*ಡಾ. ಸುಂದರ ಕೇನಾಜೆ.
ಕರಾವಳಿ ಕರ್ನಾಟಕದಲ್ಲಿ ಒಂದು ಆಚರಣೆ ಇದೆ. ಇದನ್ನು ತುಳುವಿನಲ್ಲಿ ‘ಕೆಡ್ಡಸ’ ಎನ್ನುವರು. ಇದಕ್ಕೆ ಸರಿಸಮಾನವಾದ ಆಚರಣೆಗಳು ಜಗತ್ತಿನ ಬೇರೆ ಬೇರೆ ಕಡೆಗಳಲ್ಲಿರುವ ವಿವರಗಳಿವೆ. ಈ ಆಚರಣೆಯ ಮೂಲ ಆಶಯ ಮಣ್ಣ(ಭೂಮಿ)ನ್ನು ಹೆಣ್ಣಿಗೆ ಸಮೀಕರಿಸಿ ಮೂರು ದಿನಗಳ ರಜೋದಿನಗಳನ್ನು ಆಚರಿಸುವುದು(ವಿವರಗಳಿಗೆ ಅಮೃತ ಸೋಮೇಶ್ವರ, ಪಾಲ್ತಾಡಿ ರಾಮಕೃಷ್ಣ ಆಚಾರ್, ಪುರುಷೋತ್ತಮ ಬಿಳಿಮಲೆ, ಅಶೋಕ ಆಳ್ವ, ಅಭಯ ಕುಮಾರ್, ಕೆ.ಕಮಲಾಕ್ಷ, ಸುಂದರ ಕೇನಾಜೆ ಇವರ ಕೃತಿಗಳಲ್ಲಿ ಪ್ರಕಟಗೊಂಡ ಲೇಖನಗಳನ್ನು ನೋಡಬಹುದು) ತುಳುನಾಡಿನಲ್ಲಿ ಬೇಟೆ ಹೋಗಿ ಬೇಸಾಯ ಬಂದ ಕಾಲದಲ್ಲೇ
ಮಾತೃಮೂಲೀಯ ವ್ಯವಸ್ಥೆ ಈ ಆಚರಣೆಯನ್ನು ಹುಟ್ಟು ಹಾಕಿರಬೇಕು. ಸಹಜವಾಗಿ ಹೆಣ್ಣು ಮತ್ತು ಮಣ್ಣಿಗೆ ಸಾಮ್ಯತೆ ಇರುವುದು, ಈ ಸಾಮ್ಯತೆಗೆ ಜಾಗತಿಕ ಮನ್ನಣೆ ಇರುವುದು ಒಪ್ಪಿತ ಸಂಗತಿ. ಹಾಗಾಗಿ ಈ ಆಚರಣೆಯಲ್ಲಿ ಎರಡರ್ಥಗಳಿಲ್ಲ.
ಈ ರೀತಿಯ ಸಾಂಸ್ಕೃತಿಕ ಸಾಮ್ಯತೆ ಮಣ್ಣಿಗೂ ನೀರಿಗೂ ಇದೆ. ಹೆಣ್ಣು ಮತ್ತು ಗಂಡಿನ ವೈರುಧ್ಯಗಳಂತೆ ಜಲ ಮತ್ತು ಅಗ್ನಿಯ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ತಾಕಲಾಟಗಳೂ ಇವೆ(ನೋಡಿ, ನೀರದೀವಿಗೆ- ಕೆ.ವೈ ನಾರಾಯಣ ಸ್ವಾಮಿ) ಇದೇ ತಾಕಲಾಟ ಆಕಾಶಕ್ಕೂ ಭೂಮಿಗೂ, ಸೂರ್ಯನಿಗೂ ಭೂಮಿಗೂ ಆರೋಪಿಸಲಾಗಿದೆ. ಅಂದರೆ ಪ್ರಕೃತಿಯ ಅವಯವಳಾದ ಮಣ್ಣು, ನೀರು, ಸೂರ್ಯ, ಬೆಂಕಿ(ಮನುಷ್ಯ ಆಶ್ರಯಿಸಿದ ಬದುಕಿನ ಮೂಲಾಂಶಗಳು) ಈ ಗೋಚರ ಶಕ್ತಿಗಳಿಗೂ ಬದುಕಿನ ಸಹಜ ಪಾತ್ರಗಳಾದ ಹೆಣ್ಣು ಮತ್ತು ಗಂಡಿಗೂ ಪರಸ್ಪರ ಹೋಲಿಸುವ ಅಥವಾ ಸಮೀಕರಿಸುವ ಪ್ರಕ್ರಿಯೆ ಪುರಾತನ ಕಾಲದಿಂದಲೂ ನಡೆಯುತ್ತಾ ಬಂದಿದೆ(ರೋಮನ್ ಕಾನೂನಿನ ಪ್ರಕಾರ, ತಾಯಿ ಮತ್ತು ಮಣ್ಣು ಸಮಾನ, ಭಾರತೀಯ ಬುಡಕಟ್ಟು ಸಂಸ್ಕೃತಿಗಳೂ ಇದನ್ನೇ ಬೆಳೆಸಿವೆ)

ಈ ಹೋಲಿಕೆಯೊಳಗಿನ ಕನಿಷ್ಠ-ಗರಿಷ್ಠ ಎನ್ನುವ ಚರ್ಚೆ ಎರಡನೆಯದ್ದು. ಆದರೆ ಇವೆರಡರ ಗುಣಸ್ವಭಾವದಲ್ಲಿ ಸಾಮ್ಯತೆ ಇದೆ ಎನ್ನುವುದು ಒಪ್ಪುವಂತದ್ದು. ಹಾಗಾಗಿ ಜನಪದರ ಸಾಂಸ್ಕೃತಿಕ ಚಿಂತನೆಗಳಲ್ಲಿ ವಾಸ್ತವವನ್ನು ಪರಿಶೀಲಿಸುವ, ಅದನ್ನು ಆಚರಿಸಿ ಜೀವಂತವಾಗಿಡುವ ಮೂಲ ಗುಣವೊಂದಿದೆ. ಪ್ರಕೃತಿಯ ಜೀವ ಸಂಕುಲಗಳನ್ನು ಉಳಿಸುವ ಅಥವಾ ತನಗಾಗದ್ದನ್ನು ಅಳಿಸುವ ನೆಲೆಯಿಂದ ಹೋಲಿಕೆ ಮಾಡಿಕೊಳ್ಳುವ, ಜಾಗರೂಕವಾಗಿ ವರ್ಗಾಯಿಸುವ ಕಾರ್ಯಗಳು ನಡೆಯುತ್ತಾ ಬಂದಿವೆ. ಆದರೆ ಸಂಸ್ಕೃತಿಯಲ್ಲಿ ಹಕ್ಕು ಸ್ಥಾಪಿಸಲು ಬಯಸಿದಾಗ, ಕ್ರಮೇಣ ಅದನ್ನು ತಿರುಚುವ, ತನಗೆ ಬೇಕಾದಂತೆ ರೂಪಿಸುವ, ಅದಕ್ಕಾಗಿ ಪರೋಕ್ಷ ಒತ್ತಡ ಹೇರುವ ಪ್ರಕ್ರಿಯೆಗಳೂ ನಡೆದಿವೆ.
ಜನಪದರ ಈ ‘ಕೆಡ್ಡಸ’ ಆಚರಣೆಯ ಪರಿಕಲ್ಪನೆಯಲ್ಲಿ ಹೆಣ್ಣಿನ ಸಂತಾನೋತ್ಪತ್ತಿ ಮತ್ತು ಭೂಮಿಯ ಫಲವಂತಿಕೆಯನ್ನು ಬಯಸುವ ಆಶಯಗಳಿವೆ. ಕರಾವಳಿ ಕರ್ನಾಟಕ ಬಹಳ ಪೂರ್ವದಿಂದಲೇ ಮಾತೃಪ್ರಧಾನ ಸಮಾಜವನ್ನು ಕಟ್ಟಿಬೆಳೆಸಿದ ಪ್ರದೇಶ(ವಿವರಗಳಿಗೆ ಕರಾವಳಿಯ ಜನಾಂಗೀಯ ಅಧ್ಯಯನ ಕೃತಿಗಳನ್ನು ನೋಡಿ) ಕೇರಳದ ‘ಮರುಮಕ್ಕತ್ತಾಯ’ ಸಂಪ್ರದಾಯದ ಸ್ವೀಕರಣೆ ಬಹಳ ಪುರಾತನ ಕಾಲದಿಂದಲೂ ತುಳು ಭಾಷಿಕ ಪ್ರದೇಶದಲ್ಲಿ ಜಾರಿಯಲ್ಲಿದ್ದುದ್ದನ್ನು ಕಾಣುತ್ತೇವೆ. ‘ಬೂತಾಳ ಪಾಂಡ್ಯನ ಕಟ್ಟು’ ಎನ್ನುವ ಮಾತೃಮೂಲೀಯ ಐತಿಹ್ಯ ಇಲ್ಲಿ ಜನಜನಿತ(ನೋಡಿ, ಬೂತಾಳ ಪಾಂಡ್ಯರಾಯನ ಅಳಿಯಕಟ್ಟು- ಪೊಳಲಿ ಶೀನಪ್ಪ ಹೆಗ್ಗಡೆ) ಈ ಮಾತೃಪ್ರಧಾನ ವ್ಯವಸ್ಥೆ ಜಾರಿಯಲ್ಲಿದ್ದ ಇದೇ ಕಾಲದಿಂದ ಆಚರಣೆಗೆ ಒಳಗಾದ ಒಂದು ಸಂಗತಿ, ಹೆಣ್ಣಿಗೆ ಭೂಮಿಯನ್ನು ಸಮೀಕರಿಸಿ ನೋಡುವ ಈ ಆಚರಣೆ. ಹಾಗೆಂದು ಇದು ಜಡವಾದ ಭೂಮಿಗೆ ಕ್ರಿಯಾಶೀಲ ಹೆಣ್ಣನ್ನು ಹೋಲಿಸುವುದು ಹೇಗೆ ಎನ್ನುವ ಕುಚೋದ್ಯಕ್ಕೆ ನಿಲುಕುವಂತದ್ದಲ್ಲ(ಭೂಮಿಯೂ ಕ್ರಿಯಾಶೀಲವೇ). ಮಾತೃಮೂಲ ಹೆಣ್ಣಿನಲ್ಲೂ ಭೂಮಿಯಲ್ಲೂ ಸಮಾನವಾದ ಕ್ರಿಯಾಶೀಲತೆಯನ್ನು ಗುರುತಿಸಿ ಅಳವಡಿಸಿದ್ದೇ ಇಲ್ಲಿಯ ವಾಸ್ತವ. ಈ ಆಚರಣೆ ಸಾಮಾನ್ಯವಾಗಿ ಫೆಬ್ರವರಿ ತಿಂಗಳ(ಈ ಬಾರಿ ಫೆ.೧೦ರ ಹಿಂದೆಮುಂದೆ ಮೂರು ದಿನ) ಮಧ್ಯದ ವಾರದಲ್ಲಿ ನಡೆಯುತ್ತದೆ. ಭೂಮಿ ಋತುಮತಿಯಾಗಿ ಫಲೋತ್ಪಾದನೆಗೆ ಸಿದ್ದಗೊಳ್ಳುವ ನೆಲೆಯ ಸಾಂಕೇತಿಕ ಆಚರಣೆಯಿದು. ಹೆಣ್ಣಿನ ಫಲವಂತಿಕೆಯ ಸ್ವರೂಪದಲ್ಲಿ ಭೂಮಿಯನ್ನು ಸಮೀಕರಿಸಿ ನೋಡುವುದೇ ಇಲ್ಲಿಯ ಪ್ರಮುಖ ಉದ್ದೇಶ.
ಮಾತೃಮೂಲೀಯ ಕೆಡ್ಡಸದ ಇನ್ನೊಂದು ಆಶಯ,

ಭೂಮಿಯನ್ನು(ಹೆಣ್ಣನ್ನು) ಪ್ರೀತಿಯಿಂದ ಮತ್ತು ಜಾಗರೂಕತೆಯಿಂದ ನೋಡುವುದೂ ಆಗಿದೆ. ಋತುಮತಿಯಾದ ಹೆಣ್ಣನ್ನು ಹೊರಗಿಟ್ಟು ನೋಡುವ ಅಸಹಜ ಪ್ರವೃತ್ತಿಗಿಂತ ಆಕೆಯನ್ನು ಆಧರಿಸಿ ಫಲವಂತಿಕೆಯನ್ನು ಬಯಸುವ, ಆ ಮೂಲಕ ತಲೆಮಾರುಗಳನ್ನು ಕಟ್ಟುವ ಪ್ರಕ್ರಿಯೆಯ ಭಾಗವಿದು. ಭೂಮಿಗೆ ನೋವಾಗದಂತೆ ಅಥವಾ ಆ ದಿನಗಳಲ್ಲಿ ಕೆಡುಕಾಗದಂತೆ ನೋಡಿಕೊಳ್ಳುವ ಆಚರಣೆಯಲ್ಲಿ ಹೆಣ್ಣಿನ ಬದುಕು ಅಡಕವಾಗಿದೆ( ಹಾಗಾಗಿ ಭೂಮಿಗೆ ನೇಗಿಲು ತಾಗುವಂತಿಲ್ಲ, ಹಸಿ ಕಡಿಯುವಂತಿಲ್ಲ, ಒಣ ಮುರಿಯುವಂತಿಲ್ಲ ಇತ್ಯಾದಿ) ಆದರೆ ಸಂತಾನೋತ್ಪತ್ತಿಗೆ ಹೆಣ್ಣಿನಷ್ಟೇ ಗಂಡಿನ ಸಹಯೋಗವೂ ಅಗತ್ಯ, ಆ ಕಾರಣದಿಂದಲೊ ಏನೋ ಗಂಡನ್ನು ಪ್ರಚೋದಿಸುವ ಇನ್ನೆರಡು ಕ್ರಿಯಾಚರಣೆಗಳೂ ಈ ಕೆಡ್ಡಸ ಆಚರಣೆಯಲ್ಲಿ ಅಳವಡಿಸಲಾಗಿದೆ. ಅದು ಪ್ರಾಣಿ ಬೇಟೆ ಮತ್ತು ಕಾಮ ಪ್ರಚೋದಕ ಆಹಾರ ವಸ್ತುಗಳ ಸೇವನೆ(ಮುಖ್ಯವಾಗಿ ನುಗ್ಗೆ ಕಾಯಿ). ಕೆಡ್ಡಸದ ಆಚರಣೆಯಲ್ಲಿ ಇವೆರಡನ್ನೂ ಕಡ್ಡಾಯಗೊಳಿಸಲಾಗಿದೆ. ಆದರೆ ಸಂಸ್ಕೃತಿಯ ಪಲ್ಲಟ ಅಥವಾ ಪುರುಷಪ್ರಧಾನ ವ್ಯವಸ್ಥೆಯ ಪ್ರಾಬಲ್ಯದಿಂದ(ನೋಡಿ, ಪರಶುರಾಮನ ತುಳುನಾಡ ಸೃಷ್ಟಿಯಂತಹಾ ಕತೆ) ಈ ಆಚರಣೆಯಲ್ಲಿ ಇವೆರಡಕ್ಕೆ ಇನ್ನೂ ಹೆಚ್ಚಿನ ಮಹತ್ವ ಬಂದಿರುವುದಿದೆ. ಇದು ಮೇಲೆ ಹೇಳಿದ ಜಲ ಮತ್ತು ಅಗ್ನಿ, ಭೂಮಿ ಮತ್ತು ಸೂರ್ಯ ಅಥವಾ ಹೆಣ್ಣು ಮತ್ತು ಗಂಡು ಎನ್ನುವ ಪ್ರಕೃತಿ ಸಹಜವನ್ನು ಪರಸ್ಪರ ವೈರುಧ್ಯಗಳಾಗಿಸಿ ಮೇಲಾಟದಿಂದ ನೋಡುವಂತೆ ಮಾಡಿದ್ದೂ ಆಗಿರಬಹುದು. ಅಂದರೆ ಒಂದು ಕಾಲದ ಸಮನ್ವಯತೆ, ಇನ್ನೊಂದು ಕಾಲದಲ್ಲಿ ಪ್ರತಿಸ್ಪರ್ಧಿಗಳಾದಂತೆ.
ಬೇಟೆ ಮತ್ತು ನುಗ್ಗೆಕಾಯಿಯಂತಹಾ ವಸ್ತುಗಳ ಬಳಕೆಗೆ ಸಂಸ್ಕೃತಿ ಚಿಂತನೆಯಲ್ಲಿ ಪ್ರಾಬಲ್ಯ, ಕಾಮಾಭಿವ್ಯಕ್ತಿ ಅಥವಾ ಪ್ರಚೋದಕ ಸಂಕೇತಗಳೆಂಬ ಅರ್ಥವಿದೆ. ಬೇಟೆ ಮಾನವನ ಮೂಲ ಪ್ರವೃತ್ತಿಯಾದರೂ ಕೆಡ್ಡಸದೊಂದಿಗೆ, ಪ್ರಬಲ ಪುರುಷತ್ವದ ಮೂಲಕ ಸಂತಾನೋತ್ಪತ್ತಿಯನ್ನು ಪ್ರಚೋದಿಸುವ ನೆಲೆಯಲ್ಲಿ ಸೇರಿಕೊಂಡಿರಬೇಕು. ಭೂಮಿಗೆ ಋತುಮತಿತ್ವವನ್ನು ಆರೋಪಿಸಿ ಗಂಡಿನ ಪ್ರಾಬಲ್ಯವನ್ನು ಪ್ರತಿಷ್ಠಾಪಿಸುವ ಸಂಗತಿಯೇ ಇಲ್ಲಿ ಮುಖ್ಯ. ಫಲೋತ್ಪಾದನೆಗೆ ಸಿದ್ಧಗೊಂಡ ಭೂಮಿಯನ್ನು ಪುರಸ್ಕರಿಸುವ ಮೂಲಕ ಮಾನವ ಹೆಣ್ಣಿಗೊಂದು ಸಂದೇಶವನ್ನು ರವಾನಿಸುವ ಒಳಾಶಯ ಇಲ್ಲಿಯದು. ಯಾಕೆಂದರೆ ಹೆಣ್ಣಿಗೆ ಭೂಮಿ ಸಂಕೇತವಾಗಿರುವಂತೆ, ಸೂರ್ಯನನ್ನೋ ಅಗ್ನಿಯನ್ನೋ ಅಥವಾ ಜನಪದರಿಗೆ ಇಷ್ಟನಾದ ಈಶ್ವರನನ್ನೋ ಈ ಬೇಟೆಗೆ ಪುರುಷ ಸಂಕೇತವಾಗಿ ಕಲ್ಪಿಸಿಲ್ಲ. ಬದಲಾಗಿ ಮಾನವ ಗಂಡು ಪೌರುಷದ ಸಂಕೇತವಾಗಿ ಬೇಟೆಗಿಳಿದಂತಿದೆ(ಪ್ರಾಣಿಗಳು ಸುಲಭವಾಗಿ ಸಿಗುತ್ತವೆ ಎನ್ನುವ ನಂಬಿಕೆಯೂ ಇದೆ….) ಹಾಗಾಗಿ ಇದು ನಂತರದ ಸೇರ್ಪಡೆ, ಹಾಗೆಂದು ಇದು ಕಾಲ್ಪನಿಕವಲ್ಲ, ಬುದ್ಧಿವಂತಿಕೆಯ ಬಳಕೆ. ಇದನ್ನು ಅಲೌಖಿಕದಲ್ಲಿ ಲೌಖಿಕದ ಹುಡುಕಾಟ ಎನ್ನಬಹುದು. ಆದ್ದರಿಂದ ಕರಾವಳಿಯ ಪುರಾತನ ಮಾತೃಪ್ರಧಾನ ವ್ಯವಸ್ಥೆ ಪಿತೃಪ್ರಧಾನ ವ್ಯವಸ್ಥೆಗೆ ಹೊರಳಿದ ಸಂಕೇತವಾಗಿ ಕೆಡ್ಡಸದ ಆಚರಣೆಯಲ್ಲಿ ಪರಿಸ್ಕರಣೆ ನಡೆದಿದೆ ಎಂದು ಹೇಳಲು ಅವಕಾಶವಿದೆ.

(ಡಾ. ಸುಂದರ ಕೇನಾಜೆ ಲೇಖಕರು, ಜಾನಪದ ಸಂಶೋಧಕರು.)