*ಗಣೇಶ್ ಮಾವಂಜಿ.
ಸಾವಿನ ಮನೆಯಲ್ಲಿ ನಗೆಗೆ ಸ್ಥಾನವಿಲ್ಲ. ವ್ಯಕ್ತಿ ಬದುಕಿದ್ದಾಗ ಮಾಡಿದ ಪುಣ್ಯಕಾರ್ಯಗಳು, ಒಡನಾಡಿಗಳೊಂದಿಗೆ ತೋರಿದ ಪ್ರೀತಿ, ಜವಾಬ್ದಾರಿ ಹೊತ್ತುಕೊಂಡು ನಿರ್ವಹಿಸಿದ ಚಟುವಟಿಕೆಗಳು, ಬದುಕಿನ ಜಂಜಾಟದಲ್ಲಿ ಒದಗಿ ಬಂದ ಬವಣೆಗಳು, ಸಂಸಾರದ ನೊಗ ಎಳೆಯುವಾಗಿನ ಎಡರು ತೊಡರುಗಳೆಲ್ಲಾ ಗತಿಸಿದ ಕ್ಷಣದಲ್ಲಿ ಇದ್ದವರ ಕಣ್ಣಿಗೆದುರು ಬಂದು ಹೋಗುತ್ತವೆ.ಆಗ ಆ ಸೂತಕದ ಮನೆಯಲ್ಲಿ ನಗು ಇಣುಕುದು. ಬದಲಾಗಿ ‘ಛೇ ಹೋಗಿಬಿಟ್ಟರಲ್ಲಾ’ ಎಂಬ ಮರುಗುವ ಮಾತುಗಳೇ ಹೊರಬರುತ್ತವೆ.
ಉಸಿರು ಚೆಲ್ಲಿದ ವ್ಯಕ್ತಿ ಜೀವಿತದ ಕಾಲದಲ್ಲಿ ಎಷ್ಟೇ ಕೆಡುಕನ್ನು
ಹೊಂದಿದ್ದರೂ ಅಥವಾ ಅಧರ್ಮಿಯಾಗಿ ಸರ್ವರ ಮನದಲ್ಲೂ ಅತ್ಯಂತ ಕೆಟ್ಟ ವ್ಯಕ್ತಿ ಎಂದು ಬಿಂಬಿತನಾಗಿದ್ದರೂ ಸತ್ತ ಬಳಿಕ ಆತನ ಸಾವಿಗೆ ಮರುಕ ಪಡುವುದು ಮಾನವನ ಸಹಜ ಧರ್ಮ. ‘ವ್ಯಕ್ತಿ ಒಳ್ಳೆಯವನೇ. ಅದೇನೋ ಗ್ರಹಚಾರ ದೋಷದ ಕಾರಣ ಆತ ಹಾಗೆಲ್ಲಾ ಮಾಡುತ್ತಿದ್ದನಷ್ಟೇ..’ ಎಂಬುದು ಸತ್ತ ಬಳಿಕ ಜನರಾಡುವ ಅನುಕಂಪದ ಮಾತುಗಳು. ಅತೀ ವಿರಳ ಎಂಬಂತಹ ಪ್ರಕರಣಗಳಲ್ಲಿ ಮಾತ್ರ ಗತಿಸಿದ ವ್ಯಕ್ತಿಯ ಬಗ್ಗೆ ‘ಆತ ಹೋದದ್ದೇ ಒಳ್ಳೆಯದಾಯಿತು’ ಎಂಬ ಭಾವ ಮೂಡುತ್ತದೆ.

ಸಾಮಾನ್ಯವಾಗಿ ಸಾವಿನ ಮನೆಯಲ್ಲಿ ಅಂತ್ಯ ಸಂಸ್ಕಾರ ನಡೆಯುವಾಗ ಮನೆಯವರ ರೋಧನ ಮುಗಿಲು ಮುಟ್ಟುತ್ತದೆ.ಎಷ್ಟೇ ಕಲ್ಲು ಮನಸ್ಸಿನವರಾಗಿದ್ದರೂ ಕೂಡಾ ಸತ್ತ ವ್ಯಕ್ತಿಯನ್ನು ತಮ್ಮ ನಂಬಿಕೆಯಂತೆ ಸ್ವರ್ಗಕ್ಕೆ ಕಳುಹಿಸುವ ಕ್ರಮ ನಡೆಯುವಾಗ ದುಃಖದ ಕಟ್ಟೆ ಒಡೆದೇ ಒಡೆಯುತ್ತದೆ. ನಾಲ್ಕು ಹನಿ ಕಣ್ಣೀರು ಜಿನುಗಿಯೇ ಜಿನುಗುತ್ತದೆ. ಸತ್ತ ವ್ಯಕ್ತಿಯನ್ನು ನೆನೆದು ಮನಸ್ಸು ಆರ್ದ್ರಗೊಳ್ಳುತ್ತದೆ. ಆದರೆ ಕೆಲವರು ಅಸು ನೀಗಿದರೆ ಹಾಗಾಗುವುದಿಲ್ಲ. ಗತಿಸಿದ ವ್ಯಕ್ತಿಗೆ ಪತ್ನಿ, ಮಕ್ಕಳು, ಸಂಬಂಧಿಕರು ಇದ್ದರೂ ಮನಸ್ಸು ಕರಗಿ ಕಣ್ಣೀರ್ಗರೆಯುವ ಹಂತಕ್ಕೆ ಯಾರೂ ಹೋದಂತೆ ಕಂಡು ಬರುವುದಿಲ್ಲ..!
ಇದೇಕೆ ಹೀಗೆ ಎಂದು ಕೆದಕಲು ಹೊರಟರೆ ಸತ್ತ ವ್ಯಕ್ತಿ ಜವಾಬ್ದಾರಿಯಿಂದ ನುಣುಚಿಕೊಂಡು ಜೀವನ ಸಾಗಿಸಿದ ಪರಿ ತೆರೆದುಕೊಳ್ಳುತ್ತದೆ… ಜೀವನ ಎನ್ನುವುದು ಪರಿಪೂರ್ಣವಾಗುವುದು ಮದುವೆಯಾದರೆ ಮಾತ್ರ ಎಂಬ ಮಾತನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿದ್ದರೋ ಏನೋ. ಏಕೆಂದರೆ ಪ್ರಾಯಕ್ಕೆ ಬಂದಾಗ ಅವರು ಮದುವೆಯೇನೋ ಆಗಿರುತ್ತಾರೆ. ಆದರೆ ಗೃಹಸ್ಥಾಶ್ರಮ ಸ್ವೀಕರಿಸಿದ ಬಳಿಕ ಪತ್ನಿಗೆ ಸರಿಯಾದ ಪತಿಯಾಗಿರುವುದಿಲ್ಲ.. ಮಕ್ಕಳಿಗೆ ಸರಿಯಾದ ಅಪ್ಪನಾಗಿರಲಿಲ್ಲ. ತನ್ನ ಬಾಲ್ಯದಲ್ಲೂ ಅಷ್ಟೇ. ಹೆತ್ತವರಿಗೆ ಸರಿಯಾದ ಮಗನಾಗಿರದೆ ಪಿತ್ರಾರ್ಜಿತ ಆಸ್ತಿಯನ್ನೆಲ್ಲಾ ನುಂಗಿ ನೀರು ಕುಡಿದು ಉಂಡಾಡಿ ಗುಂಡನಾಗಿ ಬೆಳೆದಿರುತ್ತಾರೆ..
ಅಶಕ್ತ ತಂದೆತಾಯಿಗೆ ದಿಕ್ಕಾಗದೆ, ಒಡಹುಟ್ಟಿದವರಲ್ಲಿ ಪ್ರೀತಿ ತೋರದೆ, ಮಾಡಬೇಕಾದ ಕರ್ತವ್ಯಗಳಿಗೆ ಬೆನ್ನು ಹಾಕಿ ಸಮಾಜದ ಉದ್ಧಾರಕ್ಕೆ ಹೊರಡುತ್ತೇನೆ ಎಂದರೆ ಅದಕ್ಕಿಂತ ಹೀನ ಕೃತ್ಯ ಬೇರೆ ಯಾವುದೂ ಇಲ್ಲ. ಸಮಾಜ ಸರಿಯಾಗಿರಬೇಕೆಂದರೆ ಸ್ವತಃ ತಾನು ಸರಿಯಾಗಿರಬೇಕೆಂಬ ಸರಳ ಸತ್ಯ ಪ್ರತಿಯೊಬ್ಬರೂ ಅರಿತಿರಬೇಕು. ಅದರೆ ತಾನೇ ಅಡ್ಡದಾರಿಯಲ್ಲಿ ನಿಂತುಕೊಂಡು ಉಳಿದವರನ್ನು ಸರಿ ದಾರಿಗೆ ತರುತ್ತೇನೆ ಎಂಬ ಹುಂಬತನದಲ್ಲಿದ್ದರೆ,
ಕೈ ಹಿಡಿದ ಪತ್ನಿಗೆ ದನಕ್ಕೆ ಬಡಿದಂತೆ ಬಡಿದರೆ, ಹುಟ್ಟಿಸಿದ ಮಕ್ಕಳ ಬೇಕುಬೇಡಗಳನ್ನು ಪೂರೈಸದೆ ಇದ್ದರೆ, ತನ್ನವರೊಂದಿಗೆ ಸದಾ ದುರ್ವಾಸ ಮುನಿಗಳಂತೆ ವರ್ತಿಸುತ್ತಿದ್ದರೆ ಅಂತಹ ವ್ಯಕ್ತಿಯ ಬಗ್ಗೆ ಪ್ರೀತಿ, ಗೌರವ ಉಕ್ಕುವುದಾದರೂ ಹೇಗೆ? ಪ್ರೀತಿ ನೀಡಿದರೆ ಮಾತ್ರ ಮರು ಪ್ರೀತಿ ದಕ್ಕುತ್ತದೆ. ಪ್ರೀತಿಯ ಗಂಧ ಗಾಳಿ ತೋರದೆ ಕೋಪವನ್ನೇ ಸರಕಾಗಿಸಿದರೆ ಪ್ರೀತಿ ಗಳಿಕೆಯ ನಿರೀಕ್ಷೆ ಹುಸಿಯಾಗದಿರದು.
ಇದು ಕೆಲವೊಂದು ಉದಾಹರಣೆ ಅಷ್ಟೇ. ಜಗತ್ತಿನಲ್ಲಿ ಇಂತಹ ಪ್ರಕರಣಗಳು ಅವೆಷ್ಟೋ ಇರಬಹುದು.ದಿನಾ ಕುಡಿದು ಬರುವ ಗಂಡನನ್ನು ಪತಿಯೇ ಪರದೈವ ಎಂಬಂತೆ ಆದರಿಸಿ ಸತ್ಕರಿಸುವ ಮಹಿಳೆಯರು ಈಗಲೂ ಇದ್ದಾರೆ. ‘ಮನೆಯಲ್ಲಿ ನನ್ನದೇ ನಡೆಯಬೇಕು. ನಾನು ಎಳೆದ ಗೆರೆಯನ್ನು ಯಾರೂ ದಾಟಬಾರದು’ ಎಂದು ಫರ್ಮಾನು ಹೊರಡಿಸುವ ಗಂಡಸರೂ ಇದ್ದಾರೆ. ಪ್ರೀತಿ ಕೊಡದೆ, ಸದಾ ಗದರುವ ವ್ಯಕ್ತಿ ಗತಿಸಿದರೆ ಮನಸ್ಸಿನ ಒಂದು ಮೂಲೆಯಲ್ಲಿ ಆತ ಹೋದದ್ದು ಒಳ್ಳೆಯದೇ ಆಯಿತು ಎಂಬ ಭಾವ ಮೂಡದಿರದು.

ಎಲ್ಲದಕ್ಕೂ ಅಂತ್ಯ ಎಂಬುದು ಇದ್ದೇ ಇರುತ್ತದೆ. ಯೌವನದಲ್ಲಿ ಬೇಕಾಬಿಟ್ಟಿಯಾಗಿದ್ದ ವ್ಯಕ್ತಿ ಜೀವನದ ಸಂಧ್ಯಾ ಕಾಲದಲ್ಲಾದರೂ ಕ್ರಮಿಸಿದ ದಾರಿಯತ್ತ ತಿರುಗಿ ನೋಡುವ ಸನ್ನಿವೇಶಗಳು ಬಂದೇ ಬರುತ್ತವೆ. ವಯೋ ಸಹಜ ಖಾಯಿಲೆಗಳು ವಕ್ಕರಿಸಿದಾಗ, ಎಷ್ಟೇ ಗದರಿದರೂ ಮರುಮಾತನಾಡದೆ ಇದ್ದ ಪತ್ನಿ ಸ್ವರ ಏರಿಸಿ ಮಾತನಾಡಲು ಹೊರಟಾಗ, ತನ್ನ ಗದರಿಕೆಗೆ ಮಕ್ಕಳು ಸೊಪ್ಪು ಹಾಕದೆ ತಮಗನ್ನಿಸಿದ್ದನ್ನು ಮಾಡಲು ಹೊರಟಾಗ, ಅಲ್ಪಸ್ವಲ್ಪ ಪ್ರೀತಿ ತೋರುವ ಮಗಳು ಮದುವೆಯಾಗಿ ಗಂಡನ ಮನೆಗೆ ಹೋದಾಗ, ತನ್ನ ಮನೆಯಲ್ಲೇ ತಾನು ಒಂಟಿ ಎಂಬಂತಾದಾಗ ಆಡುವ ಆಟಕ್ಕೆ ಪೂರ್ಣವಿರಾಮ ಬಿದ್ದೇ ಬೀಳುತ್ತದೆ.
ಬದುಕಿನ ಹಾದಿಯಲ್ಲಿ ತಾನು ಮಾಡಿದ್ದು ತಪ್ಪು ಎಂಬ ಅರಿವಾದ ಕೂಡಲೇ ಕಿಂಚಿತ್ತಾದರೂ ತಿದ್ದಿ ಮುನ್ನಡೆಯುವ ಪ್ರಯತ್ನಕ್ಕೆ ಮುಂದಾಗಬೇಕು. ಇಷ್ಟು ದಿನ ಪತ್ನಿಯೊಂದಿಗೆ ವರ್ತಿಸಿದ ರೀತಿ ಸರಿ ಇರಲಿಲ್ಲ ಎಂದೆನಿಸಿದರೆ ಪತ್ನಿಗೆ ಖುಷಿಯಾಗುವ ಸಂಗತಿ ಏನೆಂಬುದನ್ನು ಮನಗಂಡು ಅದರಂತೆ ನಡೆದುಕೊಳ್ಳಬೇಕು. ಚಿಕ್ಕ ಪುಟ್ಟ ಕಾರಣಕ್ಕೂ ಗಂಡನೊಂದಿಗೆ ಜಗಳವಾಡಿ ಸುಂದರ ಕ್ಷಣಗಳನ್ನು ಹಾಳುಗೆಡವಿದೆ ಎಂದು ಹೆಂಡತಿಗೆ ಅನ್ನಿಸಿದರೆ ಮುಲಾಜಿಲ್ಲದೆ ಗಂಡನ ಖುಷಿಗೆ ಕಾರಣವಾಗುವ ಕೆಲಸಕ್ಕೆ ಮುಂದಾಗಬೇಕು.
ಹುಟ್ಟಿದ ವ್ಯಕ್ತಿ ಒಂದಲ್ಲ ಒಂದು ದಿನ ಈ ಲೋಕ ಬಿಟ್ಟು ಪರಲೋಕ ಸೇರಲೇ ಬೇಕು. ಬಾಳಿ ಬದುಕಿದ ಈ ಲೋಕದಲ್ಲಿ ಎಲ್ಲರಿಂದಲೂ ಭೇಷ್ ಅನ್ನಿಸಿಕೊಳ್ಳುವುದು ಸುಲಭದ ಮಾತಲ್ಲ. ಆದರೆ ತನ್ನ ಕುಟುಂಬಿಕರ, ಒಡನಾಡಿಗಳ, ತನ್ನನ್ನೇ ನಂಬಿದ ವ್ಯಕ್ತಿಗಳ ಮನದಲ್ಲಿ ತನ್ನ ಬಗ್ಗೆ ಕಿಂಚಿತ್ತಾದರೂ ಒಲವು ಗಳಿಸಲು ಸಫಲವಾಗದೆ ಹೋದರೆ ಕಣ್ಮುಚ್ಚಿದಾಗ ಕಂಬನಿ ಸುರಿಸುವವರು ಯಾರೂ ಇರಲಾರರು ಎಂಬುದು ಮಾತ್ರ ಸತ್ಯ.

(ಗಣೇಶ್ ಮಾವಂಜಿ ಹಿರಿಯ ಪತ್ರಕರ್ತರು ಅಂಕಣಕಾರರು)












