*ಗಣೇಶ್ ಮಾವಂಜಿ.
ಮೊನ್ನೆ ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಭಾರತ – ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿ ನಮ್ಮ ಭಾರತ ತಂಡ ಭರ್ಜರಿ ಏಳು ವಿಕೆಟ್ ಗಳ ವಿಜಯ ಸಾಧಿಸಿದ್ದು ನಿಮಗೆಲ್ಲಾ ಗೊತ್ತೇ ಇದೆ. ಪಂದ್ಯಾಟ ಆರಂಭಕ್ಕೂ ಮೊದಲು ಈ ಎರಡು ದೇಶಗಳು ಮೈದಾನಕ್ಕಿಳಿದು ಆಟ ಆಡುವುದಕ್ಕೆ ಕೆಲ ಜನರು ಆಕ್ಷೇಪ ಎತ್ತಿದ್ದರು. ಇದಕ್ಕೆ ಕಾರಣ ಪಹಲ್ಗಾಮ್ನಲ್ಲಿ ಭಾರತೀಯರ ಮೇಲೆ ಪಾಕಿಸ್ತಾನದ ಉಗ್ರರು ದಾಳಿ ನಡೆಸಿ ಅಮಾಯಕರನ್ನು ಬಲಿ ತೆಗೆದುಕೊಂಡ ಘಟನೆ ಆಗಿತ್ತು. ಈ ಉಗ್ರರಿಗೆ ಪಾಕಿಸ್ತಾನ ಬೆಂಬಲ ನೀಡುತ್ತಿರುವ ಕಾರಣ ಅಂತಹ ದೇಶದೊಂದಿಗೆ ಕ್ರಿಕೆಟ್ ಸೇರಿದಂತೆ
ಯಾವುದೇ ಸಂಬಂಧ ಇರಿಸಿಕೊಳ್ಳುವುದು ತರವಲ್ಲ ಎಂಬುದು ಈ ಎರಡು ದೇಶಗಳ ನಡುವೆ ನಡೆಯುವ ಕ್ರಿಕೆಟ್ ಪಂದ್ಯಾಟಕ್ಕೆ ವಿರೋಧ ವ್ಯಕ್ತಪಡಿಸುವವರ ಅಭಿಪ್ರಾಯವಾಗಿತ್ತು.
ಈ ಪ್ರಕರಣವನ್ನು ಗಮನಿಸುವಾಗ ಯಾಕೋ ನನಗೆ ಬಾಲ್ಯದ ದಿನಗಳು ನೆನಪಾಗುತ್ತವೆ. ‘ಅವ ಮೊನ್ನೆ ನನಗೆ ಹೊಡೆದಿದ್ದಾನೆ.. ಅವನಿದ್ರೆ ನಾನು ಆಟಕ್ಕಿಲ್ಲ’ ಎಂದು ಮುಖ ಊದಿಸಿಕೊಂಡು ದೂರ ಹೋಗಿ ಓರ್ವ ಬಾಲಕ ಕುಳಿತುಕೊಳ್ಳುತ್ತಾನೆ.ಆದರೆ ಆ ಹುಡುಗ ಇಲ್ಲದೆಯೂ ಉಳಿದ ಹುಡುಗರು ಆಟ ಆಡುತ್ತಾರೆ. ಕೋಪದಿಂದ ಕುಳಿತ ಹುಡುಗ ಉಳಿದವರ ಆಟ ನೋಡಿ ‘ತಾನು ಕೂಡಾ ಅವರ ಜೊತೆ ಆಡಿದ್ದರೆ ಅವರಿಗಿಂತ ಚಂದ ಆಡುತ್ತಿದ್ದೆ’ ಅಂದುಕೊಳ್ತಾನೆ. ಆದರೆ ಆಟದಿಂದ ಹೊರಗುಳಿಯುವ ನಿರ್ಧಾರ ಅವನದೇ ಆಗಿತ್ತು. ಅದಕ್ಕೆ ಕಾರಣ ಇನ್ನೊಬ್ಬ ಹುಡುಗ ತನಗೆ ಸುಖಾಸುಮ್ಮನೆ ಹೊಡೆದ ಎಂಬ ಕಾರಣವಾಗಿತ್ತು. ಇಂತಹ ಘಟನೆಗಳು ಹೆಚ್ಚಾಗಿ ನಡೆಯುವುದು ಪ್ರಾಥಮಿಕ ಶಾಲಾ ಕಲಿಕೆಯ ಹಂತದಲ್ಲಿ.

ಈ ಮೇಲಿನ ಮಕ್ಕಳಾಟದ ಘಟನೆಗೂ ಮೊನ್ನೆ ನಡೆದ ಇಂಡಿಯಾ- ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯಾಟದ ವಿರೋಧಕ್ಕೂ ಸಾಮ್ಯತೆ ಇದೆ. ಏಷ್ಯಾ ಕಪ್ ಕ್ರಿಕೆಟ್ ಟೂರ್ನಮೆಂಟ್ನಲ್ಲಿ ಮೊನ್ನೆ ಭಾರತ ಭಾಗವಹಿಸದೆ ಇದ್ದಿದ್ದರೂ ಪಂದ್ಯಾಟ ಖಂಡಿತವಾಗಿಯೂ ನಡೆಯುತ್ತಿತ್ತು. ಆದರೆ ಟೂರ್ನಮೆಂಟ್ನ ವಿಜೇತರಾಗಿ ಭಾರತವನ್ನು ಹೊರತುಪಡಿಸಿ ಇನ್ಯಾವುದೋ ತಂಡ ಇರುತ್ತಿತ್ತು. ಪಾಕಿಸ್ತಾನವನ್ನು ಬಗ್ಗುಬಡಿದ ಭಾರತ ತಂಡವೇ ಅಂತಿಮವಾಗಿ ಕಪ್ ಎತ್ತುತ್ತದೆ ಎಂದು ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಯಾದರೂ.. ಟೂರ್ನಮೆಂಟ್ನ ಫೈನಲ್ ಪಂದ್ಯಕ್ಕೆ ಯಾವ ತಂಡಗಳು ಎಂಟ್ರಿ ಪಡೆಯುತ್ತವೆ ಎಂಬುದು ಇನ್ನಷ್ಟೇ ನಿರ್ಧಾರವಾಗಬೇಕಾಗಿದೆ.
ಆದರೆ ಪಂದ್ಯಾಟದಲ್ಲಿ ಪಾಕಿಸ್ತಾನವನ್ನು ಸೋಲಿಸಿದ ಹೆಮ್ಮೆ ಭಾರತ ತಂಡಕ್ಕೆ ಮಾತ್ರವಲ್ಲದೆ ಭಾರತೀಯರೆಲ್ಲರಿಗೂ ಇದೆ. ಒಂದು ವೇಳೆ ಪಹಲ್ಗಾಮ್ ಘಟನೆಯನ್ನು ಮುಂದಿರಿಸಿಕೊಂಡು ಭಾರತ ಟೂರ್ನಮೆಂಟ್ನಲ್ಲಿ ಭಾಗವಹಿಸುವುದಕ್ಕೆ ಹಿಂದೇಟು ಹಾಕುತ್ತಿದ್ದರೆ ಖಂಡಿತವಾಗಿಯೂ ಈ ಹೆಮ್ಮೆಯಿಂದ ವಂಚಿತರಾಗಿ ನಾವು ನಿರಾಸೆ ಅನುಭವಿಸುತ್ತಿದ್ದೆವೇನೋ.
ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಭಾರತ ದೇಶ ಪಾಕಿಸ್ತಾನವನ್ನು ಕ್ರಿಕೆಟ್ ಆಡಲು ಆಮಂತ್ರಿಸಿಲ್ಲ. ಅಥವಾ ಈ ಟೂರ್ನಮೆಂಟ್ ಆಯೋಜಿಸುತ್ತಿರುವುದು ಪಾಕಿಸ್ತಾನವೂ ಅಲ್ಲ. ಪ್ರತಿ ಬಾರಿಯಂತೆ ಈ ಬಾರಿಯೂ ಏಷ್ಯಾ ಕಪ್ ಕ್ರಿಕೆಟ್ ಟೂರ್ನಮೆಂಟ್ ಆಯೋಜನೆಗೊಂಡಿದೆ. ಪಂದ್ಯಾಟದಲ್ಲಿ ಭಾಗವಹಿಸುವ ತಂಡಗಳಲ್ಲಿ ಪಾಕಿಸ್ತಾನವೂ ಇದ್ದುದರಿಂದ ಅನಿವಾರ್ಯವಾಗಿ ಭಾರತ ಆಡಲೇಬೇಕಾಗಿತ್ತು ಕೂಡಾ. ಅಂತೆಯೇ ಸಾಂಪ್ರದಾಯಿಕ ಎದುರಾಳಿ ತಂಡವನ್ನು ಮಣಿಸಿದ ಕೀರ್ತಿಗೂ ಪಾತ್ರವಾಗಿದೆ.

ಹಾಗೆಂದು ಪಾಕಿಸ್ತಾನದೊಂದಿಗೆ ಮೈದಾನ ಹಂಚಿಕೊಂಡು ಕ್ರಿಕೆಟ್ ಆಡಿದೆ ಎಂದ ಮಾತ್ರಕ್ಕೆ ಭಾರತ ದೇಶ ಪಾಕಿಸ್ತಾನ ಪ್ರೇರಿತ ಉಗ್ರ ದಾಳಿಗಳನ್ನು ಬೆಂಬಲಿಸುತ್ತದೆ ಎಂದಲ್ಲ. ಅಥವಾ ಪಹಲ್ಗಾಮ್ ಘಟನೆಯಲ್ಲಿ ಮಡಿದ ಅಮಾಯಕರ ಕುಟುಂಬಿಕರ ನೋವು ಲೆಕ್ಕಕ್ಕಿಲ್ಲ ಎಂದು ಕೂಡಾ ತಿಳಿಯಬೇಕಿಲ್ಲ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳಬೇಕೆಂದರೆ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡಿದ ಬಳಿಕ ಹಳೆಯ ಎಲ್ಲಾ ದ್ವೇಷಗಳನ್ನು ಭಾರತೀಯರಾದ ನಾವು ಮರೆತೇ ಬಿಡುತ್ತೇವೆ ಎಂದೂ ಅಂದುಕೊಳ್ಳಬೇಕಾಗಿಲ್ಲ. ಮಾಡಿದ ತಪ್ಪುಗಳನ್ನೇ ಮಾಡುತ್ತಾ ದಿವಾಳಿಯಾಗುತ್ತಿರುವ ಪಾಕಿಸ್ತಾನ ಮುಂದೆ ಪಾಠ ಕಲಿತುಕೊಳ್ಳಿತ್ತದೆ ಎಂಬ ಭ್ರಮೆಯಲ್ಲೂ ಭಾರತ ಇಲ್ಲ ಎಂಬುದು ಸುಸ್ಪಷ್ಟ.
ಏಕೆಂದರೆ ಬಾಂಧವ್ಯ ಬೆಸೆಯುವ ಶಕ್ತಿ ಕ್ರಿಕೆಟ್ ಅಥವಾ ಇನ್ಯಾವುದೇ ಕ್ರೀಡೆಗಳಿಗಿದ್ದರೂ.. ಆ ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಪಾಕಿಸ್ತಾನಕ್ಕೆ ಇಲ್ಲ ಎಂಬುದು ಹಿಂದಿನ ಘಟನೆಗಳಿಂದ ಸಾಬೀತಾಗಿವೆ. ಸದಾ ಕಾಲು ಕೆರೆದು ಜಗಳಕ್ಕೆ ಬರುವ ಪಾಕಿಸ್ತಾನದಿಂದ ಅದನ್ನು ನಿರೀಕ್ಷಿಸುವುದೂ ತಪ್ಪು. ಹಾಗಿದ್ದರೂ ಉಗ್ರರಿಗೆ ಬೆಂಬಲ ನೀಡುವ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡುವುದನ್ನು ವಿರೋಧಿಸುವುದಕ್ಕೆ ಅರ್ಥವಿಲ್ಲ.
ನಮಗಾಗದವರು ಯಾರಾದರೂ ಇದ್ದರೆ ಅವರ ವಿರುದ್ಧ ನಾವು ಸೆಟೆದು ನಿಲ್ಲಬೇಕೇ ವಿನಃ ಮುದುಡಿ ಮೂಲೆ ಸೇರಬಾರದು. ನಮ್ಮನ್ನು ವಿರೋಧಿಸುವವರ ಮುಂದೆ ನಾವು ದೈತ್ಯರಾಗಿ ಬೆಳೆಯಬೇಕೇ ಹೊರತು ಕುಬ್ಜರಾಗಿ ಕುಗ್ಗಬಾರದು. ನಮ್ಮನ್ನು ಇನ್ನೊಬ್ಬರ ವಿರುದ್ಧ ಎತ್ತಿಕಟ್ಟಿ ಬೇಳೆ ಬೇಯಿಸಿಕೊಳ್ಳುವವರ ಬಂಡವಾಳ ಬಯಲು ಮಾಡಲು ಹವಣಿಸಬೇಕೇ ಹೊರತು ಅವರ ಹುಚ್ಚಾಟ, ಕಳ್ಳಾಟಕ್ಕೆ ಬಲಿಪಶು ನಾವಾಗಬಾರದು. ಅಂತೆಯೇ ಉಗ್ರವಾದಕ್ಕೆ ತೆರೆಮರೆಯಲ್ಲಿ ಬೆಂಬಲ ಸೂಚಿಸಿ ಪಹಲ್ಗಾಮ್ ಘಟನೆಗೆ ಕಾರಣವಾದ ಪಾಕಿಸ್ತಾನಕ್ಕೆ ಭಾರತ ‘ಆಪರೇಷನ್ ಸಿಂಧೂರ್’ ಹೆಸರಿನಲ್ಲಿ ತಕ್ಕ ಉತ್ತರವನ್ನು ಈಗಾಗಲೇ ನೀಡಿ ಆಗಿದೆ. ಹೀಗಿದ್ದಾಗ ಸಮಸ್ತರೂ ವೀಕ್ಷಿಸುವ ಕ್ರಿಕೆಟ್ ಆಟದಲ್ಲಿ ಪಾಕಿಸ್ತಾನ ತಂಡ ಪಾಲ್ಗೊಳ್ಳುತ್ತದೆ ಎಂಬ ಕಾರಣಕ್ಕೆ ನಾವೇಕೆ ವಿರೋಧಿಸಬೇಕು?

ಇಷ್ಟಕ್ಕೂ ಪಂದ್ಯ ಆರಂಭಗೊಂಡಾಗ ಹಾಗೂ ಪಂದ್ಯ ನಡೆದ ಬಳಿಕ ಭಾರತೀಯ ಆಟಗಾರರು ಪಾಕಿಸ್ತಾನ ದೇಶದ ವಿರುದ್ಧ ತಮಗಿರುವ ಕೋಪ, ಅಸಹನೆಯನ್ನು ಜಗತ್ತಿಗೆ ಸರಿಯಾಗಿ ತೋರ್ಪಡಿಸಿದ್ದಾರೆ. ಮೈದಾನದಲ್ಲಿದ್ದ ವಿರೋಧಿ ದೇಶದ ಆಟಗಾರರ ಕೈ ಕುಲುಕುವುದಕ್ಕೆ ಮನ ಮಾಡಲಿಲ್ಲ.., ಮಂದಹಾಸ ಬೀರಿ ನೋವು ಮರೆಯಲಿಲ್ಲ. ಅಷ್ಟೇ ಅಲ್ಲ., ನಾಯಕ ಸೂರ್ಯ ಕುಮಾರ್ ಯಾದವ್ ಭರ್ಜರಿ ಗೆಲುವಿನ ಬಳಿಕ ಗೆಲುವನ್ನು ಭಾರತೀಯ ಸೇನೆಗೆ ಅರ್ಪಣೆ ಮಾಡಿದ್ದಲ್ಲದೆ ಪಹಲ್ಗಾಮ್ ಸಂತ್ರಸ್ತರ ಕುಟುಂಬಿಕರ ಜೊತೆ ಇದ್ದೇವೆ ಎಂಬ ಭರವಸೆಯನ್ನೂ ವ್ಯಕ್ತಪಡಿಸಿದರು.
ಈಗ ಹೇಳಿ. ಟೂರ್ನಮೆಂಟ್ನಲ್ಲಿ ನಮ್ಮ ವಿರೋಧಿ ದೇಶ ಪಾಕಿಸ್ತಾನ ಇದೆ ಎಂದು ನಾವು ಆಡದೆ ಇರುತ್ತಿದ್ದರೆ ಈ ಗೆಲುವಿನ ಸಂಭ್ರಮ ನಮಗಿರುತ್ತಿತ್ತೇ? ನಮ್ಮ ಆಟಗಾರರು ಪಾಕಿಸ್ತಾನಿ ಆಟಗಾರರ ಮುಖ ನೋಡದೆ, ಕೈ ಕುಲುಕದೆ ಇಡೀ ಪಾಕಿಸ್ತಾನಕ್ಕೆ ‘ನಾವಿನ್ನೂ ನೀವು ನೀಡಿದ ನೋವು ಮರೆತಿಲ್ಲ’ ಎಂಬ ಸಂದೇಶವನ್ನು ಪರೋಕ್ಷವಾಗಿ ರವಾನೆ ಮಾಡಲು ಸಾಧ್ಯವಾಗುತ್ತಿತ್ತೇ? ಆದರೆ ನರಿ ಬುದ್ಧಿಯ ಪಾಕಿಸ್ತಾನಕ್ಕೆ ಇದು ಅರ್ಥವಾಗುತ್ತದೆ ಎಂಬುದು ಮಾತ್ರ ಗ್ಯಾರಂಟಿ ಇಲ್ಲ.

(ಗಣೇಶ್ ಮಾವಂಜಿ ಹಿರಿಯ ಪತ್ರಕರ್ತರು ಹಾಗೂ ಅಂಕಣಕಾರರು).





