*ಡಾ.ಸುಂದರ ಕೇನಾಜೆ.
ಯಕ್ಷಗಾನಕ್ಕೆ ಸರಕಾರಿ ಮಟ್ಟದ ಔಪಚಾರಿಕ(ಸಾಂಸ್ಥಿಕ) ಶಿಕ್ಷಣದ ಅಗತ್ಯವಿದೆ ಎನ್ನುವ ಆಶಯದಿಂದ ನಡೆಸಿದ ಕೆಲಸಗಳನ್ನು ಇನ್ನೊಂದು ಸಂದರ್ಭದಲ್ಲಿ ಚರ್ಚಿಸ ಬಯಸುತ್ತಾ ಸಾಂಸ್ಥಿಕ ಶಿಕ್ಷಣದ ಅಗತ್ಯ ಮತ್ತು ಅನಿವಾರ್ಯಗಳ ಬಗ್ಗೆ ಮಾತ್ರ ಇಲ್ಲಿ ದಾಖಲಿಸುತ್ತಿದ್ದೇನೆ. ಈ ರೀತಿಯ ಅನಿವಾರ್ಯವನ್ನು ಚರ್ಚಿಸುವಾಗ ಯಕ್ಷಗಾನದ ಕಲಿಕೆಯ ಕುರಿತ ಮಿಥ್ಯ ಹಾಗೂ ಅದರ ಶ್ರೇಷ್ಠತೆಯ ಬಗೆಗಿನ ಭ್ರಮೆಯನ್ನು ನೆನಪಿಸಬೇಕಾಗುತ್ತದೆ. ಯಕ್ಷಗಾನವೆಂಬುವುದು ಕರಾವಳಿಗೆ ಮಾತ್ರ ಸೀಮಿತವಾಗಿರುವ
ಗಂಡು ಕಲೆ ಮತ್ತು ಪಾರಂಪರಿಕ ಗುರುಮುಖೇನ ಮಾತ್ರ ಕಲಿಯುವ ಕಲೆ ಎನ್ನುವ ರೀತಿಯ ಹೇಳಿಕೆಗಳನ್ನು ಬಹಳ ಕಾಲದಿಂದ ಕೇಳುತ್ತಾ ಬರುತ್ತಿದ್ದೇವೆ. ಹಾಗೆಂದು ಯಕ್ಷಗಾನ, ಕೇವಲ ಕರಾವಳಿ ಕರ್ನಾಟಕಕ್ಕೆ ಮಾತ್ರ ಸೀಮಿತವಾದ ಕಲೆಯಲ್ಲ. ದಕ್ಷಿಣ ಭಾರತದಲ್ಲಿ ಇದಕ್ಕೆ ಸಂವಾದಿಯಾದ ಅನೇಕ ಕಲಾ ಪ್ರಕಾರಗಳು ಎಲ್ಲಾ ರಾಜ್ಯಗಳಲ್ಲೂ ಇವೆ. ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲೂ ಇದನ್ನೇ ಹೋಲುವ ಕಲೆಗಳು ಅಸ್ತಿತ್ವದಲ್ಲಿವೆ. ಆದರೆ ಹೆಚ್ಚು ಪರಿಷ್ಕೃತಗೊಂಡ ಹಾಗೂ ಶಾಸ್ತ್ರೀಯತೆಗೆ ಒಳಪಟ್ಟ ಪ್ರದೇಶಗಳು ಕರಾವಳಿ ಜಿಲ್ಲೆ ಎಂದು ಮಾತ್ರ ಹೇಳಬಹುದು. ಹಾಗೇ ನೋಡಿದರೆ ಆಂಧ್ರದ ಪೂರ್ವ ಕರಾವಳಿಯಲ್ಲಿ ಇಂದಿಗೂ ಪ್ರಚಲಿತವಿರುವ ವೀಧಿನಾಟಕಕ್ಕೆ ಯಕ್ಷಗಾನದ ಜನಪದೀಯ ಸ್ವರೂಪವಿರುವುದನ್ನು ಈಗಾಗಲೇ ಚರ್ಚಿಸಿದ್ದಾರೆ. ತಮಿಳುನಾಡಿನ ತೆರುಕೂತ್ತಿಗೂ ಇದು ಅನ್ವಯಿಸುತ್ತದೆ.
ಕೇರಳದ ಕಥಕಳಿ ಮತ್ತು ಕರಾವಳಿಯ ಯಕ್ಷಗಾನ ತನ್ನ ಜನಪದೀಯವಾದ ಸ್ಥಾನವನ್ನು ಕಳಚುತ್ತಾ ಕಲಿಕೆಯನ್ನು ಶಾಸ್ತ್ರೀಯಗೊಳ್ಳುತ್ತಾ ಬಂದ ಕಾರಣ ಉಳಿದ ಪ್ರದೇಶದ ಯಕ್ಷಗಾನಕ್ಕಿಂತ ಭಿನ್ನವಾಗಿ ಕಾಣುತ್ತಿದೆ. ಆದರೆ ಕರ್ನಾಟಕದ ಉಳಿದ ಭಾಗಗಳಲ್ಲಿ ಪ್ರಚಲಿತವಿರುವ ಬಯಲಾಟ ಪ್ರಕಾರಗಳಾದ ದೊಡ್ಡಾಟ, ಸಣ್ಣಾಟ, ರಾಧನಾಟ, ಗೊಂಬೆಯಾಟ, ಘಟ್ಟದಕೋರೆ ಮತ್ತು ಪಾರಿಜಾತಗಳು ಯಕ್ಷಗಾನದ ಸ್ವರೂಪದ್ದೇ ಆದರೂ ಕಲಿಕೆಯಲ್ಲಿ ಜನಪದೀಯ ಶೈಲಿಯನ್ನೇ ಉಳಿಸಿಕೊಂಡಿವೆ. ಆದರೆ ಆಶಯದ ದೃಷ್ಟಿಯಿಂದ ಇವೆಲ್ಲವೂ ಒಂದೇ ಪಠ್ಯದ ಭಾಗಗಳು. ಪುರಾಣ ಪಾತ್ರಗಳ ಮರುಸೃಷ್ಟಿ, ಮನರಂಜನೆ, ನೀತಿಬೋಧೆ ಇವೇ ಇವೆಲ್ಲವುಗಳ ಪ್ರಮುಖ ಉದ್ದೇಶ. ಹಾಗೇ ಮುಮ್ಮೇಳ, ಹಿಮ್ಮೇಳಗಳು ಎಲ್ಲಾ ಕಡೆಯೂ ಸಣ್ಣಪುಟ್ಟ ವ್ಯತ್ಯಾಸದೊಂದಿಗೆ ಇವೆ. ವಿಭಿನ್ನ ಪಾತ್ರಗಳು, ಆಂಗಿಕ, ವಾಚಿಕ, ಅಭಿನಯ, ವೇಷಭೂಷಣ ಮತ್ತು ವಾದ್ಯ ಪರಿಕರಗಳ ಬಳಕೆ ಬಹುತೇಕ ದಕ್ಷಿಣ ಭಾರತದ ಈ ಎಲ್ಲಾ ಪ್ರಕಾರಗಳಲ್ಲೂ ಇವೆ. ಕಥಕಳಿ ಮತ್ತು ಗೊಂಬೆಯಾಟ(ಪಾತ್ರಧಾರಿಯ ಮಾತು) ಹೊರತುಪಡಿಸಿದರೆ ಉಳಿದೆಲ್ಲವೂ ವಾಚಿಕ ಅಭಿವ್ಯಕ್ತಿಯನ್ನೂ ಹೊಂದಿವೆ. ಹಾಗಾಗಿ ಕರಾವಳಿ ಕರ್ನಾಟಕ ಮಾತ್ರ ಯಕ್ಷಗಾನದ ಅಂತಿಮ ನೆಲೆ ಎನ್ನುವುದಾಗಲಿ, ಇದೊಂದೇ ಶ್ರೇಷ್ಠವೆನ್ನುವ ವ್ಯಾಖ್ಯಾನವಾಗಲಿ ಜನಪದೀಯ ನೆಲೆಯಿಂದ ಸರಿಯಾದುದಲ್ಲ.
ಮುಖ್ಯ ಅಂಶವೆಂದರೆ, ಜನಪದೀಯ ಮೂಲದಲ್ಲಿ ಉಳಿದುಕೊಂಡ ಮತ್ತು ಶಾಸ್ತ್ರೀಯ ಚೌಕಟ್ಟಿಗೆ ಒಳಪಟ್ಟ ಕಲಾ ಪ್ರಕಾರಗಳಲ್ಲಿ, ಶಾಸ್ತ್ರೀಯವಾದುದು(ನಿರ್ದಿಷ್ಟ ವ್ಯಕ್ತಿಗಳಿಂದ ಪರಿಸ್ಕರಿಸಲ್ಪಟ್ಟ) ಹೆಚ್ಚು ಕಾಲ ಉಳಿಯುವ, ತನ್ನ ಅಸ್ಥಿತ್ವವನ್ನು ಕರಾರುವಕ್ಕಾಗಿಸುವ ಮತ್ತು ಕಾಲದ ಹೊಡೆತಗಳಿಗೆ ಉತ್ತರ ನೀಡುವ ಗುಣವನ್ನು ಹೊಂದಿರುತ್ತವೆ. ಆದರೆ ಜಾನಪದೀಯವಾಗಿ ಇರುವ ಕಲೆಗಳಿಗೆ ಈ ಸಾಮರ್ಥ್ಯ ಕಡಿಮೆ. ಆದ್ದರಿಂದಲೇ ನಮ್ಮ ಅನೇಕ ಜನಪದ ಕಲೆಗಳು(ಮುಖ್ಯವಾಗಿ ಮೂಲ ನಿವಾಸಿಗಳ ಪ್ರದರ್ಶನ ಕಲೆಗಳು) ಇಂದು ನಶಿಸಿ ಹೋಗಿರುವುದು ಮತ್ತು ಹೋಗುತ್ತಿರುವುದು.
ಕೇರಳದ ಕಥಕಳಿ, ಕರಾವಳಿಯ ತೆಂಕು ಮತ್ತು ಬಡಗು ಯಕ್ಷಗಾನದ ಶಾಸ್ತ್ರೀಯ ಚೌಕಟ್ಟುಗಳನ್ನು ಕರ್ನಾಟಕದ ಉಳಿದ ಬಯಲಾಟ ಪ್ರಕಾರಗಳು, ವೀಧಿನಾಟಕ, ತೆರುಕೂತ್ತು ಪಡೆದಿಲ್ಲ. ಆದ್ದರಿಂದ ಈ ಪ್ರದೇಶದ ಪ್ರದರ್ಶನ ಕಲೆಗಳು ತೆಂಕು ಮತ್ತು ಬಡಗು ಯಕ್ಷಗಾನದಷ್ಟು ಔಪಚಾರಿಕಗೊಂಡಿಲ್ಲ. ಕರಾವಳಿ ಕರ್ನಾಟಕದ ಯಕ್ಷಗಾನ ಕಲಿಕಾ ಕೇಂದ್ರಗಳಿಗೆ ಹೋಲಿಸಿದರೆ ಬಯಲಾಟಗಳ ಕಲಿಕಾ ಕೇಂದ್ರದ ಸಂಖ್ಯೆ ಮತ್ತು ಗುಣಮಟ್ಟ ಇನ್ನೂ ಬಹುದೂರದಲ್ಲಿದೆ. ಗೊಂಬೆಯಾಟದಲ್ಲಂತೂ ಹೊಸ ತಲೆಮಾರಿನ ಕಲಿಕೆ ಬೆರಳೆಣಿಕೆಯದ್ದು. ಘಟ್ಟದಕೋರೆಯ ಒಂದು ಕೇಂದ್ರ ಉಳಿದಿರಬೇಕು?(ಮೈಸೂರಿನ ಕೊಳೆಗಾಲ) ಈ ಸ್ಥಿತಿ ವಿಧಿನಾಟಕ ಮತ್ತು ತೆರುಕೂತ್ತಿಗೆ ಬಂದಿದೆ. ಇವ್ಯಾವುದಕ್ಕೂ ಸಾಂಸ್ಥಿಕ ಕಲಿಕಾ ಕೇಂದ್ರಗಳೇ ಇಲ್ಲ. ಅದೇ ಕೇರಳದ ಕಥಕಳಿಯ ಕಲಾಮಂಡಲಂ, ಕಲಾವಿದನಿಗೆ ಹತ್ತು ವರ್ಷಗಳವರೆಗೆ ಕಲಿಸುವ ಕೇಂದ್ರ. ಇಲ್ಲಿ ಕಲಿಕೆಗೊಂದು ನಿರ್ದಿಷ್ಟ ಚೌಕಟ್ಟಿದೆ. ಒಂದೊಮ್ಮೆಗೆ ಆಸಕ್ತರ ಸಂಖ್ಯೆ ಕಡಿಮೆಯಾದರೂ ಎಂದೆಂದೂ ಕಲಿಕಾರ್ಥಿಗಳನ್ನು ಆಕರ್ಷಿಸುವ ಶಕ್ತಿಕೇಂದ್ರವಾಗಿಯೇ ಇರುತ್ತದೆ. ಈ ಸಂಗತಿ ತೆಂಕು ಮತ್ತು ಬಡಗು ಯಕ್ಷಗಾನಕ್ಕೆ ಸ್ವಲ್ಪಮಟ್ಟಿಗೆ ಮಾತ್ರ ಅನ್ವಯಿಸುತ್ತದೆ(ಯಕ್ಷ ಶಿಕ್ಷಣಕ್ಕಾಗಿ ಕಳೆದ 12 ವರ್ಷಗಳಿಂದ ಮಾಡಿದ ಪಠ್ಯದ ಕೆಲಸ ಕೆಲವು ಕಾರಣಗಳಿಂದ ನಿರೀಕ್ಷಿತ ಫಲ ನೀಡಿಲ್ಲ. ಇದನ್ನು ಇನ್ನೊಂದು ಸಂದರ್ಭದಲ್ಲಿ ಚರ್ಚಿಸ ಬಯಸುತ್ತೇನೆ)
ತೆಂಕು ಮತ್ತು ಬಡಗು ಯಕ್ಷಗಾನದ ಆಶು ಚೌಕಟ್ಟಿಗೆ ಧಕ್ಕೆಯಾಗದಂತೆ ಈ ಕಲೆಯ ನಾನಾ ಶೈಲಿಗಳನ್ನು ದಾಖಲಿಸಿ, ಪಾರಂಪರಿಕ ಗುರುತ್ವದ ಪರಿಕಲ್ಪನೆಯನ್ನೂ ಮೀರಿ ನಿರ್ದಿಷ್ಟ ಸಾಂಸ್ಥಿಕ ರೂಪದಲ್ಲಿ(ಕಲಾಮಂಡಲಂ ರೀತಿಯಲ್ಲಿ) ಮುನ್ನಡೆಸುವುದರಿಂದ ಇದನ್ನು ಹೆಚ್ಚು ಕಾಲ ಉಳಿಯುವಂತೆಯೂ ಜನಪ್ರಿಯವಾಗುವಂತೆಯೂ ಮಾಡಬಹುದು(ಸಾಂಪ್ರದಾಯಿಕ ನೆಲೆಯಲ್ಲಿ ಕೆಲವು ಅರೆಬರೆ ಹಾಗೂ ವೈವಿಧ್ಯತೆಯ ಗುರುಗಳನ್ನು ಇಟ್ಟುಕೊಂಡು ಕಲಿಸುವ ಕಲಿಕೆ ಮುಂದಕ್ಕೆ ಇಷ್ಟೇ ಎಂದಿದೆ) ಆದರೆ ಯಕ್ಷಗಾನದ ಸ್ವರೂಪದಲ್ಲೇ ಇರುವ ಇತರ ಸಂವಾದಿ ಬಯಲಾಟ ಕಲೆಗಳನ್ನು ಉಳಿಸುವುದು ಸವಾಲಿನ ಕೆಲಸ. ಇಲ್ಲಿ ಆವರಿಸಿರುವ ಪಾರಂಪಾರಿಕ ಅಥವಾ ಆಶು ನೆಲೆಯನ್ನು ಪರಿಸ್ಕರಿಸುವುದು ಸುಲಭದ ಮಾತಲ್ಲ. ಆದ್ದರಿಂದ ಈ ಕಲೆಗಳನ್ನು ದಾಖಲೀಕರಣದಲ್ಲಿ ಇಟ್ಟುಕೊಳ್ಳುವುದು, ಆ ಮೂಲಕ ಇವುಗಳನ್ನು ಪ್ರದರ್ಶನ ಮಟ್ಟದಲ್ಲಾದರೂ ಉಳಿಯುವಂತೆ ನೋಡಿಕೊಳ್ಳಬಹುದು. ಆದರೆ ತೆಂಕು-ಬಡಗು ಯಕ್ಷಗಾನಗಳನ್ನು ಪ್ರದರ್ಶನ ಮಟ್ಟದ ದಾಖಲೀಕರಣಕ್ಕಿಂತ ಸಾಂಸ್ಥಿಕ ಕಲಿಕಾ ಮಟ್ಟದಲ್ಲಿ ಉಳಿಸುವುದೇ ಇಂದಿನ ಅನಿವಾರ್ಯ. ಕಲೆಗಳನ್ನು ಸಂಗ್ರಹ ಮಟ್ಟಕ್ಕಿಂತ ಜನರ ಮಧ್ಯೆ ಇರುವಂತೆ ನೋಡಿಕೊಳ್ಳುವುದೇ ಅದರ ಉಳಿವಿಗಿರುವ ಮುಖ್ಯ ದಾರಿ.
ಆದ್ದರಿಂದ ಶ್ರೇಷ್ಠತೆ ಮತ್ತು ಜನಪದೀಯವಾಗಿ ಮಾತ್ರ ಉಳಿಯುವಂತದ್ದು ಎನ್ನುವ ಮಿಥ್ಯ ಕಲ್ಪನೆಯನ್ನು ಬಿಟ್ಟು ಈ ಕಲೆ ಮುಂದಿನ ತಲೆಮಾರಿಗೆ(ಭರತನಾಟ್ಯ ಅಥವಾ ಶಾಸ್ತ್ರೀಯ ಸಂಗೀತಗಳಂತೆ) ಔಪಚಾರಿಕ ಕಲಿಕೆಯ ಮೂಲಕ ಉಳಿಯಲಿ ಎನ್ನುವ ವಿಶಾಲ ಮನಸ್ಥಿತಿ ಕಲಾವಿದರಿಗೆ, ಕಲಾ ಆಸ್ವಾದಕರಿಗೆ, ಕಲಾ ಸಂಘಟಕರಿಗೆ ಮುಖ್ಯವಾಗಿ ಆಳುವ ವರ್ಗಕ್ಕೆ ಇರಬೇಕಾಗಿದೆ.
(ಡಾ.ಸುಂದರ ಕೇನಾಜೆ ಅಂಕಣಕಾರರು ಹಾಗೂ ಜಾನಪದ ಸಂಶೋಧಕರು.)