*ಎಂ.ನಾ.ಚಂಬಲ್ತಿಮಾರ್.
ಕಪ್ಪಿಡತೊಡಗಿತು ಮೇಘಮಾಲೆ…ಬೇಸಿಗೆಯ ತಾಪದಿಂದ ಮುಂಗಾರು ಮಳೆಗಾಲಕ್ಕೆ ಪ್ರಕೃತಿಯ ರಮ್ಯ ಪಯಣ..
ನೆಲ ಬಾಣಲೆಯಲ್ಲಿ ಬೆಂದು ಮುರುಟಿದರೂ, ತುಳಿದು ಸತ್ತರೂ ಮತ್ತೆ ಮಳೆಗೆ ಚಿಗುರೊಡೆದು ಗಗನ ನೋಡುವ ಗಿಡಗಳಂತಿರಬೇಕಲ್ಲವೇ ಬದುಕು?! ಮೋಡ ಕಪ್ಪಿಡತೊಡಗಿದೆ..!ಆಗಸದ ಬಣ್ಣ, ಭಾವದ ಜತೆ ನಿಸರ್ಗದ ಭಾವನೆಗಳೇ ಬದಲಾಗಿದೆ. ಅದು ಸಮಯಕ್ಕೂ ಮುನ್ನ ಮುಂಗಾರು ಮಳೆಗಾಲದ ಬರೋಣವನ್ನು ಸಾರಿದೆ..
ಹೌದು..
ಕಡು ಬೇಸಿಗೆಯ ಅತ್ಯುಷ್ಣದ ದಿನಗಳಿಗೆ ವಿದಾಯ ಹೇಳುತ್ತಾ ಬೇಸಿಗೆ ಮಳೆಯ ಬೆನ್ನಲ್ಲೇ ಮುಂಗಾರು ಮಳೆಗಾಲಕ್ಕೆ
ಭಾನು -ಭುವಿ ಮುನ್ನುಡಿ ಬರೆದು ಸಜ್ಜಾಗಿದೆ.ಇತ್ತೀಚಿನ ವರ್ಷಗಳಲ್ಲೇ ಈ ಬಾರಿ ಮೇ ತಿಂಗಳಾಂತ್ಯಕ್ಕೆ, ವಾಡಿಕೆಗಿಂತ ಒಂದು ವಾರ ಮೊದಲೇ ಮಳೆಗಾಲದ ಆರಂಭ ನಿಶ್ಚಿತವಾಗಿದೆ. ಈಗಾಗಲೇ ಅರಬ್ಬೀ ಸಮುದ್ರಕ್ಕೆ ಮುಂಗಾರು ಮುತ್ತಿಟ್ಟಿದೆ..
ಇದು ಕೇರಳಕ್ಕೆ ಮೇ 22ರಂದು
ವಾಯು ಭಾರದೊತ್ತಡದಲ್ಲಿ ಅಬ್ಬರದಿಂದಲೇ ಸುರಿದು ಬಳಿಕ ಮುಂಗಾರಿನ ಮಲಯ ಮಾರುತವಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.ಈ ಹಿಂದೆ 2009ರಲ್ಲಿ ಒಮ್ಮೆ ಹೀಗೆಯೇ ಮೇ ತಿಂಗಳ 23ಕ್ಕೆ ಮಳೆಗಾಲ ಆರಂಭವಾಗಿತ್ತು. ಈ ಬಾರಿ ಮೇ 27ಕ್ಕೆ ಆರಂಭ ಎಂದು ಘೋಷಣೆಯಾದರೂ ಅದಕ್ಕೂ ಮೊದಲೇ ಮಳೆರಾಯನ ಆಗಮನ ಸುನಿಶ್ಚಿತವಾಗಿದೆ.ಪ್ರಕೃತಿ ಅದಕ್ಕೆ ಪೂರಕ ಲಕ್ಷಣಗಳನ್ನು ತೋರಿಸುತ್ತಿದೆ.

ಈ ಬಾರಿ 2025ರಲ್ಲಿ ಜನವರಿ ತಿಂಗಳ ತನಕವೂ ಮಳೆ ಸುರಿದಿತ್ತು. ಬಳಿಕ ಬೆಂಕಿಯಂಥ ಬೇಸಿಗೆಯ ಬವಣೆ ಮುಗಿದು ಕೇವಲ ನಾಲ್ಕೇ ತಿಂಗಳಲ್ಲಿ ಮತ್ತೆ ಮಳೆಯಾಗುವುದೆಂದು ತಂಗಾಳಿಯೂ, ಮೋಡವೂ ಹೇಳುತ್ತಿದೆ. ಒಟ್ಟಿನಲ್ಲಿ ಪ್ರಕೃತಿಯ ಮಳೆ ಕ್ಯಾಲಂಡರೇ ಬದಲಾಗಿದೆ.
ಅದು ಕಾಲವನ್ನು ಭೇಧಿಸಿ ತನ್ನ ಪಯಣ ಹೊರಟಿದೆ. ಈಗ ಮಳೆಗೆ ಕಾಲವೇ ಇಲ್ಲ ಎನ್ನುವಂತೆ..!
ಹಿಂದೆ ಮಳೆಯನ್ನಾಧರಿಸಿದ್ದ ಕೃಷಿ ಅವಲಂಬಿತ ಬದುಕಿತ್ತು. ಆಗ ಮಳೆಗಾಲಕ್ಕೆಂದೇ ಮನುಷ್ಯ ಜೀವನದ ಪೂರ್ವ ಸಿದ್ಧತಗಳಿದ್ದುವು. ಮನೆಗೆ ಮುಳಿ ಹುಲ್ಲು ಹಾಸುವುದು, ಕಟ್ಟಿಗೆ ಶೇಖರಿಸುವುದು, ಧವಸ -ಧಾನ್ಯ ಕೂಡಿಡುವುದು ಇತ್ಯಾದಿ ಮಳೆಗಾಲದ ಪೂರ್ವ ಸಿದ್ಧತೆಯೇ ಈಗ ಗತಕಾಲದ ನೆನಪು..

ಇಂದು ಅಂಥ ಜೀವನ ಕ್ರಮವೇ ಇಲ್ಲ.ಬದುಕು ಬದಲಾಗಿದೆ, ಜತೆಗೆ ಮಳೆಯ ವರಸೆಗಳೂ ಬದಲಾಗಿದೆ.ಈಗ ಏನಿದ್ದರೂ ಮಳೆಗಾಲ ಪೂರ್ವದ ಸಿದ್ಧತೆಗಳೆಂದರೆ ಚರಂಡಿ, ತೋಡುಗಳ ರಿಪೇರಿ, ವಿದ್ಯುತ್ ತಂತಿಗೆ ತೊಂದರೆ ನೀಡುವ ಮರದ ರೆಂಬೆ ಕಡಿಯುವುದು, ರಸ್ತೆಗಳ ಸುಸ್ಥಿತಿಗೆ ಗಮನ ಹರಿಸುವುದು,ಕೃತಕ ನೆರೆ ಉಂಟಾಗದಂತೆ ತಡೆ ಇತ್ಯಾದಿಗಳೇ ಆಗಿವೆ.
ಒಂದು ಮಳೆಗಾಲದ ಆರಂಭ ಎಂದರೆ ವರ್ಷವೊಂದು ಕವಲೊಡೆಯುವ ಸಂದರ್ಭ. ಬೇಸಿಗೆ ಕಾಲದಿಂದ ಮಳೆಗಾಲವೆಂಬ ತಂಪಿನ, ಹಸಿರಿನ, ನೀರ ನೆರಳಿನ ಬದುಕಿಗೆ ಸಾಗುವ ಹೊತ್ತು. ಮಳೆಗಾಲ ಭಾವ ಜೀವಿಗಳಿಗೆಲ್ಲ ಸಂಭ್ರಮದ ಕಾಲ. ಆದ್ದರಿಂದಲೇ ಮುಂಗಾರು ಮಳೆಗಾಲ ಈಗ ಮನ್ಸೂನ್ ಟೂರಿಂಗ್ ಎಂಬ ಉದ್ಯಮವಾಗಿ ಬೆಳೆದಿದೆ. ಮಳೆಯನ್ನು

ಅನುಭವಿಸುವುದು, ಮಳೆಯಲ್ಲಿ ಪ್ರಕೃತಿಯನ್ನು ಸವಿಯುವುದು ನಿಜಕ್ಕೂ ರೋಮಾಂಚಕ ಅನುಭವಗಳೇ ಹೌದು. ಹಿಂದೆ ಮನುಷ್ಯರಿಗೆ ಬಡತನವಿದ್ದ ಕಾರಣ ಪ್ರಕೃತಿಯ ಈ ಸೌಲಭ್ಯ, ಸೌಂದರ್ಯ ಅನುಭವಿಸುವಲ್ಲಿ ಮನುಷ್ಯ ವಂಚಿತನಾಗಿದ್ದ. ಆದರೂ ಕಾಳಿದಾಸನೇ ಮೊದಲಾದ ಮಹಾಕವಿಗಳು ಸನಾತನ ಕಾಲದಲ್ಲೇ ಕಾವ್ಯದಲ್ಲಿ ಮಳೆಯ ನುಡಿಚಿತ್ರ ಕಟ್ಟಿದ್ದರು. ಈಗಿನವರು ಮಳೆಯ ದೃಶ್ಯ ಕಾವ್ಯವನ್ನೇ ನೇಯುತ್ತಾರೆ. ಏನೇ ಇರಲೀ,
ಮಳೆ ಮನಸುಗಳನ್ನೆಲ್ಲ ಭಾವದೀಪ್ತಿಯಿಂದ ಪ್ರಫುಲ್ಲಗೊಳಿಸುತ್ತದೆ.,ಪುಳಕ ನೀಡುತ್ತದೆ. ಒಂದೇ ಭಾವದಲ್ಲಿ ನೇಯುತ್ತದೆ.
ಈ ಮಳೆಗೂ ಎಷ್ಟೊಂದು ವೈಶಿಷ್ಟ್ಯ..?
ಮೊದಲು ಮಳೆ ಮುತ್ತಿಡುವುದೇ ಕಡಲಿಗೆ! ಅತ್ಯುಷ್ಣದಿಂದ ಕುದಿವ ನೀರಿಗೆ ಆಗಸದಿಂದ ತಂಪಿನ ನೀರ ಹನಿ ಬಿದ್ದಾಗ ಕಡಲೇ ಬಾಯ್ದೆರೆದುಕೊಳ್ಳುತ್ತದೆಯಂತೆ.!
ಒಡಲ ಗರ್ಭವನ್ನು ತಂಪಲ್ಲಿರಿಸಲು ಮಳೆಯನ್ನೇ ಮುತ್ತಾಗಿಸುವ ಕಡಲಿನ ಮಳೆಯ ಚಂದವೇ ಬೇರೆ.ಹೀಗೆಯೇ ಬೆಟ್ಟದ ಮಳೆಯೂ ಭಿನ್ನ. ನೆಲ ಮಟ್ಟಕ್ಕಿಂತ ಎತ್ತರದಲ್ಲಿ, ಮಳೆ ನೆಲಮುಟ್ಟುವ ಮೊದಲೇ ಅದಕ್ಕೆ ಮುತ್ತಿಡುವ ಬೆಟ್ಟ,ಪರ್ವತಗಳ ಮೊನೆಯ ಮಳೆ ಉಂಟಲ್ಲಾ ಅದು ನಿಜಕ್ಕೂ ಕಾವ್ಯಮಯ..!

ಇನ್ನೂ ನೆಲದಲ್ಲೇ ಆದರೂ ಹೆದ್ದಾರಿಯ ಮಳೆ, ಕಾಡಿನ ಮಳೆ, ತೋಡಿನ ಮಳೆ, ತೋಟದ ಮಳೆ, ಮೈದಾನದ ಮಳೆ, ಗದ್ದೆಯ ಮಳೆ, ಮರದಡಿಯ ಮಳೆ… ಒಂದೊಂದಕ್ಕೂ ಅನ್ಯಾನ್ಯ ಸೌಂದರ್ಯದ ದೃಶ್ಯ ವೈಶಿಷ್ಟ್ಯವಿದೆ. ಆದರೆ ಅದನ್ನು ಶಪಿಸದೇ, ಅದರೊಡನೆ ಅನುಗಮಿಸಿ ಅನುಭವಿಸುವ ಮಿಲನದ ಮನಸ್ಸಿರಬೇಕಷ್ಟೇ..
ಆಗಲೇ ಪ್ರಕೃತಿಯ ಜೀವನಾನುಭವ ಲಭ್ಯ.
ಮಳೆ ಎಂಬ ಭೂಮಿಯ ಸ್ಥಿತ್ಯಂತರಕ್ಕೆ ಪ್ರಕೃತಿಯೇ ಹಾತೊರೆದು ಕಾಯುವ ಕಾಲವಿದು. ನೆಲದೊಡಲಲ್ಲಿ ಅವಿತು, ಬೆಂಕಿಯಂಥ ಬಿಸಿಲನ್ನು ತಿಂದರೂ ಮೊದಲ ಮಳೆಯ ಮುತ್ತುಗಳಿಗೆ ನೆಲದ ಒಡಲಿಂದ ನೆಗೆ ನೆಗೆದು ಚಿಗುರಿ ಬರುವ ಗಿಡಗಳೆಂಬ ಜೀವ ಇದೆಯಲ್ಲಾ ಅದೇ ಎಲ್ಲರ ಬದುಕಿಗೂ ಪ್ರೇರಣೆ..
ಎಷ್ಟೇ ಕಡುತಾಪವಾದರೂ ಆ ಬೀಜಗಳು ನೆಲವೆಂಬ ಬಾಣಲೆಯಲ್ಲಿ ಬೆಂದರೂ ಮುಂಗಾರು ಮಳೆಗಾಲಕ್ಕಾಗಿ ಜೀವಚೇತನವನ್ನು ಕಾಪಾಡಿಟ್ಟಿರುತ್ತದೆ. ಮತ್ತೆ ನೆಲದಿಂದ ಆಗಸ ನೋಡುತ್ತಾ ಹುಟ್ಟಿ ಚಿಗುರುತ್ತದೆ, ಹೂ ಬಿಡುತ್ತವೆ..
ಹೀಗಿರಬೇಕಲ್ಲವೇ ಎಲ್ಲರ ಬದುಕು??
ನಡೆದಾಡುವ ನೆಲದಲ್ಲಿ ಎಷ್ಟೇ ಗಿಡಗಳಿದ್ದರೂ, ಹೂವುಗಳಿದ್ದರೂ ಜನರು ತುಳಿದು ನಡೆಯುವುದು ಸಹಜ. ಹಾಗೆಂದು ವ್ಯಥೆ ಪಡದೇ ಆ ಜೀವಗಳು ಮತ್ತೆ ಮಳೆಗಾಲದಲ್ಲಿ ಸೌಂದರ್ಯದಿಂದಲೇ ಮರುಹುಟ್ಟು ಪಡೆಯುತ್ತದೆ. ಭೂಮಿಗೆ ಹಸಿರುಡುಗೆ ತೊಡಿಸುತ್ತದೆ. ಅದೊಂದು ಕರ್ತವ್ಯ ಎಂಬಂತೆ ಪ್ರಕೃತಿ ಪಲ್ಲಟದಲ್ಲಿ ತನ್ನ ಕೊಡುಗೆ ನೀಡುತ್ತದೆ..
ಜೀವನ್ಮುಖೀ ಬದುಕಿನ ಯಶೋಯಾನಕ್ಕೆ ಇದರಿಂದ ಪಾಠವಿದೆ, ಪ್ರಚೋದನೆ ಇದೆ.2025ರ ಮುಂಗಾರು ಎಲ್ಲ ಜೀವಕ್ಕೂ ಮುದತರಲಿ..
ಶುಭಾಶಯಗಳು..

(ಎಂ.ನಾ.ಚಂಬಲ್ತಿಮಾರ್ ಹಿರಿಯ ಪತ್ರಕರ್ತರು ಹಾಗೂ ಅಂಕಣಕಾರರು. ಕಣಿಪುರ ಡಿಜಿಟಲ್ ಮಾಧ್ಯಮದ ಸಂಪಾದಕರು.)