*ಗಣೇಶ್ ಮಾವಂಜಿ.
ಎಲ್ಲೋ ಹೋಗಿ ಒಂದೆರಡು ದಿನ ಕಳೆದು ಮನೆಗೆ ಬಂದು ಯಾವಾಗಲೂ ಮಲಗುವ ಕೋಣೆಗೆ ಬಂದು ಕಣ್ಮುಚ್ಚಿ ಮಲಗಿದಾಗ ನಮ್ಮ ಮನೆಯ ಮಹತ್ವ ನಮಗೆ ಅರಿವಿಗೆ ಬಂದೇ ಬರುತ್ತದೆ. ಹೋದ ಮನೆಯ ಸುತ್ತಲೂ ಆಳೆತ್ತರದ ಕಂಪೌಂಡ್ ಇರಬಹುದು. ಬಂಧುಗಳ ಮನೆಯ ಕಣ್ಮನ ಸೆಳೆಯುವ ಹೂತೋಟದಲ್ಲಿ ಬಣ್ಣಬಣ್ಣದ ಹೂಗಳರಲಿ ಕಂಪು ಸೂಸುತ್ತಿರಬಹುದು. ಅವರ ಮನೆಯೊಳಗಡೆ ಇಡೀ ಗೋಡೆಯನ್ನೇ ಆವರಿಸಿದಂತಿರುವ ಟಿವಿಯೇ ಇರಬಹುದು. ಅವರ ಶೋಕೇಸ್ ನಲ್ಲಿ
ಎಲ್ಲೆಲ್ಲಿಂದಲೋ ತಂದ ಬೆಲೆಬಾಳುವ ವಸ್ತುಗಳು ಬೆಚ್ಚನೆ ಕುಳಿತು ಮಂದಹಾಸ ಬೀರುತ್ತಿರಬಹುದು. ಮಲಗಲು ಕೊಟ್ಟ ಕೋಣೆಯಲ್ಲಿ ಮಿರುಗುವ ಮಂಚ, ಹೊದೆಯಲು ಕಸೂತಿ ಇರುವ ದಪ್ಪನೆಯ ಕಂಬಳಿ, ನಮ್ಮನ್ನೇ ನಮಗೆ ತೋರಿಸುವ ಅಷ್ಟುದ್ದದ ಕನ್ನಡಿ ಅಲ್ಲಿರಬಹುದು.
ಅಷ್ಟು ಮಾತ್ರವಲ್ಲ. ಆ ಮನೆಯಲ್ಲಿ ಉಣಲು ಕುಳಿತಾಗ ಭೂರೀ ಬೋಜನವನ್ನೇ ಬಡಿಸಿ ಯಾವುದಕ್ಕೂ ಸಂಕೋಚ ಮಾಡಿಕೊಳ್ಳಬೇಡಿ.., ನಿಮ್ಮ ಮನೆ ಎಂದೇ ತಿಳಿದುಕೊಳ್ಳಿ ಎಂದು ನಮ್ಮ ಮನದ ದಾಕ್ಷಿಣ್ಯದ ಗೋಡೆಯನ್ನು ಕೆಡಹುವ ಮಾತುಗಳೇ ಆ ಮನೆಯವರಿಂದ ಬಂದು ಬಿಡಬಹುದು. ಹೀಗೆ ನಮ್ಮ ಮನೆಯ ಸೊತ್ತಿಗೆ ಹೋಲಿಸಿದರೆ ಅಲ್ಲಿ ನೂರುಪಟ್ಟು ಅಧಿಕ ಐಶ್ವರ್ಯ ಕಾಲ್ಮುರಿದುಕೊಂಡು ಬಿದ್ದಿರಬಹುದು.

ಹೊಟ್ಟೆತುಂಬಾ ಊಟ ಮಾಡಿ ಮಲಗುವ ಕೋಣೆ ಹವಾನಿಯಂತ್ರಿತ ಆಗಿದ್ದರೂ, ಮಂಚವೇರಿ ಹೊದ್ದು ಮಲಗಿದರೂ ಒಂದಷ್ಟು ಹೊತ್ತು ಮಾತ್ರ ಅಲ್ಲಿ ನಿದ್ದೆ ಹತ್ತಿರ ಸುಳಿಯದು. ಅಲ್ಲಿ ಸುಖದ ಸುಪ್ಪತ್ತಿಗೆಯಲ್ಲೇ ತೇಲಾಡಿಸುವ ಸೌಕರ್ಯಗಳಿದ್ದರೂ ಮನಸ್ಸು ಮಾತ್ರ ‘ಈಗ ಮನೆಯಲ್ಲಿ ಇದ್ದಿದ್ದರೆ ಎಷ್ಟು ಚೆನ್ನಾಗಿತ್ತು..’ಎಂದು ಯೋಚಿಸಲು ಪ್ರಾರಂಭಿಸುತ್ತದೆ. ಅಥವಾ ಮೊದಲ ದಿನ ಎಲ್ಲವೂ ಚೆನ್ನಾಗಿ ಕಂಡರೂ ಎರಡನೆಯ ದಿನಕ್ಕಾದರೂ ಮನಸ್ಸು ಮನೆಯ ಕಡೆ ವಾಲಲು ಪ್ರಾರಂಭಿಸುತ್ತದೆ. ಅಮ್ಮನ ಪ್ರೀತಿಯ ಮಾತುಗಳು ನೆನಪಾಗುತ್ತವೆ. ಮಡದಿಯ ಮಮತೆಯ ಅರಿವು ಕಾಡುತ್ತದೆ. ಸದಾ ಪ್ರೀತಿಯಿಂದ ರೇಗಿಸುವ ತಂಗಿಯೋ, ತೊದಲು ನುಡಿಯುವ ಮಕ್ಕಳೋ, ಕಾಳಜಿಯಿಂದ ವಿಚಾರಿಸುವ ಅಪ್ಪನೋ ಆಗಾಗ ನೆನಪಾಗುತ್ತಾರೆ. ಆಗ ‘ಅಲ್ಲಿದೆ ನಮ್ಮನೆ..ಇಲ್ಲಿ ಬಂದೆ ಸುಮ್ಮನೆ’ ಎಂಬ ಭಾವ ಮೂಡದೆ ಇರಲು ಸಾಧ್ಯವೇ ಇಲ್ಲ.
ಆಧರಿಸುವ ನೆಂಟರ ಮಾತುಗಳೂ ಕೂಡಾ ಮೊದಲ ದಿನದಂತೆ ಮರುದಿನ ಇರುವುದಿಲ್ಲ. ಒಂದೆರಡು ದಿನ ಕಳೆದರಂತೂ ಆ ಪ್ರೀತಿ, ಕಕ್ಕುಲತೆಯ ಮಾತುಗಳಿಗೆ ತುಕ್ಕು ಹಿಡಿಯುವುದು ಸುಳ್ಳಲ್ಲ. ನಿಮ್ಮ ಮನೆ ಎಂದೇ ಅಂದುಕೊಳ್ಳಿ ಎಂದವರ ನಡವಳಿಕೆಯಲ್ಲಿ ಕೂಡಾ ಮುಂದಿನ ದಿನಗಳಲ್ಲಿ ವ್ಯತ್ಯಾಸ ಕಂಡುಬರದಿರದು. ಇದು ಸಹಜ ಕೂಡಾ. ಅವರವರ ಮನೆಯಲ್ಲಿ ಅವರಿರುವ ಸ್ವಾತಂತ್ರ್ಯಕ್ಕೆ ಅನ್ಯರ ಆಗಮನದಿಂದ ಧಕ್ಕೆ ಬರುತ್ತಿದೆ ಎಂದರಿವಾದಾಗ ಅವರ ನಡವಳಿಕೆಯಲ್ಲಿ ವ್ಯತ್ಯಾಸ ಬರುವುದರಲ್ಲಿ ಸಂಶಯವಿಲ್ಲ.
ಆದರೆ ಯಾವುದೋ ನೆಂಟರ ಮನೆಗೆ ಹೋಗಿ ಬಂದಾಗ, ಬಂಧುಗಳೊಂದಿಗೆ ಹರಟಿ ತೆರಳಿದಾಗ, ಅಲ್ಲಿನ ಸೌಕರ್ಯಗಳ ಸೊಗಸನ್ನು ನೋಡಿ ಕಣ್ತುಂಬಿ ಅಲ್ಲಿಂದ ಹೊರಟು ನಿಂತಾಗ ‘ನಮ್ಮ ಮನೆಯಲ್ಲೂ ಹೀಗೆಯೇ ಇರಬೇಕು.., ಹೀಗೀಗೆ ಇದ್ದರೆ ಅದೆಷ್ಟು ಚೆನ್ನ’ ಎಂಬ ಭಾವ ಮೂಡುತ್ತದೆ. ನಾವು, ನಮ್ಮದು, ನಮ್ಮ ಮನೆ ಎಂಬ ಭಾವಕ್ಕೆ ಹೆಚ್ಚು ಹೊಳಪು ಸಿಗುವುದು ಇನ್ನೊಬ್ಬರ ಮನೆಗೆ ಹೋಗಿ ಬಂದಾಗಲೇ.
ಅವರವರ ಹಣಕಾಸಿನ ಅನುಕೂಲತೆಗೆ ತಕ್ಕಂತೆ ಹಳೆಯ ಮನೆಯನ್ನು ಕೆಡವಿ ಹೊಸ ಮನೆಯನ್ನು ಕಟ್ಟುವ ಪ್ರಯತ್ನವನ್ನು ಎಲ್ಲರೂ ಮಾಡುತ್ತಾರೆ. ಎಷ್ಟೋ ಜನ ಮನೆ ಕಟ್ಟಲು ಆರಂಭಿಸಿದಾಗ ‘ಮನೆಗೆ ಹಾಕುವ ಹಣ ಡೆಡ್ ಮನಿ..ಆದರಿಂದ ಲಾಭವೇನೂ ಇಲ್ಲ.’ ಎಂದು ಹೇಳುವವರೇ ಅಧಿಕ.
ಆದರೆ ಹೆಚ್ಚಿನ ಎಲ್ಲರೂ ಕೂಡಾ ಮನೆ ಕಟ್ಟಲು ಆರಂಭಿಸಿದಾಗ ಮಾತ್ರ ತಮ್ಮ ಶಕ್ತಿ ಮೀರಿ ಖರ್ಚು ಮಾಡುತ್ತಾರೆ. ತಮ್ಮ ಬಂಧುಗಳ ಮನೆಯಂತೆಯೇ ನಮ್ಮ ಮನೆಯೂ ಇರಬೇಕು ಎಂದಂದುಕೊಳ್ಳುತ್ತಾರೆ. ಅದರಿಂದ ಏನೂ ಸಿಗುವುದಿಲ್ಲ ಎಂಬ ಸ್ಪಷ್ಟ ಅರಿವಿದ್ದರೂ ಕೂಡಾ ಹೊಸ ಮನೆ ಕಟ್ಟಲು ತೊಡಗಿದಾಗ ಸಾಲ ಮಾಡಿಯಾದರೂ ಕನಸಿನ ಮಹಲು ಎದ್ದು ನಿಲ್ಲುವಂತೆ ಮಾಡಿಯೇ ಮಾಡುತ್ತಾರೆ.
ಮನೆ ಎಂಬುದು ಕೇವಲ ತಂಗಲು ಮಾತ್ರ ಇರುವ ಭೌತಿಕ ವಸ್ತುವಲ್ಲ. ಒಬ್ಬ ವ್ಯಕ್ತಿಯ ವ್ಯಕ್ತಿತ್ವ, ಆತ ಹೇಗಿದ್ದಾನೆ? ಆತನ ಬುದ್ಧಿ ಹೇಗಿದೆ ಎಂಬುದನ್ನು ಕೂಡಾ ಆತನ ಮನೆಯನ್ನು ನೋಡಿ ಅರಿತುಕೊಳ್ಳಲು ಸಾಧ್ಯವಿದೆ. ತಮ್ಮ ಮನೆಯ ಹುಡುಗಿಯನ್ನು ಮದುವೆ ಮಾಡಿಕೊಡುವ ಸಂದರ್ಭದಲ್ಲಿ ಮನೆ ನೋಡುವ ಸಂಪ್ರದಾಯ ಎಲ್ಲಾ ಕಡೆಯೂ ಇದ್ದೇ ಇರುತ್ತದೆ. ಹುಡುಗನ ಕುಟುಂಬಿಕರ ಹಿನ್ನೆಲೆ, ಅವರ ಆರ್ಥಿಕ ಸ್ಥಿತಿಗತಿಯನ್ನು ಅರಿತು ಹುಡುಗನಿಗೆ ಹುಡುಗಿ ಕೊಡಬಹುದೋ ಎಂಬುದನ್ನು ತಿಳಿದುಕೊಳ್ಳಲು ಆರಂಭಿಸಿದ ಈ ಪದ್ಧತಿಯೇ ಈ ಮನೆ ನೋಡುವ ಶಾಸ್ತ್ರ.
ಇಲ್ಲಿ ಇನ್ನೊಂದು ಸತ್ಯವನ್ನು ಅರ್ಥ ಮಾಡಿಕೊಳ್ಳಲೇಬೇಕಾಗುತ್ತದೆ. ಮನೆ ಚೆನ್ನಾಗಿದ್ದ ಮಾತ್ರಕ್ಕೆ ಮನಸ್ಸು ಚೆನ್ನಾಗಿರಬೇಕೆಂದಿಲ್ಲ. ಭಾರೀ ದೊಡ್ಡ ಮನೆ ಕಟ್ಟಿದ್ದರೂ ದಣಿದು ಬಂದವರಿಗೆ ಒಂದು ಲೋಟ ನೀರನ್ನೂ ಕೊಡದವರೂ ಇರುತ್ತಾರೆ. ಅಥವಾ ಅಂಗಳಕ್ಕೆ ಬಂದವರನ್ನು ಹಜಾರದಲ್ಲೇ ನಿಂತು ಪ್ರಶ್ನಿಸಿ ಅಲ್ಲಿಂದಲೇ ಸಾಗಹಾಕುವವರೂ ಇಲ್ಲದಿಲ್ಲ.
ಮುರುಕಲು ಮನೆಯಲ್ಲಿ ವಾಸಮಾಡುವವರ ಮನಸ್ಸು ಕೂಡಾ ಮುರುಕಲೇ ಇರುತ್ತದೆ ಎಂದಂದುಕೊಂಡರೆ ತಪ್ಪು. ಚಿಕ್ಕ ಮನೆಯಲ್ಲಿ ವಾಸವಾಗಿದ್ದರೂ ಅನ್ಯೋನ್ಯವಾಗಿ ಬದುಕುವ ಅದೆಷ್ಟೋ ಕುಟುಂಬಗಳು ಇವೆ. ಬಾಯಾರಿ ಬಂದವರಿಗೆ ದಣಿವಾರಿಸುವ ಮಾತುಗಳಲ್ಲದೆ ಪ್ರಾಮಾಣಿಕವಾಗಿ ಸತ್ಕರಿಸಿ ಕಳುಹಿಸುವವರೂ ಇರುತ್ತಾರೆ.
ಹಾಗಿದ್ದರೂ ತಮ್ಮ ಮನೆಯ ಹುಡುಗಿಯನ್ನು ಕೊಡುವಾಗ ಮಾತ್ರ ಮನೆಯ ಗಾತ್ರ ಮಹತ್ವ ಪಡೆಯುತ್ತದೆ. ಬಂಧುಗಳ ಕಣ್ಣಿನಲ್ಲಿ ನಮಗೊಂದು ಘನತೆ ಬರಬೇಕೆಂದಿದ್ದರೆ ಮನೆ ಚೆನ್ನಾಗಿರಬೇಕಾಗುತ್ತದೆ. ಮನೆ ಕಟ್ಟಲು ಹಾಕುವ ಹಣ ಮರಳಿ ಬಾರದೆಂಬ ಅರಿವಿದ್ದರೂ ಕೂಡಾ ಹೊಸ ಮನೆ ಕಟ್ಟಲು ಆರಂಭಿಸಿದಾಗ ಮಾತ್ರ ಕೂಡಿಟ್ಟ ಹಣವನ್ನು ಮಾತ್ರ ಕರಗಿಸುವುದಲ್ಲದೆ ಬ್ಯಾಂಕ್ ಸಾಲ, ಕೈಸಾಲದ ಮೊರೆ ಹೋಗದವರು ಸಿಗುವುದು ತೀರಾ ಅಪರೂಪ.
ಎಲ್ಲರಂತೆ ನಮಗೂ ಮನೆಯೊಂದು ಇರಬೇಕು ಎಂದಂದುಕೊಂಡು ಮನೆ ಕಟ್ಟಲು ಆರಂಭಿಸಿದ ಬಳಿಕ ಎಲ್ಲಿ ಹೋದರೂ ಕಣ್ಣು ಹೋಗುವುದು ಮಾತ್ರ ಅಲ್ಲಿನ ಸಿಟೌಟ್, ಅಲ್ಲಿನ ಅಡುಗೆ ಕೋಣೆ, ಅಲ್ಲಿ ಬಚ್ಚಲುಮನೆ, ಮನೆಗೆ ಅಂಟಿಕೊಂಡಿದೆಯೋ ಅಥವಾ ಹೊರಗಿದೆಯೋ, ದೇವರ ಕೋಣೆಯ ಡಿಸೈನ್ ಹೇಗಿದೆ? ಎಂಬಿತ್ಯಾದಿಗಳ ಮೇಲೆ. ಅಲ್ಲಿಯವರೆಗೆ ಈ ಬಗ್ಗೆ ಕಿಂಚಿತ್ತೂ ತಲೆಕೆಡಿಸದ ಮಂದಿಯೂ ತಮ್ಮ ಮನೆ ಕಟ್ಟಲು ಆರಂಭಿಸಿದ ಬಳಿಕ ಅಥವಾ ಹೊಸ ಮನೆ ಕಟ್ಟಿ ಒಂದಷ್ಟು ವರ್ಷಗಳವರೆಗೆ ಈ ರೀತಿಯ ಗಮನಿಸುವಿಕೆ ಎಲ್ಲರಲ್ಲೂ ಇದ್ದೇ ಇರುತ್ತದೆ.
ಆದರೆ ಕಾಲ ಬದಲಾದಂತೆ ಎಲ್ಲವೂ ಬದಲಾಗುತ್ತದೆ. ಇಂದಿನ ಫ್ಯಾಷನ್ ನಾಳೆಗೆ ಇರುವುದೇ ಇಲ್ಲ. ಎಲ್ಲರಿಗಿಂತ ಡಿಫರೆಂಟ್ ನಮ್ಮ ಮನೆ ಬೇಕು ಎಂದಂದುಕೊಂಡರೂ ಮನೆ ಕಟ್ಟಿ ಒಂದಷ್ಟು ವರ್ಷಗಳ ಬಳಿಕ ಆ ಫ್ಯಾಷನ್ ನ ಜಾಗದಲ್ಲಿ ಮತ್ತೊಂದು ಫ್ಯಾಷನ್ ಬಂದು ಕೂತಿರುತ್ತದೆ. ತಂತ್ರಜ್ಞಾನದಲ್ಲಿ ಬದಲಾವಣೆಯಾದಂತೆ ಮನೆಯ ಸೌಂದರ್ಯ ವೃದ್ಧಿಸುವ ಸಲಕರಣೆಗಳೂ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಾರಣ ಈಗಿರುವ ಮನೆಯ ಫ್ಯಾಷನ್ ನಾಳೆಗೆ ಇರುವುದೇ ಇಲ್ಲ.
ಮನೆ ಹೇಗೆಯೇ ಇದ್ದರೂ ಅವರವರ ಮನೆ ಅವರವರಿಗೆ ಅರಮನೆಯೇ. ಅಲ್ಲಿ ಸಿಗುವಷ್ಟು ನೆಮ್ಮದಿ ಇನ್ನೊಂದು ಮನೆಯಲ್ಲಿ ಸಿಗಲು ಸಾಧ್ಯವೇ ಇಲ್ಲ. ಅದೆಷ್ಟೇ ಆದರದಿಂದ ಸತ್ಕರಿಸಿದರೂ ತಮ್ಮ ಮನೆಯಲ್ಲಿ ಇದ್ದ ಸುಖ ಮತ್ತೆಲ್ಲಿಯೂ ಸಿಗದು ಎಂದೇ ಮನಸ್ಸು ಹೇಳುತ್ತದೆ. ಇಲ್ಲಿ ಇನ್ನೊಂದು ವಿಷಯವನ್ನೂ ಹೇಳಲೇ ಬೇಕಾಗುತ್ತದೆ. ಮಹಡಿ ಮನೆ ಇದ್ದರೂ, ಅದರಲ್ಲಿ ಸಕಲ ಐಶ್ವರ್ಯಗಳಿದ್ದರೂ ಮನೆಯೊಳಗಿರುವ ಮನಸ್ಸುಗಳು ಒಂದಾಗಿರಬೇಕು. ಮನೆ ಮಂದಿ ಯಾವುದೇ ಮುಚ್ಚುಮರೆ ಇಲ್ಲದೆ ಹರಟುವಂತಿರಬೇಕು. ಸುಖ, ದುಃಖಗಳ ಪರಸ್ಪರ ವಿನಿಮಯವಾಗುತ್ತಿರಬೇಕು. ಮನಸ್ಸುಗಳ ನಡುವೆ ಗೋಡೆಗಳಿರದಂತೆ ನೋಡಿಕೊಳ್ಳಬೇಕು. ಹಾಗಿದ್ದರೆ ಗುಡಿಸಲೂ ಕೂಡಾ ಅರಮನೆಯಾಗುವುದರಲ್ಲಿ ಸಂಶಯವಿಲ್ಲ.

(ಗಣೇಶ್ ಮಾವಂಜಿ ಹಿರಿಯ ಪತ್ರಕರ್ತರು ಅಂಕಣಕಾರರು).












