*ಗಣೇಶ್ ಮಾವಂಜಿ.
ಹಾಗೆ ನೋಡಿದರೆ ಹೆಚ್ಚಿನ ನಮ್ಮ ಅಜ್ಜಂದಿರು ಒಂದಲ್ಲ.., ಮೂರ್ನಾಲ್ಕು ಮದುವೆ ಆಗಿದ್ದವರೇ. ಅವರ ಮೊದಲ ಮದುವೆ ಯಾವುದೇ ಆಚಾರ, ವಿಚಾರ, ಸಂಸ್ಕೃತಿಗೆ ಸಡ್ಡು ಹೊಡೆದು ಆಗಿರುವ ಸಂದರ್ಭ ತೀರಾ ಕಡಿಮೆ. ಹಾಗಿದ್ದರೂ ಅವರು ಮೂರ್ನಾಲ್ಕು ಮದುವೆಯಾಗುವ ಪ್ರಸಂಗಗಳೇಕೆ ಸೃಷ್ಟಿಯಾಗುತ್ತಿದ್ದವು.? ಅವರೆಲ್ಲರೂ ಜೀವನ ಸಂಗಾತಿಯ ಆಯ್ಕೆಗೆಂದು ಹೆಣ್ಣು ಹುಡುಕಲು ಹೊರಟಾಗ ವಾರ, ನಕ್ಷತ್ರಗಳ ಲೆಕ್ಕಾಚಾರ ಮಾಡಿಯೇ ಮನೆಯಿಂದ ಹೊರ ಹೊರಟಿರಬಹುದು. ಹೋಗುವಾಗಲೂ
ಅಷ್ಟೇ. ಸಮ ಸಂಖ್ಯೆ, ಬೆಸ ಸಂಖ್ಯೆಯ ಲೆಕ್ಕಾಚಾರದಲ್ಲೇ ಸಂಬಂಧಿಕರನ್ನು ಕರೆದು ಹುಡುಗಿ ನೋಡುವ ಶಾಸ್ತ್ರ ಪೂರೈಸಿರಬಹುದು.ಹುಡುಗಿ ಇಷ್ಟವಾದ ಬಳಿಕ ಜಾತಕ ಹೊಂದಾಣಿಕೆ, ಹೂ ತೆಗೆದು ನೋಡುವ ಶಾಸ್ತ್ರ, ಗೋತ್ರದ ಹೊಂದಾಣಿಕೆ…, ಹೀಗೆ ಎಲ್ಲವೂ ಸರಿಯಾಗಿ ಕೂಡಿ ಬಂದ ಬಳಿಕವೇ ಹುಡುಗಿ ಆಗಬಹುದೆಂದು ಮುಂದಿನ ಹೆಜ್ಜೆ ಇಡುತ್ತಿದ್ದರಷ್ಟೇ.
ಹಾಗಿದ್ದರೂ ಹಿಂದಿನ ಆ ಮದುವೆಗಳೇಕೆ ಮುರಿದು ಬೀಳುತ್ತಿದ್ದವು?
ಹುಡುಗ, ಹುಡುಗಿಯ ಜಾತಕ ಹೊಂದಾಣಿಕೆ ಆಗುತ್ತದೆ ಎಂದು ಪಂಡಿತರ ಅಭಿಪ್ರಾಯದಂತೆ ಮುಂದುವರಿದರೂ ಅದೇಕೆ ಹುಡುಗಿ ಅಪಮುಹೂರ್ತದಲ್ಲಿ ತೀರಿಕೊಳ್ಳುತ್ತಿದ್ದಳು?. ಹುಡುಗನೇಕೆ ಅದೇನೋ ಪೆಟ್ಟು ಸಿಕ್ಕಿ (ಈಗಿನ ಹಾರ್ಟ್ ಅಟ್ಯಾಕ್) ರಕ್ತ ಕಾರಿ ಇನ್ನಿಲ್ಲವಾಗುತ್ತಿದ್ದ? ಸಮರ್ಪಕವಾಗಿ ಗಂಡು, ಹೆಣ್ಣಿನ ಜಾತಕ ಕೂಡಿ ಬಂದರೂ ಅದೇಕೆ ಮದುವೆಯಾಗಿ ಸ್ವಲ್ಪ ಸಮಯದಲ್ಲೇ ಗಂಡ-ಹೆಂಡತಿ ಹಾವು ಮುಂಗುಸಿಯಂತೆ ಕಚ್ಚಾಡಿಕೊಳ್ಳುತ್ತಿದ್ದರು?

ಹುಡುಗಿ ನೋಡುವ ಶಾಸ್ತ್ರಕ್ಕೆ ಮನೆಯಿಂದ ಹೊರಗೆ ಹೆಜ್ಜೆ ಇಡುವಾಗ ಬೆಕ್ಕು ಅಡ್ಡ ದಾಟಿದರೆ ಆ ದಿನ ಅಶುಭವೆಂದು ಪ್ರಯಾಣವನ್ನೇ ಮೊಟಕುಗೊಳಿಸಿದ ಉದಾಹರಣೆಗಳೆಷ್ಟೋ. ಯಾವುದೇ ಕೆಲಸಕ್ಕೆ ಹೋಗುವಾಗ ಕೇರೆ ಹಾವು ಎಡದಿಂದ ಬಲಕ್ಕೆ ಚಲಿಸಿದರೆ ಶುಭ ಶಕುನವೆಂದು ಪರಿಗಣಿಸಲ್ಪಟ್ಟರೂ ಹೋದ ಕೆಲಸಕ್ಕೆ ವಿಘ್ನ ತಲೆದೋರುತ್ತಿದ್ದ ಉದಾಹರಣೆಗಳೂ ಇಲ್ಲದಿಲ್ಲ. ಆರತಿ ಹಿಡಿಯುವಾಗ ಗಂಡ ಸತ್ತ ವಿಧವೆಯರು ಪಾಲ್ಗೊಳ್ಳುವುದು ನಿಷಿದ್ಧವೆಂಬ ಮೂಢನಂಬಿಕೆ ಅಂದಿನಂತೆ ಈಗಲೂ ಇದೆ. ಆದರೆ ಈ ಶಕುನಗಳಿಗೆ ವ್ಯತಿರಿಕ್ತವಾಗಿ ನಡೆಯುವ ವಿದ್ಯಮಾನಗಳನ್ನು ಮಾತ್ರ ಲೆಕ್ಕ ಇಟ್ಟವರಿಲ್ಲ.
ಜಗತ್ತು ಬದಲಾಗುತ್ತಲೇ ಇದೆ. ಎಲ್ಲೋ ಭೀಕರ ಮಳೆಯಾಗಿ ಕೊಚ್ಚಿ ಹೋದ ದೃಶ್ಯಗಳು ನಮ್ಮ ಮನೆಯ ಟಿವಿಯಲ್ಲಿ ಕಾಣುತ್ತವೆ. ದೆಹಲಿಯಲ್ಲಿ ಗಣರಾಜ್ಯೋತ್ಸವದ ದಿನ ಹಾರಿಸಲಾದ ಧ್ವಜ ನಮ್ಮ ಮನೆಯ ಅಂಗಳದಲ್ಲೇ ನಡೆದಂತೆ ಭಾಸವಾಗುವಷ್ಟು ನಮ್ಮ ತಂತ್ರಜ್ಞಾನ ಮುಂದುವರಿದಿದೆ.ಚಂದ್ರನ ಅಂಗಳಕ್ಕೆ ಕಾಲಿಟ್ಟು ಪಾರಮ್ಯ ಮೆರೆಯಲಾಗಿದೆ.ಅಷ್ಟೇ ಅಲ್ಲ.., ಅಲ್ಲಿ ಜೀವಿಸಲು ಯೋಗ್ಯವಾದ ವಾತಾವರಣ ಇದೆಯೇ ಎಂಬುದರ ಬಗ್ಗೆ ಅನ್ವೇಷಣೆಯೂ ನಡೆಯುತ್ತಲೇ ಇದೆ. ಹಾಗಿದ್ದರೂ ನಾವಿನ್ನೂ ಮೂಢ ನಂಬಿಕೆಯ ಬಿಗಿ ಹಿಡಿತದಿಂದ ಮಾತ್ರ ಪಾರಾಗಿಲ್ಲ.
ಏಕೆಂದರೆ ಈಗಲೂ ಹುಡುಗ, ಹುಡುಗಿ ಪರಸ್ಪರ ಮನಸ್ಸು ಕೊಟ್ಟು ಜೀವನ ಸಾಗಿಸಲು ಸಿದ್ಧವಾಗಿದ್ದರೂ ಜಾತಕ ಹೊಂದಾಣಿಕೆಯ ನೆಪದಲ್ಲಿ ಅದೆಷ್ಟೋ ಸಂಬಂಧಗಳು ಮುರಿದು ಬೀಳುತ್ತಿವೆ.ಜಾತಿ, ಧರ್ಮ ಬೇರೆಯಾದ ಕಾರಣಕ್ಕೆ ಮರ್ಯಾದಾ ಹತ್ಯೆಯೂ ಕೆಲವೆಡೆ ನಡೆಯುತ್ತಿವೆ. ಹುಡುಗಿಯ ಕಾಲ್ಗುಣ ಕೆಟ್ಟ ಪರಿಣಾಮದಿಂದಾಗಿಯೇ ಮನೆಯಲ್ಲಿ, ಹೋದಲ್ಲಿ ಅವಘಡ ಸಂಭವಿಸಿದೆ ಎಂಬ ಲೆಕ್ಕಾಚಾರದಲ್ಲಿ ತೊಡಗಿರುವವರು ಈಗಲೂ ಇದ್ದಾರೆ. ಗಂಡನ ಕುಡಿತಕ್ಕೆ ಕಾರಣ ಹೆಂಡತಿಯ ಜಾತಕ ದೋಷ ಕಾರಣ ಎಂದು ಅಭಿಪ್ರಾಯ ಪಡುವ ವಿದ್ಯಾವಂತರ ಸಂಖ್ಯೆ ಕೂಡಾ ದೊಡ್ಡದಿದೆ. ಮಗು ಅಮಾವಾಸ್ಯೆಯಲ್ಲಿ ಹುಟ್ಟಿದ ಕಾರಣ ತಂದೆಗೆ ಗಂಡಾಂತರ ಎಂದು ಬೊಬ್ಬಿಡುವ ಹಿರಿಯರು, ಅದಕ್ಕಾಗಿ ಅದೇನೇನೋ ಶಾಂತಿ ಹೋಮ, ಪರಿಹಾರ ಪೂಜೆಗಳನ್ನು ನಡೆಸಬೇಕೆಂದು ಹೇಳುವ ಪಂಚಾಂಗದವರು ಕೂಡಾ ಅಲ್ಲಲ್ಲಿ ಕಾಣಸಿಗುತ್ತಾರೆ.

ಹುಡುಗಿಯ ಜಾತಕದಲ್ಲಿ ಕುಜ ದೋಷ ಇದೆ., ಮದುವೆಯಾದರೆ ಮದುವೆಯಾದ ಗಂಡಿಗೆ ಗಂಡಾಂತರ ಎಂದು ಬಗೆದು ಮದುವೆಗೆ ಮೊದಲು ಬಾಳೆಗೆ ಮದುವೆ ಮಾಡಿ ಹಣೆಬರಹ ತಿದ್ದುವ ಕಾರ್ಯಗಳು ಕೂಡಾ ನಡೆಯುತ್ತವೆ. ಹುಡುಗಿಯ ಜಾತಕದಂತೆ ಹುಡುಗನ ಜಾತಕದಲ್ಲಿಯೂ ಕುಜ ದೋಷವಿದ್ದರೆ ಅಂತಹ ಜಾತಕಗಳು ವಿವಾಹಕ್ಕೆ ಯೋಗ್ಯ ಎಂಬ ನಂಬಿಕೆಯೂ ಇದೆ.
ಹೀಗೆ ಕೂಡಿ ಬಂದ ಜಾತಕಗಳೂ ಕಲ್ಯಾಣದ ಹೊಸ್ತಿಲಿಗೆ ಬಂದು ನಿಂತು, ಮಾಂಗಲ್ಯಧಾರಣೆಯಾದ ಬಳಿಕ ಈರ್ವರ ನಡುವೆ ಭಿನ್ನಾಭಿಪ್ರಾಯ ಮೂಡಿ ವಿಚ್ಛೇದನಕ್ಕೆ ಹೋದ ಉದಾಹರಣೆಗಳೂ ಕೂಡಾ ಅವೆಷ್ಟೋ ಇವೆ. ಹಾಗಿದ್ದರೆ ಈ ಜಾತಕಗಳ ಭವಿಷ್ಯವನ್ನು ಹೇಗೆ ನಂಬಬಹುದು? ಜಾತಿ, ಧರ್ಮಗಳ ಎಲ್ಲೆ ಮೀರಿ, ಜಾತಕ ನೋಡದೆ ಪರಸ್ಪರ ಪ್ರೀತಿಸಿ ಮದುವೆಯಾಗಿ ಸುಖ ಸಂಸಾರ ಸಾಗಿಸುವ ಜೋಡಿಗಳು ಅವೆಷ್ಟೋ ಇದ್ದಾಗ ಈ ಜಾತಕದ ಪೊಳ್ಳು ಭವಿಷ್ಯಕ್ಕೇಕೆ ಕಿವಿಗೊಡಬೇಕು?
ನಿಜ. ಹಿರಿಯರ ಮಾತಿಗೆ ವಿರುದ್ಧವಾಗಿ ಎಂದೂ ನಡೆದುಕೊಳ್ಳಬಾರದು. ಏಕೆಂದರೆ ಹಿರಿಯರು ಇರಿಸಿದ ಹೆಜ್ಜೆಯಲ್ಲಿ ಅನುಭವದ ಪಾಠವಿದೆ. ತನ್ನವರ ಭವಿಷ್ಯದ ಬಗ್ಗೆ ಅವರಿಗೆ ಕಾಳಜಿ ಇದೆ. ಎಳಸು ಮನಸ್ಸಿನ ಕಿರಿಯರು ದಾರಿ ತಪ್ಪಿದಾಗ ಹಿರಿಯರಿಗೆ ಆಗುವ ಸಂಕಟವನ್ನಂತೂ ಹೇಳ ತೀರದು.ಹಾಗಿದ್ದರೂ ಹಿರಿಯರು ಅಂದುಕೊಂಡ ವಿಚಾರಗಳಲ್ಲೇ ಲೋಪವಿದ್ದರೆ ಬಲಿಪಶುವಾಗುವವರು ಕಿರಿಯರು ಎಂಬುದರಲ್ಲಿ ಮಾತ್ರ ಎರಡು ಮಾತಿಲ್ಲ.
ಹದಿ ಹರೆಯದ ಮನೆ ಮಗಳು ಆಯ್ಕೆಯಲ್ಲಿ ಎಡವಿ ಶೋಕಿ ಮಾಡುವವನ ಹಿಂದೆ ಬಿದ್ದು ಅದಕ್ಕೆ ಪ್ರೀತಿ ಎಂದು ಹೆಸರಿಟ್ಟು ಮನೆಯವರನ್ನು ತೊರೆಯಲು ಮುಂದಾದಾಗ ಅಲ್ಲಿ ಹಿರಿಯರು ಅಡ್ಡ ಬರಬೇಕಾದುದು ಅನಿವಾರ್ಯ.ಪ್ರೀತಿಯ ಮಗಳ ಇಷ್ಟಕ್ಕೆ ವಿರೋಧ ವ್ಯಕ್ತಪಡಿಸಲು ಮನಸ್ಸಾಗದೆ ಈರ್ವರ ಜಾತಕ ತೋರಿಸಲು ಮುಂದಾದಾಗ ಭವಿಷ್ಯ ಹೇಳುವ ಪಂಚಾಂಗದವರು ಕವಡೆ ಹಾಕಿ ‘ಜಾತಕ ಚೆನ್ನಾಗಿ ಕೂಡಿ ಬರುತ್ತದೆ’ ಎಂದು ಅಭಯ ನೀಡಿದರೂ ಆ ಜೋಡಿ ಜೀವನದಲ್ಲಿ ಚೆನ್ನಾಗಿರಲು ಸಾಧ್ಯವೇ ಇಲ್ಲ! ಯಾಕೆಂದರೆ ಕೆಲಸ ಮಾಡದೆ ಬೀದಿ ಸುತ್ತುವ ಹುಡುಗ ಮದುವೆಯಾಗಿ ಸುಖ ಸಂಸಾರ ನಡೆಸುವುದು ಅಷ್ಟರಲ್ಲೇ ಇದೆ. ಹೇಗೆ ಮಂತ್ರಕ್ಕೆ ಮಾವಿನ ಕಾಯಿ ಉದುರಲು ಸಾಧ್ಯವಿಲ್ಲವೋ ಹಾಗೆಯೇ ಕೆಲಸ ಮಾಡದ ಸೋಮಾರಿಗಳು ಜೀವನದಲ್ಲಿ ಉದ್ಧಾರವಾಗುವುದು ಸಾಧ್ಯವೇ ಇಲ್ಲ.
ಭವಿಷ್ಯದಲ್ಲಿ ಏನಾದರೂ ಸಾಧಿಸಬೇಕೆಂದು ಛಲ ಬಿಡದೆ ಅವಿರತವಾಗಿ ಶ್ರಮಿಸುವ ಹುಡುಗನ ಯಶಸ್ಸನ್ನು ತಡೆಯುವ ಶಕ್ತಿ ಯಾವ ಜಾತಕಕ್ಕೂ ಇರಲಾರದು. ಅತ್ತೆ, ಮಾವ ತನಗೆ ಅಪ್ಪ ಅಮ್ಮನಿಗೆ ಸಮಾನ ಎಂದು ಸಮೀಕರಿಸಿ ಮುನ್ನಡೆಯುವ ಹುಡುಗಿಯ ಕಾಲ್ಗುಣ ಯಾವತ್ತೂ ಚೆನ್ನಾಗಿಯೇ ಇರುತ್ತದೆ. ಅದಕ್ಕೆ ಜಾತಕದ ಹಂಗಂತೂ ಇರಲು ಸಾಧ್ಯವೇ ಇಲ್ಲ. ಗಂಡನ ಇಷ್ಟವನ್ನರಿತು ಮುನ್ನಡಿ ಇಡುವ ಹೆಂಡತಿ,
ಹೆಂಡತಿಯ ಕಷ್ಟಕ್ಕೆ ಹೆಗಲಾಗುವ ಗಂಡ ಇದ್ದರೆ ಅವರಿಬ್ಬರ ಜಾತಕಗಳು ಅದೆಷ್ಟೇ ವಿಘ್ನಗಳನ್ನು ನುಡಿದರೂ ಅವರ ಸುಮಧುರ ದಾಂಪತ್ಯದಲ್ಲಿ ಬಿರುಗಾಳಿ ಬೀಸಲು ಸಾಧ್ಯವೇ ಇಲ್ಲ. ಏನಂತೀರಿ?

(ಗಣೇಶ್ ಮಾವಂಜಿ ಹಿರಿಯ ಪತ್ರಕರ್ತರು ಹಾಗೂ ಅಂಕಣಕಾರರು)





