*ಡಾ. ಸುಂದರ ಕೇನಾಜೆ.
ಕರಾವಳಿಯ ಯಕ್ಷಗಾನ ನಡೆದು ಬಂದ ದಾರಿಯಲ್ಲಿ ಇಲ್ಲಿಯ ಯಕ್ಷಗಾನ ಮೇಳಗಳ ಕೊಡುಗೆಯೇ ದೊಡ್ಡದು. ಒಂದು ಕಾಲದಲ್ಲಿ ಕರಾವಳಿಯ ನಾಲ್ಕೈದು ಜಿಲ್ಲೆಗಳಲ್ಲಿ 33 ವೃತ್ತಿ ಮೇಳಗಳು, 600 ಹವ್ಯಾಸಿ ಮೇಳಗಳು, 495 ವೃತ್ತಿ ಕಲಾವಿದರು, 12 ಸಾವಿರ ಹವ್ಯಾಸಿ ಕಲಾವಿದರು, ಒಟ್ಟು ಸುಮಾರು 45 ಲಕ್ಷಕ್ಕೂ ಹೆಚ್ಚಿನ ಪ್ರೇಕ್ಷಕರು ಕೇವಲ ಆರು ತಿಂಗಳಲ್ಲಿ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು ಎನ್ನುವ ಆಶ್ಚರ್ಯಕರ ಅಧ್ಯಯನ ವರದಿಯೊಂದನ್ನು ಇಪ್ಪತ್ತೈದು ವರ್ಷಗಳ ಹಿಂದೆಯೇ ಡಾ.ಪುರುಷೋತ್ತಮ ಬಿಳಿಮಲೆಯವರು ದಾಖಲಿಸಿದ್ದರು(ನೋಡಿ, ಕೂಡುಕಟ್ಟು, ಡಾ.ಪುರುಷೋತ್ತಮ ಬಿಳಿಮಲೆ- 1997) ಕರಾವಳಿ ಜಿಲ್ಲೆಯಲ್ಲಿ ಸುಮಾರು ನಾಲ್ಕು ನೂರು ವರ್ಷಗಳ ಯಕ್ಷ ಪರಂಪರೆಯ ಈ ರಿಲೇ ಕೋಲನ್ನು
ವರ್ಗಾಯಿಸುತ್ತಾ ಅದನ್ನು ಜತನದಿಂದ ಕಾಪಾಡುತ್ತಾ ಅದರಲ್ಲಿ ಅನೇಕ ಬದಲಾವಣೆ, ಪರಿಷ್ಕರಣೆಗಳನ್ನು ಮಾಡುತ್ತಾ ದೇಶ ವಿದೇಶಗಳಿಗೂ ವಿಸ್ತರಿಸುತ್ತಾ ಬಂದ ಸುದೀರ್ಘ ಚರಿತ್ರೆ ಯಕ್ಷಗಾನ ಮೇಳದ ಕಲಾವಿದರದ್ದು. ಡಾಹೀಗೆ ಆರು ತಿಂಗಳ ತಿರುಗಾಟ ನಡೆಸಿದ ನಂತರ ಈ ಮೇಳಗಳ ಕಲಾವಿದರು ತಮ್ಮ ಕೃಷಿ ಭೂಮಿಯಲ್ಲಿ ಮಳೆಗಾಲದ ಬೇಸಾಯ ಮಾಡುತ್ತಾ ಸುತ್ತಮುತ್ತಲಿನ ಆಸಕ್ತ ಹುಡುಗರಿಗೆ ಯಕ್ಷಗಾನದ ನಾಟ್ಯಾಭ್ಯಾಸ ಮಾಡಿಸುತ್ತಾ ಇದರ ವಾಚಿಕ ಪರಂಪರೆಯಾದ ತಾಳಮದ್ದಳೆಯ ಮೂಲಕ ಮಾತು ಕಲಿಸುತ್ತಾ ಈ ಪರಂಪರೆಯನ್ನು ಉನ್ನತವಾಗಿ ತಲೆಮಾರಿನಿಂದ ತಲೆಮಾರಿಗೆ ವರ್ಗಾಹಿಸುವ ಕೆಲಸವೂ ನಡೆದಿದೆ. ಆದರೆ ಈ ರೀತಿಯ ಪರಂಪರೆ ಕಳೆದ ಇಪ್ಪತ್ತು ವರ್ಷಗಳಿಂದ ವ್ಯತ್ಯಸ್ಥಗೊಂಡಿರುವುದನ್ನು ಗಮನಿಸಬಹುದು. ಇದರ ಮಧ್ಯೆ ಮೇಳಗಳು ‘ಕಾಲಮಿತಿ’ ಎಂಬ ಪದ್ಧತಿಗೆ ತನ್ನನ್ನು ಒಳಪಡಿಸಿದ್ದು(ಮೇಳಗಳ ಸಂಖ್ಯೆಯೂ ಇಳಿಮುಖವಾಗಿದೆ) ಮೇಳಗಳ ಯಕ್ಷಗಾನ ಬಯಲಾಟಗಳಲ್ಲಿ ಹರಕೆಯ ಆಟಗಳಿಗೆ ಹೆಚ್ಚು ಒತ್ತು ನೀಡುತ್ತಿರುವುದು ( ಒಂದೇ ಪ್ರಸಂಗ) ಆರು ತಿಂಗಳ ಬದಲು ವರ್ಷಪೂರ್ತಿ ಕಲಾವಿದರು ಮೇಳಗಳಲ್ಲಿ ತೊಡಗಿಕೊಳ್ಳುವುದು(ಆರ್ಥಿಕ ಹಿನ್ನೆಲೆಯಿಂದ ಸರಿ) ಪ್ರಸಂಗಗಳ ವಿಸ್ತರಣೆ, ಸೃಜನಶೀಲತೆ ಮತ್ತು ಕಲಿಕಾ ಪ್ರಕ್ರಿಯೆಗೆ ಹೊಡೆತ ನೀಡಿರುವುದು ನಿಜ.

ಆದರೂ ಯಕ್ಷಗಾನಕ್ಕೆ ಭವಿಷ್ಯವಿದೆ, ಇದನ್ನು ಸಮರ್ಥಿಸುವಂತೆ ಕಳೆದ ಅನೇಕ ದಶಕಗಳಿಂದ ಈ ಜಿಲ್ಲೆಗಳಲ್ಲಿ ಕಾರ್ಯರೂಪಗೊಳ್ಳುತ್ತಿರುವ ಹಲವು ಯಕ್ಷಗಾನ ಕೇಂದ್ರಗಳೇ ಸಾಕ್ಷಿ. ಈ ಕೇಂದ್ರಗಳು ಒಂದು ಕಾಲದಲ್ಲಿ ಮೇಳಗಳು ಮಾಡುತ್ತಿದ್ದ ಕಾರ್ಯಗಳಿಗಿಂತಲೂ ಮಿಗಿಲಾದ ಕೆಲವು ಕೆಲಸಗಳನ್ನು ಇಂದು ಪೂರೈಸುತ್ತಿವೆ. ಅಂದರೆ ಹವ್ಯಾಸಿ ಕಲಾವಿದರನ್ನು ರೂಪಿಸುವ(ಇವರೇ ವೃತ್ತಿಪರರೂ ಆಗುತ್ತಾರೆ) ಅವರಿಗೆ ವೇದಿಕೆ ಒದಗಿಸುವ, ಯಕ್ಷಗಾನವನ್ನು ವಿಭಿನ್ನ ರೀತಿಯಲ್ಲಿ ಅರ್ಥೈಸುವ, ಅದರಲ್ಲಿ ಅನೇಕ ಪ್ರಯೋಗ ಮತ್ತು ವಿಸ್ತರಿಸುವ ಕಾರ್ಯಗಳನ್ನೂ ಈ ಕೇಂದ್ರಗಳು ಮಾಡುತ್ತಿವೆ. ಪರಂಪರಾಗತವಾಗಿ ಹರಿದು ಬಂದ ಕಲೆಯನ್ನು ಮೇಳಗಳು ಯಥಾವತ್ತಾಗಿ ಪ್ರದರ್ಶನ ಮಾಡುತ್ತಾ ಬಂದಿದ್ದರೆ, ಯಕ್ಷಗಾನ ಕೇಂದ್ರಗಳು ಅದರ ಸಾಂಸ್ಕೃತಿಕ ಆಯಾಮದ ಜತೆಗೆ ಇನ್ನೂ ಹೆಚ್ಚಿನ ಸಾಧ್ಯತೆಗಳನ್ನು ತೆರೆದಿಡುವುದನ್ನು ಚಿಂತಿಸುತ್ತವೆ. ಕರಾವಳಿಯ ನಾಲ್ಕೈದು ಜಿಲ್ಲೆಗಳಲ್ಲಿ ಹರಡಿಕೊಂಡಿರುವ ನೂರಾರು ಯಕ್ಷಗಾನ ಕೇಂದ್ರಗಳು, ಅಧ್ಯಯನ ಸಂಸ್ಥೆಗಳು ಅನೇಕ ಪ್ರಶಂಸನೀಯ ಕಾರ್ಯವನ್ನೇ ಮಾಡುತ್ತಿವೆ. ಇಲ್ಲಿ ಪ್ರಾತಿನಿಧಿಕವಾಗಿ ಎರಡು ಸಂಸ್ಥೆಗಳನ್ನು ನೆನಪಿಸುತ್ತಿದ್ದೇನೆ. ಬಹುತೇಕ ಕೇಂದ್ರಗಳ ಸ್ವರೂಪವವೂ ಇದೇ ಆಗಿದೆ.
ಯಕ್ಷಗಾನದ ಎರಡು ಮುಖ್ಯ ಪ್ರಕಾರದಲ್ಲಿ ಬಡಗುತಿಟ್ಟಿನಲ್ಲಿ ಉಡುಪಿಯ ಕಲಾರಂಗ(ತೆಂಕನ ಕೆಲಸವೂ ಇಲ್ಲಿ ನಡೆಯುತ್ತಿದೆ) ಮತ್ತು ತೆಂಕುತಿಟ್ಟಿನಲ್ಲಿ ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಕಾರ್ಯ ಶ್ಲಾಘನಾರ್ಹ. ಇವೆರಡರಲ್ಲಿ ಕಲಾರಂಗಕ್ಕೆ ಇದೀಗ ಐವತ್ತು ವರ್ಷ. ಬಡಗು ಯಕ್ಷಗಾನ ವ್ಯಾಪಿಸುವಲ್ಲಿ ಇದರ ಕೆಲಸವನ್ನು ಹತ್ತಿರದಿಂದ ನೋಡಬೇಕು. ಯಕ್ಷನಿಧಿ, ವಿದ್ಯಾಪೋಷಕ್, ಯಕ್ಷಶಿಕ್ಷಣದಂತಹಾ ಚಟುವಟಿಕೆಗಳ ಮೂಲಕ ಈ ಸಂಸ್ಥೆ ಕಲೆ, ಕಲಾವಿದನ ಉಳಿವು ಮತ್ತು ಮುಂದಿನ ತಲೆಮಾರು ಯಕ್ಷಗಾನವನ್ನು ಪ್ರೀತಿಸುವಂತೆ ಮಾಡುವ ಘನಕಾರ್ಯ ಯಕ್ಷಗಾನದ ಉಳಿವಿಗೊಂದು ಕನ್ನಡಿ. ಯಕ್ಷನಿಧಿಯ

ಮೂಲಕ ಕಲಾವಿದರಿಗೆ ವೈದ್ಯಕೀಯ ನೆರವು, ಸಾಂತ್ವಾನ ನಿಧಿ, ಮನೆ ನಿರ್ಮಾಣ, ವಿದ್ಯಾಪೋಷಕ್ ಮೂಲಕ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಯಕ್ಷ ಶಿಕ್ಷಣದ ಮೂಲಕ ಉಡುಪಿ ಜಿಲ್ಲೆಯ ಬಹುತೇಕ ಎಲ್ಲಾ ಪ್ರೌಢಶಾಲೆಗಳಲ್ಲೂ ಯಕ್ಷಗಾನ ಕಲಿಕೆ ಹಾಗೂ ನೂರಾರು ಪ್ರದರ್ಶನ ಇವೆಲ್ಲವೂ ಒಂದು ದಾಖಲೆಯ ಸಾಧನೆ. ಹಾಗಾಗಿ ಉಡುಪಿ ಜಿಲ್ಲೆಯಲ್ಲಿ ಕಲಿಯುತ್ತಿರುವ ಬಹುತೇಕ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲೆಯ ಬಗ್ಗೆ ಸ್ಪಷ್ಟ ಅರಿವಿದೆ. ಇವರೆಲ್ಲ ನಾಳೆ ಉನ್ನತ ಕಲಾವಿದರಾಗುತ್ತಾರೋ, ಬಿಡುತ್ತಾರೋ ಆದರೆ ಯಕ್ಷಗಾನದ ಒಲವು ಮೂಡಿ, ಕನಿಷ್ಠ ನೋಡುಗರಾಗುವುದರಲ್ಲಿ ಯಾವ ಸಂಶಯವೂ ಇಲ್ಲ. ಕಲಾರಂಗದ ಈ ಕಾರ್ಯವನ್ನು ಮೆಚ್ಚಿ ಇನ್ಫೋಸಿಸ್ಸ್ ಸಂಸ್ಥೆ ಈಗಾಗಲೇ ಕೋಟ್ಯಾಂತರ ರೂಪಾಯಿಗಳ ಸುಸಜ್ಜಿತ ಕಟ್ಟಡವೊಂದನ್ನು(ರಂಗಮಂದಿರ) ನೀಡಿದೆ.
ಇದೇ ರೀತಿ ತೆಂಕುತಿಟ್ಟಿನಲ್ಲಿ ಗಡಿನಾಡು ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನವನ್ನು ಗುರುತಿಸಬೇಕು. ಸ್ಥಾಪನೆಯಾಗಿ ಕೇವಲ ಹತ್ತು ವರ್ಷಗಳಲ್ಲೇ ಇದರ ಸಾಧನೆಯನ್ನು ದಾಖಲಿಸಬೇಕು. ಪರಂಪರಾಗತ ಚೌಕಟ್ಟಿನ ಹಿರಿಯ ಭಾಗವತರಾದ ಸಿರಿಬಾಗಿಲು ರಾಮಕೃಷ್ಣ ಮಯ್ಯರ ಇಚ್ಛಾಶಕ್ತಿಯ ಫಲವಾಗಿ ರೂಪುಗೊಂಡದ್ದೇ ಈ ಪ್ರತಿಷ್ಠಾನ. ಕೋಟ್ಯಾಂತರ ರೂಗಳ ಸುಸಜ್ಜಿತ ಕಟ್ಟಡ, ಯಕ್ಷಗಾನ ಮ್ಯೂಸಿಯಂ(ಅಪೂರ್ವ ಬಣ್ಣಗಾರಿಕೆ, ವೇಷಭೂಷಣಗಳ ಮಾಹಿತಿ ಸಂಗ್ರಹ), ಅತಿಥಿಗೃಹ ಅಲ್ಲದೇ ಕಲಿಕಾ ಕೇಂದ್ರವನ್ನೂ ತೆರೆದಿದೆ. ನಾಲ್ಕು ಸಂಪುಟಗಳಲ್ಲಿ(ಮರೆಯಲಾಗದ ಮಹಾನುಭಾವರು) ಸುಮಾರು ಇನ್ನೂರೈವತ್ತು ಅಪೂರ್ವ ಯಕ್ಷ ಕಲಾವಿದರ ದಾಖಲೀಕರಣ ಹಾಗೂ ಅನೇಕ ಯಕ್ಷಗಾನ ಸಂಬಂಧೀ ಪ್ರಕಟಣಾ ಕಾರ್ಯವನ್ನು ಈ ಕೇಂದ್ರ ನಡೆಸಿದೆ. ಪ್ರಾಮಾಣಿಕವಾಗಿ ನಿರಂತರ ಚಟುವಟಿಕೆಯಲ್ಲಿ ಇರುವಂತೆ ನೋಡಿಕೊಳ್ಳುತ್ತಿರುವ ಈ ಪ್ರತಿಷ್ಠಾನದ ಬಗ್ಗೆಯೂ ಕರಾವಳಿ ಯಕ್ಷಗಾನ ಭರವಸೆ ಇಡಬಹುದು.
ಇವುಗಳಲ್ಲದೇ ಯಕ್ಷಗಾನವನ್ನು ಮುಂದಕ್ಕೆ ದಾಟಿಸುವ ಪ್ರಕ್ರಿಯೆಯಲ್ಲಿ ಪ್ರಾಮಾಣಿಕ ಕೆಲಸ ಮಾಡುವ ನೂರಾರು ಸಂಸ್ಥೆಗಳನ್ನು ಕರಾವಳಿಯಲ್ಲಿ ಕಾಣಬಹುದು. ಇವುಗಳಲ್ಲಿ ಅನೇಕ ಸಂಸ್ಥೆಗಳಿಗೆ ಯಕ್ಷಗಾನವನ್ನು ಅಭಿಮಾನ ಮತ್ತು ಕಾಳಜಿಯಿಂದ ನಿಸ್ವಾರ್ಥವಾಗಿ ನೋಡುವ ಮನಸ್ಸಿದೆ. ಕರಾವಳಿಯ ಪ್ರತಿಷ್ಠಿತ ಕಲೆಯೊಂದನ್ನು ವರ್ಗಾಯಿಸಿ ಅನುಷ್ಠಾನಗೊಳಿಸುವ ಆಸಕ್ತಿ ಇದೆ. ಆದರಿಂದ ಇಂತಹಾ ಕಲಾ ಪೋಷಕ ಸಂಸ್ಥೆಗಳಿಗೆ ಸರಕಾರ ಕನಿಷ್ಠ ಬೆಂಬಲವಾದರೂ ನೀಡಬೇಕು. ಈ ರೀತಿ ಕೆಲಸ ಮಾಡುವ ಸಂಸ್ಥೆಗಳಿಗಾಗಿಯೇ ವಿಶೇಷ ಅನುದಾನ ಪ್ರಕಟಿಸಬೇಕು(ಬನಾರಿ ಗೋಪಾಲಕೃಷ್ಣ ಯಕ್ಷಗಾನ ಕೇಂದ್ರಕ್ಕೆ ಕೆಲವು ವರ್ಷಗಳ ಹಿಂದೆ ಬಜೆಟ್ ನಲ್ಲೇ ಅನುದಾನ ಬಿಡುಗಡೆಗೊಳಿಸಿ ಪ್ರೋತ್ಸಾಹಿಸಿದ ಉದಾಹರಣೆ ಇದೆ) ಕರಾವಳಿಯಾದ್ಯಂತ ಹರಡಿಕೊಂಡಿರುವ ಯಕ್ಷಗಾನ ಕೇಂದ್ರಗಳು ಮಾತ್ರ ನಮಗೆ ಈ ಕ್ಷೇತ್ರದ ಭರವಸೆ, ಆದ್ದರಿಂದ ಇದಕ್ಕೆ ಉನ್ನತ ಮಟ್ಟದ ಬೆಂಬಲ ಸದಾ ನೀಡಿದರೆ ಕಲೆ, ಕಲಾವಿದರು ಮತ್ತು ಅದು ಆಶ್ರಯಿಸಿಕೊಂಡಿರುವ ಭಾಷೆ ಗಟ್ಟಿಗೊಳ್ಳಲು ಸಾಧ್ಯ. ಈ ಕೆಲಸ ನಡೆಯಲಿ ಎನ್ನುವ ಆಶಯ ಇಲ್ಲಿಯದು.

(ಡಾ.ಸುಂದರ ಕೇನಾಜೆ ಅವರು ಲೇಖಕರು ಹಾಗೂ ಅಂಕಣಕಾರರು)