*ಗಣೇಶ್ ಮಾವಂಜಿ.
ಮಕ್ಕಳ ಶಾಲೆಯ ಪೋಷಕರ ಸಭೆಯಲ್ಲಿ ಸಾಮಾನ್ಯವಾಗಿ ಏನನ್ನು ನಿರೀಕ್ಷಿಸಬಹುದು? ಹೆಚ್ಚೆಂದರೆ ಒಂದೆರಡು ಬಿಸ್ಕೆಟ್, ಮುಕ್ಕಾಲು ಗ್ಲಾಸ್ ಮಾಲ್ಟ್ ಅಥವಾ ಚಾ…, ಅದು ಬಿಟ್ರೆ ‘ನಿಮ್ಮ ಮಕ್ಕಳಿಗೆ ಓದುವುದು ಬಿಟ್ಟು ಬೇರೆಲ್ಲಾ ಬರ್ತದೆ.! ನಿಂತಲ್ಲಿ ನಿಲ್ಲೋದಿಲ್ಲ.., ಕೂತಲ್ಲಿ ಕೂರೋದಿಲ್ಲ….ಟೆರೇಸ್ ಕಿತ್ತೋಗುವಷ್ಟು ಬೊಬ್ಬೆ ಹಾಕ್ತವೆ….ಏನ್ಮಕ್ಳೋ…ಇಂತವರನ್ನು ಶಾಲೆಗೆ ಕಳುಹಿಸಿ ನೀವು ಮನೆಯಲ್ಲಿ ನೆಮ್ಮದಿಯಾಗಿರ್ತೀರಿ…’ ಅಂತ ಶಿಕ್ಷಕರಿಂದ ಮಕ್ಕಳ ಪ್ರೋಗ್ರೆಸ್ ರಿಪೋರ್ಟ್ ಸಿಗ್ತದೆ..ನಂತರ ಹೇಳಿದಲ್ಲಿಗೆ ಸೈನ್ ಹಾಕಿ ಮತ್ತೆ ಅತ್ತ ಕಡೆ ತಲೆ ಹಾಕುವುದು ಮತ್ತೊಂದು ಪೇರೆಂಟ್ಸ್ ಮೀಟಿಂಗ್ಗೆ.ಇದು ಬಹುತೇಕ ಎಲ್ಲಾ
ಪೇರೆಂಟ್ಸ್ ಮೀಟಿಂಗ್ನಲ್ಲಿ ನಡೆಯುವ ಕತೆ. ಆದರೆ ನಾನೀಗ ಹೇಳಲು ಹೊರಟಿರುವ ಸಂಗತಿ ಇದಕ್ಕಿಂತ ಕೊಂಚ ವಿಭಿನ್ನವಾದುದು. ಕೆಲವು ಕಡೆಗಳಲ್ಲಿ ಪೇರೆಂಟ್ಸ್ ಮೀಟಿಂಗ್ ನಡೆಯುವ ಹಾಲ್ಗೆ ಮಕ್ಕಳ ಪ್ರವೇಶ ಇರುವುದಿಲ್ಲ. ಬಹುಶಃ ಶಿಕ್ಷಕರು ಮಕ್ಕಳ ಬಗ್ಗೆ ಪೋಷಕರಿಗೆ ಹೇಳುವ ದೂರುಗಳನ್ನು ಮಕ್ಕಳು ಕೇಳಿಸಬಾರದೆಂದೇನೋ! ಆದರೆ ಕೆಲವೊಂದು ಕಡೆಗಳಲ್ಲಿ ಸಭೆಯಲ್ಲಿ ಮಕ್ಕಳ ಉಪಸ್ಥಿತಿಗೂ ಅವಕಾಶ ಕಲ್ಪಿಸಲಾಗುತ್ತದೆ.
ಬೆಳ್ತಂಗಡಿ ತಾಲೂಕಿನ ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇತ್ತೀಚೆಗೆ ಪೋಷಕರ ಸಭೆ ಕರೆಯಲಾಗಿತ್ತು. ಪೋಷಕರು ಕಡ್ಡಾಯವಾಗಿ ಹಾಜರಿರಬೇಕೆಂದು ಹೇಳಲಾಗಿದ್ದುದರಿಂದ ಬಹುತೇಕ
ಎಲ್ಲಾ ಮಕ್ಕಳ ಪೋಷಕರು ಸಭೆಯಲ್ಲಿ ಹಾಜರಿದ್ದರು.ಇತರ ಖಾಸಗಿ ಅಥವಾ ಸರಕಾರಿ ಶಾಲೆಯಲ್ಲಿ ನಡೆಯುವ ಪೋಷಕರ ಸಭೆಗೂ ವಸತಿ ಶಾಲೆಯಲ್ಲಿ ಜರುಗುವ ಪೋಷಕರ ಸಭೆಗೂ ತುಸು ವ್ಯತ್ಯಾಸ ಇದೆ. ಮಕ್ಕಳನ್ನು ಪ್ರತಿದಿನ ಮನೆಯಿಂದಲೇ ಶಾಲೆಗೆ ಕಳುಹಿಸುವ ಪೋಷಕರಾಗಿದ್ದರೆ ಮಕ್ಕಳ ಬಗ್ಗೆ ಅಷ್ಟೊಂದು ಮಮಕಾರ ಹೊಂದಿರುವುದಿಲ್ಲ. ಅದರಲ್ಲೂ ಮಕ್ಕಳು ಓದಿನಲ್ಲಿ ಹಿಂದಿದ್ದರಂತೂ ‘ನೀವೇನೂ ಯೋಚಿಸಬೇಡಿ ಸರ್…ಬೆನ್ನಿಗೆ ಎರಡೆರಡು ಬಿಗಿದೇ ಹೇಳಿ ಕೊಡಿ. ನಮಗೇನೂ ಅಭ್ಯಂತರವಿಲ್ಲ’ ಎಂದು ತಮ್ಮ ಮಕ್ಕಳ ಬೆನ್ನಿಗೆ ಬಾರಿಸಲು ಪೋಷಕರು ಪರ್ಮಿಷನ್ ಕೊಟ್ಟುಬಿಡುತ್ತಾರೆ. ಕೆಲವೊಂದು ವಿರಳ ಸನ್ನಿವೇಶಗಳಲ್ಲಿ ಮಾತ್ರ ಈ ಮಾತಿಗೆ ವ್ಯತಿರಿಕ್ತ ಅಭಿಪ್ರಾಯಗಳು ವ್ಯಕ್ತವಾಗಬಹುದಷ್ಟೇ.
ಆದರೆ ವಸತಿ ಶಾಲೆಯ ಮಕ್ಕಳ ಪೋಷಕರು ಹಾಗಲ್ಲ. ಪೋಷಕರಿಗೆ ಮಕ್ಕಳ ಮುಖ ನೋಡದೆ ತಿಂಗಳಾಗಿರುತ್ತದೆ. ಮಕ್ಕಳು ಕೂಡಾ ಹಾಗೆಯೇ. ಯಾವಾಗೊಮ್ಮೆ ಅಪ್ಪ, ಅಮ್ಮನ ಮುಖ ನೋಡುತ್ತೇವೆ ಎಂಬ ಕಾತರದಲ್ಲಿ ಇರುತ್ತಾರೆ. ಮಕ್ಕಳು ಹಾಸ್ಟೆಲ್ನಲ್ಲಿ ಎಷ್ಟು ಕಷ್ಟ ಪಡುತ್ತಾರೋ ಏನೋ.., ಮಕ್ಕಳ ಬಗ್ಗೆ ಶಿಕ್ಷಕರ ದೂರು ಇದ್ದೇ ಇರಬಹುದು. ಆಗ ಹೇಗೆ, ಏನು ಉತ್ತರಿಸಬೇಕೆಂದು ಪೋಷಕರು ಮನೆಯಲ್ಲಿ ರಿಹರ್ಸಲ್ ಮಾಡಿಕೊಂಡೇ ಬಂದಿರುತ್ತಾರೆ.
ಮೊನ್ನೆ ನಡೆದ ಪೋಷಕರ ಸಭೆಯ ದಿನ ಎಲ್ಲಾ ಮಕ್ಕಳೂ ಕಿಟಕಿಯಲ್ಲಿ ನೇತಾಡಿಕೊಂಡೇ ತಮ್ಮ ತಮ್ಮ ಪೋಷಕರ ಆಗಮನದ ನಿರೀಕ್ಷೆಯಲ್ಲಿದ್ದಂತಿತ್ತು. ಶಾಲೆಯ ಗೇಟ್ನ ಬಳಿ ಇರುವ ಸೆಕ್ಯುರಿಟಿ ರೂಂನ ರಿಜಿಸ್ಟರ್ಗೆ ಸೈನ್ ಹಾಕುವಾಗಲೇ ಮಕ್ಕಳಿಗೆ ತಮ್ಮ ಮನೆಯಿಂದ ಯಾರು ಬಂದಿದ್ದಾರೆಂದು ಗೊತ್ತಾಗಿಬಿಟ್ಟಿತ್ತು.ನನಗಂತೂ ಮಕ್ಕಳ ಹಾಗೂ ಪೋಷಕರ ಸಮಾಗಮದ ಆ ಕ್ಷಣ ಪುಣ್ಯಕೋಟಿ ಗೋವಿನ ನೆನಪಾಯಿತು. ಏಕೆಂದರೆ ಅಲ್ಲಿ ತಮ್ಮ ಮಕ್ಕಳನ್ನು ಬಾಚಿ ತಬ್ಬಿ ಮುತ್ತಿಡುವವರಿದ್ದರು. ಕಣ್ಣಲ್ಲೇ ಪ್ರೀತಿಯ ಒರತೆ ಹರಿಯಬಿಡುವವರೂ ಇದ್ದರು. ಹಾಸ್ಟೆಲ್ ಗೆ ಸರಿಯಾಗಿ ಹೊಂದಿಕೊಳ್ಳಲು ಹೆಣಗಾಡುವ ಮಕ್ಕಳಂತೂ ತಮ್ಮ ಪೋಷಕರನ್ನು ಕಂಡೊಡನೆ ಕಣ್ಣಿನಲ್ಲಿ ಗಂಗಾಜಲವನ್ನೇ ಹರಿಸಿದವರೂ ಇನ್ನು ಕೆಲವರಿದ್ದರು.
ಇವೆಲ್ಲಾ ವಿದ್ಯಾಮಾನಗಳು ಸಭೆಗೆ ಮೊದಲೇ ನಡೆದುಹೋದವು. ಅಂತೂ ಪೋಷಕರ ಸಭೆ ಪ್ರಾರಂಭವಾಗಿಬಿಟ್ಟಿತು. ವಸತಿ ಶಾಲೆಯ ಪ್ರಾಂಶುಪಾಲರು ಮುಖ್ಯವಾಗಿ ಶಾಲಾ ಶೈಕ್ಷಣಿಕ ಪ್ರವಾಸ ಕೈಗೊಳ್ಳುವ ಬಗ್ಗೆ ಹಾಗೂ ವಾರ್ಷಿಕೋತ್ಸವ ಹಮ್ಮಿಕೊಳ್ಳುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರು. ಕೆಲ ಪೋಷಕರು ವಾರ್ಷಿಕೋತ್ಸವವನ್ನು ಹಗಲಲ್ಲಿ ನಡೆಸುವಂತೆ ಕೋರಿದರೆ ಮತ್ತೆ ಕೆಲವರು ರಾತ್ರಿ ನಡೆಸುವಂತೆ ಒತ್ತಾಯಿಸಿದರು. ರಾತ್ರಿ ವಾರ್ಷಿಕೋತ್ಸವ ನಡೆಸಿದರೆ ಬಣ್ಣ ಹಾಕುವ ತಮ್ಮ ಮಕ್ಕಳು ಚಂದ ಕಾಣುತ್ತಾರೆ ಎಂಬ ಕಾರಣಕ್ಕಾಗಿಯೋ ಏನೋ., ರಾತ್ರಿ ವಾರ್ಷಿಕೋತ್ಸವ ನಡೆಸಬೇಕೆಂದು ಕೈ ಎತ್ತುವವರೇ ಹೆಚ್ಚಾದ ಕಾರಣ ರಾತ್ರಿ ವಾರ್ಷಿಕೋತ್ಸವ ನಡೆಸುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ನಂತರ ಮಕ್ಕಳ ಕಲಿಕೆಯ ಬಗ್ಗೆ ಮಾತು ಹೊರಳಿತು. ಎಷ್ಟೇ ಗದರಿದರೂ ಮಕ್ಕಳು ಕೇಳುವುದಿಲ್ಲ. ಬೆನ್ನು ಕೊಟ್ಟು ಹಿಂತಿರುಗಿದಾಗ ಮಕ್ಕಳು ಬೊಬ್ಬೆ ಹೊಡೆಯುತ್ತಾರೆ ಎಂಬ ದೂರು ಶಿಕ್ಷಕಿಯೊಬ್ಬರಿಂದ ಕೇಳಿ ಬಂತು. ಅಲ್ಲದೆ ಎಲ್ಲಾ ಸಂದರ್ಭಗಳಲ್ಲೂ ಶಿಕ್ಷಕರು ಕಣ್ಣಿಟ್ಟು ಕಾಯಲು ಸಾಧ್ಯವಿಲ್ಲವೆಂದು ತರಗತಿ ಲೀಡರ್ ಗೆ ಜವಾಬ್ದಾರಿ ವಹಿಸಿದರೆ ಆತ ಅವರೆಲ್ಲರಿಗಿಂತ ಹೆಚ್ಚು ಕೀಟಲೆ ಮಾಡುತ್ತಾನೆ..ಹೀಗಾದರೆ ಹೇಗೆ ಎಂದು ಆ ಶಿಕ್ಷಕಿ ತಮ್ಮ ಅಳಲನ್ನು ತೋಡಿಕೊಂಡರು. ತಮ್ಮ ಮಕ್ಕಳಿಗೆ ತುಸು ಬುದ್ದಿಮಾತು ಹೇಳಿ ಹೋಗಿ ಎಂಬುದು ಮಕ್ಕಳ ಪೋಷಕರಿಗೆ ಆ ಶಿಕ್ಷಕಿಯ ಅಂತರ್ಯದ ಮಾತಾಗಿತ್ತು.
ಮಕ್ಕಳು ಮಕ್ಕಳಾಟ ಆಡುವುದು ಸಾಮಾನ್ಯ. ಹಾಗಿದ್ದರೂ ತೀರಾ ಅತಿರೇಕಕ್ಕೆ ಹೋದರೆ ಮಾತ್ರ ದಂಡಪ್ರಯೋಗಕ್ಕೆ ಮುಂದಾಗಬಹುದು ಎಂದು ಕೆಲ ಪೋಷಕರು ತಮ್ಮತಮ್ಮಲ್ಲೇ ಅಭಿಪ್ರಾಯ ಹಂಚಿಕೊಂಡರು. ಮೊದಲೇ ತಿಳಿಸಿದಂತೆ ಶಾಲಾ ಪ್ರಾಂಶುಪಾಲರು ಪೋಷಕರ ಸಭೆಗೆ ಮಕ್ಕಳ ಪ್ರವೇಶಕ್ಕೂ ಅವಕಾಶ ಕಲ್ಪಿಸಿದ ಕಾರಣ ಸಭೆಯಲ್ಲಿ ಮಕ್ಕಳೂ ಇದ್ದರು. ಏನು ಮಾಡಬಹುದು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ಆದಾಗ ಶಾಲಾ ನಾಯಕ ವೀರೇಶ್ ಎಂಬ ಹುಡುಗ ಎದ್ದು ನಿಂತು ಅಭಿಪ್ರಾಯ ಮಂಡಿಸಲು ಮುಂದಾದ!
ಅರೇ..!!. ಪೋಷಕರ ಸಭೆಯಲ್ಲಿ ಮಕ್ಕಳಿಗೆ ಮಾತನಾಡಲು ಅವಕಾಶವೇ?! ಅದೂ ಕೂಡಾ ಗಲಾಟೆ ಮಾಡುವ ಮಕ್ಕಳನ್ನು ಕಂಟ್ರೋಲ್ ಮಾಡುವುದು ಹೇಗೆಂದು ಮಕ್ಕಳಿಂದ ಪೋಷಕರಿಗೆ ಹಿತವಚನವೇ? ಹುಡುಗ ಎದ್ದು ನಿಂತಾಗ ಎಲ್ಲರ ಕಣ್ಣಲ್ಲೂ ಆಶ್ಚರ್ಯದ ಜೊತೆಗೆ ಉಡಾಫೆಯ ಭಾವವೇ ಎದ್ದು ಕಾಣುತ್ತಿತ್ತು.
ಆದರೆ ಆ ಹುಡುಗ ಮಾತ್ರ ಕೊಂಚವೂ ತಡವರಿಸದೆ ತನ್ನ ಅಭಿಪ್ರಾಯ ಮಂಡಿಸಲು ಮುಂದಾಗಿದ್ದ. ‘ನಮ್ಮಂತಹ ಮಕ್ಕಳಿಗೆ ಖಾಲಿ ಬುದ್ಧಿಮಾತುಗಳು ಪ್ರಯೋಜನಕ್ಕೆ ಬರಲಾರವು. ಮಕ್ಕಳ ವರ್ತನೆಯಲ್ಲಿ ಬದಲಾವಣೆ ಕಾಣಬೇಕೆಂದಿದ್ದರೆ ಕಷ್ಟದ ಅನುಭವವಾಗಬೇಕು..’ ವಿದ್ಯಾರ್ಥಿ ವೀರೇಶನ ಈ ಮಾತುಗಳನ್ನು ಕೇಳಿದಾಗ ‘ ಎಲ್ಲೋ ಓದಿದ ಸಾಲುಗಳನ್ನು ನೆನಪಿಸಿಕೊಂಡು ಹೇಳುತ್ತಿದ್ದಾನೆ ಅನ್ನಿಸಿತು. ಆದರೆ ಮುಂದುವರಿದು ಆ ಹುಡುಗ ತನ್ನನ್ನೇ ಉದಾಹರಣೆಯಾಗಿ ಇರಿಸಿಕೊಂಡು ಮಾತು ಮುಂದುವರಿಸಿದ.
‘ನಾನೂ ಕೂಡಾ ಹಾಸ್ಟೆಲ್ ಸೇರಿದಾಗ ಆರಂಭದಲ್ಲಿ ಹುಡುಗುತನ ತೋರುತ್ತಿದ್ದೆ. ಸಹಪಾಠಿಗಳು ಗಲಾಟೆ ಮಾಡುತ್ತಿದ್ದಾಗ ಅವರೊಂದಿಗೆ ನಾನೂ ಜೊತೆಯಾಗುತ್ತಿದ್ದೆ. ಇಂಗ್ಲಿಷ್ ಭಾಷಾ ವಿಷಯವಂತೂ ಗೊತ್ತೇ ಆಗುತ್ತಿರಲಿಲ್ಲ. ಹೇಗೋ ಆಗುತ್ತದೆ ಎಂಬ ಉಡಾಫೆಯಲ್ಲೇ ದಿನಗಳು ಕಳೆಯುತ್ತಿದ್ದವು. ಈ ನಡುವೆ ರಜೆಯಲ್ಲಿ ಮನೆಗೆ ಹೋದಾಗ ಅಪ್ಪ, ಅಮ್ಮ ನನ್ನನ್ನು ಹೊಲಕ್ಕೆ ಕರೆದುಕೊಂಡು ಹೋದರು. ಅಲ್ಲಿ ಅಪ್ಪ ಬೆವರು ಸುರಿಸಿ ದುಡಿಯುವುದನ್ನು ಕಣ್ಣಾರೆ ಕಂಡೆ. ಕಷ್ಟದಲ್ಲೇ ಜೀವನ ಸಾಗಿಸುವ ಅಮ್ಮನ ಏದುಸಿರನ್ನು ಕಂಡೆ. ‘ರೊಕ್ಕ ಬೇಕೆಂದರೆ ಹೀಗೆ ಮೈಮುರಿದು ದುಡಿಯಬೇಕಪ್ಪಾ…ಓದಿನಲ್ಲಿ ಅಸಡ್ಡೆ ತೋರಿದರೆ ಕೊನೆಗೆ ಕಷ್ಟದ ಜೀವನ ತಪ್ಪಿದ್ದಲ್ಲ. ನೀನಾದರೂ ಚೆನ್ನಾಗಿ ಓದಿ ಒಳ್ಳೆಯ ಉದ್ಯೋಗ ಹಿಡಿಯಬೇಕು ಆಯ್ತಾ?’…ಹೆತ್ತವರ ಈ ಹಿತ ನುಡಿಗಳು ಮನಸ್ಸಿನಾಳಕ್ಕೆ ಇಳಿದು ಹೋಯ್ತು ನೋಡಿ. ಈ ಕಷ್ಟಕರ ಜೀವನದಲ್ಲೂ ನನಗೆ ಯಾವುದೇ ಕುಂದುಕೊರತೆಗಳು ಇಲ್ಲದಂತೆ ನನ್ನನ್ನು ನನ್ನ ಹೆತ್ತವರು ಬೆಳೆಸಿದರಲ್ಲಾ ಎಂಬುದನ್ನು ಕೇಳಿ ದುಖಿತನಾದೆ’
ಈ ಮಾತುಗಳನ್ನು ಹೇಳತೊಡಗಿದಾಗ ಹುಡುಗ ಕಣ್ಣೀರಾಗಿಬಿಟ್ಟ. ಸ್ವರದಲ್ಲಿ ಏರಿಳಿತವಾಗಿ ಸಭೆಯಲ್ಲೇ ಬಿಕ್ಕಳಿಸಿಬಿಟ್ಟ. ಆಚೀಚೆ ನೋಡಿದರೆ ಹೆಚ್ಚಿನ ಪೋಷಕರು ಜೇಬಿನಿಂದ ಕರ್ಚೀಪ್ ತೆಗೆದುಕೊಂಡು ಕಣ್ಣೊರೆಸುತ್ತಿರುವುದು ಕಂಡುಬಂತು.
ಹುಡುಗ ವೀರೇಶ್ ಸಾವರಿಸಿಕೊಂಡು ಮತ್ತೆ ಮಾತು ಮುಂದುವರಿಸಿದ. ‘ ರಜೆ ಮುಗಿಸಿ ಹಾಸ್ಟೆಲ್ ಗೆ ಬಂದವನು ಪ್ರತೀ ಕ್ಷಣವೂ ಅಮೂಲ್ಯ ಎಂಬಂತೆ ಓದತೊಡಗಿದೆ. ಸಮಯ ವ್ಯರ್ಥ ಮಾಡಿದರೆ ಮುಂದಿನ ಭವಿಷ್ಯಕ್ಕೆ ನಾನೇ ಚಪ್ಪಡಿ ಕಲ್ಲು ಎಳೆದುಕೊಂಡಂತೆ ಎಂಬುದನ್ನು ಅರ್ಥೈಸಿಕೊಂಡು ಹಗಲಿರುಳೆನ್ನದೆ ಓದಿನಲ್ಲಿ ನಿರತನಾದೆ. ಕಷ್ಟದ ಸಬ್ಜೆಕ್ಟ್ ಗಳೆಲ್ಲವೂ ಸುಲಭ ಅನಿಸತೊಡಗಿತು. ಹೆತ್ತವರ ಕಷ್ಟ ಕಣ್ಮುಂದೆ ಬಂದಾಗಲೆಲ್ಲಾ ಹೆಚ್ಚು ಹೆಚ್ಚು ಓದತೊಡಗಿದೆ. ಒಂದೊಮ್ಮೆ ಫೈಲ್ ಮಾರ್ಕ್ಸ್ ಬಂದ ಸಬ್ಜೆಕ್ಟ್ ನಲ್ಲೂ ಈಗ ಫುಲ್ ಮಾರ್ಕ್ಸ್ ಬರತೊಡಗಿತು. ಈ ಅಮೂಲಾಗ್ರ ಬದಲಾವಣೆಗೆ ಕಾರಣ ಹೆತ್ತವರ ಕಷ್ಟದ ಅರಿವು ನನ್ನಲ್ಲಾದುದು…ಹಾಗಾಗಿ ಬೆನ್ನಿಗೆ ಬಾರಿಸುವುದೇ ಪರಿಹಾರವಲ್ಲ. ನೀವೆಲ್ಲರೂ ನಿಮ್ಮ ಕಷ್ಟದ ಬಗ್ಗೆ ಮಕ್ಕಳಲ್ಲಿ ಹೇಳಿಕೊಳ್ಳಿ. ಅವರನ್ನು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಒತ್ತಡದ ಜೀವನದ ಬಗ್ಗೆಯೂ ಹಂಚಿಕೊಳ್ಳಿ. ಅವರಿಗದು ಅನುಭವವಾದರೆ ಖಂಡಿತವಾಗಿಯೂ ಅವರು ಓದಿಯೇ ಓದುತ್ತಾರೆ..’
ಹುಡುಗ ಮಾತು ನಿಲ್ಲಿಸಿದಾಗ ಸಭಾಂಗಣ ಪೋಷಕರ ಕರತಾಡನದಿಂದ ತುಂಬಿ ಹೋಯಿತು. ಪೋಷಕರ ಜೊತೆ ಕೆಲ ಶಿಕ್ಷಕರೂ ಕಣ್ಣೀರೊರೆಸುತ್ತಿರುವುದು ಕಂಡುಬಂತು. ಪೋಷಕರ ಸಭೆಯಲ್ಲಿ ಪೋಷಕರಿಗಾಗಿ ವಿದ್ಯಾರ್ಥಿಯೊಬ್ಬನ ಹಿತನುಡಿಯೇ ಆ ಸಭೆಯ ಹೈಲಾಟಾಗಿತ್ತು. ‘ಈ ಬಾರಿ ವೀರೇಶ್ ಆರ್ನೂರಕ್ಕಿಂತ ಅಧಿಕ ಅಂಕಗಳನ್ನು ಪಡೆದುಕೊಳ್ಳುತ್ತಾನೆ ಎಂಬ ಭರವಸೆ ನಮಗಿದೆ’ ಎಂದು ಪ್ರಾಂಶುಪಾಲರು ವೀರೇಶ್ ನ ಕಲಿಕೆಗೆ ಸಭೆಯಲ್ಲೇ ರಿಪೋರ್ಟ್ ಕೊಟ್ಟುಬಿಟ್ಟರು.
ಈಗ ಹೇಳಿ...ಮಕ್ಕಳಿಗೆ ಪೆಟ್ಟಿನ ಬಿಸಿ ಇಲ್ಲ ಎಂದಂದುಕೊಂಡು ಮಾತುಮಾತಿಗೂ ಗದರಿಸಿ ಹೊಡೆದು ಓದಿಸುತ್ತೀರೋ?, ಒಂದರ್ಧ ಗಂಟೆ ಮೊಬೈಲ್ ನೋಡಲಿ…ಮತ್ತೆ ಮಗು ಓದುತ್ತದೆ ಎಂದುಕೊಂಡು ಮೊಬೈಲ್ ಒತ್ತಲು ಬಿಡುತ್ತೀರೋ?, ಮಕ್ಕಳಿಗೆ ಯಾವುದೇ ಕೆಲಸ ಕೊಡದೆ ಕೋಣೆಯೊಳಗೆ ಹಾಕಿ ಬಾಗಿಲು ದೂಡಿ ಚಿಲಕ ಹಾಕಿ ಓದಲು ಬಿಡುತ್ತೀರೋ?, ‘ಚೆನ್ನಾಗಿ ಓದಬೇಕು. ಇಲ್ಲದಿದ್ದರೆ ಚಿಕನ್ ಕಬಾಬ್, ಗೋಬಿಮಂಚೂರಿ ತಂದುಕೊಡಲಾರೆ’ ಎಂದು ಆಮಿಷ ಒಡ್ಡಿ ಓದಿಸುತ್ತೀರೋ?, ಅಥವಾ ವೀರೇಶನ ಹೆತ್ತವರಂತೆ ಕಷ್ಟದ ಅರಿವನ್ನು ಮಕ್ಕಳಲ್ಲೂ ಮೂಡಿಸಿ ಅವರಲ್ಲಿ ಜ್ಞಾನೋದಯವಾಗುವಂತೆ ಮಾಡಿ ಓದಿಸುತ್ತೀರೋ?…ಆಯ್ಕೆ ನಿಮಗೆ ಬಿಟ್ಟದ್ದು.

(ಗಣೇಶ್ ಮಾವಂಜಿ ಹಿರಿಯ ಪತ್ರಕರ್ತ ಹಾಗೂ ಅಂಕಣಕಾರರು)













