*ಗಣೇಶ್ ಮಾವಂಜಿ.
ನೀವು ನಂಬ್ತೀರೋ ಬಿಡ್ತಿರೋ ಗೊತ್ತಿಲ್ಲ. ಆದರೆ ಹಳೆಯ ಕಾಲದ ಆಚರಣೆಗಳು, ಪದ್ಧತಿಗಳು ಮರೆಯಾದ ಬಳಿಕ ಜನರೊಂದಿನ ಆ ಪ್ರೀತಿ, ಕಕ್ಕುಲತೆ, ನಾವೆಲ್ಲಾ ಒಂದು ಎನ್ನುವ ಭಾವಕ್ಕೆ ತುಕ್ಕು ಹಿಡಿದು ಹೋಗಿದೆ.ದುಡ್ಡು ಕೊಟ್ಟರೆ ಎಲ್ಲವೂ ಸಿಗುತ್ತದೆ ಎಂಬ ಕಾರಣಕ್ಕಾಗಿ ಯಾರಾದರೂ ಮುನಿಸಿಕೊಂಡು ದೂರ ಸರಿದರೂ ಅವರನ್ನು ಸಂತೈಸಿ, ಬಳಿಗೆ ಕರೆದುಕೊಳ್ಳುವ ಜಾಯಮಾನಕ್ಕೆ ಯಾರೂ ಕೂಡಾ ಈಗ
ಮುಂದಾಗುವುದೇ ಇಲ್ಲ. ‘ಹೋದರೆ ಹೋಗಲಿ…, ಅವರಿಂದ ಆಗಬೇಕಾದುದು ಏನೂ ಇಲ್ಲ. ದುಡ್ಡು ಬಿಚ್ಚಿದರೆ ಅಂತಹ ನೂರು ಸಂಬಂಧಗಳನ್ನು ಬಳಿಗೆ ತಂದುಕೊಳ್ಳಬಹುದು’ ಎಂಬ ಸೊಕ್ಕಿನ ನಿರ್ಧಾರಗಳೇ ಮೇಲುಗೈ ಸಾಧಿಸಿಬಿಡುತ್ತದೆ.
ಒಂದೆರಡು ವರ್ಷಗಳಿಂದ ಅಥವಾ ಒಂದೆರಡು ತಿಂಗಳುಗಳಿಂದ ಅಥವಾ ಒಂದೆರಡು ವಾರಗಳ ಹಿಂದೆ ಪರಿಚಯವಾದವರು ಯಾವುದೋ ಕಾರಣಕ್ಕೆ ಸ್ನೇಹಕ್ಕೆ ಗುಡ್ ಬೈ ಹೇಳಿದ್ದಾರೆ ಎಂದಾದರೆ ಹೋದರೆ ಹೋಗಲಿ ಎಂದು ಬಿಟ್ಟು ಬಿಡಬಹುದು. ಆದರೆ ಆಪತ್ಕಾಲದಲ್ಲಿ ನೆರವಾದವರು, ಬಿದ್ದಾಗ ಎದ್ದೇಳಲು ಸಹಕರಿಸಿದವರು, ತಪ್ಪು ಹೆಜ್ಜೆಗಳನ್ನು ಇಟ್ಟಾಗ ತಿದ್ದಿ ತೀಡಿದವರು,ಬಾಲ್ಯದಲ್ಲಿ ಎತ್ತಿ ಮುದ್ದಾಡಿ ಚಾಕೊಲೇಟ್ ತೆಗೆದುಕೊಳ್ಳಲೆಂದು ಪುಡಿಗಾಸು ನೀಡಿ ಸ್ವರ್ಗ ಖುಷಿ ಕೊಟ್ಟವರು, ಬೆದರಿದಾಗ ಧೈರ್ಯ ತುಂಬಿದವರು, ಕುಗ್ಗಿ ಕುಸಿದು ಹೋದಾಗ ಮಾನಸಿಕ ಸ್ಥೈರ್ಯ ತುಂಬಿದವರು, ಬಡತನಕ್ಕೆ ಮರುಗಿ ಸ್ಕೂಲ್ ಫೀ ಕಟ್ಟಿದವರು, ನಮ್ಮ ಖುಷಿಯನ್ನು ತಮ್ಮ ಖುಷಿ ಎಂದೇ ಸಂಭ್ರಮಿಸಿ ಸ್ವೀಟ್ ಹಂಚಿದವರು…, ಹೀಗೆ ಬದುಕಿನ ಯಾವುದೋ ತಿರುವಿನಲ್ಲಿ ನಮ್ಮ ಕೈ ಹಿಡಿದು ಸ್ಫೂರ್ತಿಯಾದವರು ಯಾವುದೋ ಕಾರಣಕ್ಕಾಗಿ ಮುನಿಸಿಕೊಂಡು ದೂರವಾಗಿದ್ದಾರೆ ಎಂದಾದರೆ ‘ಹೋದರೆ ಹೋಗಲಿ’ ಎಂಬ ಭಾವ ಮಾತ್ರ ಒಳ್ಳೆಯದಲ್ಲ. ಅಂತವರು ಯಾವುದೇ ತಪ್ಪನ್ನು ಮಾಡಿದರೂ ಕ್ಷಮಿಸಿಬಿಡುವ ಉದಾರತೆಯನ್ನು ಮೈಗೂಡಿಸಿಕೊಳ್ಳಬೇಕು.

ಆದರೆ ಈಗ ಹಾಗಿಲ್ಲ. ಹೊತ್ತು ಹೆತ್ತ ಅಮ್ಮ, ಹೊಟ್ಟೆಗಟ್ಟಿ ನೋವು ನುಂಗಿ ದುಡಿದು ಸಾಕಿದ ಅಪ್ಪನತ್ತಲೂ ಕರುಣೆ ತೋರದ ಮಕ್ಕಳಿದ್ದಾರೆ ಬಾಲ್ಯದಲ್ಲಿ ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದ ಅಣ್ಣ,ತಮ್ಮ, ಅಕ್ಕ, ತಂಗಿಯರು ಕೂಡಾ ಯಾವುದೋ ಕಾರಣಕ್ಕೆ ಪರಸ್ಪರ ಮುನಿಸಿಕೊಂಡು ದೂರವಾಗುತ್ತಾರೆ. ಅದೂ ಕೂಡಾ ಕಾರಣಗಳನ್ನು ಕೆದಕಲು ಹೋದರೆ ತೀರಾ ಕ್ಷುಲ್ಲಕವಾಗಿರುತ್ತದೆ.! ಅಮ್ಮ ಹಳೆಯದನ್ನು ಮಾತಾಡಿ ಕಿರಿಕಿರಿ ಮಾಡುತ್ತಾರೆಂದೋ., ಅಪ್ಪ ಹಳೆಯ ಕಾಲದ ರೀತಿ ರಿವಾಜುಗಳನ್ನು ಹೇರುತ್ತಾರೆಂದೋ.,ಅಕ್ಕ ಸೀರೆ ತೆಗೆಯಲು ಹೋದಾಗ ತನ್ನನ್ನು ಕರೆಯಲಿಲ್ಲ ಎಂಬ ಕಾರಣಕ್ಕೋ, ತಂಗಿಯ ಗಂಡ ಹೊಸ ಕಾರು ಬುಕ್ ಮಾಡಿದ್ದನ್ನು ಮುಚ್ಚಿಟ್ಟರೆಂದೋ, ಅಣ್ಣ ಅತ್ತಿಗೆ ಯಾರನ್ನೂ ಕರೆದುಕೊಂಡು ಹೋಗದೆ ಟ್ರಿಪ್ ಗೆ ಹೋದರೆಂದೋ, ದೂರದಿಂದ ಬಂದ ತಮ್ಮ ತನಗಾಗಿ ಏನೂ ತರಲಿಲ್ಲ ಎಂದೋ…,ಹೀಗೆ ದೂರ ಸರಿಯಲು ಚಿಕ್ಕ ಚಿಕ್ಕ ಕಾರಣಗಳು ಕೂಡಾ ದೊಡ್ಡದಾಗಿ ಸಂಬಂಧಗಳ ನಡುವೆ ಕಂದಕ ಸೃಷ್ಟಿಸುತ್ತವೆ.
ಮೊಬೈಲ್ ಫೋನಿನ ಈ ಯುಗದಲ್ಲಂತೂ ಸಂಬಂಧಗಳ ನಡುವೆ ಬಿರುಕು ಮೂಡಿಸಲು ಹಲವು ವಿಷಯಗಳು ಕಾರಣವಾಗುತ್ತವೆ. ಜೀವದ ಗೆಳತಿ ತಾನಿದ್ದ ಫೊಟೋವನ್ನು ವಾಟ್ಸ್ಯಾಪ್ ಸ್ಟೇಟಸ್ ನಲ್ಲಿ ಹಾಕಿಲ್ಲವೆಂದೋ.,ಎಲ್ಲರಿಗೂ ನೆನಪಿನಲ್ಲಿ ಹುಟ್ಟು ಹಬ್ಬಕ್ಕೆ ಹಾರೈಸುವ ಗೆಳೆಯ ತನ್ನ ಹುಟ್ಟುಹಬ್ಬದಂದು ತಡವಾಗಿ ವಿಶ್ ಮಾಡಿದ್ದಾನೆ ಎಂದೋ., ಕರೆ ಮಾಡಿದಾಗ ಫೋನೆತ್ತದೆ ಅವಗಣನೆ ಮಾಡಿದ್ದಾರೆ ಎಂದೋ., ರೀಲ್ಸ್ ಮಾಡುವಾಗ ತನ್ನನ್ನು ಎದುರು ನಿಲ್ಲಿಸಿಲ್ಲ ಎಂದೋ…ಹೀಗೆ ಬಿರುಕು ಸೃಷ್ಟಿಸುವ ಬಗೆಬಗೆಯ ಕಾರಣಗಳನ್ನು ಪಟ್ಟಿ ಮಾಡಬಹುದು. ಆದರೆ ಈ ಎಲ್ಲಾ ತಪ್ಪುಗಳು ಎಲ್ಲರಿಂದಲೂ ಗೊತ್ತಿಲ್ಲದೆ ಘಟಿಸಿ ಹೋಗುತ್ತವೆ ಎಂಬ ಸರಳ ವಿಷಯ ಮಾತ್ರ ನಮ್ಮ ಅರಿವಿಗೆ ಬರುವುದೇ ಇಲ್ಲ.

ಗುಂಪು ಫೊಟೋವನ್ನು ವಾಟ್ಸ್ಯಾಪ್ ಸ್ಟೇಟಸ್ ಗೆ ದೂಡಿದಾಗ ನಮಗೆ ಅರಿವಿಲ್ಲದೆಯೇ ನಮಗೆ ತುಂಬಾ ಹತ್ತಿರದವರು ಅದರಲ್ಲಿ ಇಲ್ಲದಿರಬಹುದು. ಎಲ್ಲರ ಹುಟ್ಟುಹಬ್ಬವನ್ನು ನೆನಪಿಟ್ಟುಕೊಂಡು ಶುಭ ಹಾರೈಸುತ್ತಿದ್ದ ವ್ಯಕ್ತಿ ಕೆಲಸದ ತುರ್ತಿನಿಂದಲೋ ಅಥವಾ ಇನ್ಯಾವುದೋ ಕಾರಣಕ್ಕೆ ಗೆಳತಿಯ ಹುಟ್ಟುಹಬ್ಬವನ್ನು ಮರೆತೇ ಬಿಟ್ಟಿರಬಹುದು. ನೆಟ್ವರ್ಕ್ ಇಲ್ಲದ ಜಾಗದಲ್ಲಿ ಇರಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ತನ್ನವರಿಗೆ ಆ ಕ್ಷಣದಲ್ಲಿ ಕರೆ ಮಾಡಲು ಸಾಧ್ಯವಾಗದೆ ಇರಬಹುದು. ತುಂಬಿದ ಸಭೆಯಲ್ಲಿ ಕಣ್ತಪ್ಪಿನ ಪರಿಣಾಮವಾಗಿ ತುಂಬಾ ಬೇಕಾದ ವ್ಯಕ್ತಿಯನ್ನು ಮಾತನಾಡಿಸಲು ಸಾಧ್ಯವಾಗದಿರಬಹುದು. ಇಂತಹ ಕಾರಣಗಳನ್ನು ಇರಿಸಿಕೊಂಡು ಆತನಿಗೆ, ಆಕೆಗೆ ಅಥವಾ ತನ್ನ ಬಂಧುವಿಗೆ ತನ್ನ ಮೇಲೆ ಪ್ರೀತಿ ಇಲ್ಲ ಎಂದು ಊಹಿಸಿಕೊಂಡು ದೂರ ಸರಿದರೆ ಮಾನವ ಸಂಬಂಧಗಳಿಗೆ ಬೆಲೆ ಎಲ್ಲಿರುತ್ತದೆ?
ಈಗ ಹಳೆಯ ಪದ್ಧತಿ, ಆಚರಣೆ, ಸಂಪ್ರದಾಯಗಳಿಗೆ ಬರೋಣ. ಹಿಂದಿನ ಕಾಲದಲ್ಲಿ ಯಾವುದಾದರೊಂದು ಮನೆಯಲ್ಲಿ ನಿಶ್ಚಿತಾರ್ಥವೋ, ಮದುವೆಯೋ, ಸೀಮಂತವೋ, ಮಗುವಿನ ನಾಮಕರಣವೋ ಅಥವಾ ಇನ್ಯಾವುದೇ ಕಾರ್ಯಕ್ರಮಗಳು ಇದ್ದರೂ ತಿಂಗಳ ಹಿಂದೆಯೇ ಆ ಕಾರ್ಯಕ್ರಮಗಳ ಸಿದ್ಧತೆಗಾಗಿ ಮನೆಯವರು ಮಾತ್ರವಲ್ಲದೆ ನೆರೆಮನೆಯವರು, ಬಂಧುಗಳು, ನೆಂಟರಿಷ್ಟರು ತಯಾರಿ ನಡೆಸುತ್ತಿದ್ದರು. ಕಾರ್ಯಕ್ರಮದ ಮನೆಯ ಚಪ್ಪರಕ್ಕೆ ನೆರೆಕರೆಯ ಹಲವರು ಒಟ್ಟುಗೂಡಿ ಸತ್ತ ಅಡಿಕೆ ಮರ ಕಡಿದು ಕಂಬ ಊರಿ ಚಪ್ಪರ ರೆಡಿ ಮಾಡುತ್ತಿದ್ದರು.
ಸುತ್ತಲೂ ಅಡಿಕೆ ಮರದ ಸೋಗೆಯನ್ನು ನೀಟಾಗಿ ಕಟ್ಟಿ ಅಂಗಳಕ್ಕೆ ಆವರಣ ಸಿದ್ಧಗೊಳಿಸುತ್ತಿದ್ದರು. ಹೀಗೆ ನೆರೆಕರೆಯವರು, ಬಂಧುಗಳು ಒಟ್ಟಾಗಿ ಕೆಲಸ ಮಾಡುವಾಗ ಒಂದೊಮ್ಮೆ ಯಾವುದೋ ಕಾರಣಕ್ಕಾಗಿ ಪರಸ್ಪರ ಮುನಿಸು ಇದ್ದರೂ ಅವೆಲ್ಲವೂ ಕರಗಿಹೋಗಿ ಅಲ್ಲಿ ಸಂಬಂಧಕ್ಕೆ ಹೊಸ ಹೊಳಪು ಬರುತ್ತಿತ್ತು. ಆದರೆ ಈಗ ಕಂಗು ಕಡಿದು ಚಪ್ಪರ ಹಾಕುವ ಬದಲಾಗಿ ಆ ಕೆಲಸವನ್ನು ಶಾಮಿಯಾನದವರು ಮಾಡುವಂತಾಗಿದೆ.
ಹಿಂದೆಲ್ಲಾ ಕಾರ್ಯಕ್ರಮದ ಪ್ರಯುಕ್ತ ಊರವರಿಗೆ ಗಡದ್ದಾಗಿ ಊಟ ಕೊಡಲು ಅಡುಗೆ ಸಿದ್ಧತೆಗಾಗಿ ನೆರೆಕರೆಯವರೇ ಬಂದು ಸೇರುತ್ತಿದ್ದರು. ತೆಂಗಿನ ಕಾಯಿ ತುರಿಯುವುದು, ತುರಿದ ತೆಂಗಿನ ಕಾಯಿಯನ್ನು ಅರೆಯಲು ಸುತ್ತಮುತ್ತಲಿನ ಮನೆಗೆ ಕೊಂಡು ಹೋಗಿ ಕಡೆದು ತರಲಾಗುತ್ತಿತ್ತು. ನೆರೆಮನೆಯವರಲ್ಲಿ ಪರಸ್ಪರ ಭಿನ್ನಾಭಿಪ್ರಾಯ ಇದ್ದರೂ ಅವೆಲ್ಲವೂ ಈ ಕಾರಣಕ್ಕಾಗಿಯಾದರೂ ಕರಗಿ ಹೋಗುತ್ತಿತ್ತು. ಅಡುಗೆ ಮಾಡಲು, ಮಾಡಿದ್ದನ್ನು ಬಡಿಸಲು ಊರವರೇ ಸೇರುತ್ತಿದ್ದುದರಿಂದ ಪರಸ್ಪರ ಪ್ರೀತಿ ವಿಶ್ವಾಸಗಳು ವೃದ್ಧಿಸುತ್ತಿದ್ದವು.
ಆದರೆ ಅಡುಗೆಗಾಗಿ ಕ್ಯಾಟರಿಂಗ್ ವ್ಯವಸ್ಥೆ ಚಾಲ್ತಿಯಲ್ಲಿರುವುದರಿಂದ ನೆರೆಕರೆಯವರು ಅಡುಗೆ ತಯಾರಿಗಾಗಿ ಒಟ್ಟುಗೂಡುವ ಸನ್ನಿವೇಶ ಈಗಿಲ್ಲ. ತೆಂಗಿನ ಕಾಯಿ ತುರಿಯಲು, ಅರೆಯಲು ಯಂತ್ರಗಳ ಬಳಕೆ ಈಗಿದೆ. ಹೀಗಾಗಿ ಯುವಕರು, ಯುವತಿಯರು ಪರಸ್ಪರ ತಮಾಷೆಯಿಂದ ಅಡುಗೆ ಸಿದ್ಧತೆಯಲ್ಲಿ ಪಾಲ್ಗೊಳ್ಳುವ ಆ ಹಿಂದಿನ ಗೌಜಿ, ಗಮ್ಮತ್ತು ಈಗಿಲ್ಲ.
ಹಿಂದಿನ ಕಾಲದಲ್ಲಿ ಮದುವೆಯ ಮುನ್ನಾ ದಿನ ನಡೆಯುವ ಮೆಹಂದಿ ಕಾರ್ಯಕ್ರಮಕ್ಕಾಗಿ ಮದುರಂಗಿ ಸೊಪ್ಪು ತಂದು ಅದನ್ನು ಕಡೆಯುವ ಕಲ್ಲಿನಲ್ಲಿ ಅರೆದು ನುಣುಪಾಗಿಸಿ ಸಣ್ಣ ಕಡ್ಡಿಯಿಂದ ಮದುಮಗ, ಮದುಮಗಳ ಕೈಗೆ ಆಕರ್ಷಕ ಶೈಲಿಯ ಮೆಹಂದಿ ಇಡುವ ಪದ್ಧತಿ ಇತ್ತು.
ಆದರೆ ಆ ಪದ್ಧತಿ ನಶಿಸಿ ಈಗ ಅಂಗಡಿಯಲ್ಲಿ ಸಿಗುವ ಮೆಹಂದಿ ಕೋನ್ ಗಳು ಹಿಂದಿನ ಆ ಕೆಲಸವನ್ನು ಇಲ್ಲವಾಗಿಸಿದೆ. ಒಟ್ಟಾಗಿ, ಒಂದಾಗಿ ಸೇರಿ ಕಾರ್ಯಕ್ರಮ ನಡೆಸಿಕೊಡುವ ಆ ಹಿಂದಿನ ಎಲ್ಲಾ ಪದ್ಧತಿಗಳೂ ಈಗಿಲ್ಲವಾಗಿ ದುಡ್ಡು ಕೊಟ್ಟರೆ ಬೇಕಾದ್ದು ಸಿಗುತ್ತದೆ ಈ ಜಗದೊಳಗೆ ಎಂಬಂತಾಗಿದೆ.
ಯಂತ್ರಗಳು ಬದುಕಿನ ಕಷ್ಟಗಳಿಂದ ಮುಕ್ತಿ ದೊರಕಿಸಿರಬಹುದು. ಅದರೆ ಬಂಧುಗಳೊಂದಿಗಿನ ಬಾಂಧವ್ಯದ ಇಟ್ಟಿಗೆಗಳನ್ನು ಸಡಿಲಗೊಳಿಸುತ್ತವೆ ಎಂಬುದು ಮಾತ್ರ ಸತ್ಯ. ಹಣ ಚೆಲ್ಲಿದರೆ ಎಲ್ಲವನ್ನೂ ಮಾಡಲು ಸಾಧ್ಯವಾಗುತ್ತದೆ ಎಂದಂದುಕೊಂಡು ತನ್ನವರಿಂದ ಕಳಚಿಕೊಂಡು ದೂರ ಉಳಿದರೆ ಮನುಷ್ಯನ ಬಾಳಿಗೆ ಅರ್ಥವೇ ಇಲ್ಲವಾಗುತ್ತದೆ. ಕಷ್ಟ ಪರಿಹರಿಸಲು ಯಂತ್ರಗಳ ಬಳಕೆ ಅನಿವಾರ್ಯವಾದರೂ ಹಿಂದಿನ ಸಂಸ್ಕೃತಿ, ಆಚಾರ, ವಿಚಾರಗಳ ಹಿಂದಿನ ತಿರುಳನ್ನು ಅರಿತುಕೊಂಡು ಸಹಬಾಳ್ವೆಗೆ ಒತ್ತು ನೀಡುವುದು ಅತ್ಯವಶ್ಯಕ.

(ಗಣೇಶ್ ಮಾವಂಜಿ ಹಿರಿಯ ಪತ್ರಕರ್ತರು ಹಾಗು ಅಂಕಣಕಾರರು)









