*ಗಣೇಶ್ ಮಾವಂಜಿ.
‘ಓಯ್ ಎಂತ ಮಾರಾಯಾ? ನಿನ್ನ ಕೈಯಲ್ಲಿ ಒಂದು ರಕ್ಷೆಯೂ ಇಲ್ಲ..?! ನೀನು ಧರ್ಮ ಬಿಟ್ಟವನೋ ಹೇಗೆ?’….
ರಕ್ಷಾ ಬಂಧನದ ಮರುದಿನ ಇದಿರಾದ ವ್ಯಕ್ತಿಗೆ ಗೆಳೆಯನೊಬ್ಬನ ಪ್ರಶ್ನೆ ಇದು. ‘ಹಾಗೇನೂ ಇಲ್ಲಪ್ಪಾ…ಅಕ್ಕ, ತಂಗಿಯರು ಅವರವರ ಗಂಡನ ಮನೆಯಲ್ಲಿ ಹಾಯಾಗಿದ್ದಾರೆ. ರಕ್ಷೆ ಕಟ್ಟಲೆಂದೇ ಬರುವಷ್ಟು ಪುರ್ಸೊತು ಅವರಿಗೂ ಇಲ್ಲ. ಮಿಗಿಲಾಗಿ ನನ್ನ ರಕ್ಷೆ ಅವರಿಗಿದ್ದೇ ಇದೆ..’ ಪ್ರಶ್ನೆ ಕೇಳಿದ ಗೆಳೆಯನಿಗೆ ನಗುತ್ತಲೇ ಉತ್ತರಿಸಿದಾಗ ‘ಅವರಿಲ್ಲದಿದ್ದರೇನಂತೆ? ಇಲ್ಲಿ ಯಾರ ಹತ್ತಿರವಾದ್ರೂ ಕಟ್ಟಿಸಿಕೊಳ್ಳಬೇಕಿತ್ತು. ಅಷ್ಟೂ ಗೊತ್ತಾಗುದಿಲ್ಲವಾ?! ..ಗೆಳೆಯನ ಮರು ಪ್ರಶ್ನೆ…
ಗೆಳೆಯರೀರ್ವರ ಸಂಭಾಷಣೆಯನ್ನು ಇಲ್ಲಿಗೆ ನಿಲ್ಲಿಸೋಣ. ಈಗ ಈ ಸಂಭಾಷಣೆ ಪ್ರಸ್ತುತ
ಕಾಲಘಟ್ಟದ ಜನಜೀವನದಲ್ಲಿ ಅದೆಷ್ಟು ಹಾಸುಹೊಕ್ಕಾಗಿದೆ ಎಂಬುದನ್ನು ಗಮನಿಸೋಣ. ಯಾವುದಾದರೊಂದು ಹಬ್ಬ, ಆಚರಣೆ, ಸಂಸ್ಕೃತಿಗಳ ಬಗ್ಗೆ ಈಗಿನ ತಲೆಮಾರಿನ ಬಹುತೇಕ ಮಂದಿಗೆ ಗೊತ್ತಿರುವುದೇ ಇಲ್ಲ. ಹಾಗಿದ್ದರೂ ತಾನು ಮಾಡುತ್ತಿದ್ದೇನೆ., ಇತರರೂ ಮಾಡಲೇಬೇಕೆಂಬ ನಿರೀಕ್ಷೆಯಲ್ಲೇ ತನ್ನ ಅಭಿಪ್ರಾಯವನ್ನು ಇನ್ನೊಬ್ಬರ ಮೇಲೆ ಹೇರುವ ಧಾವಂತದಲ್ಲೇ ಜನರು ದಿನ ಕಳೆಯುತ್ತಿದ್ದಾರೆ.
‘ರಕ್ಷಾ ಬಂಧನ’ ಎಂಬುದು ಸಹೋದರ, ಸಹೋದರಿಯರ ಸಂಬಂಧನವನ್ನು ಉದ್ದೀಪನಗೊಳಿಸುವ ಹಬ್ಬ ಎಂಬುದರಲ್ಲಿ ಎರಡು ಮಾತಿಲ್ಲ. ಯಾವುದೇ ಸಂಬಂಧವನ್ನು ಬೆಸೆದು ಇನ್ನಷ್ಟು ಗಟ್ಟಿಗೊಳಿಸುವ ಆಚರಣೆ ಇದ್ದರೆ ಅದಕ್ಕೆ ವಿರೋಧ ವ್ಯಕ್ತಪಡಿಸುವುದು ತಪ್ಪು ಕೂಡಾ. ಆದರೆ ಕೈಯಲ್ಲಿ ರಕ್ಷೆ ಇಲ್ಲ ಎಂಬುದರ ಆಧಾರದಲ್ಲೇ ಆ ವ್ಯಕ್ತಿಗೆ ಸಹೋದರತೆಯ ಸಂಬಂಧದಲ್ಲಿ ನಂಬಿಕೆ ಇಲ್ಲ ಎನ್ನುವುದು ಎಷ್ಟು ಸರಿ? ಧರ್ಮಕ್ಕೆ ಅಪಚಾರ ಎಸಗುತ್ತಿದ್ದಾರೆ ಎಂದೇಕೆ ಅರ್ಥೈಸಿಕೊಳ್ಳಬೇಕು ಎಂಬುದಷ್ಟೇ ನನ್ನ ವಾದ.
ಹಾಗೆ ನೋಡಿದರೆ ಆಚರಣೆಯ ಸೋಗಿಗಿಂತಲೂ ಮಿಗಿಲಾಗಿ ಲೌಕಿಕ ಜಗತ್ತಿನಲ್ಲಿ ತನ್ನ ಪ್ರೀತಿಪಾತ್ರರು ಸಂಕಷ್ಟದಲ್ಲಿದ್ದಾಗ ಟೊಂಕಕಟ್ಟಿ ಅವರ ಕಷ್ಟದಲ್ಲಿ ಪಾಲ್ಗೊಂಡು ಅವರಿಗೆ ಸಹಾಯ ಮಾಡುವುದು ಸಾವಿರ ಪಟ್ಟು ಮೇಲು. ಹೆಣ್ಮಗಳೊಬ್ಬಳು ಮಿರುಗುವ ರಕ್ಷೆ ಕಟ್ಟಿದಾಗ ದುಬಾರಿ ಚಾಕೊಲೇಟ್ ಉಡುಗೊರೆ ನೀಡಿಯೋ ಅಥವಾ ಹೆಚ್ಚು ಮುಖಬೆಲೆಯ ನೋಟೊಂದನ್ನು ಕೈಯಲ್ಲಿ ತುರುಕಿ ದೊಡ್ಡಸ್ಥಿಕೆ ಮೆರೆಯುವುದಕ್ಕಿಂತಲೂ ಮಿಗಿಲಾಗಿ ಆಕೆಗೆ ಕಷ್ಟ ಬಂದಾಗ ಕೈಲಾದ ಸಹಾಯ ಮಾಡುವುದರಲ್ಲಿ ನಿಜವಾದ ಅರ್ಥವಿದೆ.

ಈ ಮಾತು ಕೇವಲ ಸಹೋದರತೆ ಬೆಸೆಯುವ ರಕ್ಷಾ ಬಂಧನಕ್ಕೆ ಮಾತ್ರ ಸೀಮಿತವಾದುದದಲ್ಲ. ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಗಂಟಲು ಹರಿಯುವಂತೆ ‘ಬೋಲೋ ಭಾರತ್ ಮಾತಾ ಕೀ ಜೈ’ ಎಂದು ಘೋಷಣೆ ಕೂಗಿ ತನ್ನ ಹೆತ್ತ ನೆಲವನ್ನು ವಿದೇಶಿ ನೆಲದೊಂದಿಗೆ ತುಲನೆ ಮಾಡಿಕೊಂಡು ‘ನಮ್ಮ ದೇಶ ಸರಿ ಇಲ್ಲ’ ಎಂದು ಗೋಗರೆಯುವುದಕ್ಕೂ ಅನ್ವಯಿಸುತ್ತದೆ. ಭಾರತ ಮಾತೆಗೆ ಜೈ ಎನ್ನುತ್ತಾ ಅನ್ಯ ದೇಶದ ಬಗ್ಗೆ ಮಮಕಾರ ಹೊಂದಿದರೆ ಹೆತ್ತಬ್ಬೆಗೇ ಮೋಸ ಮಾಡಿದಂತಲ್ಲವೇ?
ಸಾಲುಸಾಲಾಗಿ ಬರುವ ರಾಷ್ಟ್ರೀಯ ಹಬ್ಬಗಳ ದಿನದಂದು ಪರಿಚಯಸ್ಥರಿಗೆ, ಅಪರಿಚಿತರಿಗೆ ಜಾಲತಾಣದಲ್ಲಿ ಶುಭಾಶಯ ಕೋರಿದಲ್ಲಿಗೆ ಆ ಹಬ್ಬಗಳಿಗೆ ನ್ಯಾಯ ದೊರಕಿಸಿಕೊಡುತ್ತೇವೆ ಎಂಬ ಭ್ರಮೆಯಲ್ಲಿ ನಾವು ಬದುಕುತ್ತಿದ್ದೇವೆ. ರಾಷ್ಟ್ರೀಯ ಹಬ್ಬಗಳು ಮಾತ್ರವಲ್ಲ.
ಇತ್ತೀಚಿನ ದಿನಗಳಲ್ಲಿ ಅಮ್ಮಂದಿರ ದಿನ, ಅಪ್ಪಂದಿರ ದಿನ, ಪ್ರೇಮಿಗಳ ದಿನ, ಗೆಳೆತನಕ್ಕೊಂದು ದಿನ….., ಹೀಗೆ ಮಾನವ ಸಂಬಂಧಗಳಿಗೆ ಹೊಳಪನ್ನೀಯಲು ಪ್ರತ್ಯೇಕ ದಿನಗಳನ್ನು ಗೊತ್ತುಪಡಿಸಿ ಅದನ್ನು ಸಂಭ್ರಮಿಸುವ ಕಾಲಘಟ್ಟದಲ್ಲಿ ನಾವಿದ್ದೇವೆ. ಸಂಬಂಧಕ್ಕೆ ಸೊಗಸು ಬರುವಂತಾದರೆ ಆ ದಿನದ ಆಚರಣೆಯಲ್ಲಿ ತಪ್ಪಿಲ್ಲ.
ಆದರೆ ಈ ದಿನಗಳು ಕೇವಲ ಮಾತಿಗೆ ಹಾಗೂ ಜಾಲತಾಣದಲ್ಲಿ ಪ್ರಾಸಬದ್ಧ ಪದಗಳನ್ನು ಜೋಡಿಸಿ ಶುಭಾಶಯ ಕೋರುವುದಕ್ಕೆ ಮಾತ್ರ ಸೀಮಿತವಾಗುತ್ತಿರುವುದು ಸುಳ್ಳಲ್ಲ. ಅಮ್ಮಂದಿರ ದಿನದಂದು ಅಮ್ಮನೊಂದಿಗೆ ಕ್ಲಿಕ್ಕಿಸಿದ ಫೊಟೋವನ್ನು ವಾಟ್ಸ್ಯಾಪ್ ಸ್ಟೇಟಸ್ಗೆ, ಫೇಸ್ ಬುಕ್, ಇನ್ಸ್ಟಾಗ್ರಾಂ ಸ್ಟೋರಿಗೆ ನೇತು ಹಾಕುವುದು ಇತ್ತೀಚೆಗೆ ರೂಢಿಯಾಗಿಬಿಟ್ಟಿದೆ. ಕನಿಷ್ಠ ಪಕ್ಷ ಅಮ್ಮಂದಿರ ದಿನದಂದಾದರೂ ಕೋಳಿ ಕೂಗುವ ಮೊದಲೇ ಎದ್ದೇಳುವ ಅಮ್ಮನ ಗೃಹಕೃತ್ಯದಲ್ಲಿ ಪಾಲ್ಗೊಳ್ಳಬಾರದೇಕೆ?
ಮನೆಯವರ ಅಷ್ಟೂ ಭಾರವನ್ನು ಸದಾ ಹೆಗಲಲ್ಲಿ ಹೊತ್ತುಕೊಂಡು ಗೂನು ಬಗ್ಗಿಸಿ ದುಡಿಯುವ ಅಪ್ಪನ ಕಷ್ಟದ ಬಗ್ಗೆ ಕೇಳಿ ತಿಳಿದುಕೊಳ್ಳುವ ಉಸಾಬರಿಗೆ ಕನಿಷ್ಟಪಕ್ಷ ಅಪ್ಪಂದಿರ ದಿನದಲ್ಲಾದರೂ ಮಕ್ಕಳು ಚಿಂತಿಸಬಾರದೇಕೆ? ಅದು ಬಿಟ್ಟು ಕೇಳಿದ ವಸ್ತುವನ್ನು ಅಪ್ಪ ತೆಗೆದುಕೊಟ್ಟಿಲ್ಲ ಎಂದು ಮುಖ ಊದಿಸಿಕೊಂಡು ಅಪ್ಪನ ದುಗುಡವನ್ನು ಮತ್ತಷ್ಟು ಹೆಚ್ಚು ಮಾಡುವ ಮಕ್ಕಳಿದ್ದರೆ ಆ ಅಪ್ಪನ ಸಂಕಟವನ್ನು ಯಾರಲ್ಲಿ ಹೇಳಿಕೊಳ್ಳುವುದು?. ಬುದ್ದಿಗೆಂದು ಎರಡು ಮಾತು ಜರೆದರೆ ಅದನ್ನೇ ಮಾತುಮಾತಿಗೂ ಹಂಗಿಸುತ್ತಾ ‘ಅಪ್ಪಂದಿರ ದಿನ’ದಂದು ಮಾತ್ರ ಪ್ರೀತಿ ಉಕ್ಕುಕ್ಕಿ ಬರುವಂತೆ ಜಾಲತಾಣದಲ್ಲಿ ಅಕ್ಷರ ತೋರಣ ಕಟ್ಟಿದರೆ ಏನು ಪ್ರಯೋಜನ?
ಪ್ರೇಮಿಗಳ ದಿನದಂದು ಪ್ರಿಯತಮನಿಗೋ, ಪ್ರೇಯಸಿಗೋ ಕಾಸ್ಟ್ಲಿ ಉಡುಗೊರೆ ನೀಡಿ ಪ್ರೇಮ ಸಿಂಚನ ನೀಡಿದ ಮಾತ್ರಕ್ಕೆ ಈರ್ವರ ನಡುವೆ ಪ್ರೀತಿ ಹೊನಲಾಗಿ ಹರಿಯುತ್ತಿದೆ ಎಂದು ಅರ್ಥೈಸಿಕೊಳ್ಳಬೇಕಿಲ್ಲ. ಏಕೆಂದರೆ ಯಾವುದೋ ಕ್ಷುಲ್ಲಕ ಕಾರಣ ಇಟ್ಟುಕೊಂಡು ಅನುಮಾನದ ಕಿಡಿ ಮನದೊಳಗೆ ಹುದುಗಿ ಹೋಗಿ ಈರ್ವರ ಪ್ರೀತಿಗೆ ಗೆದ್ದಲು ಹಿಡಿಯುವಂತಾಗುತ್ತದೆ ಎಂಬುದು ಇತ್ತೀಚಿನ ಕೆಲ ವಿದ್ಯಮಾನಗಳಿಂದ ಅರಿವಾಗುತ್ತದೆ. ಗೆಳೆಯ ತನ್ನ ಬರ್ತ್ಡೇಗೆ ವಿಶ್ ಮಾಡಿಲ್ಲವೆಂದು ಬ್ರೇಕಪ್ ಮಾಡಿಕೊಳ್ಳುವ ಗೆಳತಿ, ಕರೆ ಮಾಡಿದಾಗ ಗೆಳತಿಯ ಫೋನ್ ಎಂಗೇಜ್ ಆಗಿತ್ತೆಂದು ಆಕೆಯ ಶೀಲ ಶಂಕಿಸಿ ಪ್ರೀತಿಯ ಬೇರಿಗೆ ಎಳ್ಳು ನೀರು ಬಿಡುವ ಗೆಳೆಯ…, ಇವೆಲ್ಲಾ ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯ. ಹಾಗಿದ್ದ ಮೇಲೆ ಪ್ರೀತಿಗೊಂದು ದಿನವಿದ್ದೇನು ಪ್ರಯೋಜನ.
ಸಂಬಂಧಗಳನ್ನು ಗಟ್ಟಿಗೊಳಿಸಲೆಂದಿರುವ ದಿನದಂದು ಕೇವಲ ಢಾಂಬಿಕ ಆಚರಣೆಗೆ ಮೊರೆ ಹೋಗಿ ಅದರ ಹಿಂದಿರುವ ಉದ್ದೇಶಕ್ಕೇ ಮಸಿ ಬಳಿಯುವಂತಾದರೆ ಅಂತಹ ಆಚರಣೆಗಳು ಏಕೆ ಬೇಕು?
ಬಾಟಲಿ ಹಿಡಿದುಕೊಂಡು ಕಂಟಪೂರ್ತಿ ಕುಡಿದು ತೂರಾಡುವುದೇ ‘ಫ್ರೆಂಡ್ ಶಿಪ್ ಡೇ’ ಎಂದಂದುಕೊಂಡಂತಿದೆ ಇತ್ತೀಚಿನ ಯುವ ಜನಾಂಗ. ಬಾಟಲಿ ಶೇರ್ ಮಾಡುವ ಗೆಳೆಯರು ಕಷ್ಟಗಳನ್ನು ಪರಸ್ಪರ ಹಂಚಿಕೊಳ್ಳುವಲ್ಲಿ ಎಡವುತ್ತಾರೆ. ಅಷ್ಟು ಮಾತ್ರವಲ್ಲ., ಮೋಜು, ಮಸ್ತಿಗಾಗಿ ಮಾತ್ರ ಸೀಮಿತವಾಗುತ್ತಿರುವ ಗೆಳೆತನದ ಬಂಧ ಅದರಾಚೆಗಿನ ಲೋಕಕ್ಕೆ ಇಣುಕಿ ನೋಡುವ ಪ್ರಯತ್ನವನ್ನೇ ಮಾಡುತ್ತಿಲ್ಲ. ಎಲ್ಲರೂ ಹೀಗೆಯೇ ಇರುತ್ತಾರೆಂದಲ್ಲ. ಆದರೆ ಬಹುತೇಕ ಮಂದಿ ಇದೇ ರೀತಿಯ ವ್ಯಕ್ತಿತ್ವವನ್ನೇ ರೂಢಿಸಿಕೊಂಡಿರುತ್ತಾರೆ ಎಂಬುದು ಮಾತ್ರ ನಿತ್ಯ ಸತ್ಯ.
ನಿನ್ನ ಕಷ್ಟ ಕಾಲದಲ್ಲಿ ನಾನಿರುವೆ ಎಂದು ಧೈರ್ಯ ಹೇಳುವ ರಕ್ಷಾ ಬಂಧನವಾಗಲೀ, ಪರರ ದಾಸ್ಯದಿಂದ ಮುಕ್ತಿ ಹೊಂದಿದ ಕ್ಷಣವನ್ನು ಸಂಭ್ರಮಿಸುವ ಸ್ವಾತಂತ್ರ್ಯ ದಿನಾಚರಣೆಯಾಗಲೀ ಅಥವಾ ಸಂಬಂಧಗಳ ಬೇರುಗಳನ್ನು ಗಟ್ಟಿಗೊಳಿಸುವ ಅಪ್ಪಂದಿರ, ಅಮ್ಮಂದಿರ, ಪ್ರೇಮಿಗಳ ಅಥವಾ ಫ್ರೆಂಡ್ ಶಿಪ್ ದಿನವೇ ಆಗಿರಲಿ…ಅದಕ್ಕೊಂದು ಮಹತ್ವವಂತೂ ಇದ್ದೇ ಇದೆ. ಆ ಮಹತ್ವಕ್ಕೆ ಬೆಲೆ ಕೊಟ್ಟು ಅವುಗಳ ಆಚರಣೆಯಾದರೆ ಖಂಡಿತವಾಗಿಯೂ ಅದಕ್ಕೆ ಬೆಲೆ ಇದೆ. ಆದರೆ ಕೇವಲ ಮಾತಿಗೆ ಮಾತ್ರ ಸೀಮಿತವಾಗಿ ಅದರ ಹಿಂದಿರುವ ಮೌಲ್ಯಗಳು ಗಾಳಿಗೆ ತೂರುವಂತಾದರೆ ಅಂತಹ ಆಚರಣೆಗಳಿಂದ ಯಾವುದೇ ಒಳಿತಿಲ್ಲ.

(ಗಣೇಶ್ ಮಾವಂಜಿ ಹಿರಿಯ ಪತ್ರಕರ್ತರು ಅಂಕಣಕಾರರು)





