*ಡಾ.ಸುಂದರ ಕೇನಾಜೆ.
ಚರಿತ್ರೆ ಬುದ್ಧನ ವ್ಯಕ್ತಿತ್ವವನ್ನು ಯಾವ ನೆಲೆಯಲ್ಲಿ ದಾಖಲಿಸಿದ್ದರೂ ಸಿದ್ಧಾರ್ಥನೆಂಬ(ತನ್ನ ಗುರಿಯನ್ನು ಸಾಧಿಸುವವನು) ಹೆಸರನ್ನು ಸಾರ್ಥಕಗೊಳಿಸಿ ತಥಾಗತ(ಹೀಗೆ ಬಂದು, ಹಾಗೇ ಹೋದವ)ನಾಗದೇ ಉಳಿದವನೊಬ್ಬನಿದ್ದರೆ ಆತ ಗೌತಮ ಬುದ್ಧ. ರಾಜ ಶುದ್ದೋದನ ಮತ್ತು ಮಾಯಾದೇವಿಯ ಮಗನಾಗಿ ಸುಖ- ಸಂಪತ್ತನ್ನು, ಯೌವನದ ಪರಾಕಾಷ್ಠೆಯಲ್ಲಿ ಇರುವಾಗಲೇ ಹೆಂಡತಿ-ಮಗನನ್ನು ತೊರೆದು ಹೋದನೋ ಅಥವಾ ಬುಡಕಟ್ಟು ಗಣರಾಜ್ಯಗಳ ನೀರಿನ ಸಮಸ್ಯೆಯ ರಾಜಿಸೂತ್ರದಲ್ಲಿ ಸೋತು ಗಡಿಪಾರಾದನೋ ಈ ಯಾವ ದ್ವಂದ್ವಗಳೂ ಇಂದಿಗೆ ಅಗತ್ಯವೆನಿಸದು ಅಥವಾ ಆತ ವೃದ್ಧನನ್ನು, ರೋಗಿಯನ್ನು, ಶವವನ್ನು ನೋಡಿ, ವೈರಾಗ್ಯವೋ ಭಯವೋ ಆಗಿ ಅರಮನೆ ಬಿಟ್ಟು ಕಾಡಿಗೆ ಹೋದನೆಂಬ ಕಾರ್ಯಕಾರಣ ಸಂಬಂಧಗಳೂ ಪ್ರಸ್ತುತವೆನಿಸದು. ಆತನೇ ಮೊದಲ ಬುದ್ಧ, ನಾಲ್ಕನೆಯವ ಅಥವಾ
ಏಳನೇಯವ ಇತ್ಯಾದಿ ಬೌದ್ಧ ಸೂತ್ರಗಳ ಚರ್ಚೆಗಳು ಕೂಡ ಬುದ್ಧನ ಮುಖವನ್ನು ಬೆಳಗುವಲ್ಲಿ ಮತ್ತು ಅದರಿಂದ ಬೆಳಕನ್ನು ಪಡೆಯುವಲ್ಲಿ ಸಹಕರಿಸವು. ಇವು ಕೇವಲ ಕಥೆ ಓದಿ ಲಹರಿ ಪಡೆಯುವವರಿಗೆ ಮಾತ್ರ ಚೆನ್ನಾಗಿ ಕಾಣಬಹುದು. ಅದರ ಬದಲು ಬುದ್ಧ ನಮಗೆ ದಕ್ಕುವುದು ಈ ಜಗತ್ತಿಗೆ ಹೇಳಿಕೊಟ್ಟ ಬದುಕಿನ ಸತ್ಯಗಳಿಂದ ಮತ್ತು ಅದರಲ್ಲಿ ಒಂದಿಷ್ಟಾದರೂ ಪಡೆಯುವ ಸಾಧ್ಯತೆಗಳಿಂದ.
ಎರಡುವರೆ ಸಾವಿರ ವರ್ಷಗಳ ಹಿಂದೆ ಈ ಜಗತ್ತಿನ ಮನುಷ್ಯ ಸಂಕುಲದ ಮಧ್ಯೆ ಇದ್ದರೂ ಗೊತ್ತಿಲ್ಲದೇ ಇದ್ದ ಸತ್ಯವನ್ನು ತನ್ನ ಸಂಶೋಧಕ ಮನಸ್ಥಿತಿಯಿಂದ ಮತ್ತು ತನ್ನ ಹಠಸಾಧನೆಯ ಸಾಧ್ಯತೆಗಳಿಂದ ಸಾಕಾರಗೊಳಿಸಿದ ಸೂತ್ರಗಳೇ ಬುದ್ಧತ್ವ, ತನ್ನ ಅಜ್ಞಾನದ ನಿದ್ರೆಗಳಿಂದ ಎಚ್ಚರಗೊಂಡು ದುಃಖದಿಂದ ಮುಕ್ತನಾದ ಪ್ರಬುದ್ಧ ವ್ಯಕ್ತಿಯಾಗಿ ಗೋಚರಿಸುವ ಬುದ್ಧ ಹೇಗೆ, ಎಲ್ಲಿ ಹುಟ್ಟಿದ,ಹೇಗೆ ಮನೆ ಬಿಟ್ಟು ಹೋದ, ಯಾವ ಮರದ ಕೆಳಗೆ ಕುಳಿತ ಎನ್ನುವ ಪೂರ್ವಾಶ್ರಮ ಕುತೂಹಲಗಳಿಂದಲೇ ಆತನನ್ನು ನೋಡುತ್ತಾ ಬರುವುದು ಮತ್ತು ಆತನ

ಸುತ್ತ ಮತ್ತೆ ಪವಾಡ, ದೈವತ್ವದ ಆವರಣವನ್ನು ಸೃಷ್ಟಿಸುತ್ತಾ ಬರುವುದು ಬುದ್ಧನ ಸಿದ್ಧಾಂತಗಳನ್ನು ಪ್ರಾಯೋಗಿಕವಾಗಿ ನೋಡಲು ತಡಬಡಿಸುವಂತೆ ಮಾಡುತ್ತದೆ. ಈ ರೀತಿಯ ವೈಯಕ್ತಿಕ ಬದುಕನ್ನು ಕೆದಕುವ ಮನಸ್ಥಿತಿಯಿಂದಾಗಿಯೇ ಚಾರಿತ್ರಿಕ ವ್ಯಕ್ತಿಗಳ ಕೊಡುಗೆಗಳು ಗೌಣವಾಗುವುದು ಎನ್ನುವುದಕ್ಕೆ ಬುದ್ಧನೂ ಅತ್ಯುತ್ತಮ ಉದಾಹರಣೆ. ಮಾತ್ರವಲ್ಲ ಭಾರತದಲ್ಲಿ ಬುದ್ಧನ ವಿಚಾರದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋದದ್ದನ್ನು ಕಾಣುತ್ತೇವೆ. ಚಾರಿತ್ರಿಕ ವ್ಯಕ್ತಿಯೋರ್ವನಿಗೆ ಅವತಾರಗಳ ಪಟ್ಟಕಟ್ಟಿ ಆತನನ್ನು ಗರ್ಭಗುಡಿಯೊಳಗೆ ಕೂರಿಸುವಂತೆಯೂ ಮಾಡಲಾಗಿದೆ. ಹೀಗಾದಾಗ ಆತ ಪೂಜೆಗೆ ಅರ್ಹನಾಗುತ್ತಾನೆಯೇ ಹೊರತು ಜಗತ್ತಿಗೆ ತೋರಿಸಿದ ಬದುಕಿನ ಸೂತ್ರಗಳನ್ನು ಕಾಣುವ ದೃಷ್ಟಿಗಳಿಗಲ್ಲ. ಈ ದೃಷ್ಟಿ ಮಸುಕಾಗುವುದೇ ಹೆಚ್ಚು. ಭಾರತದಲ್ಲಿ ಬುದ್ಧನ ವಿಚಾರದಲ್ಲಿ ಇದು ಹೆಚ್ಚು ಪ್ರಸ್ತುತವಾದುದನ್ನು ಕಾಣುತ್ತೇವೆ.
ಬುದ್ಧ ಅಷ್ಟಾಂಗ ಮಾರ್ಗಗಳನ್ನು ಹೇಳಿದ, ಅದಕ್ಕೂ ಮುನ್ನ ಈ ಮಾರ್ಗಗಳನ್ನು ಬಳಸಬೇಕಾದ ಅಗತ್ಯ ಎಲ್ಲಿ ಎನ್ನುವುದನ್ನೂ ಖಚಿತಪಡಿಸಿದ. ಇದು ತೀರಾ ಭಾವನೆಗೆ ಸಂಬಂಧಿಸಿದ ಸಂಗತಿಯಾದರೂ ಇದನ್ನು ಸಂಶೋಧಿಸಲು ಆತ ಆರು ವರ್ಷಗಳನ್ನು ತೆಗೆದುಕೊಂಡ, ಅನ್ನ-ಆಹಾರ ಬಿಟ್ಟು, ಹಗಲು-ರಾತ್ರಿ ಎನ್ನದೇ ಬೋಧಿವೃಕ್ಷದ ಕೆಳಗೆ ಕುಳಿತುಕೊಂಡ ಇತ್ಯಾದಿ ಕ್ರಿಯಾತ್ಮಕ ಸಂಗತಿಗಳು ಒಂದೆಡೆಯಾದರೆ, ಅದಕ್ಕಿಂತಲೂ ಆತನ ಈ ಎಲ್ಲ ಸಂಶೋಧನೆಗಳಿಂದ ಗಳಿಸಿದ ಸತ್ಯವೇನು ಎನ್ನುವುದನ್ನು ತಿಳಿದುಕೊಳ್ಳುವುದೇ ಪರಿವರ್ತನೆಯ ದೃಷ್ಟಿಯ ಪ್ರಮುಖ ಭಾಗ. ಆ ಕಾಲದಲ್ಲೇ ಊರೂರು ಸುತ್ತಿ ತಾನು ಕಂಡುಕೊಂಡ ಸತ್ಯವನ್ನು ಜನಸಮುದಾಯದ ಮಧ್ಯೆ ಪ್ರಾಯೋಗಿಕವಾಗಿ ಕಾಣಲು ಕಾರಣವಾದ್ದರಿಂದಲೋ ಏನೋ ಇಂದಿಗೂ ಬುದ್ಧನ ಅದೇ ಸತ್ಯ ಅಂತಿಮವೆಂದು ಅನಿಸುತ್ತಿರುವುದು. ಆದರೆ ತನ್ನ ಅಭಿಪ್ರಾಯ ಹೆಚ್ಚು ವೈಚಾರಿಕವೂ ವೈಜ್ಞಾನಿಕವೂ ಆಗಿದ್ದರೂ ಕೊನೆಗೆ ಅದನ್ನು ಧರ್ಮದ ಚೌಕಟ್ಟಿಗೇ ಒಳಪಡಿಸಬೇಕಾಯಿತು ಎನ್ನುವುದು ಕಾಲದ ದೃಷ್ಟಿಯ ಅನಿವಾರ್ಯ. ಆದರೆ ಇಂದು ಬುದ್ಧನ ಸಿದ್ಧಾಂತವನ್ನು ವೈಜ್ಞಾನಿಕವಾಗಿ ಮತ್ತು ವೈಚಾರಿಕವಾಗಿ ನೋಡುವುದೇ ಸರಿಯಾದ ಕ್ರಮ(ಜೀವನ್ ವಿದ್ಯಾ ಈ ಹಿನ್ನೆಲೆಯ ಉತ್ತಮ ಪ್ರಯತ್ನ)
ಮನುಷ್ಯ ಭಾವನೆಯ ನಾಲ್ಕು ಸ್ವರೂಪ(ದುಃಖ, ಕೋಪ, ಭಯ, ಸಂತೋಷ)ಗಳಲ್ಲಿ ಬುದ್ಧ ಮುಖ್ಯವಾಗಿ ದುಃಖವನ್ನು ಕೇಂದ್ರೀಕರಿಸಿ ತನ್ನ

ಸಿದ್ಧಾಂತವನ್ನು ಪ್ರತಿಪಾದಿಸಿದ. ಆಧ್ಯಾತ್ಮದ ಹೊರತಾದ ಸೈದ್ದಾಂತಿಕ ಚೌಕಟ್ಟಿನಲ್ಲಿ ನೋಡಿದಾಗಲೂ ಮನುಷ್ಯನ ಕಷ್ಟನಷ್ಟಗಳಲ್ಲಿ ದುಃಖ ಪ್ರಮುಖ ಪಾತ್ರ ವಹಿಸುತ್ತದೆ(ಮನೋವಿಜ್ಞಾನ ಭಯ, ಕೋಪಗಳನ್ನೂ ಸೇರಿಸುತ್ತದೆ) ಈ ದುಃಖಕ್ಕಿರುವ ಕಾರಣ ಆಸೆ ಅಥವಾ ಲೋಭ ಎನ್ನುವ, ಎಲ್ಲರಿಗೂ ಗೊತ್ತಿದ್ದರೂ ಆ ಕಾಲಕ್ಕೆ ಕ್ರಾಂತಿಕಾರಕವಾದ ಸತ್ಯವೊಂದನ್ನು ಮೊದಲು ಪತ್ತೆ ಹಚ್ಚಿದ. ಆಸೆಯನ್ನು ತೊಡೆದು ಹಾಕುವ ಮೂಲಕ ದುಃಖದಿಂದ ಹೊರಬರಬಹುದು, ಅದಕ್ಕೆ ಅಷ್ಟಾಂಗ ಮಾರ್ಗಗಳನ್ನು ಪಾಲಿಸುವುದೊಂದೇ ದಾರಿ ಎಂಬ ಸೂತ್ರಗಳನ್ನು ಜಗತ್ತಿನ ಮುಖಗಳಿಗೆ ಪ್ರಥಮವಾಗಿ ಹೇಳಿದ. ಇದನ್ನು ಆತ ತನ್ನ ಬುದ್ಧತ್ವ (ಜ್ಞಾನೋದಯ)ದ ನಂತರದ ಉದಾತ್ತ ಸತ್ಯಗಳಾಗಿ ತಿಳಿಸಿದ. ನಮ್ಮ ಪುರಾಣ, ಚರಿತ್ರೆ ಮತ್ತು ವರ್ತಮಾನದಲ್ಲೂ ಕಾಣುವ ಹಲವು ಚಟುವಟಿಕೆಗಳು ಅಷ್ಟಾಂಗ ಮಾರ್ಗಕ್ಕೆ ನಿಲುಕದ ಬುದ್ಧ ಹೇಳಿದ ಆಸೆ ಮೂಲದ ಚಟುವಟಿಕೆಗಳೇ ಆಗಿರುವುದರಿಂದ ದುಃಖ ಪಡುವ ಮತ್ತು ಅದರಿಂದ ಬದುಕಿನ ಕಷ್ಟಗಳನ್ನು ಕಾಣುವ ಸ್ಥಿತಿಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ ಎನ್ನುವುದೂ ಸರ್ವಕಾಲಿಕವಾದ ಸತ್ಯ.
ಆದರೆ ಬುದ್ಧನ ಪ್ರಕಾರ, ಒಳ್ಳೆಯ ಗುಣಗಳ ಕ್ರಿಯೆಗಳಿಂದ ಮಾತ್ರ ಭವಿಷ್ಯದಲ್ಲಿ ಸಂತೋಷವನ್ನು ಪಡೆಯುವ, ದುಃಖದಿಂದ ಮುಕ್ತಿಯ ದಾರಿಯನ್ನು ಕಂಡುಕೊಳ್ಳವ ಏಕೈಕ ಸೂತ್ರ. ಈ ಗುಣಗಳನ್ನು ಪಡೆಯುದಲ್ಲದೇ ಅದನ್ನು ಇತರರಿಗೆ ತಿಳಿಸುವುದಕ್ಕೂ ದೀರ್ಘ ಪ್ರಯಾಣ ಮಾಡುವ ಪ್ರವೃತ್ತಿ ಬೇಕು. ಈ ರೀತಿಯ ಪ್ರಯಾಣ ಮಾಡುವ ವ್ಯಕ್ತಿಯೇ ಬುದ್ಧ. ಹಾಗಾಗಿ ಸಿದ್ಧಾರ್ಥನಾಗಿದ್ದವ ತನ್ನನ್ನು ತಾನೇ ಬುದ್ಧನೆಂದು ಕರೆಯುವಂತೆ ಸೂಚಿಸಿದ್ದೂ ಅತನೇ. ಅದ್ದರಿಂದ ದುಃಖ ಅಥವಾ ಕಷ್ಟದ ದಾರಿಯಿಂದ ಸುಖ-ಸಂತೋಷದ ದಾರಿಯನ್ನು ಯಾರೇ ತೋರಿಸಿದರೂ ಗೌತಮನ ಪ್ರಕಾರ ಅವರೆಲ್ಲರೂ ಎಂದೆಂದೂ ಬುದ್ಧರು. ಬುದ್ದನಾಗುವ ಪರಿ ಅಥವಾ ಬುದ್ಧತ್ವವನ್ನು ಪಡೆಯುವ ದಾರಿಯೂ ಮಾನವ ಸಹಜ ಮತ್ತು ಎಲ್ಲರಿಂದಲೂ ಸಾಧ್ಯವೆಂದು ಜಗತ್ತಿಗೆ ಮೊದಲು ತೋರಿಸಿದವನೂ ಗೌತಮನೇ. ಹಾಗಾಗಿ ಲೌಕಿಕದ ಮಧ್ಯೆ ರಾಜ್ಯವನ್ನು ತೊರೆಯದೇ, ಸಂಸಾರದಿಂದ ವಿಮುಖವಾಗದೇ, ಕಷ್ಟ, ನಷ್ಟ, ನೋವುಗಳನ್ನು ಮೀರುವ ಮನುಷ್ಯನನ್ನು ನೋಡಬೇಕೆಂದು ಬಯಸುವವರು ಸಿದ್ಧಾರ್ಥನ ಬದುಕಿಗಿಂತಲೂ ಬುದ್ಧನ ಬದುಕನ್ನು ನೋಡುವುದೇ ಸರಿಯಾದ ದಾರಿ. ಇದು ಮನುಷ್ಯ ಮಾತ್ರನಿಂದಲೂ ಸಾಧ್ಯವಾಗುವ ದಾರಿ. ಈ ದಾರಿಯನ್ನು ಗ್ರಹಿಸಲು ಬುದ್ಧ ಪೂರ್ಣಿಮೆಯ ಬೆಳಕು ಸಾಕು. ಆದರೆ ಬುದ್ಧ ಸಂಶೋಧಿಸಿದ ಬುದ್ದತ್ವದಂತಹಾ ಇನ್ನೊಂದು ಹೊಸ ದಾರಿಯನ್ನು ಶೋಧಿಸಲು ಸಿದ್ಧಾರ್ಥನಂತೆ ಸಕಲವನ್ನೂ ತ್ಯಾಗ ಮಾಡುವ, ಕಷ್ಟ, ನಷ್ಟ, ನೋವುಗಳ ಜತೆಗೆ ಸಾಗುವ ಮನಸ್ಥಿತಿಯೂ ಬೇಕು.

(ಡಾ.ಸುಂದರ ಕೇನಾಜೆ ಲೇಖಕರು ಹಾಗೂ ಅಂಕಣಕಾರರು. ಜಾನಪದ ಸಂಶೋಧಕರು).