*ಗಣೇಶ್ ಮಾವಂಜಿ.
‘ಇವತ್ತೇ ಲಾಸ್ಟ್…ಮತ್ತೆ ಯಾವತ್ತೂ ಇಲ್ಲ. ನಾಳೆಯಿಂದ ಹೊಸ ಸೂರ್ಯೋದಯ., ಹೊಸ ಬದುಕು…’ ವರ್ಷದ ಕೊನೆಗೆ ಬಾರ್ ನಲ್ಲಿ ಕುಳಿತುಕೊಂಡು ಕುಪ್ಪಿ ಗ್ಲಾಸ್ಗೆ ಮದ್ಯ ಸುರಿದು ಹೀರುತ್ತಾ ಕಡ್ಲೆ ಬಾಯಿಗೆ ಹಾಕಿಕೊಂಡು ಆತನೊಬ್ಬ ನಿರ್ಧಾರ ಕೈಗೊಂಡಿದ್ದ.
‘ಇನ್ನು ನಾನಾಯಿತು. ನನ್ನ ಕೆಲಸವಾಯಿತು. ಇನ್ನೊಬ್ಬರ ವಿಚಾರ ನನಗೇಕೆ? ಕೇವಲ ನನ್ನೊಂದು ಮಾತು ಇಷ್ಟೆಲ್ಲಾ ಆವಾಂತರಗಳನ್ನು ಸೃಷ್ಟಿಸಿದೆ ಎಂದರೆ ನಂಬಲು ಸಾಧ್ಯವೇ ಆಗುತ್ತಿಲ್ಲ. ಹೊಸ ವರ್ಷದಲ್ಲಿ ಈ ರೀತಿಯ ಯಾವುದೇ ಘಟನೆಗಳಿಗೆ ಅವಕಾಶ ನೀಡಬಾರದು..’ ಸದಾ ಒಬ್ಬರ ವಿಷಯವನ್ನು ಮತ್ತೊಬ್ಬರ ಬಳಿ ಕಿವಿಯೂದಿದ ಪರಿಣಾಮ
ಇಬ್ಬರ ನಡುವೆ ಸಂಘರ್ಷ ಏರ್ಪಟ್ಟು ಕೊನೆಗೆ ಅದಕ್ಕೆಲ್ಲಾ ಮೂಲ ಕಾರಣ ಇವಳೇ ಎಂದು ಬೊಟ್ಟು ಮಾಡುವಂತಾದಾಗ ಹೊಸ ವರ್ಷದ ದಿನ ಚಾಡಿ ಹೇಳಿದಾಕೆಯ ಮನಸ್ಸಲ್ಲಿ ಮೂಡುವ ಹೊಸ ನಿರ್ಣಯವಿದು.
‘ನಾಳೆಯಿಂದ ಬೆಳಿಗ್ಗೆ ಐದು ಗಂಟೆಗೇ ಎದ್ದೇಳಬೇಕು. ಆ ದಿನದ ಪಾಠಗಳನ್ನು ಅಂದೇ ಓದಿ ಮುಗಿಸಿಕೊಳ್ಳಬೇಕು. ನಾಳೆ ಓದೋಣವೆಂದು ಇರಿಸಿದರೆ ಕೊನೆಯ ಕ್ಷಣದಲ್ಲಿ ಕಷ್ಟ ಪಡುವುದು ನಾನೇ. ಹಾಗಾಗಿ ನಾಳೆಯಿಂದ ಮುಂಜಾನೆ ಐದು ಗಂಟೆಗೆ ಏಳುವುದು ಪಕ್ಕಾ..’ ಬೆನ್ನಿಗೆ ಬಿಸಿಲು ಬಿದ್ದರೂ ಏಳಲಾಗದೇ ಹೊರಳಾಡಿ ನಂತರ ಎದ್ದು ನಿದ್ದೆಗಣ್ಣಿನಲ್ಲೇ ಕಾಲೇಜಿಗೆ ತೆರಳುವ ಸೋಮಾರಿ ವಿದ್ಯಾರ್ಥಿಯ ಸ್ವಗತಗಳಿವು.
‘ಮೂಗಿನಲ್ಲಿ ಹೊಗೆ ಬಿಡುವುದು ಹೇಗೆಂದು ಆರಂಭಿಸಿದ ಬೀಡಿ ಎಳೆಯುವ ಹವ್ಯಾಸದಿಂದ ಇದೀಗ ಶ್ವಾಸಕೋಶದ ತುಂಬಾ ಹೊಗೆ ವ್ಯಾಪಿಸುವಂತಾದ ಕಾರಣ ಇನ್ನು ಹೊಸ ವರ್ಷದ ಮೊದಲ ದಿನದಿಂದಲೇ ಬೀಡಿ ಎಳೆಯುವ ಹವ್ಯಾಸ ಬಂದ್..’ ವರ್ಷದ ಕೊನೆಯ ದಿನ ಧಂ ಎಳೆಯುತ್ತಾ ಮತ್ತೊಬ್ಬ ನಿರ್ಧಾರ ಕೈಗೊಂಡಿದ್ದ.
ಆಕೆಯ ನೋಟಕ್ಕೆ, ಆಕೆಯ ಮುಗುಳು ನಗೆಗೆ ಸದಾ ಹಾತೊರೆದು ಅದು ಹೇಗೋ ಆಕೆಯ ಫೋನ್ ನಂಬರ್ ಪಡೆದು ಗುಡ್ಮಾರ್ನಿಂಗ್, ಗುಡ್ ನೈಟ್ ಹೇಳಿದರೂ ಯಾವುದಕ್ಕೂ ಸ್ಪಂದಿಸದಿದ್ದಾಗ ಇನ್ನು ಆಕೆಯ ತಂಟೆಗೆ ಹೋಗಲಾರೆ. ಹೊಸ ವರ್ಷದ ಮೊದಲ ದಿನದಿಂದಲೇ ಆ ಹುಡುಗ ಹೊಸ ನಿರ್ಣಯ ಕೈಗೊಂಡಿದ್ದ.
‘ತೋಟಕ್ಕೆ ರೋಗ ಬಾಧಿಸಿದಾಗ ಮೊದಲೇ ಎಚ್ಚೆತ್ತುಕೊಂಡು ಮದ್ದು ಸಿಂಪಡಿಸಬೇಕು. ಈ ವರ್ಷ ಫಸಲು ಕೈ ಕೊಡಲು ಸರಿಯಾಗಿ ಮದ್ದು ಬಿಡದಿರುವುದೇ ಕಾರಣ. ಯಾವುದೇ ಕಾರಣಕ್ಕೂ ಈ ಬಾರಿ ಉದಾಸೀನ ಮಾಡಲಾರೆ..’ ರೈತನೊಬ್ಬ ತನ್ನ ಅವಿವೇಕವನ್ನು ತಾನೇ ಜರೆದುಕೊಂಡು ಹೊಸ ವರ್ಷಕ್ಕೆ ಹೊಸ ನಿರ್ಣಯ ಕೈಗೊಂಡಿದ್ದ.
‘ಕೆಲಸ ಬಿಟ್ಟು ಬೇಗನೆ ಮನೆ ಸೇರಿಕೊಳ್ಳಬೇಕು. ಕೆಟ್ಟವರ ಸಹವಾಸ ಮಾಡಿ ಸದಾ ಕಟ್ಟೆಯಲ್ಲಿ ಕುಳಿತುಕೊಂಡು ಹರಟೆ ಹೊಡೆದು ಎಲ್ಲರೂ ಮಲಗಿದ ನಂತರ ಮನೆ ಸೇರುವ ವಿದ್ಯಮಾನಕ್ಕೆ ಹೊಸ ವರ್ಷದಿಂದ ಬ್ರೇಕ್ ಹಾಕುತ್ತೇನೆ..’ ಇದು ಸದಾ ತಡ ರಾತ್ರಿ ಮನೆ ಸೇರುವ ಯುವಕನೊಬ್ಬ ಹೊಸ ವರ್ಷಕ್ಕೆ ತೆಗೆದುಕೊಂಡ ನಿರ್ಣಯ.
‘ಅಮ್ಮ ಹೇಳಿದ ಕೆಲಸವನ್ನು ಮಾಡಲೇಬೇಕು. ಒಳ್ಳೆಯದಕ್ಕೆ ಹೇಳಿದ್ದನ್ನು ಕಿವಿಗೆ ಹಾಕಿಕೊಳ್ಳದೆ ಅಪ್ಪ-ಅಮ್ಮನ ಮೇಲೆ ರೇಗಾಡಿ ಊಟ, ತಿಂಡಿ ಬಿಟ್ಟು ನನ್ನ ಹೊಟ್ಟೆಗೆ ನಾನೇ ಕಲ್ಲು ಹಾಕಿಕೊಳ್ಳುವ ಕೆಲಸ ಮಾಡಲೇ ಬಾರದು. ಸಿಟ್ಟಂತೂ ಮಾಡಲೇ ಬಾರದು..’ ಸದಾ ಸಿಡುಕುವ ಹರೆಯದ ಹೆಣ್ಣು ಮಗಳೊಬ್ಬಳು ಹೊಸ ವರ್ಷಕ್ಕೆ ತಳೆದ ನಿರ್ಧಾರಗಳ ಪಟ್ಟಿಯಿದು.
ಪ್ರತೀ ಬಾರಿ ಹೊಸ ವರ್ಷದ ಹೊಸ್ತಿಲಲ್ಲಿ ಪ್ರತಿಯೊಬ್ಬರೂ ಏನಾದರೊಂದು ಹೊಸ ನಿರ್ಧಾರ ಕೈಗೊಳ್ಳುತ್ತಾರೆ. ಕುಡುಕನಾದರೆ ವರ್ಷದ ಕೊನೆಯ ದಿನ ನಾಳೆಯಿಂದ ಕುಡಿಯಲಾರೆ ಎಂದು ನಾಲ್ಕು ಪೆಗ್ ಜಾಸ್ತಿಯೇ ಏರಿಸಿಕೊಳ್ಳುತ್ತಾನೆ. ಕುಡಿದದ್ದು ಜಾಸ್ತಿಯಾಗಿ ವಾಂತಿ ಮಾಡಿಕೊಂಡು ಹೊಸ ವರ್ಷದ ಮೊದಲ ಸೂರ್ಯೋದಯದ ದಿನ ಇಹದ ಪ್ರಜ್ಞೆಯೇ ಇಲ್ಲದೆ ಬಿದ್ದುಕೊಂಡಿರುತ್ತಾನೆ. ಹೆಂಡ ಹೀರಿಯೇ ಹೊಸ ವರ್ಷವನ್ನು ಸ್ವಾಗತಿಸಿ ನಂತರ ಆ ಮಂಡೆಬಿಸಿಯಲ್ಲಿಯೇ ಮತ್ತೊಂದು ಪೆಗ್ ಏರಿಸಿ ತಾನು ತಳೆದ ನಿರ್ಧಾರವನ್ನು ತಾನೇ ಬ್ರೇಕ್ ಮಾಡಿಕೊಳ್ಳುತ್ತಾನೆ.
ನಾನಿನ್ನು ಯಾರ ತಂಟೆಗೂ ಹೋಗಲಾರೆ. ನನಗೇಕೆ ಇನ್ನೊಬ್ಬರ ಉಸಾಬರಿ? ಎಂದಂದುಕೊಂಡು ಹೊಸ ವರ್ಷಕ್ಕೆ ಹೊಸ ನಿರ್ಧಾರ ಕೈಗೊಂಡಿದ್ದ ಮಹಿಳೆ ಹೊಸ ವರ್ಷದ ಮೊದಲ ಒಂದೆರಡು ದಿನ ತನ್ನ ನಿರ್ಧಾರಕ್ಕೆ ಬದ್ಧಳಾಗಿ ಯಶಸ್ಸೂ ಪಡೆದುಕೊಳ್ಳುತ್ತಾಳೆ. ಆದರೆ ದಿನ ಕಳೆದಂತೆ ತಳೆದ ನಿರ್ಧಾರ ಸಡಿಲಗೊಳ್ಳುವಂತಾಗುತ್ತದೆ. ನಾಲ್ಕು ಜನ ಸೇರಿದಲ್ಲಿ ನೆರೆಮನೆಯಾಕೆಯ ಯಾವುದೋ ವಿಷಯವನ್ನು ಇನ್ನೊಬ್ಬಾಕೆಯ ಕಿವಿಗೆ ದಾಟಿಸುತ್ತಾಳೆ. ಎಲ್ಲವನ್ನೂ ಹೇಳಿ ಮುಗಿಸಿ ವಿಷಯ ನಮ್ಮನಮ್ಮಲ್ಲೇ ಇರಲಿ. ಬೇರೆಯವರ ವಿಷಯ ನಮಗೇಕೆ? ಎಂದು ಕೊನೆಗೊಂದು ಮಾತೂ ಸೇರಿಸುತ್ತಾಳೆ. ಅದೇ ಮಾತು ಕೊನೆಗೆ ಬೆಂಕಿ ಹತ್ತಿ ಉರಿಯುವಂತಾಗುತ್ತದೆ ಎಂಬುದು ಮಾತ್ರ ಆಕೆಗೆ ಗೊತ್ತಾಗುವುದೇ ಇಲ್ಲ.
ಹೊಸ ವರ್ಷವನ್ನು ಸ್ವಾಗತಿಸುವ ಭರದಲ್ಲಿ ವಿದ್ಯಾರ್ಥಿಯೊಬ್ಬ ‘ಹ್ಯಾಪಿ ನ್ಯೂ ಈಯರ್’ ಎಂದು ತಬ್ಬಿಕೊಂಡು ತಡರಾತ್ರಿಯವರೆಗೂ ಅರಚಾಡುತ್ತಾನೆ. ಬೆಳಗ್ಗಿನ ಜಾವ ಮಲಗಿ ಏಳುವಾಗ ಮಾತ್ರ ಹೊತ್ತು ನೆತ್ತಿಗೇರಿರುತ್ತದೆ. ಹೊಸ ವರ್ಷದಿಂದಲೇ ಬೆಳಿಗ್ಗೆ ಐದು ಗಂಟೆಗೆ ಏಳುವ ಆತನ ನಿರ್ಧಾರ ಮೊದಲ ದಿನವೇ ಮುರಿದು ಬೀಳುತ್ತದೆ.
ಹೇಗಾದರೂ ಮಾಡಿ ಬೀಡಿ, ಸಿಗರೇಟ್ ಎಳೆಯುವ ಅಭ್ಯಾಸಕ್ಕೆ ತೆರೆ ಎಳೆಯಬೇಕೆಂದು ಹೊಸ ವರ್ಷಕ್ಕೆ ಕೈಗೊಂಡ ನಿರ್ಧಾರಕ್ಕೆ ಅಂಟಿಕೊಳ್ಳಲು ಯತ್ನಿಸಿದರೂ ಧಂ ಎಳೆಯದೆ ಮೂಡ್ ಕೈಕೊಡುತ್ತದೆ. ‘ಒಮ್ಮೆಗೇ ಬಿಡಲು ಕಷ್ಟ. ಒಂದೆರಡು ಕಡಿಮೆ ಎಳೆದು ನಿಧಾನಕ್ಕೆ ಬಿಟ್ಟರಾಯಿತು’ ಎಂಬ ಹಿತೈಷಿಯೊಬ್ಬನ ನುಡಿಯೇ ವೇದವಾಕ್ಯವಾಗಿ ಕಂಡಾಗ ಮತ್ತೆ ಬೀಡಿ ತುಟಿಗೇರುತ್ತದೆ. ಸೇದುವುದನ್ನು ಕಡಿಮೆ ಮಾಡಿಬೇಕೆಂದುಕೊಂಡರೂ ಮನಸ್ಸು ಕೇಳದೆ ಕೊನೆಗೆ ಹಳೆಯ ಚಾಳಿಯೇ ಮುಂದುವರಿಯುವಂತಾಗುತ್ತದೆ.
ಪ್ರೀತಿಗೆ ಸ್ಪಂದಿಸದ ಗೆಳತಿಯ ನೆನಪಿನಿಂದ ದೂರವಾಗಬೇಕೆಂದುಕೊಂಡರೂ ಮನಸ್ಸು ಮತ್ತೆ ಮತ್ತೆ ಆಕೆಯ ಒಲವನ್ನು ಬಯಸುವಂತಾಗುತ್ತದೆ. ಅದಕ್ಕೆ ಈತನ ಹೊಸ ವರ್ಷದ ನಿರ್ಣಯದ ಬಗ್ಗೆ ಗೊತ್ತೇ ಇರುವುದಿಲ್ಲ. ಬೇಡಬೇಡವೆಂದರೂ ಆಕೆಯ ಸೆಳೆತಕ್ಕೆ ಒಳಗಾಗಿ ಮತ್ತೆ ಆಕೆಯ ಸಾಮೀಪ್ಯ ಬಯಸುವಂತಾಗಿ ಅತಿರೇಕದ ವರ್ತನೆಗಳು ಮರುಕಳಿಸುವಂತಾಗುತ್ತದೆ.
ಸಂಬಂಧಿಕರ ಮದುವೆಗೆ, ಸಡನ್ನಾಗಿ ಗತಿಸಿದ ಬಂಧುವೊಬ್ಬರ ಬೊಜ್ಜಕ್ಕೆ, ಗೆಳೆಯನ ಮಗಳ ಬರ್ತ್ಡೇ ಪಾರ್ಟಿಗೆ, ಊರ ಜಾತ್ರೆಗೆ, ಮಕ್ಕಳ ಒತ್ತಾಯಕ್ಕೆ ಮಣಿದು ಹೋಗುವ ಟ್ರಿಪ್ ನ ಕಾರಣ.., ಹೀಗೆ ಕೆಲವೊಂದು ಅನಿವಾರ್ಯ ಕಾರಣಗಳಿಂದಾಗಿ ಕಿಸೆ ತುಂಬಿಸಲು ನೆರವಾಗುವ ಅಡಿಕೆ ಕೃಷಿಯನ್ನು ಅವಗಣನೆ ಮಾಡಲೇಬೇಕಾಗುತ್ತದೆ. ಕಾಲಕಾಲಕ್ಕೆ ಮದ್ದು ಸಿಂಪಡಿಸಬೇಕೆನ್ನುವ ಹೊಸ ವರ್ಷದ ನಿರ್ಧಾರಕ್ಕೆ ಅಂಟಿಕೊಳ್ಳಲು ಸಾಧ್ಯವಾಗದ ಕಾರಣ ಹಸಿ ಅಡಿಕೆ ರೋಗದಿಂದ ಬೀಳುವಂತಾಗುತ್ತದೆ. ಆರ್ಥಿಕ ಸಮಸ್ಯೆ ಮತ್ತೆ ಕಾಡುವಂತಾಗುತ್ತದೆ.
ಕಟ್ಟೆಪೂಜೆ ಮಾಡಿ ಮನೆ ಸೇರುವ ಬದಲಾಗಿ ಹೊಸ ವರ್ಷದಿಂದಲೇ ಬೇಗನೆ ಮನೆ ಸೇರಬೇಕೆಂದುಕೊಂಡ ವ್ಯಕ್ತಿ ಒಂದೆರಡು ದಿನ ಅದರಲ್ಲಿ ಸಫಲತೆಯನ್ನೂ ಸಾಧಿಸುತ್ತಾನೆ. ಬೇಗನೆ ಮನೆ ಸೇರಿ ಮನೆಯವರ ಮನವನ್ನೂ ಗೆಲ್ಲುತ್ತಾನೆ. ಆದರೆ ಅದ್ಯಾವುದೋ ಸೀಕ್ರೆಟ್ ವಿಚಾರ ಹಂಚಿಕೊಳ್ಳಲೆಂದು ಕಟ್ಟೆಯಲ್ಲಿ ಕುಳಿತುಕೊಳ್ಳುವ ಗೆಳೆಯರು ಕರೆದಾಗ ನಿರಾಕರಿಸಲು ಮನಸ್ಸಾಗದೆ ಹೋಗಲೇಬೇಕಾಗುತ್ತದೆ. ಅಲ್ಲಿಗೆ ತಾನು ಎಳೆದ ಲಕ್ಷ್ಮಣ ರೇಖೆಯನ್ನು ತಾನೇ ತುಳಿದು ಹಾಳುಗೆಡಹುವಂತಾಗುತ್ತದೆ.
ಅಪ್ಪ, ಅಮ್ಮ ಹೇಳಿದ ಕೆಲಸವನ್ನು ಮಾಡಿಯೇ ತೀರಬೇಕೆಂದು ಹೊಸವರ್ಷಕ್ಕೆ ತಳೆದ ನಿರ್ಧಾರವನ್ನು ಹರೆಯದ ಹೆಣ್ಣು ಮಗಳು ಚಾಚೂ ತಪ್ಪದೆ ಒಂದೆರಡು ದಿನ ಪೂರೈಸುತ್ತಾಳೆ ಕೂಡಾ. ಆದರೆ ಹೈಸ್ಕೂಲ್ನಲ್ಲಿ ಒಟ್ಟಿಗೆ ಓದಿದ ಗೆಳತಿ ತುಂಬಾ ದಿನಗಳ ಬಳಿಕ ಫೋನ್ ಮಾಡಿ ಮಾತನಾಡುತ್ತಿದ್ದಾಗ ಅಮ್ಮ ಪಾತ್ರೆ ತೊಳೆಯಲು ಕರೆದರೆ ಆಗಿಂದಾಗಲೇ ಫೋನ್ ಬಿಸುಟು ಹೋಗಲಾಗುತ್ತದೆಯೇ? ಆಗ ದೂರಾಗಿದ್ದ ಸಿಡುಕುತನ ಮತ್ತೆ ಬಳಿ ಸೇರುತ್ತದೆ. ಅಮ್ಮನ ಒತ್ತಾಯ ಅತಿಯಾದಾಗ ಆಕೆಯ ಮೇಲೆಯೇ ರೇಗಾಡುವಂತಾಗುತ್ತದೆ. ಮನಸ್ಸು ಕದಡಿ ರಾಡಿಯಾಗುತ್ತದೆ.
ಹೀಗೆ ಹೊಸ ವರ್ಷದಲ್ಲಿ ತಳೆದುಕೊಂಡ ನಿರ್ಧಾರಗಳು ಒಂದೆರಡು ದಿನ ಸುಲಲಿತವಾಗಿ ಸಾಗಿದರೂ ಯಾವುದೋ ಒಂದು ಕ್ಷಣ ಮೈಮರೆಯುವಂತಾಗಿ ಎಡವಿಬಿಡುತ್ತೇವೆ. ಹಾಗೆಂದು ಎಲ್ಲರೂ ಹೀಗೆಯೇ ಮಾಡುತ್ತಾರೆ ಎಂದಲ್ಲ. ಗಟ್ಟಿ ನಿರ್ಧಾರಗಳು ಗಟ್ಟಿಯಾಗಿಯೇ ಉಳಿಯುವಂತಾಗಬೇಕಾದರೆ ಮನಸ್ಸು ಗಟ್ಟಿಯಾಗಿರಬೇಕು.
ಅಂದುಕೊಂಡದ್ದನ್ನು ಸಾಧಿಸಿಯೇ ತೀರುತ್ತೇನೆ ಎಂಬ ಛಲ ಇರಬೇಕು. ನಿರ್ಧಾರಕ್ಕೆ ಸದಾ ಬದ್ಧ ಎಂಬ ಅಚಲ ನಿರ್ಧಾರ ಇರಬೇಕು. ಅಂತಹ ನಿರ್ಧಾರ ಕೈಗೊಳ್ಳಲು ಮನಸ್ಸು ಹೊಸ ವರ್ಷದ ಮೊದಲ ದಿನಕ್ಕೆಂದೂ ಕಾಯಬಾರದು. ಈಗಿನಿಂದಲೇ, ಈ ಕ್ಷಣದಿಂದಲೇ ಬದಲಾಗುತ್ತೇನೆ ಎಂದಂದುಕೊಂಡು ಮುಂದಡಿ ಇಟ್ಟರೆ ಖಂಡಿತವಾಗಿಯೂ ಮನಸ್ಸು ಅಂದುಕೊಂಡದ್ದನ್ನು ಸಾಧಿಸಿ ಬಿಡಬಹುದು.

(ಗಣೇಶ್ ಮಾವಂಜಿ ಹಿರಿಯ ಪತ್ರಕರ್ತರು ಅಂಕಣಕಾರರು)















