*ಡಾ.ಸುಂದರ ಕೇನಾಜೆ.
ಈ ಹಿಂದೆ ಇದೇ ಅಂಕಣದಲ್ಲಿ ಎರಿಕ್ ಬರ್ನನ ಟ್ರಾನ್ಸ್ ಕ್ಷನಲ್ ಅನಾಲಿಸಿಸ್(ಟಿ.ಎ) ಬಗ್ಗೆ ಸಾಂದರ್ಭಿಕವಾಗಿ ಕೆಲವು ಮಾತುಗಳನ್ನು ಬರೆದಿದ್ದೆ. ಅದಕ್ಕೆ ಉತ್ತಮ ಪ್ರತಿಕ್ರಿಯೆಗಳೂ ಬಂದಿದ್ದವು. ಇತ್ತೀಚಿನ ದಿನಗಳಲ್ಲಿ ಈ ಸಿದ್ಧಾಂತವನ್ನು ಪ್ರಾಯೋಗಿಕವಾಗಿ ಅಥವಾ ಪರಿಣಾಮಕಾರಿಯಾಗಿ ಪರಿಚಯಿಸುವ ಜನ, ಸಂಸ್ಥೆ ಕಡಿಮೆಯಾಗಿರುವುದರಿಂದಲೋ ಅಥವಾ ಇಲ್ಲ ಎನ್ನುವ ಕಾರಣದಿಂದಲೋ ಇದರ ಬಗ್ಗೆ ಅನೇಕರಲ್ಲಿ ಕುತೂಹಲ ಇರುವುದು ಗಮನಾರ್ಹ. ಎರಿಕ್ ಬರ್ನ್ ತನ್ನ ಸಿದ್ದಾಂತದ ಕೊನೆಯಲ್ಲಿ ಹೇಳಿರುವ
ಸಮಯದ ಸಂರಚನೆಯ ಬಗ್ಗೆ ಕೆಲವೊಂದು ಅಂಶಗಳನ್ನು ಇಲ್ಲಿ ವಿಶ್ಲೇಷಿಸ ಬಯಸುತ್ತೇನೆ. ಮನುಷ್ಯನಿಗೆ ತನ್ನ ಸಮಯವನ್ನು ಕಳೆಯುವುದೇ ಒಂದು ಸಮಸ್ಯೆ. ಸಮಯದ ಬಗ್ಗೆ ಹಲವರು ಹಲವು ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ. ಕೆಲವರಿಗೆ ಸಮಯ ಹೆಚ್ಚು ಬೇಕು ಎಂದೆನಿಸಿದರೆ, ಮತ್ತೆ ಕೆಲವರಿಗೆ ಸಮಯವೇ ಹೆಚ್ಚಾಗಿರುತ್ತದೆ. ಆದರೆ ಬರ್ನನ ಪ್ರಕಾರ, ಜಗತ್ತಿನ ಎಲ್ಲರೂ ಹೆಚ್ಚೆಂದರೆ ಆರು ವಿಧಾನಗಳಲ್ಲಿ ಸಮಯವನ್ನು ಕಳೆಯುತ್ತಾರೆ. ಇದರಲ್ಲಿ ಐದು ವಿಧಾನ ಬದುಕಿನ ಯಶಸ್ಸಿಗೆ ಬೇಕೇ ಬೇಕು. ಒಂದನ್ನು ಬಳಸದೇ ಇದ್ದರೆ ಯಶಸ್ವಿ ಬದುಕು ನಡೆಸಬಹುದು(ಅದರೆ ಈ ಬಳಸಬಾರದ್ದನ್ನೇ ಜನ ಹೆಚ್ಚು ಬಳಸುವುದು ವಿಪರ್ಯಾಸ!) ಈ ಐದು ವಿಧಾನಗಳು ಸಮಯ ಕಳೆಯುವುದಕ್ಕೆ ಒಂದಕ್ಕಿಂತ ಒಂದು ಹೆಚ್ಚು ಫಲಪ್ರದ ಎಂದು ಹೇಳುತ್ತಾನೆ ಬರ್ನ್.
ಒಟ್ಟು ಇರುವ ಈ ಆರು ವಿಧಾನಗಳನ್ನು ಕನ್ನಡದಲ್ಲಿ ಮೀನಗುಂಡಿ ಸುಬ್ರಮಣ್ಯರವರು ಹೀಗೆ ವಿವರಿಸಿದ್ದಾರೆ.
ಹಿಂತೆಗೆಯುವಿಕೆ(Withdrawal- ನಕಾರಾತ್ಮಕ ಅನುಭವ ಪಡೆಯಬಹುದಾದ ವ್ಯಕ್ತಿ ಅಥವಾ ಸ್ಥಳದಿಂದ ದೈಹಿಕ ಅಥವಾ ಮಾನಸಿಕವಾಗಿ ದೂರವಿರುವುದು), ಶಿಷ್ಟಾಚಾರ(Ritual- ಸಕಾರಾತ್ಮಕ ಅನುಭವದ ಮಾತು ಅಥವಾ ಸಂಜ್ಞೆ), ಕಾಲಕ್ಷೇಪ(pastime- ಸಕಾರಾತ್ಮಕ ಅನುಭವ ಪಡೆಯುವ ಮಾತುಕತೆ), ಕಾರ್ಯಚರಣೆ(Activity- ಸಕಾರಾತ್ಮಕ ಅನುಭವ ಪಡೆಯುವ ಕೆಲಸ), ಆಟ(Game- ನಕಾರಾತ್ಮಕ ಅನುಭವ ಮಾತ್ರ ಪಡೆಯುವ ವರ್ತನೆ), ಆತ್ಮೀಯತೆ (Intimacy- ಪ್ರೀತಿ, ಗೌರವ, ವಾತ್ಸಲ್ಯ, ವಿಶ್ವಾಸ ಇತ್ಯಾದಿ ಪಡೆಯುವ ಭಾವನೆ ಮತ್ತು ವರ್ತನೆ) ಇವುಗಳಲ್ಲಿ ಬೇಡವಾದದ್ದು ಐದನೇಯ ಆಟ ಮಾತ್ರ. ಈ ಒಂದನ್ನು ಹೊರತುಪಡಿಸಿ ಉಳಿದೆಲ್ಲ ವಿಧಾನಗಳು ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬದುಕಿಗೆ ಅನಿವಾರ್ಯ ಎಂದು ಬರ್ನ್ ತಿಳಿಸುತ್ತಾನೆ. ಅಲ್ಲದೇ ಪ್ರಾಯೋಗಿಕವಾಗಿಯೂ ನೋಡುವ ಸಾಧ್ಯತೆಯನ್ನು ಕಂಡುಕೊಂಡಿದ್ದಾನೆ.
ಮನುಷ್ಯನ ಬದುಕಿನಲ್ಲಿ ಸದಾ ಎರಡು ರೀತಿಯ ಅನುಭವಗಳು ಆಗುತ್ತಲೇ ಇರುತ್ತವೆ. ಅದೇ ಸಕಾರಾತ್ಮಕ(Positive) ಮತ್ತು ನಕಾರಾತ್ಮಕ(Negative). ವ್ಯಕ್ತಿಯ ಯಶಸ್ಸು ಮತ್ತು ಆತನ ಸುಖ, ಸಂತೋಷ, ಆರೋಗ್ಯ ಎಲ್ಲವೂ ಈ ಎರಡರಲ್ಲಿ ತೀರ್ಮಾನವಾಗುತ್ತವೆ. ಎಲ್ಲರ ಬದುಕಿನ ಅಂತಿಮ ಗುರಿ ಸುಖವೇ ಆಗಿರುವುದರಿಂದ ಈ ಗುರಿಯನ್ನು ಸಾಧಿಸುವುದಕ್ಕೆ ಪೂರಕವಾಗಿ ಒಬ್ಬನ ಯೋಚನೆ, ಆ ಯೋಚನೆಯಿಂದ ಹುಟ್ಟಿಕೊಳ್ಳುವ ಭಾವನೆ(ಮೂಲ ಭಾವನೆಗಳು ನಾಲ್ಕು ಮಾತ್ರ- ದುಃಖ, ಕೋಪ, ಭಯ, ಸಂತೋಷ), ಈ ಭಾವನೆಯ ಹಿನ್ನೆಲೆಯ ವರ್ತನೆಗಳು ಇರುತ್ತವೆ. ಪ್ರತಿಯೊಬ್ಬ ವ್ಯಕ್ತಿಯೂ ಈ ನಾಲ್ಕೂ ಭಾವನೆಗಳನ್ನು ಅನುಭವಿಸಲು ಬೇಕಾದ ಯೋಚನೆಯನ್ನು ಮಾಡುತ್ತಾ ಆ ಯೋಚನೆಗೆ ಪೂರಕವಾದ ವರ್ತನೆಯನ್ನು ತೋರಿಸುತ್ತಾ ಕಾಲ ಕಳೆಯುತ್ತಾನೆ. ಕೆಲವು ಬಾರಿ ಇದು ವ್ಯಕ್ತಿಯ ಅನುಭವಕ್ಕೆ ವೇದ್ಯವಾಗಿ, ಹಲವು ಬಾರಿ ತನ್ನ ಪೂರ್ವದ(ಬಾಲ್ಯದಲ್ಲಿ ಕಲಿತ) ಬದುಕಿನ ಮುಂದುವರಿದ ಭಾಗವಾಗಿಯೂ ಸಾಗುತ್ತದೆ. ಯಾವ ಸಂದರ್ಭದಲ್ಲಿ ವ್ಯಕ್ತಿ ಸಕಾರಾತ್ಮಕ ಅಥವಾ ನಕಾರಾತ್ಮಕ ಅನುಭವ ಪಡೆಯುತ್ತಾನೆ
ಎನ್ನುವುದನ್ನು ಈ ಮೇಲೆ ತಿಳಿಸಿದ ಸಮಯ ಕಳೆಯುವ ಆರು ವಿಧಾನಗಳ ಪರಿಶೀಲನೆಯಿಂದ ತಿಳಿಯಬಹುದು. ಒಬ್ಬ ವ್ಯಕ್ತಿ ಈ ಆರರಲ್ಲಿ ಕೆಲವನ್ನು ಮಾತ್ರ ಬಳಸಿ ಇನ್ನು ಕೆಲವನ್ನು ಬಳಸದೇ ಇದ್ದಾಗ ಅಥವಾ ಎಲ್ಲವನ್ನೂ ಒಂದೇ ರೀತಿ ಬಳಸಿದಾಗ ಅಥವಾ ಎಲ್ಲದರಲ್ಲೂ ಆಟವನ್ನು ಸೇರಿಸಿದಾಗ ಆತ ನಕಾರಾತ್ಮಕ ಅನುಭವವನ್ನು ಪಡೆದು ಬದುಕಿನ ಆರೋಗ್ಯ, ಸುಖ, ಸಂತೋಷ, ಯಶಸ್ಸನ್ನು ಕಳೆದುಕೊಳ್ಳಬಹುದು. ಆದ್ದರಿಂದ ಆಟ ಒಂದನ್ನು ಬಿಟ್ಟು ಉಳಿದೆಲ್ಲವನ್ನು ಆಯಾಯ ಪ್ರಮಾಣದಲ್ಲಿ ಬಳಸಿದಾಗ ಬದುಕಿನ ಯಶಸ್ಸು ಸಾಧ್ಯ ಎನ್ನುವುದು ಈ ಸಿದ್ದಾಂತದ ತಿರುಳು.
ಒಬ್ಬ ವ್ಯಕ್ತಿ ಹುಟ್ಟಿ ತನ್ನ ಬಾಲ್ಯ ಕಳೆಯುವ ಹೊತ್ತಿಗಾಗಲೇ ತಾನು ಸಮಯವನ್ನು ಬಳಸುವ ವಿಧಾನವನ್ನು ಬೇರೆಬೇರೆ ಮೂಲದಿಂದ ತಿಳಿದುಕೊಂಡಿರುತ್ತಾನೆ. ಆ ವಿಧಾನವನ್ನೇ ಬದುಕಿನುದ್ದಕ್ಕೂ ಬಳಸುತ್ತಾ ಅದರಲ್ಲಿ ಸೋಲು ಅಥವಾ ಗೆಲುವು ಪಡೆಯಬಹುದು. ಆಟವೊಂದನ್ನು ಹೊರತುಪಡಿಸಿ ನಡೆಸುವ ಸಮಯದ ಬಳಕೆಯಲ್ಲಿ ಗೆಲುವೇ ಮುಖ್ಯವಾಗಿದ್ದರೆ, ಆಟದೊಂದಿಗಿನ ಸಮಯದ ಬಳಕೆಯಲ್ಲಿ ಹೊರನೋಟಕ್ಕೆ ಗೆಲುವು ಕಂಡರೂ ಒಳಗೆ ತನ್ನ ಸೋಲುಗಳೇ ನಿರ್ಣಾಯಕವಾಗಿರುತ್ತವೆ.
ಕ್ರಮವಾಗಿ ಈ ಐದು ವಿಧಾನಗಳ ಪರಿಣಾಮಗಳು ಹೆಚ್ಚುತ್ತಾ ಹೋದಂತೆ ಬದುಕಿನ ಯಶಸ್ಸು ನಿರ್ಣಯವಾಗುತ್ತಾ ಸಾಗುತ್ತದೆ(ಆತ್ಮೀಯತೆಯಲ್ಲಿ ಅತೀ ಹೆಚ್ಚು ದೈಹಿಕ, ಮಾನಸಿಕ ಆರೋಗ್ಯ, ನಂತರದ್ದು ಕಾರ್ಯಾಚರಣೆ, ಆನಂತರ ಕಾಲಕ್ಷೇಪ, ನಂತರ ಶಿಷ್ಟಾಚಾರ, ಕೊನೆಯದ್ದು
ಹಿಂತೆಗೆಯುವಿಕೆ) ಆದರೆ ಯಾವ ಸಕಾರಾತ್ಮಕ ಅಂಶವೂ ಇಲ್ಲದ ಆಟ ಕೇವಲ ನಕಾರಾತ್ಮಕ ಅಂಶವನ್ನು ಮಾತ್ರ ನೀಡುತ್ತದೆ ಎನ್ನುವ ಪ್ರಾಯೋಗಿಕ ವಾದ ಮತ್ತು ಸತ್ಯ ಎರಿಕ್ ಬರ್ನನದ್ದು. ನಕಾರಾತ್ಮಕ ಭಾವನೆಗಳನ್ನು ಪಡೆಯಲು ವ್ಯಕ್ತಿ ಸುಮಾರು ನೂರಕ್ಕೂ ಹೆಚ್ಚಿನ ಆಟಗಳ ವರ್ತನೆಯನ್ನು ತೋರಿಸುವ ಸಾಧ್ಯತೆಯ ಬಗ್ಗೆ ಎರಿಕ್ ಬರ್ನ್ ವಿವರಿಸುತ್ತಾನೆ. ಸಾಮಾನ್ಯವಾಗಿ ಕಾರ್ಯಾಚರಣೆಯಲ್ಲೇ ಹೆಚ್ಚು ಕಾಲ ಕಳೆಯುವ ಅಥವಾ ಆತ್ಮೀಯತೆಯ ಅಪಾಯ ತಪ್ಪಿಸಿ ನಕಾರಾತ್ಮಕ ಘಾತ(stroke)ಗಳನ್ನು ಪಡೆದು ಘಾತಾನುಪಾತವನ್ನು ಸಮತೋಲನಗೊಳಿಸಲು ಮನುಷ್ಯ ಆಟದಲ್ಲೂ ತೊಡಗುವ ಬಗ್ಗೆ ಈ ಸಿದ್ದಾಂತ ಸ್ಪಷ್ಟಪಡಿಸುತ್ತದೆ. ಈ ಆಟಗಳನ್ನು ತಾನು ಬೆಳೆದ ಪರಿಸರದಿಂದ(ತಂದೆ,ತಾಯಿ, ಬಂಧು, ಶಾಲೆ, ನೆರೆಹೊರೆ ಇತ್ಯಾದಿ) ಕಲಿತು ಬದುಕಿನುದ್ದಕ್ಕು ಬಳಸಿದರೂ ವ್ಯಕ್ತಿ ತನ್ನ ಸೋಲಿಗೆ ತಾನೇ ಕಾರಣನಾಗುತ್ತಾನೆ ಎನ್ನುವ ವಾದ ಬರ್ನನದ್ದು.
ಆದ್ದರಿಂದ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಆಟವನ್ನು ಹೊರತುಪಡಿಸಿದ ಐದು ವಿಧಾನಗಳು ಅತೀ ಮುಖ್ಯ, ಈ ಐದಲ್ಲದೇ ಇನ್ನೊಂದು ವಿಧಾನವೇ ಇಲ್ಲ ಎಂದು ಎರಿಕ್ ಬರ್ನ್ ಖಚಿತವಾಗಿ ಹೇಳುತ್ತಾನೆ. ಇನ್ನೊಂದು ವಿಧಾನ ಇದೇ ಎಂದು ಸಾಬೀತು ಪಡಿಸಿದವರಿಗೆ ಇದುವರೆಗೂ ನೀಡಲಾಗದೇ ಉಳಿದಿರುವ ಎರಿಕ್ ಬರ್ನ್ ಅವಾರ್ಡ್ ಪಡೆಯುವ ಅವಕಾಶವನ್ನೂ ನೀಡಲಾಗಿದೆ.
(ಡಾ.ಸುಂದರ ಕೇನಾಜೆ ಜಾನಪದ ಸಂಶೋಧಕರು ಹಾಗೂ ಅಂಕಣಕಾರರು)