*ಗಣೇಶ್ ಮಾವಂಜಿ.
ಕಳೆದ ಬೇಸಿಗೆಯಲ್ಲೇ ಪ್ರವೇಶ ಪಡೆದು ಅಬ್ಬರಿಸಿದ ಮಳೆರಾಯ ಇದೀಗ ತುಸು ಶಾಂತನಾಗಿದ್ದಾನೆ. ನಾಗರ ಪಂಚಮಿಯೊಂದಿಗೆ ಆರಂಭಗೊಂಡ ಹಿಂದೂ ಧಾರ್ಮಿಕ ಹಬ್ಬಗಳು ದೀಪಾವಳಿ ಆಚರಣೆಯೊಂದಿಗೆ ಕೊನೆಗೊಂಡಿದೆ ಕೂಡಾ. ಇನ್ನೇನಿದ್ದರೂ ಮದುವೆ, ಮುಂಜಿ, ನಿಶ್ಚಿತಾರ್ಥ, ಗೃಹಪ್ರವೇಶ ಮೊದಲಾದ ಹತ್ತು ಹಲವು ಕಾರ್ಯಗಳ ಆಯೋಜನೆ. ಇಂತಹ ಕಾರ್ಯಕ್ರಮಗಳ ಆಯೋಜನೆ ಮಾಡುವುದು ಅಷ್ಟು ಸುಲಭದ ಮಾತಲ್ಲ.ಅದ್ಧೂರಿಯಾಗಿ ಮಾಡಬೇಕೆಂದರೆ ಜೇಬು ತುಂಬಾ ಕಾಸಿರಬೇಕು. ಹಾಗೆಂದು ಕಾರ್ಯಕ್ರಮದ ಯಶಸ್ಸಿಗೆ ಹಣವೊಂದೇ
ಸಾಲದು.ಖರ್ಚು ಮಾಡಿವುದಕ್ಕಿಂತಲೂ ಮಿಗಿಲಾಗಿ ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸುವುದು ಕೂಡಾ ಅಷ್ಟೇ ಮುಖ್ಯ.ಎಷ್ಟೇ ಜಾಗರೂಕತೆ ವಹಿಸಿದರೂ ಏನಾದರೊಂದು ಎಡವಟ್ಟು ಆಗಿ ಕಾರ್ಯಕ್ರಮಕ್ಕೆ ಬಂದವರು ಅಸಮಧಾನದಿಂದ ಹಿಂತಿರುಗುವಂತಾಗುತ್ತದೆ.
ವಿಷಯ ಅದಲ್ಲ.ನಾನು ಹೇಳಲು ಹೊರಟಿರುವುದು ಇಂತಹ ಕಾರ್ಯಕ್ರಮಗಳ ಆಯೋಜನೆಯ ಸಂದರ್ಭದಲ್ಲಿ ಅತಿಥಿಗಳನ್ನು ಆಹ್ವಾನಿಸುವ ಕುರಿತಾಗಿ. ಹಿಂದಿನ ಕಾಲದಲ್ಲಾದರೆ ಎಲ್ಲರನ್ನೂ ಆಹ್ವಾನಿಸಲು ಅಡಿಕೆ, ವೀಳ್ಯದೆಲೆ ಬೇಕೇ ಬೇಕಾಗಿತ್ತು. ಆಮಂತ್ರಣ ಪತ್ರಿಕೆ ಇದ್ದರೂ ಅದನ್ನು ವೀಳ್ಯದೆಲೆ ಅಡಿಕೆಯ ಜೊತೆಗಿರಿಸಿ ಇಂತಹ ದಿನದಂದು ಇಂತಹ ಸುಮೂಹರ್ತದಲ್ಲಿ ಈ ಕಾರ್ಯಕ್ರಮ ಇದೆ. ನೀವೆಲ್ಲರೂ ಕುಟುಂಬ ಸಮೇತರಾಗಿ ಬಂದೇ ಬರಬೇಕು ಎಂದು ಆಮಂತ್ರಿಸಲಾಗುತ್ತಿತ್ತು. ಅದರಲ್ಲೂ ಮನೆಯ ಹಿರಿಯರಲ್ಲಿ ಆಮಂತ್ರಣ ಪತ್ರಿಕೆ ಕೈಗಿರಿಸಿ ಕಾಲು ಹಿಡಿದು ಆಶಿರ್ವಾದ ಬೇಡಿ ಬಳಿಕ ಮನೆಯ ಪ್ರತಿಯೊಬ್ಬರಲ್ಲೂ ಪ್ರತ್ಯೇಕವಾಗಿ ತಿಳಿಸಿ ಕಾರ್ಯಕ್ರಮಕ್ಕೆ ಬರಬೇಕೆಂದು ತಿಳಿಸಲಾಗುತ್ತಿತ್ತು.
ಹೀಗೆ ಆಮಂತ್ರಣ ಪತ್ರಿಕೆ ನೀಡುವಾಗಲೂ ದಾರಿ ಮಧ್ಯದಲ್ಲಿ ಕೊಡುವ ಹಾಗಿರಲಿಲ್ಲ.ಮನೆಗೆ ಹೋಗಿಯೇ ಎಲ್ಲರ ಸಮ್ಮುಖದಲ್ಲಿ ಕಾಗದ ನೀಡಿ ಎಲ್ಲರನ್ನೂ ಆಹ್ವಾನಿಸಲಾಗುತ್ತಿತ್ತು. ಒಂದು ವೇಳೆ ಹಿರಿಯರಿಗೆ ದಾರಿ ಮಧ್ಯದಲ್ಲಿ ಆಮಂತ್ರಣ ಪತ್ರಿಕೆ ನೀಡಿದರೆ, ಅಥವಾ ಮನೆಗೆ ಬಂದು ಆಹ್ವಾನಿಸಿದರೂ ಪಾದ ಮುಟ್ಟಿ ನಮಸ್ಕರಿಸದಿದ್ದರೆ, ಅನ್ಯಮನಸ್ಕರಾಗಿ ಶಿಷ್ಟಾಚಾರ ಉಲ್ಲಂಘಿಸಿದರೆ ಅಂತಹ ಕಾರ್ಯಕ್ರಮಕ್ಕೆ ಗೈರಾಗುತ್ತಿದ್ದುದೇ ಹೆಚ್ಚು. ಹೋಗುವ ಮನಸ್ಸು ಮನೆಯ ಹಿರಿಯರು ಹೋಗದೆ ತಮ್ಮ ಅಸಮಾಧಾನ ತೋರ್ಪಡಿಸಲು ಚಿಕ್ಕ ಮಕ್ಕಳನ್ನು ಮಾತ್ರ ಕಳುಹಿಸುತ್ತಿದ್ದರು.

ಆದರೆ ಈಗ ಕಾಲ ಬದಲಾಗಿದೆ. ಆಮಂತ್ರಣ ಪತ್ರಿಕೆ ನೀಡುವಾಗ ವೀಳ್ಯದೆಲೆ, ಅಡಿಕೆ ಇರಿಸುವ ಕಾರ್ಯಕ್ರಮ ಬಹುತೇಕ ನಶಿಸಿ ಹೋಗಿದೆ. ಕಾಲು ಹಿಡಿದು ಆಶೀರ್ವಾದ ಬೇಡುವ ಸಂಪ್ರದಾಯವಂತೂ ಬಹುದೂರ ಸಾಗಿ ಹೋಗಿದೆ. ಈಗ ಏನಿದ್ದರೂ ವಾಟ್ಸ್ಯಾಪ್ ಯುಗ. ಮನೆಗೆ ಹೋಗಿ ಆಮಂತ್ರಿಸುವ ಬದಲಾಗಿ ಕೈಯಲ್ಲಿರುವ ಮೊಬೈಲ್ ಗೆ ಆಮಂತ್ರಣ ಪತ್ರಿಕೆ ಕಳುಹಿಸಲಾಗುತ್ತದೆ. ಅರ್ಥವಾಗದ ಇಂಗ್ಲಿಷ್ ಭಾಷೆಯಲ್ಲೋ ಅಥವಾ ಅರ್ಥವಾಗುವ ಭಾಷೆಯಲ್ಲೇ ಬರೆದಿದ್ದರೂ ಅದರಲ್ಲಿ ದುರ್ಬೀನು ಹಾಕಿ ಹುಡುಕಿದರೂ ಆಮಂತ್ರಣ ಪತ್ರಿಕೆ ನೀಡಿಕೆಯ ಆ ಹಿಂದಿನ ಪ್ರೀತಿ ಕಾಣಸಿಗದು.
ಯಾರೋ ಡಿಸೈನ್ ಮಾಡಿದ ಆಮಂತ್ರಣ ಪತ್ರಿಕೆಯನ್ನು ಮೊಬೈಲ್ ಗೆ ಫಾರ್ವರ್ಡ್ ಮಾಡುವಲ್ಲಿಗೆ ಅತಿಥಿಗಳನ್ನು ಆಹ್ವಾನಿಸುವ ಕೆಲಸ ಮುಗಿದು ಹೋಗುತ್ತದೆ. ತಂತ್ರಜ್ಞಾನದ ಈ ಯುಗದಲ್ಲಿ ಹಾಗೂ ಯಾವುದಕ್ಕೂ ಪುರ್ಸೋತ್ತೇ ಸಿಗದ ಈ ಕಾಲದಲ್ಲಿ ಹಿಂದಿನಂತೆ ಮನೆಗೆ ಹೋಗಿ ಆಮಂತ್ರಣ ಪತ್ರಿಕೆ ನೀಡುವುದನ್ನು ನಿರೀಕ್ಷಿಸುವುದೂ ಸರಿಯಲ್ಲ. ಆದರೆ ಆಮಂತ್ರಣ ಪತ್ರಿಕೆ ಮೊಬೈಲ್ಗೆ ದಾಟಿಸಿದ ಬಳಿಕ ಕಾಟಾಚಾರಕ್ಕಾದರೂ ಕರೆ ಮಾಡುವ ವ್ಯವಧಾನ ಇರದಿರುವುದು ತಪ್ಪು. ಕರೆ ಮಾಡಲು ಸಮಯ ಸಿಗದಿದ್ದರೆ ಸ್ವಂತವಾಗಿ ‘ಬನ್ನಿ’ ಎಂದು ಎರಡಕ್ಷರ ಟೈಪಿಸುವಷ್ಟೂ ಪುರ್ಸೊತು ಸಿಗದಿದ್ದರೆ ಅಂತಹ ಕಾರ್ಯಕ್ರಮಕ್ಕೆ ಹೋಗಲು ಮನಸ್ಸಾದರೂ ಹೇಗೆ ಬಂದೀತು?

ಯಾರು ಹೋದರೂ, ಯಾರೂ ಹೋಗದಿದ್ದರೂ ಇದ್ದ ಒಂದಷ್ಟು ಜನರ ಸಮ್ಮುಖದಲ್ಲಿ ನಿಗದಿತ ಕಾರ್ಯಕ್ರಮ ನಡೆದೇ ತೀರುತ್ತದೆ. ಅದರಲ್ಲಿ ಯಾವುದೇ ಬದಲಾವಣೆ ಆಗದು. ಆದರೆ ಆಮಂತ್ರಣ ಪತ್ರಿಕೆ ನೀಡುವಾಗ ಹಿಂದಿನ ಆ ಶಿಷ್ಟಾಚಾರ ಪಾಲಿಸದಿದ್ದರೆ ಸಂಸ್ಕೃತಿ, ಸಂಪ್ರದಾಯಕ್ಕೆ ಬೆಲೆಯೇ ಇಲ್ಲದಂತಾಗುತ್ತದೆ. ಅವಿಭಕ್ತ ಕುಟುಂಬ ಪದ್ಧತಿ ಇದ್ದಾಗ ಮನೆ ತುಂಬಾ ಜನರಿರುತ್ತಿದ್ದರು. ಕಾರ್ಯಕ್ರಮಕ್ಕೆ ಆಹ್ವಾನಿಸಲು ಒಬ್ಬರಲ್ಲದಿದ್ದರೆ ಮತ್ತೊಬ್ಬರು ಲಭ್ಯರಿರುತ್ತಿದ್ದರು. ಆದರೆ ಈಗಿನ ಪರಿಸ್ಥಿತಿ ಹಾಗಲ್ಲ ಎಂಬುದನ್ನು ಒಪ್ಪಲೇ ಬೇಕಾಗುತ್ತದೆ. ಆದರೂ ಮೊಬೈಲ್ ಗೆ ಆಹ್ವಾನ ಪತ್ರಿಕೆ ಕಳುಹಿಸಿದ ಬಳಿಕ ಕಾಟಾಚಾರಕ್ಕಾದರೂ ಕರೆ ಮಾಡಿ ಆಹ್ವಾನಿಸುವುದು ಅತ್ಯಂತ ಅವಶ್ಯಕ.
ಕಾರ್ಯಕ್ರಮದ ದಿನ ಬಂದವರಲ್ಲಿ ಮಾತನಾಡಿಸುವುದರಲ್ಲೂ ಕಾರ್ಯಕ್ರಮದ ಯಶಸ್ಸು ಅಡಗಿರುತ್ತದೆ. ಊರಿಡೀ ಆಹ್ವಾನ ಪತ್ರಿಕೆ ಹಂಚಿ ಕಾರ್ಯಕ್ರಮಕ್ಕೆ ಹೋದಾಗ ಮನೆಯವರು ಮಾತನಾಡಿಸದಿದ್ದರೆ, ಕಂಡೂ ಕಾಣದಂತೆ ನಿರ್ಲಕ್ಷ್ಯ ಧೋರಣೆ ತಳೆದರೆ ಬಂದವರು ಆಡಿಕೊಂಡು ಹೋಗುವ ಹಾಗಾದೀತು. ಇಲ್ಲೂ ಎಚ್ಚರಿಕೆ ವಹಿಸುವುದು ಅತ್ಯಂತ ಅವಶ್ಯಕ. ಸಾವಿರಾರು ಜನರು ಸೇರಿದಾಗ ಎಲ್ಲರನ್ನೂ ಮಾತನಾಡಿಸುವುದು ಕಷ್ಟಸಾಧ್ಯವೆಂಬ ಅರಿವಿದ್ದವರು ಅಸಮಾಧಾನಗೊಳ್ಳದೆ ಹೊಟ್ಟೆತುಂಬಿಸಿ ತೆರಳಬಹುದು. ಆದರೆ ಮಾತಾಡಿಸದಿದ್ದುದ್ದನ್ನೇ ದೊಡ್ಡದು ಮಾಡಿ ರಂಪಾಟ ಮಾಡುವವರೂ ಕೆಲವರು ಇರುತ್ತಾರೆ. ಇಂತಹ ಅಚಾತುರ್ಯಗಳನ್ನು ತಪ್ಪಿಸಲು ಆಮಂತ್ರಣ ಪತ್ರಿಕೆ ನೀಡುವುದನ್ನೇ ಕ್ರಮದಂತೆ ನೆರವೇರಿಸಿ ‘ಕಾರ್ಯಕ್ರಮದ ದಿನ ಮಾತನಾಡಿಸಲು ಸಾಧ್ಯವಾಗದಿದ್ದರೆ ಅನ್ಯಥಾ ಭಾವಿಸಬೇಡಿ’ ಎಂದು ಹೇಳಿ ಬಿಟ್ಟರೆ ನಿರೀಕ್ಷಣಾ ಜಾಮೀನು ಪಡೆದಷ್ಟು ಖುಷಿಪಡಬಹುದು.
ಬದಲಾದ ಕಾಲಘಟ್ಟದಲ್ಲಿ ಹಿಂದಿನ ಕಾಲದ ಎಲ್ಲಾ ರೀತಿ, ರಿವಾಜುಗಳನ್ನು ಈಗ ನಿರೀಕ್ಷಿಸುವುದು ಸರಿಯಲ್ಲ. ಮೊನ್ನೆಯಂತೆ ನಿನ್ನೆ ಇರಲಿಲ್ಲ. ನಿನ್ನೆಯಂತೆ ಇಂದಿಲ್ಲ. ಇಂದಿನಂತೆ ನಾಳೆ ಇರಲು ಸಾಧ್ಯವೇ ಇಲ್ಲ ಎಂಬ ಸತ್ಯವನ್ನು ಅರಿಯದಿದ್ದರೆ ನಾವು ಓಬಿರಾಯನ ಕಾಲದಲ್ಲಿದ್ದೇವೆ ಎಂದೇ ತಿಳಿಯಬೇಕಾಗುತ್ತದೆ. ಹಾಗಿದ್ದರೂ ಕಾಲ ಬದಲಾಗಿದೆ ಎಂದುಕೊಂಡು ಹಿರಿಯರಿಗೆ ಗೌರವ ಕೊಡದೆ, ಹೆತ್ತವರನ್ನು ಆದರಿಸದೆ, ಅಶಕ್ತರಲ್ಲಿ ಕರುಣೆ ತೋರದೆ, ಮುಖ ನೋಡಿದಾಗ ನಗಲೂ ಹಿಂದೇಟು ಹಾಕಿದರೆ ಶ್ರೇಷ್ಠ ಮಾನವ ಜನ್ಮಕ್ಕೆ ಅರ್ಥ ಇರದಂತಾಗುತ್ತದೆ.

(ಗಣೇಶ್ ಮಾವಂಜಿ ಹಿರಿಯ ಪತ್ರಕರ್ತರು ಹಾಗು ಅಂಕಣಕಾರರು)












