*ಗಣೇಶ್ ಮಾವಂಜಿ.
ಹೆಚ್ಚಿನ ಎಲ್ಲರೂ ಮೊನ್ನೆ ಆಕಾಶದಲ್ಲಿ ಸಂಭವಿಸಿದ ನೆರಳು ಬೆಳಕಿನ ಆಟವಾದ ಚಂದ್ರ ಗ್ರಹಣ ವೀಕ್ಷಿಸಿದ್ದೀರಿ ಅಂದುಕೊಳ್ತೇನೆ. ಕೆಲವರಿಗೆ ಅದೊಂದು ವಿಸ್ಮಯವಾದರೆ ಮತ್ತೆ ಕೆಲವರಿಗೆ ಅದು ಚಂದ್ರನಿಗೆ ಹಿಡಿಯುವ ವ್ಯಾಧಿ. ವೈಜ್ಞಾನಿಕ ಪರಿಕಲ್ಪನೆಯಲ್ಲಿ ಸೂರ್ಯ ಚಂದ್ರರ ನಡುವೆ ಭೂಮಿ ಅಡ್ಡ ಬಂದಾಗ ಚಂದ್ರನ ಮೇಲೆ ಬೀಳುವ ನೆರಳು ಈ ಗ್ರಹಣ. ಸದಾ ಚಲಿಸುತ್ತಲೇ ಇರುವ ಭೂಮಿ ಪರಿಭ್ರಮಿಸುತ್ತಲೇ ಮುಂದೆ ಸಾಗಿದಾಗ ಕವಿದ ನೆರಳು ಕೂಡಾ ಸರಿದು ಚಂದ್ರನ ಮೇಲೆ ಮತ್ತೆ
ಸೂರ್ಯನ ಬೆಳಕು ಎಂದಿನಂತೆ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಬೀಳುತ್ತದೆ. ಇದು ವಾಸ್ತವ.
ಈ ಗ್ರಹಣಗಳು ಸಂಭವಿಸಿದಾಗ ಪ್ರಕೃತಿಯಲ್ಲಿ ಕೆಲವೊಂದು ಬದಲಾವಣೆಗಳು ಗೋಚರಿಸಿ ಅದರಿಂದ ವ್ಯತಿರಿಕ್ತ ಪರಿಣಾಮಗಳಾಗುತ್ತವೆ ಎಂಬ ಮಾತುಗಳೂ ಇವೆ. ಮೊನ್ನೆ ಗ್ರಹಣ ಸಂಭವಿಸುವ ಒಂದೆರಡು ದಿನಗಳ ಮೊದಲೇ ಯಾವ ಟಿವಿ ಚಾನೆಲ್ ಗಳನ್ನು ಇರಿಸಿದರೂ ಅವುಗಳಲ್ಲಿ ಗ್ರಹಣಕ್ಕೆ ಸಂಭಂದಿಸಿದ ವಿಷಯಗಳನ್ನೇ ತಿಳಿಸಲಾಗುತ್ತಿತ್ತು. ವಿಜ್ಞಾನಿಗಳು ವೈಜ್ಞಾನಿಕ ಕಾರಣಗಳನ್ನು ಮುಂದಿರಿಸಿಕೊಂಡು ವಿಶ್ಲೇಷಿಸಿ ಗ್ರಹಣದ ವೇಳೆ ಯಾವುದನ್ನು ಮಾಡಬಹುದು, ಯಾವುದನ್ನು ಮಾಡಬಾರದು ಎಂದು ತಿಳಿಸಿಕೊಟ್ಟರೆ, ಜ್ಯೋತಿಷಿಗಳು,ಧಾರ್ಮಿಕ ಪಂಡಿತರು ಧಾರ್ಮಿಕ ನೆಲೆಗಟ್ಟಿನಲ್ಲಿ ವಿಚಾರ ಮಂಡಿಸಿ ಜನರಿಗೆ ಯಾವುದು ಹಿತ, ಯಾವುದು ಅಹಿತರ ಎಂಬುದರ ಬಗ್ಗೆ ಬೋಧಿಸಿದರು.

ಗ್ರಹಣದ ವೇಳೆ ಆಹಾರ ಸೇವಿಸದೆ ಜಪತಪಗಳನ್ನು ಮಾಡಿ, ಗ್ರಹಣ ವಿಮೋಚನೆಯ ಬಳಿಕ ಸ್ನಾನ ಮಾಡಿದ ಬಳಿಕವಷ್ಟೇ ಹೊಟ್ಟೆಗೆ ತಿನ್ನಬೇಕು., ಇಲ್ಲದಿದ್ದರೆ ಕೆಲವೊಂದು ನಿರ್ದಿಷ್ಟ ರಾಶಿಯವರಿಗೆ ದೋಷ ನಿಶ್ಚಿತ ಎಂಬುದನ್ನು ಜ್ಯೋತಿಷಿಗಳು ತಿಳಿಸಿದರೆ ವೈಜ್ಞಾನಿಕ ಕಾರಣ ನೀಡುವ ವಿಜ್ಞಾನಿಗಳು ಗ್ರಹಣದ ವೇಳೆ ಪ್ರಕೃತಿಯಲ್ಲಿ ಉಂಟಾಗುವ ಬದಲಾವಣೆಗಳನ್ನು ಮುಂದಿರಿಸಿ ಆಹಾರ ಸೇವನೆಯ ವೇಳೆ ತುಸು ಜಾಗರೂಕತೆ ವಹಿಸಲು ಹೇಳಿದ್ದರು.
ತಮಾಷೆಯ ಸಂಗತಿ ಯಾವುದೆಂದರೆ ಚಂದ್ರ ಗ್ರಹಣ ಹಾಗೂ ಸೂರ್ಯ ಗ್ರಹಣಗಳು ಹೇಗೆ, ಎಷ್ಟು ಹೊತ್ತಿಗೆ ಆರಂಭವಾಗಿ ಎಷ್ಟು ಹೊತ್ತಿನವರೆಗೆ ಇದ್ದು ಎಷ್ಟು ಹೊತ್ತಿಗೆ ವಿಮೋಚನೆಯಾಗುತ್ತದೆ ಎಂಬುದನ್ನು ವಿಜ್ಞಾನಿಗಳು ಕರಾರುವಕ್ಕಾಗಿ ಹೇಳುತ್ತಾರೆ. ಮೊನ್ನೆ ಚಂದ್ರಗ್ರಹಣ ಸಂಭವಿಸಿದಾಗಲೂ ರಾತ್ರಿ ಇಷ್ಟು ಹೊತ್ತಿಗೆ ಗ್ರಹಣ ಹಿಡಿದು ಇಷ್ಟೇ ಅವಧಿಯವರೆಗೆ ವ್ಯಾಪಿಸಿ ಮತ್ತೆ ಇದೇ ಕ್ಷಣದಲ್ಲಿ ಗ್ರಹಣ ವಿಮೋಚನೆಯಾಗುತ್ತದೆ ಎಂಬುದನ್ನು ಜಗತ್ತಿಗೆ ತಿಳಿಯಪಡಿಸಲಾಗಿತ್ತು. ಆದರೆ ನಮ್ಮ ಬುದ್ಧಿಗೆ ಹಿಡಿಯುವ ಗ್ರಹಣ ಎಷ್ಟು ಹೊತ್ತಿಗೆ ಹಿಡಿಯುತ್ತದೆ, ಎಷ್ಟು ಹೊತ್ತಿಗೆ ವಿಮೋಚನೆಯಾಗುತ್ತದೆ ಎಂಬುದನ್ನು ಮಾತ್ರ ಯಾರಿಂದಲೂ ಹೇಳಲಾಗದು.
ಸೂರ್ಯ ಚಂದ್ರರಿಗೆ ಹಿಡಿವ ಗ್ರಹಣ ಕೆಲ ಗಂಟೆಗಳ ಕಾಲ ಮಾತ್ರವಿದ್ದು ನಂತರ ಅದು ಸರಿದು ಹೋಗಬಹುದು. ಆದರೆ ಬುದ್ಧಿಗೆ ಬಡಿಯುವ ಗ್ರಹಣಕ್ಕೆ ಹೊತ್ತುಗೊತ್ತಿನ ಹಂಗಿಲ್ಲ. ಹಾಗಿದ್ದರೂ ಬುದ್ಧಿಗೆ ಬಡಿಯುವ ಗ್ರಹಣವನ್ನು ವಿಂಗಡಿಸುವುದಾದರೆ ಕೆಲವೊಂದು ಅಲ್ಪ ಕಾಲದ ಗ್ರಹಣ., ಕೆಲವೊಂದು ದೀರ್ಘ ಕಾಲದ ಗ್ರಹಣ ಎಂದು ವಿಂಗಡಿಸಬಹುದೇನೋ!
ಮನೆ ಕೆಲಸ ಬಾಕಿ ಇದ್ದರೂ ಸ್ವಲ್ಪ ಹೊತ್ತಿನವರೆಗೆ ಟಿವಿ ನೋಡುತ್ತೇನೆ ಎಂದು ಟಿವಿಗೆ ದೃಷ್ಟಿ ನೆಟ್ಟ ಮಹಿಳೆ ಚಾನೆಲ್ ತಿರುವುತ್ತಾ ಯಾವುದೋ ಧಾರಾವಾಹಿ ನೋಡುತ್ತಾ ಸಮಯ ವ್ಯರ್ಥ ಮಾಡುವಾಗಲೂ ಬುದ್ಧಿಗೆ ಗ್ರಹಣ ಸೋಕಿರುತ್ತದೆ. ಒಳಗೆ ಸ್ಟೌ ನಲ್ಲಿ ಇರಿಸಿದ ಪದಾರ್ಥಕ್ಕೆ ಅಡಿ ಹಿಡಿದು, ಕರಟಿ ಕಪ್ಪಾಗಿ ಸ್ಟೀಲ್ ಚೆರಿಯಲ್ಲಿ ತಿಕ್ಕಿದರೂ ಹೋಗದಿದ್ದಾಗ ಮಾತ್ರ ಬುದ್ಧಿಗೆ ಹಿಡಿದ ಗ್ರಹಣ ವಿಮೋಚನೆಯಾದ ಅನುಭವವಾಗುತ್ತದೆ. ಇದು ಮನಸ್ಸಿಗೆ ಕವಿಯುವ ಅಲ್ಪ ಕಾಲದ ಗ್ರಹಣ.
ಪರೀಕ್ಷೆಯ ಸಂದರ್ಭದಲ್ಲಿ ಓದದೆ ಮೊಬೈಲ್ ನಲ್ಲಿ ಗೇಮ್ಸ್, ರೀಲ್ಸ್ ನೋಡುವ ಮಕ್ಕಳ ಬುದ್ಧಿಗೂ ಮಂಕು ಕವಿದು ಗ್ರಹಣ ಬಡಿಯುತ್ತದೆ. ಪರೀಕ್ಷೆ ಕಳೆದು ಫಲಿತಾಂಶ ಹೊರಬಿದ್ದು ಮೂರ್ನಾಲ್ಕು ಸಬ್ಜೆಕ್ಟ್ ಗಳಲ್ಲಿ ಗೋತಾ ಹೊಡೆದಾಗ ಹಿಡಿದ ಗ್ರಹಣ ಸರಿದ ಅನುಭವವಾಗುತ್ತದೆ.
ಬಣ್ಣಬಣ್ಣದ ಮಾತುಗಳನ್ನಾಡಿ ಮಾತಿನಲ್ಲೇ ಮಹಲ್ ಕಟ್ಟಿಕೊಡುವ ಕುತಂತ್ರಿ ಪ್ರೇಮಿಯ ಮಾತಿಗೆ ಮರುಳಾಗಿ ಆತನ ಬಲೆಗೆ ಬಿದ್ದ ಹದಿಹರೆಯದ ಹುಡುಗಿಯ ಬುದ್ಧಿಗೂ ಗ್ರಹಣ ಕವಿದಿರುತ್ತದೆ. ಅದೇ ಪ್ರೇಮಿ ಪ್ರೀತಿಯ ಮತ್ತಿನಲ್ಲಿ ಮೈಗೊರಗಿದ ಸೆಲ್ಫಿಯನ್ನು ಇನ್ನೊಬ್ಬರ ಮೊಬೈಲ್ ಗೋ, ಸಾಮಾಜಿಕ ಜಾಲತಾಣಕ್ಕೋ ದಾಟಿಸಿದಾಗ ಮಾತ್ರ ಬುದ್ಧಿಗೆ ಬಡಿದ ಗ್ರಹಣ ವಿಮೋಚನೆಯಾಗುತ್ತದೆ.
ಹಣ ಡಬಲ್ ಮಾಡಿಕೊಡುತ್ತೇನೆಂದು ಯಾರಾದರೂ ಹೇಳಿದಾಗ ಅದನ್ನು ನಂಬಿ ಇಲ್ಲದ ಹಣವನ್ನು ಒಟ್ಟುಗೂಡಿಸಿ ಕೊಡುವಾಗ ಬುಧ್ಧಿಗೆ ಗ್ರಹಣ ಏರಿರುತ್ತದೆ. ಬಳಿಕ ಡಬಲ್ ಮಾಡಿಕೊಡುವ ವ್ಯಕ್ತಿ ಕೈಗೆ ಚಿಪ್ಪು ಕೊಟ್ಟು ಕಣ್ಮರೆಯಾದಾಗ ಮಾತ್ರ ಏರಿದ ಗ್ರಹಣ ಇಳಿದ ಅನುಭವವಾಗುತ್ತದೆ. ಇಂತವುಗಳನ್ನು ತುಸು ದೀರ್ಘ ಕಾಲದ ಗ್ರಹಣ ಎನ್ನಬಹುದು.

ಯಾವುದೋ ಕಾರಣ ಮುಂದಿರಿಸಿಕೊಂಡು ‘ಇವತ್ತು ಮಾತ್ರ ನಾನು ಕುಡಿಯುವುದು’ ಎಂದು ಬಿಯರ್ ಬಾಟಲಿಗೆ ಬಾಯಿ ಹಿಡಿದ ವ್ಯಕ್ತಿ ನಂತರ ರಣಕುಡಿಯಾಗಿ ಪರಿವರ್ತಿತವಾಗುವ ಪ್ರಕ್ರಿಯೆಯ ವೇಳೆ ಆ ವ್ಯಕ್ತಿಯ ಬುದ್ಧಿಗೆ ಗ್ರಹಣ ಸೋಕಿರುತ್ತದೆ. ನಂತರ ಜೀವನದ ಅಮೂಲ್ಯ ಕ್ಷಣಗಳೆಲ್ಲವೂ ಕುಡಿತದಲ್ಲೇ ಕರಗಿ ಕರುಳು ಉಬ್ಬಿ, ಕಿಡ್ನಿ ಕೆಲಸ ಮಾಡದಂತಾದಾಗ ಮಾತ್ರ ಬುದ್ಧಿಗೆ ಹಿಡಿದ ಗ್ರಹಣ ನಿಧಾನವಾಗಿ ಸರಿಯುತ್ತದೆ. ಇದನ್ನು ಸುದೀರ್ಘ ಕಾಲ ಬುದ್ಧಿಗೆ ಕವಿಯುವ ಗ್ರಹಣ ಎನ್ನಬಹುದು.
ಹೀಗೆ ಪ್ರತಿಯೊಬ್ಬರ ಜೀವನದಲ್ಲೂ ಬುದ್ಧಿಗೆ ಗ್ರಹಣ ಹಿಡಿದು ನಂತರ ಅದು ತನ್ನಿಂದ ತಾನಾಗಿ ವಿಮೋಚನೆಯಾಗುತ್ತದೆ. ಆಕಾಶದಲ್ಲಿ ಸಂಭವಿಸುವ ಸೂರ್ಯ, ಚಂದ್ರ ಗ್ರಹಣ ಇದೇ ಕ್ಷಣದಲ್ಲಿ ಹಿಡಿದು ಇದೇ ಕ್ಷಣದಲ್ಲಿ ಸರಿಯುತ್ತದೆ ಎಂಬುದನ್ನು ಕರಾರುವಕ್ಕಾಗಿ ಹೇಳಿಬಿಡಬಹುದು. ಆದರೆ ಬುದ್ದಿಗೆ ಹಿಡಿದ ಗ್ರಹಣವನ್ನು ಮಾತ್ರ ಇದೇ ಅವಧಿಯಲ್ಲಿ ಹಿಡಿದು ಇದೇ ಅವಧಿಗೆ ಕೊನೆಗೊಳ್ಳುತ್ತದೆ ಎಂದು ಮಾತ್ರ ಹೇಳುವ ಹಾಗಿಲ್ಲ.
ಇತ್ತೀಚೆಗೆ ಧರ್ಮಸ್ಥಳದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನೇ ಅವಲೋಕಿಸಿ ನೋಡಿ. ಇಲ್ಲಿ ಕೆಲವರ ಬುದ್ಧಿಗೆ ಅಲ್ಪಕಾಲದ ಗ್ರಹಣ ಸೋಕಿದೆ. ಮತ್ತೆ ಕೆಲವರ ಬುದ್ಧಿಗೆ ದೀರ್ಘ ಕಾಲದಿಂದ ಗ್ರಹಣ ಆವರಿಸಿದೆ. ಇನ್ನು ಕೆಲವರ ಬುದ್ಧಿಗೆ ಕ್ಷಣಕ್ಕೊಮ್ಮೆ ಗ್ರಹಣ ಬಡಿದಂತಾಗಿ ಜನರನ್ನೂ ಗರಬಡಿದಂತೆ ಮಾಡುತ್ತಿದ್ದಾರೆ. ಆದರೆ ಇಲ್ಲಿ ಮನುಷ್ಯರ ಬುದ್ಧಿಗೆ ಆಗುತ್ತಿರುವ ಗ್ರಹಣ ಅಲ್ಪ ಕಾಲದ್ದೇ ಆಗಿರಲಿ., ಅಥವಾ ತುಸು ದೀರ್ಘ ಕಾಲದ್ದೇ ಆಗಿರಲಿ… ಅದು ಬೀರುವ ಪ್ರಭಾವ ಮಾತ್ರ ಸುದೀರ್ಘ ಕಾಲ ಎಂಬುದನ್ನು ಮಾತ್ರ ಬೇರೆ ಹೇಳಬೇಕಾಗಿಲ್ಲ.

(ಗಣೇಶ್ ಮಾವಂಜಿ ಹಿರಿಯ ಪತ್ರಕರ್ತರು ಹಾಗು ಅಂಕಣಕಾರರು)












