*ಗಣೇಶ್ ಮಾವಂಜಿ.
‘ಎಂತ ಗೊತ್ತುಂಟಾ..?! ಬರೀ ರಾಜಕೀಯ ಮಾರ್ರೆ. ನಿಜವಾಗಿ ನನ್ನ ಮಗನಿಗೆ ಪ್ರೈಸ್ ಸಿಗಬೇಕಿತ್ತು…ಅಷ್ಟು ಚಂದ ಡ್ಯಾನ್ಸ್ ಮಾಡಿದ್ದಾನೆ. ಹಾಗಿದ್ದರೂ ಪ್ರೈಸ್ ಮಾತ್ರ ಇನ್ನೊಬ್ಬನಿಗೆ ಕೊಟ್ಟದ್ದು… ಎಷ್ಟು ಬೇಸರ ಆಯ್ತು ಗೊತ್ತುಂಟಾ?’
‘ಹೌದಪ್ಪಾ…ನೀವೆಂತ ಹೇಳ್ತೀರಿ? ನನ್ನ ಮಗಳು ಚಂದ ಹಾಡಿದ್ದಾಳೆ. ಆದ್ರೆ ಬಹುಮಾನ ಕೊಡುವಾಗ ಮಾತ್ರ ನನ್ನ ಮಗಳ ಹೆಸರು ಲಿಸ್ಟ್ ನಲ್ಲಿ ಇಲ್ಲವೇ ಇಲ್ಲ. ಹೀಗೆಲ್ಲಾ ಮಾಡ್ಬಾರ್ದು…ಬರುವ ವರ್ಷ ನಾನು ನನ್ನ ಮಗಳನ್ನು ಯಾವುದೇ ಸ್ಪರ್ಧೆಗೆ ಕಳುಹಿಸಲಾರೆ..ಸುಮ್ಮನೆ ಏಕೆ ಬೇಕು ನಮಗೆ?’
‘ಈಗ ಎಲ್ಲಾ ಕಡೆಯೂ ಹಾಗೆಯೇ..ಮೊನ್ನೆ ಟಿವಿಯಲ್ಲಿ ಬರುತ್ತಿದ್ದ
ರಿಯಾಲಿಟಿ ಶೋ ನೋಡಿದ್ದೀರಾ? ಅದರಲ್ಲಿ ಎಂತ ಆದದ್ದು ಗೊತ್ತುಂಟಾ? ನಿಜವಾಗಿ ನೋಡುವುದಿದ್ದರೆ ಮೊದಲ ಬಹುಮಾನ ಸಿಗಬೇಕಾದದ್ದು ಅವನಿಗೆ. ಆದರೆ ಕೊಟ್ಟದ್ದು ಮಾತ್ರ ಈಚೆಯವನಿಗೆ. ಅವರು ದುಡ್ಡು ಕೊಟ್ಟಿದ್ದಾರೋ ಏನೋ..! ಇಲ್ಲದಿದ್ದರೆ ಹಾಗೆ ಆಗುವುದು ಉಂಟಾ?
ಯಾವುದೇ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ತಮ್ಮ ಮಕ್ಕಳಿಗೆ ಅಥವಾ ಬಂಧುಗಳಿಗೆ ಬಹುಮಾನ ಕೈತಪ್ಪಿ ಹೋದಾಗ ಕೇಳಿ ಬರುವ ಡಯಲಾಗ್ಗಳಿವು. ಎಷ್ಟೇ ಪಾರದರ್ಶಕವಾಗಿ ವಿಜೇತರ ಆಯ್ಕೆ ನಡೆದರೂ ಸಮಾರೋಪ ಸಮಾರಂಭದ ವೇಳೆ ಬಹುಮಾನ ಘೋಷಣೆಯಾದಾಗ ಈ ರೀತಿಯ ಡಯಲಾಗ್ ಗಳು ಕೇಳಿ ಬರದೆ ಇರುವುದೇ ಇಲ್ಲ. ಎಲ್ಲಾ ಮಕ್ಕಳೂ ತುಂಬಾ ಶ್ರದ್ಧೆಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾರೆ. ಮಕ್ಕಳ ನಿರ್ವಹಣೆಯ ಹಿಂದೆ

ಹೆತ್ತವರ ಪಾಲು ಕೂಡಾ ಇದ್ದೇ ಇರುತ್ತದೆ. ಡ್ಯಾನ್ಸ್ ಸ್ಟೆಪ್ ಹೇಳಿ ಕೊಡುವ ಗುರುಗಳು, ಹಾಡಿನ ಲಯ, ಶೃತಿ, ಸ್ವರದ ಏರಿಳಿತದ ಬಗ್ಗೆ ತಿಳಿ ಹೇಳುವ ಟೀಚರ್ನ ಶ್ರಮವೂ ಇಲ್ಲದಿರುವುದಿಲ್ಲ. ಹಾಗಿದ್ದರೂ ಸ್ಪರ್ಧೆ ಮುಗಿದು ಅಂತಿಮವಾಗಿ ಪ್ರಥಮ, ದ್ವಿತೀಯ ಅಥವಾ ತೃತೀಯ ಸ್ಥಾನ ಇಂತವರು ಪಡೆದಿದ್ದಾರೆ ಎಂದು ಹೆಸರು ಘೋಷಣೆಯಾದಾಗ ನಿರೀಕ್ಷೆ ಹೊತ್ತವರು ಕುಸಿದು ಹೋಗುತ್ತಾರೆ. ಸ್ಪರ್ಧೆಯಲ್ಲಿ ಸೋಲು, ಗೆಲುವು ಇದ್ದದ್ದೇ. ಅದಕ್ಕೆ ಅಂಜಬಾರದು, ಅಳುಕಬಾರದು ಎಂದು ಮನಸ್ಸು ಗಟ್ಟಿ ಮಾಡಿಕೊಂಡರೂ ಬಹುಮಾನ ಹಂಚಿಕೆಯಲ್ಲಿ ಅದೇನೋ ಅಕ್ರಮ ಎಸಗಿದ್ದಾರೆ ಎಂಬುದನ್ನೇ ಮನಸ್ಸು ಹೇಳುತ್ತಿರುತ್ತದೆ. ನಿರೀಕ್ಷೆ ತೀವ್ರವಾಗಿ ಮನಸ್ಸು ಕಂಟ್ರೋಲ್ ತಪ್ಪಿದಾಗ ಇಡೀ ಕಾರ್ಯಕ್ರಮವೇ ಸರಿ ಇಲ್ಲ ಎಂದು ಬೊಬ್ಬಿರಿಯುವವರೂ ಇಲ್ಲದಿಲ್ಲ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಬಹುಮಾನ ಪಡೆದವರಿಗೆ ಕಾರ್ಯಕ್ರಮದ ಬಗ್ಗೆಯಾಗಲೀ ಅಥವಾ ಬಹುಮಾನ ಘೋಷಣೆಯಾದ ಬಗ್ಗೆಯಾಗಲೀ ಯಾವುದೇ ಅಸಮಾಧಾನ ಇರುವುದಿಲ್ಲ. ಬಹುಮಾನ ಕೈತಪ್ಪಿ ಹೋದವರು ಮಾತ್ರ ಈ ರೀತಿಯ ಕೊಂಕು ಮಾತುಗಳನ್ನಾಡಿ ತಮ್ಮನ್ನು ತಾವೇ ಸಮಾಧಾನಪಡಿಸಿಕೊಳ್ಳುತ್ತಾರೆ.
ಈ ಮಾತು ಸತ್ಯಕ್ಕೆ ದೂರವಾದುದು ಅಲ್ಲವೇ ಅಲ್ಲ. ನಿಮ್ಮೂರಲ್ಲೂ ಇತ್ತೀಚೆಗೆ ಅಷ್ಟಮಿ, ಚೌತಿ ಹಬ್ಬದ ವೇಳೆ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳು ನಡೆದಿರಬಹುದು. ಅಲ್ಲಿ ದ್ವಿತೀಯ, ತೃತೀಯ ಬಹುಮಾನವೋ ಅಥವಾ ರೇಸ್ನಲ್ಲಿದ್ದು ಬಹುಮಾನ ಕೈತಪ್ಪಿ ಹೋದವರನ್ನು ಒಮ್ಮೆ ಮಾತನಾಡಿಸಿ ನೋಡಿ. ‘ಮೊದಲ ಬಹುಮಾನ ನನಗೇ ಸಿಗಬೇಕಿತ್ತು. ಆದರೆ ಜಡ್ಜ್ ಗಳು ಸರಿ ಇರಲಿಲ್ಲ. ಹಾಗಾಗಿ ನನಗೆ ಸಿಗಲಿಲ್ಲ’ ಎಂಬ ಮಾತು ಬಂದೇ ಬರುತ್ತದೆ. ನಿಮ್ಮೂರಿನ ಸ್ಪರ್ಧೆ ಬಿಟ್ಟುಬಿಡಿ. ಟಿವಿಯಲ್ಲಿ ಬರುವ ರಿಯಾಲಿಟಿ ಶೋದಲ್ಲಿ ಟ್ರೋಫಿ ಪಡೆದುಕೊಂಡವರ ಬಗ್ಗೆ ಕುತೂಹಲಕ್ಕಾಗಿ ಯಾರಲ್ಲಾದರೂ ಮಾತನಾಡಿಸಿ. ಆಗ ನಿಮಗೆ ಬರುವ ಉತ್ತರ ಹೀಗಿರುತ್ತದೆ. ‘ಎಬ್ಬೇ…!! ಹೋಗಿ ಹೋಗಿ ಅವಳಿಗೆ ಟ್ರೋಫಿ ಕೊಟ್ಟಿದ್ದಾರೆ. ನನಗೆ ಅವಳನ್ನು ನೋಡಿದರೆ ಸಿಟ್ಟು ಬರುತ್ತದೆ. ನಿಜವಾಗಿ ಇವಳಿಗೆ ಕೊಡಬೇಕಿತ್ತು..’ ಎಂಬರ್ಥದ ಮಾತುಗಳು ಕಿವಿಗೆ ಬೀಳುತ್ತದೆ.
ಅಷ್ಟಮಿಯ ದಿನ ಮಕ್ಕಳನ್ನು ಬಾಲಕೃಷ್ಣನಾಗಿ ಸಿಂಗರಿಸಿ ಬೆಣ್ಣೆ ಮೆಲ್ಲುವಂತೆ ಮಾಡಿ ಬಹುಮಾನ ಮಾತ್ರ ನನ್ನ ಮಗುವಿಗೇ ಬರುಬೇಕು.., ಬರುತ್ತದೆ ಎಂದು ಗಟ್ಟಿ ನಂಬಿಕೆ ಇರಿಸುವ ಪೋಷಕರು ಇರುತ್ತಾರೆ. ಮಕ್ಕಳ ದಿನಾಚರಣೆಯ ಪ್ರಯುಕ್ತ ಮಕ್ಕಳ ಫೋಟೊ ಆಹ್ವಾನಿಸಿ ಚಂದದ ಮಗುವಿಗೆ ಬಹುಮಾನ ಘೋಷಣೆಯಾಗಿ ಪತ್ರಿಕೆಯಲ್ಲಿ ಮೊದಲ ಬಹುಮಾನ ಪಡೆದ ಮಗುವಿನ ಭಾವಚಿತ್ರ ಪ್ರಕಟವಾದಾಗಲೂ ಮೊದಲ ಬಹುಮಾನ ಪಡೆದ ಮಗುವಿನ ಫೊಟೋಕ್ಕಿಂತ ಮೆಚ್ಚುಗೆ ಗಳಿಸಿದ ಲಿಸ್ಟ್ನಲ್ಲಿದ್ದ ಮಗುವಿನ ಪೋಸ್ ಚಂದ ಕಾಣಬಹುದು. ಹಾಗೆಂದು ತೀರ್ಪುಗಾರರೇ ಸರಿ ಇಲ್ಲ ಎಂಬ ಅಭಿಪ್ರಾಯಕ್ಕೆ ಬರುವುದು ಎಷ್ಟು ಸರಿ?
ಎಲ್ಲವರಿಗೂ ಅವರವರ ಮಕ್ಕಳ ನಿರ್ವಹಣೆ ಚಂದವಾಗಿಯೇ ಕಾಣುತ್ತದೆ. ಎಲ್ಲಾ ಸ್ಪರ್ಧಿಗಳಿಗೂ ಅವರವರದ್ದೇ ಬೆಂಬಲಿಗರು ಕೂಡಾ ಇದ್ದೇ ಇರುತ್ತಾರೆ. ಹಾಗಿದ್ದರೂ ಸ್ಪರ್ಧೆ ಮುಗಿದಾಗ ತಮ್ಮವರಿಗೆ ಬಹುಮಾನ ಸಿಕ್ಕಿದರೆ ಮಾತ್ರ ಹಿಗ್ಗಿ, ಇನ್ನೊಬ್ಬರಿಗೆ ದೊರೆತಾಗ ಕುಗ್ಗುವ ಮನೋಸ್ಥಿತಿಗೆ ಒಳಗಾದರೆ ಅದಕ್ಕೆ ಅರ್ಥವಿರಲಾರದು.
ಟ್ರೋಫಿ ಯಾರಿಗೇ ಕೊಟ್ಟರೂ, ತೀರ್ಪುಗಾರರು ಯಾರನ್ನೇ ಆಯ್ಕೆ ಮಾಡಿದರೂ ಅದನ್ನು ವಿರೋಧಿಸುವವರು ಮಾತ್ರ ಇದ್ದೇ ಇರುತ್ತಾರೆ. ಗೆದ್ದ ಸ್ಪರ್ಧಿ ಯಾರಿಗೋ ಕೆಲವರಿಗೆ ಇಷ್ಟವಾಗುತ್ತಿಲ್ಲ ಎಂಬ ಕಾರಣಕ್ಕಾಗಿ ಅವರ ನಿರ್ವಹಣೆಯನ್ನು ಕಡೆಗಣಿಸಿ ಅವರನ್ನು ಬಹುಮಾನಕ್ಕಾಗಿ ಆಯ್ಕೆ ಮಾಡದಿರಲಾಗುತ್ತದೆಯೇ? ಇಷ್ಟಕ್ಕೂ ತೀರ್ಪುಗಾರರು ತಕ್ಕಡಿಯಲ್ಲಿ ತೂಗಿದಷ್ಟು ಕರಾರುವಾಕ್ಕಾಗಿ ಅಂಕಗಳನ್ನು ಹಂಚಲು ಹೇಗೆ ಸಾಧ್ಯವಾಗುತ್ತದೆ? ದೂಷಿಸುವವರೇ ತೀರ್ಪುಗಾರರ ಕುರ್ಚಿ ಏರಿದರೂ ಅಂತಿಮವಾಗಿ ಸ್ಪರ್ಧೆಯ ಮೊದಲ ವಿಜೇತರನ್ನಾಗಿ ಕೇವಲ ಓರ್ವ ವ್ಯಕ್ತಿಯನ್ನು ಮಾತ್ರ ಆಯ್ಕೆ ಮಾಡಬೇಕಷ್ಟೇ. ಹಾಗಿದ್ದಾಗಲೂ ಅವರ ಆಯ್ಕೆಯನ್ನೂ ವಿರೋಧಿಸುವವರು ಇಲ್ಲದಿರುವುದಿಲ್ಲ ಎಂಬುದು ಮಾತ್ರ ಒಪ್ಪಿಕೊಳ್ಳಲೇಬೇಕಾದ ಸತ್ಯ.
ಈ ಮಾತುಗಳಿಗೆ ವ್ಯತಿರಿಕ್ತವಾಗಿ ಕೆಲವೊಬ್ಬರು ತೀರ್ಪುಗಾರರು ಸ್ವಜನ ಪಕ್ಷಪಾತಿಗಳಾಗಿ ವರ್ತಿಸುವವರೂ ಇರಬಹುದು. ಅಂತವರು ಕೇವಲ ಸ್ಪರ್ಧಿಗಳಿಗೆ ಮಾತ್ರ ದ್ರೋಹ ಮಾಡುವುದಲ್ಲ.., ಬದಲಾಗಿ ಕಲಾಮಾತೆಗೆ ಅನ್ಯಾಯ ಎಸಗುವವರು. ಬೆರಳೆಣಿಕೆಯ ಅಂತವರಿಂದಾಗಿ ಪಾರದರ್ಶಕವಾಗಿ ತೀರ್ಪು ನೀಡುವ ಪ್ರಾಮಾಣಿಕ ತೀರ್ಪುಗಾರರ ತೀರ್ಪನ್ನು ಸಂಶಯದಿಂದ ನೋಡುವಂತಾಗುತ್ತದೆ.
ಯಾವುದೇ ಸ್ಪರ್ಧೆಯಲ್ಲಿ ಸೋಲು ಗೆಲುವು ಇದ್ದೇ ಇರುತ್ತದೆ. ಮೇಲೆ ಎಸೆದ ನಾಣ್ಯ ತಳ ಸೇರಿದಾಗ ಕೇವಲ ಒಂದು ಮುಖವನ್ನು ಮಾತ್ರ ಮೇಲೆತ್ತಬಹುದಷ್ಟೇ. ಸ್ಪರ್ಧೆಯಲ್ಲಿ ಸ್ಪರ್ಧಿಗಳು ಅದೆಷ್ಟೇ ಇದ್ದರೂ ಅಂತಿಮವಾಗಿ ಪ್ರಥಮ ಬಹುಮಾನ ಪಡೆಯುವವನು ಮಾತ್ರ ಒಬ್ಬನೇ ಆಗಿರುತ್ತಾನೆ. ತೀರ್ಪುಗಾರರ ತೀರ್ಪೇ ಅಂತಿಮ ಎಂದ ಮೇಲೆ ತೀರ್ಪನ್ನು ಗೌರವಿಸುವ ವಿಶಾಲ ಮನೋಭಾವವನ್ನು ಹೊಂದಿರಲೇ ಬೇಕಾಗುತ್ತದೆ. ಬಹುಮಾನ ಪಡೆಯುವುದಕ್ಕಿಂತಲೂ ಮಿಗಿಲಾಗಿ ಸ್ಪರ್ಧೆಯಲ್ಲಿ ಭಾಗವಹಿಸುವುದೇ ಮುಖ್ಯ ಎಂದರಿತು ಮುಂದುವರಿದರೆ ಖಂಡಿತವಾಗಿಯೂ ಅನುಭವದ ಪಾಠ ಮುಂದೊಂದು ದಿನ ಕೈತಪ್ಪಿದ ಟ್ರೋಫಿಯನ್ನು ಕೈಗೆಟುವಂತೆ ಮಾಡಿಬಿಡುತ್ತದೆ.

(ಗಣೇಶ್ ಮಾವಂಜಿ ಹಿರಿಯ ಪತ್ರಕರ್ತರು ಹಾಗೂ ಅಂಕಣಕಾರರು).












