*ಗಣೇಶ್ ಮಾವಂಜಿ.
ಕೃಷಿ ಸಂಸ್ಕೃತಿ ಅಳಿದ ಪರಿಣಾಮವೋ ಅಥವಾ ಗೋವುಗಳ ಬಗೆಗಿನ ನಮ್ಮ ಅವಗಣೆಯೋ ಗೊತ್ತಿಲ್ಲ..,ನಮ್ಮ ಜನವಸತಿ ಜಾಗದ ಸುತ್ತಮುತ್ತಲಿನ ಗೋಮಾಳಗಳು ಮಾತ್ರ ಈಗಿಲ್ಲ.ಜಾನುವಾರುಗಳು ಎಗ್ಗಿಲ್ಲದೆ ಮೇಯುತ್ತಿದ್ದ ಜಾಗವನ್ನೆಲ್ಲಾ ಈಗ ಅರಣ್ಯ ಇಲಾಖೆಯ ಅಕೇಶಿಯ ಮರಗಳು ಆಕ್ರಮಿಸಿವೆ. ಹಿಂದೆಲ್ಲಾ ಕಾಡು ಗುಡ್ಡೆಯ ಗಡಿಯಾಚೆ ಮಾತ್ರ ಹಸಿರು ಬಣ್ಣದಲ್ಲಿ ತಲೆ ಎತ್ತಿ ನಿಂತಂತಿರುತ್ತಿದ್ದ
ರಕ್ಷಿತಾರಣ್ಯದ ಬೋರ್ಡ್ ಗಳು ಇದೀಗ ಅಂಗಳ ದಾಟಿ ಮುಂದೆ ಪಾದ ಬೆಳೆಸಿದ ಕೂಡಲೇ ಗೋಚರಿಸುವಂತಾಗಿದೆ.!
ಬದಲಾವಣೆ ಜಗದ ನಿಯಮ. ಅದನ್ನು ಒಪ್ಪಿಕೊಳ್ಳಲೇ ಬೇಕು. ಹಾಗಿದ್ದರೂ ಗೋವುಗಳು ಮೇಯಲೆಂದೇ ಇರುತ್ತಿದ್ದ ಆ ಹಿಂದಿನ ಗೋಮಾಳಗಳು ಈಗ ಕಾಣದಂತೆ ಮಾಯವಾದದ್ದನ್ನು ಬದಲಾವಣೆ ಎಂದು ಒಪ್ಪಿಕೊಳ್ಳಲು ಅದೇಕೋ ಮನಸ್ಸು ಒಪ್ಪುತ್ತಿಲ್ಲ. ಏಕೆಂದರೆ ನಮ್ಮದು ಕೃಷಿ ಪ್ರಧಾನ ದೇಶ. ವಾಣಿಜ್ಯ ಬೆಳೆಗಳು ನಾವು ಉತ್ತಿ ಬೆಳೆಯುವ ಭೂಮಿಗೆ ಧಾವಿಸದೆ ಇರುತ್ತಿದ್ದರೆ ಖಂಡಿತವಾಗಿಯೂ ಈಗಲೂ ನಾವು ಹಳೆಯ ಗದ್ದೆ ಬೇಸಾಯಕ್ಕೆ ಅಂಟಿಕೊಂಡು ಇರುತ್ತಿದ್ದೆವು.
ಭತ್ತ ಬೆಳೆದರೆ ಕಿಸೆ ತುಂಬುವುದಿಲ್ಲ ಎಂಬ ಕಾರಣಕ್ಕೆ ಅಡಿಕೆ ಬೆಳೆಯಲು ನಾವೆಲ್ಲಾ ಅನಿವಾರ್ಯವಾಗಿ ಜೋತು ಬಿದ್ದ ಕಾರಣ ಭತ್ತದ ಗದ್ದೆಗಳ ತುಂಬೆಲ್ಲಾ ಕಂಗಿನ ಮರಗಳು ತಲೆ ಎತ್ತಿದವು. ಭತ್ತ ಬೆಳೆಯುವ ಸಂದರ್ಭದಲ್ಲಿ ಗೋವುಗಳ ಸಾಕಾಣೆ ಸುಲಭ ಸಾಧ್ಯವಾಗುತ್ತಿತ್ತು. ಆದರೆ ಬೇಸಾಯ ಪದ್ಧತಿ ಅಳಿದ ಬಳಿಕ ಗೋವುಗಳ ಲಾಲನೆ ಪಾಲನೆಯೂ ಕಷ್ಟ ಸಾಧ್ಯವಾದ ಕಾರಣ ಗೋವುಗಳ ಸಾಕಣೆಯಿಂದ ರೈತ ವಿಮುಖನಾಗಬೇಕಾಯಿತು.

ಗದ್ದೆ ಬೇಸಾಯದಲ್ಲಿ ಸುಧಾರಿತ ತಂತ್ರಜ್ಞಾನಗಳೂ ಅಳವಡಿಯಾದ ನಂತರ ಎತ್ತುಗಳ ಸಾಕಾಣೆಯೂ ನಿಲ್ಲುವಂತಾಯಿತು. ಹೀಗಾಗಿ ದನಕರುಗಳನ್ನು ಗೋಮಾಳಕ್ಕೆ ಅಟ್ಟುವ ಚಟುವಟಿಕೆಗಳೂ ಇಲ್ಲವಾಯಿತು. ಗೋಮಾಳ ಇದ್ದಾಗ ಗೋಮಾಳದಲ್ಲಿ ಮೇಯುವ ದನಕರುಗಳು ಭತ್ತದ ಗದ್ದೆಗೆ ಬರದಂತೆ ತಡೆಯಲು ರೈತರೇ ಬೇಲಿ ನಿರ್ಮಾಣ ಮಾಡುತ್ತಿದ್ದರು. ಈ ಬೇಲಿ ನಿರ್ಮಾಣಕ್ಕೆ ಗೋಮಾಳದ ಬಳಿ ಹಾಗೂ ಕಾಡಂಚಿನಲ್ಲಿದ್ದ ಮುಳ್ಳಿನ ಗಿಡಗಳು ಬಳಕೆಯಾಗುತ್ತಿದ್ದವು. ವರ್ಷಕ್ಕೊಮ್ಮೆಯಾದರೂ ಆ ಬೇಲಿಗಳ ಸಮರ್ಪಕ ನಿರ್ವಹಣೆಗಾಗಿ ಬೆಳೆದು ನಿಂತ ಮುಳ್ಳಿನ ಗಿಡಗಳನ್ನು ಕಡಿದು ಇದ್ದ ಬೇಲಿಗೆ ಅಂಟಿಸಲಾಗುತ್ತಿತ್ತು. ಇದರ ಪರಿಣಾಮವಾಗಿ ಇದ್ದ ಗೋಮಾಳಗಳಲ್ಲಿ ಹುಲ್ಲಲ್ಲದೆ ಇನ್ನಿತರ ಗಿಡಗಂಟಿಗಳು ಬೆಳೆಯುತ್ತಿರಲಿಲ್ಲ. ಎತ್ತ ನೋಡಿದರತ್ತ ಹಸಿರು ಹುಲ್ಲಿನ ಹುಲ್ಗಾವಲು ಕಾಣಸಿಗುತ್ತಿದ್ದವು.
ಆದರೆ ಭತ್ತದ ಜಾಗವನ್ನು ಇತರ ವಾಣಿಜ್ಯ ಬೆಳೆಗಳು ಆಕ್ರಮಿಸಿದ ಕಾರಣ ಅದಕ್ಕೆ ಪೂರಕವಾಗಿ ನಡೆಯುತ್ತಿದ್ದ ಚಟುವಟಿಕೆಗಳೆಲ್ಲವೂ ಸ್ಥಗಿತಗೊಳ್ಳುವಂತಾಯಿತು. ತಮ್ಮ ಕೃಷಿ ಜಾಗಕ್ಕೆ ಬೇಲಿ ಹಾಕುವ ಪದ್ಧತಿ, ವರ್ಷಕ್ಕೊಮ್ಮೆ ಅದನ್ನು ನಿರ್ವಹಣೆ ಮಾಡುತ್ತಿದ್ದ ತಲೆಬಿಸಿ ಇಲ್ಲವಾದರೂ ನಮ್ಮ ನಮ್ಮ ಜಾಗದ ಸುತ್ತಮುತ್ತಲಿನ ಗೋಮಾಳಗಳ ತುಂಬಾ ಕಾಡು ಬೆಳೆಯುವಂತಾಯಿತು.
ಹಸಿರು ಹುಲ್ಗಾವಲಿನ ತುಂಬೆಲ್ಲಾ ಕಾಡು ಬೆಳೆದ ಕಾರಣವೋ ಏನೋ ಗೊತ್ತಿಲ್ಲ., ಅರಣ್ಯ ಇಲಾಖೆಯ ಕಣ್ಣು ಅತ್ತಕಡೆ ಸರಿಯಿತು.ಅರಣ್ಯ ಇಲಾಖೆಯ ರಕ್ಷಿತಾರಣ್ಯ, ಅಭಯಾರಣ್ಯದ ಹಸಿರು ಬೋರ್ಡ್ ಕಾಡ ಕರೆಯಿಂದ ಎದ್ದು ಬಂದು ನಮ್ಮ ಹೊಸಿಲು ದಾಟಿದ ಕೂಡಲೇ ಕಣ್ಣಿಗೆ ಗೋಚರವಾಗುವಷ್ಟು ಸನಿಹ ಬಂದು ಊರಿ ನಿಂತವು. ಹಿಂದೆಲ್ಲಾ ಆರ್ ಟಿಸಿಯಲ್ಲಿ ‘ಗೋಮಾಳ’ ಎಂದು ನಮೂದಾಗಿ ಇರುತ್ತಿದ್ದರೂ ಬಳಿಕ ಆ ಜಾಗವೆಲ್ಲಾ ಅರ್ಥವೇ ಆಗದ ಬಫರ್ ಲ್ಯಾಂಡ್, ಬಫರ್ ಝೋನ್ ಎಂಬಿತ್ಯಾದಿ ಹೆಸರುಗಳಿಂದ ಕರೆಯಲ್ಪಟ್ಟವು.
ಹೀಗಾಗಿ ಆ ಹಿಂದಿನ ಗೋಮಾಳಗಳ ಸೌಂದರ್ಯ ಈಗಿಲ್ಲವಾಯಿತು. ಅರ್ಥವೇ ಆಗದ ಮತ್ತೊಂದಿಷ್ಟು ಸಂಗತಿಗಳೂ ಇಲ್ಲಿವೆ. ಅರಣ್ಯ ಇಲಾಖೆಯ ಕಡತದಲ್ಲಿ ಕಾಡು ನಶಿಸಿ ನಾಡಾಗಿ ಪರಿವರ್ತಿತವಾದ ಬಗ್ಗೆ ದಾಖಲೆಗಳು ಇರಬಹುದು. ಅರಣ್ಯ ಸಂಪತ್ತು ಲೂಟಿಯಾಗುವ ಅಂಕೆ, ಸಂಖ್ಯೆಗಳೂ ಇರಬಹುದು. ಅಲ್ಲದೆ ನಶಿಸಿ ಹೋಗುತ್ತಿರುವ ಕಾಡು ಮೃಗಗಳ ಪಟ್ಟಿಯೂ ಇರಬಹುದು. ಆದರೆ ಪ್ರತಿದಿನ ಕಾಡಂಚಿನಲ್ಲಿ ವಾಸಿಸುತ್ತಿರುವ ಕೃಷಿ ಕುಟುಂಬಗಳಿಗೆ ಈ ಅಂಕಿಅಂಶಗಳು ಮಾತ್ರ ಸೋಜಿಗ ತರದಿರದು.

ಇದಕ್ಕೆ ಕಾರಣವೂ ಇಲ್ಲದಿಲ್ಲ. ಏಕೆಂದರೆ ಹಿಂದೆಲ್ಲಾ ವರ್ಷಕ್ಕೆ ಒಂದೆರಡು ಸಲ ಮಾತ್ರ ರೈತರ ಕೃಷಿ ಭೂಮಿಯತ್ತ ಭೇಟಿ ಕೊಡುತ್ತಿದ್ದ ಆನೆಗಳು ಈಗ ಪ್ರತಿ ದಿನ ಬರುವ ನೆಂಟರ ಹಾಗೆ ಬಂದು ಕೊಳ್ಳೆ ಹೊಡೆಯುತ್ತಿವೆ. ಅದೂ ಕೂಡಾ ಸಂಖ್ಯೆಯಲ್ಲಿ ಒಂದೆರಡಲ್ಲ. ಹಿಂಡು ಹಿಂಡಾಗಿ ಬೇರೆ ಬೇರೆ ಗ್ರೂಪ್ ಗಳನ್ನು ಕಟ್ಟಿಕೊಂಡು ಕೃಷಿ ಬೆಳೆಗಳನ್ನು ಲಗಾಡಿ ತೆಗೆಯುತ್ತಿವೆ. ಹಾಗಿದ್ದರೆ ಆನೆಗಳ ಸಂಖ್ಯೆ ನಶಿಸಿವೆ ಎಂಬ ವಾದವನ್ನು ಹೇಗೆ ಒಪ್ಪಿಕೊಳ್ಳೋಣ?
ಇನ್ನು ಮಂಗಗಳ ವಿಷಯಕ್ಕೆ ಬಂದರೂ ನಾವೇ ಮಂಗಗಳಾಗುತ್ತೇವೆ ಎಂಬುದೂ ಸುಳ್ಳಲ್ಲ. ಹಿಂದಿನ ಕಾಲದಲ್ಲಿ ಮಂಗಗಳ ಹಾರಾಟ, ಓಡಾಟ ಕಾಡುಗಳಿಗೆ ಮಾತ್ರ ಸೀಮಿತವಾಗುತ್ತಿದ್ದವು. ಆದರೀಗ ಮಂಗಗಳು ಕಾಡಲ್ಲಿ ಇರುವುದೇ ಅಪರೂಪ ಎಂಬಂತಾಗಿದೆ. ತಮ್ಮ ಪಟಲಾಂ ಕಟ್ಟಿಕೊಂಡು ನಾಡಿಗಿಳಿಯುವ ಕೋತಿಗಳು ತೋಟಕ್ಕೆ ಹಾರಿ ಬೊಂಡ ಕುಡಿದು ದಾಹ ತಣಿಸಿಕೊಳ್ಳುತ್ತಿವೆ. ಬಾಳೆಕಾಯಿ ತಿಂದು ಹಸಿವು ನೀಗಿಸುತ್ತಿವೆ. ಪ್ರಾಣ ರಕ್ಷಣೆಗೆಂದು ಹಿಂದೆ ನಾಡಕೋವಿ ಹಿಡಿಯಲು ಅನುಮತಿ ನೀಡಲಾಗುತ್ತಿದ್ದರೂ ಈಗ ಅದನ್ನು ನವೀಕರಿಸಲು ಇರುವ ಕ್ಲಿಷ್ಟ ನಿಯಮಗಳು, ಹೊಸ ಕೋವಿಗಳಿಗೆ ಇಲ್ಲದ ಅನುಮತಿ ಈಗ ಈ ಮಂಗಗಳಿಗೆ ಹೇಗೆ ತಿಳಿಯಿತೋ ಗೊತ್ತಿಲ್ಲ. ಏಕೆಂದರೆ ಏರ್ ಗನ್ ಹೆಗಲಿಗೇರಿಸಿ ಬೆದರಿಸಿದರೂ ಮಂಗಗಳು ಕ್ಯಾರೇ ಮಾಡುತ್ತಿಲ್ಲ. ಹೆಂಗಸರು ಓಡಿಸಲು ಹೋದರಂತೂ ‘ನಿಮ್ಮಂತವರನ್ನು ಎಷ್ಟೋ ನೋಡಿದ್ದೇವೆ’ ಎಂಬಂತೆ ಪೋಸು ಕೊಡುತ್ತವೆ. ಹಾಗಿದ್ದರೆ ಕೋತಿಗಳ ಸಂಖ್ಯೆ ಕ್ಷೀಣಿಸಿವೆ ಎಂಬ ಅಂಕಿಅಂಶಗಳನ್ನು ಒಪ್ಪಿಕೊಳ್ಳುವುದಾದರೂ ಹೇಗೆ?
ಇನ್ನು ರಾಷ್ಟ್ರ ಪಕ್ಷಿ ನವಿಲುಗಳ ನರ್ತನದ ಕಥೆಯೇ ಬೇರೆ. ಹಿಂದೆಲ್ಲಾ ನವಿಲುಗಳು ಕಾಣಸಿಗುವುದೇ ಅಪರೂಪ ಎಂಬಂತಿತ್ತು. ಆದರೀಗ ಕಾಲ ಬದಲಾಗಿದೆ.ಹುಳು ಹುಪ್ಪಟೆಗಳನ್ನು ತಿಂದು ಜೀರ್ಣಿಸುವ ನವಿಲುಗಳು ಮನೆ ಖರ್ಚಿಗಿರಲೆಂದು ಅಂಗಳದಲ್ಲಿ ತರಕಾರಿ ಬೆಳೆದರೆ ಅವೆಲ್ಲವನ್ನೂ ಸ್ವಾಹಾ ಮಾಡುತ್ತಿವೆ.ಕಾಣಲು ಸಿಗುವುದೇ ಅಪರೂಪ ಎಂಬಂತಿದ್ದ ನವಿಲುಗಳು ಹಿಂಡುಹಿಂಡಾಗಿ ಗೋಚರಿಸಿತ್ತಿದ್ದರೆ ಈ ರಾಷ್ಟ್ರ ಪಕ್ಷಿಗಳು ಅಳಿವಿನಂಚಿನಲ್ಲಿವೆ ಎಂಬ ವಾದವನ್ನು ಸತ್ಯವೆಂದು ತಿಳಿಯುವುದು ಹೇಗೆ?
ಯಾಕೋ ಮನಸ್ಸು ಮಾತ್ರ ಕಾಣದಂತೆ ಮಾಯವಾದ ಗೋಮಾಳಗಳತ್ತಲೇ ಮತ್ತೆ ಮತ್ತೆ ಸುತ್ತುಹೊಡೆಯುತ್ತಿದೆ. ಏಕೆಂದರೆ ಈ ಗೋಮಾಳದ ಜಾಗವನ್ನು ಗುಳುಂ ಮಾಡಿ ಉಪಯೋಗಕ್ಕೆ ಬಾರದ ಅಕೇಶಿಯ ಮರಗಳನ್ನು ಬೆಳೆಯುವ ಬದಲು ಪ್ರಾಣಿಗಳ ಹೊಟ್ಟೆ ತಣಿಸಲು ಬೇಕಾಗುವ ಹಣ್ಣಿನ ಮರಗಳನ್ನು ನೆಟ್ಟಿದ್ದರೆ ಪರಿಸ್ಥಿತಿ ಖಂಡಿತವಾಗಿಯೂ ಇಷ್ಟೊಂದು ವಿಕೋಪಕ್ಕೆ ಹೋಗುತ್ತಿರಲಿಲ್ಲ. ಮಾನವ-ವನ್ಯಮೃಗಗಳ ಸಂಘರ್ಷಕ್ಕೆ ಕಾರಣವಾಗುವ ಅಂಶಗಳನ್ನು ಮನಗಂಡು ಅರಣ್ಯ ಇಲಾಖೆಯ ಜಾಗವನ್ನು ರೈತರ ಜನವಸತಿ ಪ್ರದೇಶದಿಂದ ಪ್ರತ್ಯೇಕಿಸುವ ನಿಟ್ಟಿನಲ್ಲಿ ಸೋಲಾರ್ ಬೇಲಿಯ ನಿರ್ಮಾಣದ ಹೊಣೆಗಾರಿಕೆಯನ್ನು ಸರಕಾರವೇ ತನ್ನ ಸ್ವಂತ ಖರ್ಚಿನಲ್ಲಿ ನಿರ್ಮಿಸುವಂತಾದರೆ ಖಂಡಿತವಾಗಿಯೂ ರೈತರ ಆತಂಕ ತುಸುವಾದರೂ ದೂರವಾಗುತ್ತಿತ್ತು.

(ಗಣೇಶ್ ಮಾವಂಜಿ ಹಿರಿಯ ಪತ್ರಕರ್ತರು ಅಂಕಣಕಾರರು)












