*ಗಣೇಶ್ ಮಾವಂಜಿ.
ಊರಿಗೊಂದು ದೇವಸ್ಥಾನ..ದೇವಸ್ಥಾನದ ಗರ್ಭಗುಡಿಯಲ್ಲಿ ಪುಟ್ಟದೊಂದು ವಿಗ್ರಹ. ಅದೇ ವಿಗ್ರಹಕ್ಕೆ ಮೂರು ಹೊತ್ತು ಪೂಜೆ..ವಿಶೇಷ ದಿನಗಳಲ್ಲಿ ವಿಶೇಷ ಪೂಜೆ, ಅನ್ನ ಸಂತರ್ಪಣೆ. ವರ್ಷಕ್ಕೊಂದು ಬಾರಿ ನಡೆಯುವ ವಾರ್ಷಿಕ ಜಾತ್ರೆ. ಹೊಟ್ಟೆಪಾಡಿಗಾಗಿ ಊರುಬಿಟ್ಟವರೂ ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ಬಂದೇ ಬರಬೇಕು. ಇಲ್ಲದಿದ್ದರೆ ಊರ ದೇವರು ಮುನಿಸಿಕೊಳ್ಳುತ್ತಾರೆ ಎಂಬುದೊಂದು ಅಲಿಖಿತ ನಿಯಮ. ಹೀಗಾಗಿ ವರ್ಷಕ್ಕೊಂದು ಬಾರಿ ನಡೆಯುವ ವಾರ್ಷಿಕ ಜಾತ್ರೆಯ
ಸಂದರ್ಭದಲ್ಲಿ ದೂರದೂರಿನಲ್ಲಿ ನೆಲೆಸಿದವರೂ ಊರಿಗೆ ಬರುವುದು ವಾಡಿಕೆ.ಈ ಧಾರ್ಮಿಕ ನಂಬಿಕೆ ಅದೆಷ್ಟು ಸತ್ಯವೋ ಗೊತ್ತಿಲ್ಲ. ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ಹಾಜರಾಗದೆ ಅದೆಷ್ಟೋ ವಿಘ್ನಗಳು ತಲೆದೋರಿ ತಪ್ಪು ಕಾಣಿಕೆಯ ಪ್ರತಿಫಲವಾಗಿ ಅದೆಷ್ಟು ದೇಗುಲದ ಕಾಣಿಕೆ ಡಬ್ಬಿ ತುಂಬಿದೆಯೋ ಅರಿವಿಲ್ಲ. ಅನಿವಾರ್ಯ ಕಾರಣದಿಂದಲೋ ಅಥವಾ ಮನೆಯವರ ಜೊತೆಗಿನ ಮುನಿಸಿನಿಂದ ಊರ ಜಾತ್ರೆಯಿಂದ ಹೊರಗುಳಿದವರಿಗೆ ಕಷ್ಟನಷ್ಟದ ಅರಿವಾಗದಿದ್ದರೂ ಬಾಲ್ಯದಲ್ಲಿ ಊರ ಜಾತ್ರೆಯ ಸಂತೆಡ್ಕದಲ್ಲಿ ಸುತ್ತಿದ ಸಿಹಿ ನೆನಪುಗಳು ಮರುಕಳಿಸಿದಾಗ ‘ಛೇ ಜಾತ್ರೆಗೆ ಹೋಗಬೇಕಿತ್ತು’ ಎಂಬ ಭಾವ ಮನಸ್ಸಿನಲ್ಲಿ ಮೂಡದಿರದು.
ಊರ ಜಾತ್ರೆ ಎಂದರೆ ಅದು ಊರ ದೇಗುಲದ ಗರ್ಭಗುಡಿಯೊಳಗೆ ಭದ್ರವಾಗಿ ಕುಳಿತಿರುವ ದೇವರ ವಿಗ್ರಹಕ್ಕೆ ಮಾತ್ರ ಸಂದಾಯವಾಗುವ ಉತ್ಸವವಲ್ಲ. ಬದಲಾಗಿ ಉತ್ಸವದಲ್ಲಿ ಪಾಲ್ಗೊಳ್ಳುವ ಊರ ಜನರ ಮನಸ್ಸುಗಳಿಗೂ ಉತ್ಸವವೇ. ಏಕೆಂದರೆ ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂಬ ಮಾತಿದ್ದರೂ ಗಂಡನ ಮನೆ ಸೇರಿದ ಮನೆ ಮಗಳು ವರ್ಷಕ್ಕೊಮ್ಮೆಯಾದರೂ ತವರು ಮನೆ ಸೇರುವುದು ಊರ ಜಾತ್ರೆಯ ಸಂದರ್ಭದಲ್ಲಿ.! ದೂರದೂರಿನಲ್ಲಿ ಉದ್ಯೋಗ ಹೊಂದಿದ ಮಗ ರಜೆಗೆಂದು ಅರ್ಜಿ ಸಲ್ಲಿಸುವುದು ಕೂಡಾ ಜಾತ್ರೆಯ ಕೊಡಿ ಏರಿದಾಗ. ಬಾಲ್ಯದಲ್ಲಿ ಪುಂಡಾಟವಾಡಿದ ಚಡ್ಡಿ ದೋಸ್ತಿಗಳು ಮರಳಿ ಭೇಟಿಯಾಗಿ ಹರಟುವ ಸಂದರ್ಭವೂ ಕೂಡಾ ಊರ ಜಾತ್ರೆಯೇ ಆಗಿರುತ್ತದೆ. ಲಂಗ ದಾವಣಿ ಧರಿಸಿದ ಸೊಬಗು, ಹಸಿರು, ಕೆಂಪು ಗಾಜಿನ ಬಳೆಗಳನ್ನು ಕೈ ತುಂಬಾ ತೊಟ್ಟು ಅದು ಹೊಮ್ಮಿಸುವ ಕಿಣಿಕಿಣಿ ಸದ್ದಿಗೆ ಮೈಮರೆತು ಆನಂದಿಸುವ ನೆನಪನ್ನು ಎದೆಯಾಳಕ್ಕೆ ಇಳಿಸಿಕೊಂಡ ನೆನಪನ್ನು ಮತ್ತೆ ಮನಪಟಲಕ್ಕೆ ತಂದೊಯ್ಯುವ ತಾಕತ್ತು ಕೂಡಾ ಈ ಊರ ಜಾತ್ರೆಗೆ ಇರುತ್ತದೆ.

ದೇವರ ಮೂರ್ತಿಯನ್ನು ಹೊತ್ತ ವ್ಯಕ್ತಿ ಚೆಂಡೆ, ನಗಾರಿಗಳ ಸದ್ದಿಗೆ ಹಿಂದಕ್ಕೊಮ್ಮೆ, ಮುಂದಕ್ಕೊಮ್ಮೆ ಓಡುತ್ತಾ ದೇವರ ಬಲಿ ಸೇವೆಯಲ್ಲಿ ತಲ್ಲೀನರಾಗಿದ್ದಾಗ ಇದೆಲ್ಲಾ ಏನು ಎಂಬುದು ಅಂದಾಜಾಗದೆ ಅಪ್ಪನ ಹೆಗಲ ಮೇಲೆಯೋ ಅಥವಾ ಅಮ್ಮನ ಸೆರಗ ತುದಿಯಲ್ಲಿ ಬೆರಳು ಬೆಸೆದು ಪಿಳಿಪಿಳಿ ಕಣ್ಣು ಮಿಟುಕಿಸಿದ್ದು ಮತ್ತೆ ನೆನಪಿಗೆ ಬರುವುದು ಕೂಡಾ ಊರ ಜಾತ್ರೆಯ ದರ್ಶನ ಬಲಿಯ ಸಂದರ್ಭದಲ್ಲಿ. ದೇಗುಲಕ್ಕೆ ತೆರಳಿ ಅಪ್ಪ, ಅಮ್ಮನಿಂದ ಪಡೆದುಕೊಂಡ ಚಿಲ್ಲರೆ ದುಡ್ಡನ್ನು ದೇವಸ್ಥಾನದ ಹುಂಡಿಗೆ, ಅರ್ಚಕರ ಮುಂದಿನ ಹರಿವಾಣಕ್ಕೆ ಹಾಕಿ ಅದು ಠಣ್ ಎಂದು ಹೊರಸೂಸುವ ಸದ್ದಿಗೆ ಪುಳಕಿತಗೊಂಡು ‘ನಾನೂ ಕೂಡಾ ದುಡ್ಡು ಹಾಕಿಬಿಟ್ಟೆ’ ಎಂದು ಬಾಲ್ಯದಲ್ಲಿ ಸಂಭ್ರಮಿಸಿದ್ದು ನೆನಪಿಗೆ ಬರುವುದು ಕೂಡಾ ಊರ ಜಾತ್ರೆಯ ಸಂಭ್ರಮವನ್ನು ಮತ್ತೆ ಕಣ್ತುಂಬಿಕೊಂಡಾಗ.
ತೀರ್ಥ ತೆಗೆದುಕೊಂಡು ಅಪ್ಪ ಹೇಳಿದ ಹಾಗೆ ಮಂಡಿಯೂರಿ ಗರ್ಭಗುಡಿಯ ಮುಂಭಾಗ ಅಡ್ಡ ಬಿದ್ದು ಶರಣು ಎಂದಾಗ ಈಗಿನ ಹಾಗೆ ಹಾಕಿದ ಪ್ಯಾಂಟ್ ಅಡ್ಡ ಬರುತ್ತಿರಲಿಲ್ಲ. ಈಗಿನಂತೆ ಜರಿ ಸೀರೆಗೆ ಮಣ್ಣಾಗುತ್ತದೆ ಎಂಬ ಅಳುಕೂ ಆಗಿರಲಿಲ್ಲ. ಈಗ ದೇವರಿಗೆ ನಮಿಸುವಾಗ ಬೇಡಬೇಡವೆಂದರೂ ಹೊರಗಿರಿಸಿದ ಕಾಸ್ಟ್ಲಿ ಚಪ್ಪಲು ನೆನಪಿಗೆ ಬರುತ್ತದೆ. ಯಾರಾದರೂ ಹಾಕಿಕೊಂಡು ಹೋದರೇನೋ ಎಂಬ ಭಯ ಕಾಡುತ್ತದೆ. ಆದರೆ ಬಾಲ್ಯದ ಆ ದಿನಗಳಲ್ಲಿ ಆ ರೀತಿ ಕಳೆದುಕೊಳ್ಳುವ ಬಗ್ಗೆ ಗೊಡವೆಯೇ ಇರುತ್ತಿರಲಿಲ್ಲ.
ಊರಿಗೆ ಬಂದವರು ನೀರಿಗೆ ಬರದಿರುತ್ತಾರೆಯೇ ಎಂಬ ಗಾದೆಯಂತೆ ಜಾತ್ರೆಗೆ ಬಂದವರು ಸಂತೆಡ್ಕಕ್ಕೆ ಒಂದು ರೌಂಡಾದರೂ ಬರದಿದ್ದರೆ ಜಾತ್ರೆ ಪರಿಪೂರ್ಣ ಎಂದೆನಿಸುವುದೇ ಇಲ್ಲ. ಅದಕ್ಕೆ ಆಗಿನ ಕಾಲ, ಈಗಿನ ಕಾಲ ಎಂಬ ಭೇದ ಇಲ್ಲವೇ ಇಲ್ಲ. ಆದರೆ ಆಗ ಸಂತೆಡ್ಕಕ್ಕೆ ಸುತ್ತು ಬರುವಾಗ ಇದ್ದ ಭಾವಕ್ಕೂ ಈಗ ಸಂತೆಡ್ಕದಲ್ಲಿ ಅಡ್ಡಾಡುವಾಗ ಆಗುವ ಖುಷಿಗೂ ಅದೆಷ್ಟೋ ಅಂತರವಿದೆ. ಕೈಯಲ್ಲೇ ಜೀಕಿ ಸುತ್ತುಬರಿಸುವ ಅಂದಿನ ತೊಟ್ಟಿಲಿನ ಶಕ್ತಿಗೆ ಈಗಿನ ವಿದ್ಯುತ್ ಚಾಲಿತ ತೊಟ್ಟಿಲು ಸರಿಸಾಟಿಯಾದಂತೆ ತೋರುವುದಿಲ್ಲ. ಅಂದು ಸಂತೆಡ್ಕದಲ್ಲಿದ್ದ ಸಕ್ಕರೆ ಮಿಠಾಯಿ, ಸೋಜಿ, ಶರಬತ್ತ್, ಐಸ್ ಕ್ಯಾಂಡಿ, ಹುರಿಯಕ್ಕಿ ಕಟ್ಟು ಕೊಡುತ್ತಿದ್ದ ರುಚಿ ಈಗಿನ ಗೋಬಿ ಮಂಚೂರಿ, ಬಿರಿಯಾನಿ, ಐಸ್ ಕ್ರೀಂ ಮುಂತಾದ ಬಗೆಬಗೆಯ ಐಟಂಗಳು ಕೊಡುವುದೇ ಇಲ್ಲ. ಕಾಲ ಬದಲಾದದ್ದೋ ಅಥವಾ ವಯಸ್ಸಿನ ಪರಿಣಾಮವೋ ಅಂದಿನ ಖುಷಿಗೂ ಇಂದಿನ ಖುಷಿಗೂ ಅದೇಕೋ ಮ್ಯಾಚೇ ಆಗುವುದಿಲ್ಲ!
ಅಜ್ಜಿ ಮನೆಯಲ್ಲಿ ಇದ್ದುಕೊಂಡು ಓದಿದವರೋ, ನೆಂಟರ ಮನೆಗೆ ಬಂದು ದೋಸ್ತಿಗಳಾದವರು, ಅಪ್ಪ, ಅಮ್ಮನ ಉದ್ಯೋಗದ ವರ್ಗಾವಣೆಯ ನೆಪದಲ್ಲಿ ನಾವಿದ್ದ ಊರಿಗೆ ಬಂದು ಮತ್ತೆಲ್ಲೋ ದೂರ ಹೋಗಿ ಕಳೆದುಹೋದವರು, ನೆರೆಮನೆಗೆ ಸಂಬಂಧಿಗಳಾಗಿ ಬಂದು ಬಾಲ್ ಆಡಿ ಜೊತೆಯಾದವರು, ಯಾವುದೋ ಕಾರ್ಯಕ್ರಮಕ್ಕೆ ಬಂದಾಗ ಪರಿಚಯವಾಗಿ ನಂತರ ಊರ ಜಾತ್ರೆಗೆ ಬಂದು ಬಿಡಿಸಿಕೊಳ್ಳಲಾಗದ ಬಂಧ ಬೆಸೆದವರು…, ಹೀಗೆ ಅದೆಷ್ಟೋ ಜನರು ಅದೆಷ್ಟೋ ವರ್ಷಗಳ ಬಳಿಕ ಊರ ಜಾತ್ರೆಯ ಸಂದರ್ಭದಲ್ಲಿ ಕಾಣಸಿಗುವುದಿದೆ.
ಅಂತಹ ಸಂದರ್ಭಗಳಲ್ಲಿ ಅದ್ಭುತ ಜಾದೂಗಾರನ ಜಾದೂ ಕೌಶಲ್ಯವನ್ನು ಕಂಡು ಬೆರಗಾಗುವುದಕ್ಕಿಂತಲೂ ಮಿಗಿಲಾಗಿ ಆಶ್ಚರ್ಯ ವ್ಯಕ್ತಗೊಳ್ಳುವುದು ಕಾಣೆಯಾಗಿ ಹೋದ ಗೆಳೆಯ, ಗೆಳತಿಯರು ಸಂತೆಡ್ಕದಲ್ಲಿ ಕಾಣಲು ಸಿಕ್ಕಿದಾಗ. ಪೀಚಲು ದೇಹದ ವ್ಯಕ್ತಿ ದಢೂತಿಯಾಗಿ ನಡೆದಾಡಲು ತ್ರಾಸ ಪಡುವವರು ಒಂದು ಕಡೆಯಾದರೆ ಕಣ್ಣಿಗೆ ಬೀಳುವಷ್ಟು ತಲೆಯ ಕೂದಲು ಇದ್ದವರು ಬಾಂಡ್ಲಿಯಾಗಿ ಕಾಣಿಸುವವರೂ ಇರುತ್ತಾರೆ. ಕಾಲೇಜಿನಲ್ಲಿ ಚೆಂದುಳ್ಳಿ ಚೆಲುವೆಯಾಗಿ ಎಲ್ಲರಿಂದಲೂ ಕಣ್ಣು ಹೊಡೆಸಿಕೊಂಡವಳು ಈರ್ವರು ಮಕ್ಕಳನ್ನು ತನ್ನೆರಡು ಕೈಗಳಲ್ಲಿ ಬೆಸೆದುಕೊಂಡು ಸಪೂರ ಕಡ್ಡಿಯಾಗಿ ಪರಿವರ್ತಿತಗೊಂಡವಳೂ ಧುತ್ತನೆ ಕಾಣಸಿಗುತ್ತಾಳೆ. ಸದಾ ಸಿಂಬಳ ಸುರಿಸಿಕೊಂಡು ಎಲ್ಲರಿಂದಲೂ ಅವಹೇಳನಕ್ಕೊಳಗಾಗುತ್ತಿದ್ದವ ಸಾಫ್ಟ್ವೇರ್ ಉದ್ಯೋಗಿಯಾಗಿ ಕಣ್ಣು ಕುಕ್ಕುವಷ್ಟು ಸ್ಟೈಲ್ ಆಗಿ ಕಾಣಿಸಿಕೊಳ್ಳುತ್ತಾನೆ. ಹೀಗಿ ಜಾತ್ರೆಯ ಸಂತೆಡ್ಕದಲ್ಲಿ ಸಾವಿರ ಸಾವಿರ ಸೋಜಿಗದ ಸಂಗತಿಗಳು!
ಕಾಲ ಹಾಗೇಯೇ. ಇಂದಿದ್ದಂತೆ ನಾಳೆ ಇರುವುದಿಲ್ಲ. ನಾಳೆ ಇದ್ದಂತೆ ಮುಂದಿರುವುದಿಲ್ಲ. ದೇಗುಲದಲ್ಲಿ ಜರುಗುವ ಧಾರ್ಮಿಕ ವಿಧಿವಿಧಾನಗಳಿಗೂ ಆಧುನಿಕತೆಯ ಸ್ಪರ್ಷ ಸೋಕುತ್ತವೆ. ಸಂತೆಡ್ಕದಲ್ಲಿ ದೊರಕುವ ಆಟದ ಸಾಮಾನುಗಳು, ಸೌಂದರ್ಯ ವರ್ಧಕ ವಸ್ತುಗಳು, ದಿನ ಬಳಕೆಯ ವಸ್ತುಗಳು ಕೂಡಾ ದಿನ ಕಳೆದಂತೆ ಬದಲಾಗುತ್ತಿರುತ್ತದೆ.
ಪ್ರತೀ ವರ್ಷವೂ ಊರ ಜಾತ್ರೆಯ ಸಂದರ್ಭದಲ್ಲಿ ಏನಾದರೊಂದು ಹೊಸತು ಕಂಡೇ ಕಾಣುತ್ತದೆ. ವರ್ಷಕ್ಕೊಂದು ಬಾರಿ ಮಾತ್ರ ಜಾತ್ರೆಯ ನೆಪದಲ್ಲಿ ಕಾಣಸಿಗುವವರಲ್ಲಿ ಕೂಡಾ ಕಂಡೂ ಕಾಣದಂತೆ ದೇಹದಲ್ಲಿ, ದಿರಿಸಿನಲ್ಲಿ ಏನಾದರೊಂದು ಬದಲಾವಣೆ ಆಗಿಯೇ ಆಗಿರುತ್ತದೆ. ಆದರೆ ಬದಲಾಗದೆ ಇರುವುದು, ಇರಬೇಕಾದುದು ಪರಸ್ಪರ ಪ್ರೀತಿ ಮಾತ್ರ. ನೋಡಿದ ಕೂಡಲೇ ಪರಿಚಯದ ಮಂದಹಾಸ ಬೀರಿ ಮಾತಾಡಿಸುವ ಸಿರಿತನ ತೋರುವುದಕ್ಕೆ ಮಾತ್ರ ಎಂದೂ ಬಡತನ ತೋರಬಾರದು ಅಷ್ಟೇ.

(ಗಣೇಶ್ ಮಾವಂಜಿ ಹಿರಿಯ ಪತ್ರಕರ್ತರು ಹಾಗೂ ಅಂಕಣಕಾರರು)












