*ಗಣೇಶ್ ಮಾವಂಜಿ.
ಅದೊಂದು ಗ್ಯಾರೇಜ್. ಅಲ್ಲಿ ಅವಯವವಗಳನ್ನು ಕಳಚಿಕೊಂಡ ಹತ್ತಾರು ವಾಹನಗಳು ಕಾಣುತ್ತಿದ್ದವು. ಒಂದು ಬೈಕಿನ ಹ್ಯಾಂಡಲ್ ಹಿಂದಕ್ಕೆ ಜಜ್ಜಿಕೊಂಡಂತೆ ಕಂಡುಬರುತ್ತಿತ್ತು.ರಾತ್ರಿಯಲ್ಲಿ ಸದಾ ದಾರಿ ತೋರಿ ಮುನ್ನಡೆಸುತ್ತಿದ್ದ ಹೆಡ್ಲೈಟ್ ಪುಡಿಪುಡಿಯಾಗಿತ್ತು. ಬಹುಶಃ ಮತ್ತೊಂದು ವಾಹನ ಎದುರಿನಿಂದ ಗುದ್ದಿ ಹೋದ ಪರಿಣಾಮ ಇರಬಹುದು.
ಮತ್ತೊಂದು ಬೈಕನ್ನು ಗಮನಿಸಿದಾಗ ಹಿಂದಿನ ಇಂಡಿಕೇಟರ್ಗಳಲ್ಲಿ ಒಂದು ತುಂಡಾಗಿ ಜೋತು ಬಿದ್ದುಕೊಂಡಿತ್ತು. ಮಡ್ಗಾರ್ಡ್ ಕೂಡಾ
ಆಕಾರ ಕಳೆದುಕೊಂಡು ಚಿಕ್ಕಮಕ್ಕಳು ಕೋಪ ಬಂದಾಗ ಮುಸುಡಿ ತಿರುಗಿಸಿಕೊಂಡಂತೆ ಭಾಸವಾಗುತ್ತಿತ್ತು. ಬಹುಶಃ ಅವಸರದಲ್ಲಿ ಹೋಗುತ್ತಿದ್ದ ಯಾವುದೋ ವಾಹನ ಹಿಂದಿನಿಂದ ಡಿಕ್ಕಿ ಹೊಡೆದು ಮುಂದಕ್ಕೆ ಹೋಗಿರಬೇಕು. ಗ್ಯಾರೇಜ್ ಒಳಗಿದ್ದ ಮೆಕ್ಯಾನಿಕ್ ಗಳು ತನ್ಮಯತೆಯಿಂದ ಕೆಲಸ ಮಾಡುತ್ತಿದ್ದರು. ಅವರೆಲ್ಲರೂ ವಾಹನಗಳ ಹೊಟ್ಟೆ ಹಾಗೂ ಇನ್ನುಳಿದ ಅವಯವಗಳನ್ನು ಬಗೆದು ಮರುಜೋಡಿಸುವ ಕಾಯಕದಲ್ಲಿ ತೊಡಗಿದ್ದರು.
ಅದರೆ ಆಶ್ಚರ್ಯಕ್ಕೆ ಕಾರಣವಾಗಿದ್ದು ಮಾತ್ರ ತೊಳೆದು ಹೊಳೆಯುವಂತಿದ್ದ ಬೈಕೊಂದು ಆ ಗ್ಯಾರೇಜ್ ನಲ್ಲಿ ಕಾಣಸಿಕ್ಕಿದ್ದು.! ಮಾತ್ರವಲ್ಲ., ಒಂದೆರಡು ದಿನಗಳ ಹಿಂದಷ್ಟೇ ಬೈಕಿಗೆ ವಾಹನ ಪೂಜೆ ಸಂದಾಯವಾಗಿದೆ ಎಂಬುದು ಆ ಬೈಕಿಗೆ ಹಾಕಲಾದ ಮುದುಡಿದ ಹೂ ಮಾಲೆಯಿಂದ ಗೊತ್ತಾಗುತ್ತಿತ್ತು. ನಿಂಬೆಹಣ್ಣಿನೊಂದಿಗೆ ಹಸಿಮೆಣಸನ್ನು ಚುಚ್ಚಿಸಿಕೊಂಡ ಕಿರು ತಂತಿಯೊಂದು ಬೈಕಿಗೆ ಜೋತುಬಿದ್ದಿತ್ತು. ಸಾಲದ್ದಕ್ಕೆ ಬೈಕಿನ ಸುತ್ತಲೂ ಶ್ರೀಗಂಧ, ಕುಂಕುಮ ಮಿಶ್ರಣಗಳ ನಾಮ ಬಳಿಯಲಾಗಿತ್ತು. ‘ಛೇ…ಈ ಬೈಕಿಗೆ ಏನಾಯ್ತಪ್ಪಾ’ ಎಂದು ಆಶ್ಚರ್ಯಗೊಂಡು ಮೆಕ್ಯಾನಿಕ್ ನೊಂದಿಗೆ ವಿಚಾರಿಸಿದರೆ ‘ಆಯಿಲ್ ಇಲ್ಲದೆ ಅದರ ಇಂಜಿನ್ ಸೀಝ್ ಆಗಿದೆ. ಅದರ ಇಂಜಿನ್ ಬಿಚ್ಚಬೇಕಷ್ಟೇ’ ಎಂದುಬಿಟ್ಟ.!
ಈ ಜನರ ನಂಬಿಕೆ ಎಷ್ಟಿದೆ ಎಂದರೆ ಎಲ್ಲವನ್ನೂ ಆ ದೇವರೇ ನೋಡಿಕೊಳ್ಳುತ್ತಾನೆ ಎಂಬ ಬಲವಾದ ನಂಬಿಕೆ. ತನ್ನಿಂದ ಕರ್ತವ್ಯಲೋಪಗೊಂಡರೆ ಸರ್ವಶಕ್ತನಾದ ಆ ದೇವರಿಗೂ ಏನೂ ಮಾಡಲು ಸಾಧ್ಯವಾಗುವುದಿಲ್ಲ ಎಂಬ ಕನಿಷ್ಠ ಜ್ಞಾನ ಇಲ್ಲದಿರುವುದೇ ಈ ರೀತಿಯ ವೈರುಧ್ಯಗಳಿಗೆ ಕಾರಣ.
ದೇವರ ಮೇಲೆ ನಂಬಿಕೆ ಇರಬೇಕು ನಿಜ. ಅವ್ಯಕ್ತ ಶಕ್ತಿಯೊಂದು ನಮ್ಮನ್ನೆಲ್ಲಾ ಪೊರೆಯುತ್ತದೆ ಎಂಬ ದೇವರ ಮೇಲಿನ ಭಯ ಕೂಡಾ ತಪ್ಪಲ್ಲ. ಆದರೆ ಮಾಡಬೇಕಾದ ಕರ್ತವ್ಯಗಳಲ್ಲಿ ಕುಂದುಂಟಾದರೆ ಆ ದೇವರು ಕೂಡಾ ನಮ್ಮನ್ನು ರಕ್ಷಿಸಲಾರ ಎಂಬುದನ್ನು ನಾವು ಅರಿತುಕೊಳ್ಳಬೇಕು. ಈ ಮೇಲಿನ ಘಟನೆಯನ್ನೇ ಅವಲೋಕಿಸದರೆ ಅದು ಅರ್ಥವಾಗಬಹುದು. ವಾಹನಕ್ಕೆ ಆಯುಧ ಪೂಜೆ ಮಾಡುವ ಮುನ್ನ ವಾಹನದ ಎಲ್ಲಾ ಅವಯವಗಳೂ ಸರಿಯಾಗಿವೆಯೇ ಎಂಬುದನ್ನು ನುರಿತ ಮೆಕ್ಯಾನಿಕ್ಗೆ ತೋರಿಸಿ ಖಚಿತಪಡಿಸಿಕೊಳ್ಳಬೇಕು. ವಾಹನದ ಇಂಜಿನ್ ಆಯಿಲ್ ಆರಿಹೋದರೆ ಆ ವಾಹನಕ್ಕೂ ಬೆಚ್ಚ ಆಗದಿರುತ್ತದೆಯೇ? ಹಾಗಾಗಿ ನಿಯಮಿತವಾಗಿ ಇಂಜಿನ್ ಆಯಿಲ್ ಪರಿಶೀಲಿಸುತ್ತಿರಬೇಕು. ದೀಪದ ಎಣ್ಣೆ ಖಾಲಿ ಆದರೆ ದೇವರ ಮುಂದಿದ್ದ ನಂದಾದೀಪವಾದರೂ ಆರಲೇಬೇಕು. ಹಾಗೆಯೇ, ವಾಹನಗಳ ಇಂಜಿನ್ ಆಯಿಲ್ ಖಾಲಿ ಆದರೆ ಇಂಜಿನ್ ಬಿಸಿ ಆಗಿ ಸೀಝ್ ಆಗಿ ವಾಹನ ಜಪ್ಪೆಂದರೂ ಮುಂದೆ ಹೋಗದು. ಎಷ್ಟೇ ಅದ್ಧೂರಿ, ಆಡಂಬರದಿಂದ ಆ ವಾಹನಕ್ಕೆ ಆಯುಧ ಪೂಜೆ ನೆರವೇರಿಸಿದ್ದರೂ ಅದು ಪ್ರಯೋಜನಕ್ಕೆ ಬಾರದು.
ನವರಾತ್ರಿಯ ಈ ಶುಭ ಸಂದರ್ಭದಲ್ಲಿ ಆಯುಧಪೂಜೆ ಮಹತ್ವ ಪಡೆದುಕೊಳ್ಳುವುದಲ್ಲದೆ ಎಲ್ಲೆಡೆ ವಾಹನ ಪೂಜೆ ಮುನ್ನೆಲೆಗೆ ಬರುತ್ತದೆ. ಹೆಚ್ಚಿನವರ ವಾಹನಗಳು ನೀರು ಕಂಡು ಶುಚಿಗೊಳ್ಳುವುದು ಇದೇ ಸಂದರ್ಭದಲ್ಲಿ. ಅಲ್ಲಿಯವರೆಗೆ ಸ್ವಿಚ್ ಅದುಮಿಯೋ, ಕಿಕ್ ಹೊಡೆದೋ ಸ್ಟಾರ್ಟ್ ಮಾಡಿಸಿಕೊಳ್ಳುವ ವಾಹನಗಳು ಅವುಗಳ ಮಾಲಕರಿಂದ ಸ್ನಾನಗೊಂಡು ಶುಚೀರ್ಭೂತರಾಗುವುದು ವರ್ಷಕ್ಕೊಮ್ಮೆ ನಡೆಯುವ ಆಯುಧಪೂಜೆ, ವಾಹನಪೂಜೆಯ ದಿನ ಮಾತ್ರ!
ಸ್ನಾನಗೊಂಡು ಶುಚಿಗೊಂಡ ವಾಹನಗಳು ಮೇಲ್ನೋಟಕ್ಕೆ ಚಂದವಾಗಿ ಕಂಡರೂ ಒಳಗಿನ ಅವಯವಗಳಿಗೆ ಸೌಖ್ಯ ಇಲ್ಲದಿದ್ದರೆ ಅವುಗಳು ತಮ್ಮ ಮಾಲೀಕರನ್ನು ಖಂಡಿತವಾಗಿಯೂ ಗಮ್ಯ ತಲುಪಿಸಲು ಶಕ್ತವಾಗಲಾರವು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅದಕ್ಕಾಗಿಯೇ ವಾಹನಗಳಿಗೆ ಪೂಜೆ ಮಾಡುವ ಮುನ್ನ ಗ್ಯಾರೇಜ್ ಗೆ ಹೋಗಿ ಇಂಜಿನ್ ಸೇರಿದಂತೆ ವಾಹನಕ್ಕೆ ಬೇರೆ ಯಾವುದೇ ಸಮಸ್ಯೆ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಆ ಬಳಿಕವಷ್ಟೇ ಆ ವಾಹನದ ಪೂಜೆಯ ಕೈಂಕರ್ಯಕ್ಕೆ ಮುಂದಾಗಬೇಕು.
ಆಯುಧಗಳಿಗೆ ಪೂಜೆ ಸಂದಾಯವಾಗುವ ವೇಳೆಯಲ್ಲೂ ಈ ಮುನ್ನೆಚ್ಚರಿಕೆ ವಹಿಸುವುದು ಅನಿವಾರ್ಯ. ಹೊಟ್ಟೆಹೊರೆಯಲು ಸಹಕರಿಸುವ ಯಂತ್ರಗಳು, ವಾಹನಗಳು ಸುಸ್ಥಿತಿಯಲ್ಲಿವೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. ಯಂತ್ರ ಕೆಟ್ಟರೆ ಅಥವಾ ಚಲಾಯಿಸುವ ವಾಹನ ರಸ್ತೆ ಮಧ್ಯೆ ಕೈ ಕೊಟ್ಟರೆ ‘ಪೂಜೆ ಮಾಡಿಸಿಯೂ ಏಕೆ ಈ ರೀತಿ ಆಯಿತು? ಮಾಡಿಸಿದ ಪೂಜೆಯಲ್ಲಿ ಏನಾದರೂ ತೊಂದರೆ ಆಯಿತೇ? ಎಂದು ಶಂಕಿಸುವುದು ಮೂರ್ಖತನವಾದೀತು.
ವಾಹನ ಪೂಜೆ ಮಾಡಿಸಿದ ಬಳಿಕ ಒಡೆದ ತೆಂಗಿನಕಾಯಿ ಪೂರ್ವ ಪಶ್ಚಿಮವಾಗಿ ಬೀಳದೆ ಉತ್ತರ ದಕ್ಷಿಣವಾಗಿ ಬಿದ್ದುಬಿಟ್ಟರೆ ಕೆಲವರಿಗೆ ಆತಂಕವಾಗಿಬಿಡುತ್ತದೆ. ಅದೇ ಆತಂಕದಲ್ಲೇ ಮುಂದೆ ವಾಹನ ಚಲಾಯಿಸುವಾಗ ಅಚಾತುರ್ಯವಾಗಿ ಅವಘಡ ಸಂಭವಿಸಲೂ ಬಹುದು. ಯಾವುದೋ ಧಾರ್ಮಿಕ ಕಾರ್ಯಕ್ರಮವೋ ಅಥವಾ ಶುಭ ಕಾರ್ಯಕ್ರಮಕ್ಕೆ ಮೊದಲು ತೆಂಗಿನಕಾಯಿ ಒಡೆದಾಗ ಒಡೆದು ಬಿದ್ದ ಎರಡು ಹೋಳುಗಳು ನಿರ್ಧರಿತ ಶುಭ ಶಕುನದ ದಿಕ್ಕುಗಳಿಗೆ ವಿರುದ್ಧವಾಗಿ ಪವಡಿಸಿದಾಗ ಮನಸ್ಸಿನಲ್ಲಿ ಭವಿಷ್ಯದ ಕುರಿತು ಅಶುಭದ ಆತಂಕ ಮೂಡಬಹುದು.
ಅದೇ ಆತಂಕವೇ ಮನಸ್ಸಿನಾಳದಲ್ಲಿ ಘನೀಕರಣಗೊಂಡು ಮುಂದೆ ಯಾವ ನಿರ್ಧಾರ ಕೈಗೊಳ್ಳಲೂ ಭಯಗೊಳ್ಳುವಂತಾಗಬಹುದು. ಮುನ್ನುಗ್ಗುವ ಮನಸ್ಸಿನಲ್ಲಿ ಆತಂಕ ಮನೆಮಾಡಿ ಮುಂದೆ ಅದೇ ಬದುಕಿನಲ್ಲಿ ಸೋಲು ಕಾಣಲೂ ಕಾರಣವಾಗುತ್ತದೆ. ಅದರೆ, ಆ ಸೋಲಿಗೆ ಒಡೆದ ತೆಂಗಿನಕಾಯಿಯ ಹೋಳುಗಳು ಕಾರಣವಲ್ಲ. ಅದಕ್ಕೆ ಕಾರಣ ಸಂಭವಿಸಬಹುದಾದ ಅಶುಭದ ಆತಂಕ ಮನಸ್ಸಿನಾಳದಲ್ಲಿ ಹುದುಗಿರುವುದಾಗಿರುತ್ತದೆ.
ಯೋಚಿಸಿದ ಯೋಚನೆ, ತಳೆಯುವ ನಿರ್ಧಾರಗಳು ಆಯಾಯಾ ಸಮಯ, ಸಂದರ್ಭಗಳಿಗೆ ಅನುಗುಣವಾಗಿದ್ದರೆ ಕೈಗೊಂಡ ಕೆಲಸಗಳು ಸುಸೂತ್ರವಾಗಿ ನಡೆದೇ ನಡೆಯುತ್ತದೆ. ನ್ಯಾಯ ಮಾರ್ಗದಲ್ಲೇ ನಡೆಯುವ ಪ್ರಾಮಾಣಿಕತೆ ಇದ್ದರೆ, ಧರ್ಮಕ್ಕೆ ವಿರುದ್ಧವಾಗಿ ನಡೆಯುವ ದುರುಳತನ ಇಲ್ಲದಿದ್ದರೆ, ಗುರುಹಿರಿಯರ ಮನಸ್ಸಿಗೆ ನೋವಾಗದಂತೆ ಅವರ ಮಾರ್ಗದರ್ಶನದಲ್ಲೇ ಮುನ್ನಡೆಯುವ ವಿಧೇಯತೆ ಇದ್ದರೆ, ‘ನನ್ನದೇನಿಲ್ಲ.., ಎಲ್ಲದಕ್ಕೂ ಮೇಲೊಬ್ಬ ಕುಂತ ಅವನೇ ದಿಕ್ಕು’ ಎಂದು ಕಾಣದ ಅಗೋಚರ ಶಕ್ತಿಗೆ ನಮಿಸುವ ದೈನ್ಯತೆ ಇದ್ದರೆ, ಎಲ್ಲದಕ್ಕೂ ಮಿಗಿಲಾಗಿ ಬೆವರು ಸುರಿಸಿ ದುಡಿಯುವ ಹುಮ್ಮಸ್ಸಿದ್ದರೆ ಅದಕ್ಕಿಂತ ದೊಡ್ಡ ಪೂಜೆ ಬೇರೆ ಬೇಕಿಲ್ಲ.

(ಗಣೇಶ್ ಮಾವಂಜಿ ಹಿರಿಯ ಪತ್ರಕರ್ತರು ಅಂಕಣಕಾರರು)





