್ನು ತಿಳಿಸುವ ಕೃತಿ.ಸಾಮಾನ್ಯವಾಗಿ ಪ್ರಾಥಮಿಕ ಹಂತದಲ್ಲೇ ಕನ್ನಡ ಭಾಷಾ ಪಠ್ಯಪುಸ್ತಕಗಳಲ್ಲಿ ಮುದ್ದಣನಿಗೊಂದು ಸ್ಥಾನ ಇದ್ದೇ ಇತ್ತು (ಮುದ್ದಣ-ಮನೋರಮೆಯ ಸರಸ ಸಲ್ಲಾಪದ ಭಾಗ ನೆನಪಿಲ್ಲದವರಾರು?) ಮುಂದುವರೆದು ಆತನ ಅದ್ಬುತ ರಾಮಾಯಣ, ಶ್ರೀರಾಮ ಪಟ್ಟಾಭಿಷೇಕ ಅಥವಾ ರಾಮಾಶ್ವಮೇಧಂನ ತುಣುಕುಗಳು ಉನ್ನತ ತರಗತಿಗಳ ಅಲ್ಲಲ್ಲಿ ಓದುವ ಅವಕಾಶಗಳೂ ಇರುತ್ತಿತ್ತು. ಆತನ ಎರಡು ಯಕ್ಷಗಾನ ಪ್ರಸಂಗಗಳ(ರತ್ನಾವತಿ ಕಲ್ಯಾಣ ಮತ್ತು ಕುಮಾರ ವಿಜಯ) ಪ್ರದರ್ಶನವೂ ಕರಾವಳಿಯ ಜನರಿಗೆ ಅಪರೂಪಕ್ಕೆ ಸಿಗುವುದೂ ಇತ್ತು. ಈ ಕಾವ್ಯಗಳ ಹೊರತಾಗಿ ಮುದ್ದಣನನ್ನು ಅಳವಾಗಿ ಪರಿಚಯಿಸುವ ಅವಕಾಶವಿದ್ದುದೇ ಕಡಿಮೆ. ಈ ಕೆಲಸವನ್ನು ಪ್ರೊ.ನಾವಡರ ಸಂಪಾದಿತ ಕೃತಿ ಮಾಡಿದೆ.
ನಾವಡರು ಈ ಕೃತಿಯಲ್ಲಿ ದಾಖಲಿಸಿದ, “ಮುದ್ದಣ ತಾನು ಬರೆದ ಕೃತಿಗಳಿಗೆ ಕರಾವಳಿಯ ಹೊರತಾದ(ಹಳೆ ಮೈಸೂರು) ಭಾಗಗಳಲ್ಲಿ ಮಾನ್ಯತೆ ಪಡೆಯಲು ಸಾಧ್ಯವಾಗುವುದಿಲ್ಲವೆಂದು ಭಾವಿಸಿ ತನ್ನ ಹೆಸರು ಬದಲಾಯಿಸಿ ಪ್ರಕಟಿಸಬೇಕೆಂದು ನಿರ್ಧರಿಸಿದ್ದ. ಅಂತೇ ಪ್ರಮುಖ ಮೂರು ಕೃತಿಗಳಿಗೆ ಬೇರೆಬೇರೆ ಕರ್ತೃಗಳ ಹೆಸರನ್ನು ನೀಡಿ ಪ್ರಕಟಿಸಿದ್ದ. ಆದರೂ ಕೊನೆಗೆ ಆತನ ಹೆಸರೇ ಎಲ್ಲಾ ಕೃತಿಗಳಲ್ಲೂ ಉಳಿಯುವಂತೆ ಆಯಿತು”, ಈ ಹೇಳಿಕೆ ಕನ್ನಡ ಸಾಹಿತ್ಯ ಜಗತ್ತಿನ ಒಂದು ಕಾಲದ ಪ್ರಾಮಾಣಿಕ ನೆಲೆಯನ್ನು ಸೂಚಿಸುತ್ತದೆ.
ಮುದ್ದಣನ ಕುರಿತಾಗಿ ಬೇರೆಬೇರೆ ಸಂದರ್ಭದಲ್ಲಿ ಚರ್ಚೆ ನಡೆಸಿದ ಮಳಲಿ ಸುಬ್ಬರಾಯ(ಮುದ್ದಣನ ಸಾಹಿತ್ಯಾಸಕ್ತಿಯನ್ನು ಗುರುವಿವಾಗಿ ಬೆಂಬಲಿಸಿದವರು) ಪಂಡಿತ ವೆಂಕಟಮಣ ಹೆಬ್ಬಾರ್, ಬೆನಗಲ್ ರಾಮರಾವ್, ಮೈಸೂರಿನ ರಾಮಾನುಜೈಯಂಗಾರ್(ಮುದ್ದಣನ ಮೂರು ಕೃತಿಗಳ ಮೊದಲ ಪ್ರಕಾಶಕ) ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯ ಸಂದರ್ಭದಲ್ಲಿ ಚರ್ಚೆ ನಡೆಸಿದ ಪಂಜೆ ಮಂಗೇಶರಾಯ, ಹುರಳಿ ಭೀಮ ರಾವ್, ಮಂಜೇಶ್ವರ ಗೋವಿಂದ ಪೈ, ತೆಕ್ಕುಂಜೆ ಗೋಪಾಲಕೃಷ್ಣ ಭಟ್, ಈ ಕಾಲದ ಪಾದಕಲ್ಲು ವಿಷ್ಣು ಭಟ್ ಎಲ್ಲರೂ ಆತನಿಗೊಂದು ಶಾಶ್ವತ ಸ್ಥಾನ ದೊರೆಯುವಂತೆ ಮಾಡಿದವರು, ಕರಜನದೊಳಗೆ ಇವೆಲ್ಲವೂ ಸಂಗ್ರಹಗೊಂಡಿವೆ.
ಅದೇ ರೀತಿ ಮುದ್ದಣ ಬೆಳಕಿಗೆ ಬಂದ ನಂತರ ಅನೇಕ ಸಂಘಟನೆಗಳು ಆತನನ್ನು ನೆನಪಿಸುವ, ಗೋಷ್ಠಿ, ಸಮ್ಮಾನಗಳ ಮೂಲಕ ಕನ್ನಡದ ಮನಸ್ಸುಗಳ ಮಧ್ಯೆ ನಿಲ್ಲಿಸುವ ಕೆಲಸಗಳನ್ನು ಮಾಡುತ್ತಾ ಬಂದಿವೆ. ಆದರೆ ಅದಕ್ಕೊಂದು ತಾತ್ವಿಕ ಸ್ಪರ್ಶ ಸಿಕ್ಕಿದ್ದು, ಮುದ್ದಣನ ವಂಶಸ್ಥ, ಸಂಘಟಕ ನಂದಳಿಕೆ ಬಾಲಚಂದ್ರ ರಾವ್ ಅವರ ಕ್ರಿಯಾಶೀಲತೆಯಿಂದ. ಕಳೆದ ಐವತ್ತು ವರ್ಷಗಳಿಂದ ಬೆನ್ನು ಬಿಡದ ತ್ರಿವಿಕ್ರಮನಂತೆ ಮುದ್ದಣನ ಹೆಸರಿನಲ್ಲಿ ಸಂಘಟನೆ ಮತ್ತು ಸಾಹಿತ್ಯ ಜಾಗೃತಿ ಮಾಡುತ್ತಾ ಬಂದ ಬಾಲಚಂದ್ರ ರಾಯರು, ಮುದ್ದಣನ ಹೆಸರಿನಲ್ಲಿ ಮಾಡಿದ ಕೆಲಸಗಳು ಬಹಳ ಮೌಲ್ಯಯುತವಾದವು.
ಕವಿಯೋರ್ವನ ಹಿನ್ನೆಲೆಯಲ್ಲಿ ಒಂದು ಊರನ್ನೇ ಅಭಿವೃದ್ಧಿ ಪಡಿಸಬಹುದೆಂಬ ಪರಿಕಲ್ಪನೆಯನ್ನು ನಿಜಾರ್ಥದಲ್ಲಿ ಮೂಡಿಸಿದವರೇ ಬಾಲಚಂದ್ರ ರಾಯರು. ಮುದ್ದಣ್ಣ ಯುವಕ ಸಂಘದಿಂದ ಆರಂಭಿಸಿ ಹತ್ತು ಹಲವು ಸೌಲಭ್ಯಗಳನ್ನು ನಂದಳಿಕೆಗೆ ಸಿಗುವಂತೆ ಮಾಡಿದವರು. ಮುದ್ದಣನ ಹೆಸರಿನಲ್ಲಿ ದೇಶವಿದೇಶಗಳಲ್ಲಿ ಸಂಘಟಿಸಿದ ಕಾರ್ಯಕ್ರಮಗಳಿಗೂ ಸಾಥ್ ನೀಡಿದವರು. ಭಾಷಣ, ಉಪನ್ಯಾಸ, ಪತ್ರಿಕೆ, ಸ್ಮರಣ ಸಂಚಿಕೆ, ಸಂಪಾದನೆ, ಆಕರಗ್ರಂಥ, ಮರುಮುದ್ರಣ, ಗ್ರಂಥಾಲಯ, ಸ್ಮಾರಕ ಭವನ, ಪ್ರಶಸ್ತಿ, ಸನ್ಮಾನ… ಹೀಗೆ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ನಿರಂತರ ಮುದ್ದಣನನ್ನು ಮತ್ತು ಆತನ ಕಾವ್ಯ ಶಕ್ತಿಯನ್ನು ನಂದಳಿಕೆಯಿಂದ ಹೊರ ತರುವುದರಲ್ಲಿ ಶ್ರಮಿಸಿದವರು. ಮುದ್ದಣನನ್ನು ನಿತ್ಯ ನೂತನವಾಗಿ ಇರಿಸಲು ಮಾಡಿದ ಈ ಕೆಲಸಗಳು ಕಡಿಮೆಯದ್ದೇನಲ್ಲ.
ಸಾಮಾನ್ಯವಾಗಿ ಸಾಹಿತಿಗಳು ಹುಟ್ಟಿದ ಊರನ್ನು, ಸಾಧನೆಯನ್ನು ಮಕ್ಕಳಿಗೆ ವಿವರಿಸುತ್ತೇವೆ. ಆದರೆ ಆ ಊರಿಗೆ ಭೇಟಿ ನೀಡಿದರೆ ಅಲ್ಲಿ ಕನಿಷ್ಠ ಹೆಸರಿನ ಕುರುಹುಗಳೂ ಕಾಣದಿರುವುದು ಹೆಚ್ಚು. ಆ ಸಾಹಿತಿಯ ಕುರಿತಾದ ವೈಯಕ್ತಿಕ ವಿವರಗಳು ಒಂದೆಡೆ ಸಿಗುವುದಂತೂ ಬಹುಅಪರೂಪ. ಹೀಗಿರುವಾಗ ಕವಿ ಮುದ್ದಣ ಈ ವಿಷಯದಲ್ಲಿ ಭಾಗ್ಯಶಾಲಿ. ಆತ ಅಗಲಿ ೧೨೫ ವರ್ಷಗಳಾಗುವ ಈ ಕಾಲದಲ್ಲಿ ಆತನ ಬಗ್ಗೆ ಸಮಗ್ರ ಕೃತಿಯೊಂದು ಹೊರಬಂದಿದೆ. ಆತ ಹುಟ್ಟಿ ೧೫೦ ವರ್ಷಗಳಾಗುವಾಗಲೇ ಹುಟ್ಟಿದ ಊರಲ್ಲಿ ನೆನಪಲ್ಲಿ ಉಳಿಯುವ ಅದೆಷ್ಟೋ ಕೆಲಸಗಳಾಗಿವೆ. ಮುಂಗೋಳಿ ಮುದ್ದಣನ ಬದುಕನ್ನು ಮುಂಬೆಳಕಾಗಿಸಲು ಶ್ರಮಿಸಿದ ಪ್ರೊ.ಎ.ವಿ. ನಾವಡ ಮತ್ತು ನಂದಳಿಕೆ ಬಾಲಚಂದ್ರ ರಾವ್ ಅಭಿನಂದನಾರ್ಹರು. ಕನ್ನಡ ಸಾರಸ್ವತ ಲೋಕದಲ್ಲಿ ಮಿಂಚಿ ಮೆರೆಯಾದ ಸಾಹಿತಿವರೇಣ್ಯರಿಗೂ ಈ ಸೌಭಾಗ್ಯ ದೊರಕುವಂತಾಗಲಿ ಎನ್ನುವ ಆಶಯ ಇಲ್ಲಿಯದು.
(ಡಾ.ಸುಂದರ ಕೇನಾಜೆ ಜಾನಪದ ಸಂಶೋಧಕರು, ಲೇಖಕರು ಹಾಗೂ ಅಂಕಣಕಾರರು)