*ಗಣೇಶ್ ಮಾವಂಜಿ.
ವಾರದ ಹಿಂದೆ ಸುರಿದ ಭಾರೀ ಗಾಳಿ ಮಳೆಗೆ ವಿದ್ಯುತ್ ಕಂಬಗಳು ಉರುಳಿಬಿದ್ದು ಕರೆಂಟ್ ಕೈಕೊಟ್ಟಿತ್ತು. ಅದೂ ಕೂಡಾ ಕೆಲವು ಕಡೆಗಳಲ್ಲಿ ಎಷ್ಟು ದಿನಗಳು ಗೊತ್ತಾ? ಬರೋಬ್ಬರಿ ಎಂಟು ದಿನಗಳು. ಆರಂಭದ ದಿನ ಹೇಗೋ ದಿನ ಕಳೆಯಿತು. ಎಲ್ಲರೂ ‘ಇದು ಯಾವಾಗಲೂ ಇದ್ದದ್ದೇ’ ಎಂದುಕೊಂಡರು. ಮೊದಲ ದಿನ ಮೆಸ್ಕಾಂಗೆ ಕಂಪ್ಲೇಂಟ್ ಕೊಡುವ ಗೋಜಿಗೆ ಯಾರೂ ಹೋಗಲಿಲ್ಲ. ಮರುದಿನದ ಮಾತುಕತೆಯ ಪ್ರಮುಖ
ಟಾಪಿಕ್ ಎಲ್ಲರದ್ದೂ ಒಂದೇ ಆಗಿತ್ತು. ಅದೇನೆಂದರೆ ‘ಈ ಸುಟ್ಟ ಕರೆಂಟ್ ಗೆ ಏನಾಗಿದೆ? ಯಾವಾಗ ಬರ್ತದೋ ಏನೋ!.
ಆಗ ವಿಷಯ ಗೊತ್ತಿದ್ದ ಕೆಲವರು ‘ಕರೆಂಟ್ ಲೈನಿಗೆ ಮರ ಬಿದ್ದಿದೆಯಂತೆ. ಕೆಲಸ ಮಾಡ್ತಾ ಇದ್ದಾರಂತೆ. ಇವತ್ತು ಬರಬಹುದು’ ಎಂಬ ಡೈಲಾಗ್ ಉದುರಿಸಿದರಲ್ಲದೆ ಕರೆಂಟ್ಗೆ ಏನಾಗಿದೆ ಎಂದು ಕೇಳಿದವರ ಮನಸ್ಸಿನಲ್ಲಿ ಕರೆಂಟ್ ಇವತ್ತು ಬರಬಹುದು ಎಂಬ ಆಶಾವಾದ ಚಿಗುರಿಸಿದ್ದರು. ಆದರೆ ನಿರೀಕ್ಷೆ ಸುಳ್ಳಾಗಿ ಹೋಗಿತ್ತು. ದಿನ ನಾಲ್ಕು ಕಳೆದರೂ ಕರೆಂಟ್ ಮಾತ್ರ ಬರಲೇ ಇಲ್ಲ.
ಆದರೆ ಒಂದಂತೂ ನಿಜ. ಎಂಟು ದಿನಗಳ ಕಾಲ ಕರೆಂಟ್ ಕೈ ಕೊಟ್ಟ ಕಾರಣ ಹೆಚ್ಚಿನ ಊರುಗಳ ಜನರ ದಿನಚರಿ ಸುಮಾರು ನಾಲ್ಕು ದಶಕಗಳಾಚೆ ಮರಳಿ ಹೋಗುವಂತಾಗಿತ್ತು ಎಂಬುದನ್ನು ಮಾತ್ರ ಒಪ್ಪಿಕೊಳ್ಳಲೇ ಬೇಕು. ಏಕೆಂದರೆ ವಿದ್ಯುತ್ ಸಮಸ್ಯೆಯ ಕಾರಣ ಪರ್ಯಾಯ ದಾರಿಗಳೆಲ್ಲವೂ ಮುಚ್ಚಿದ ಪರಿಣಾಮ ಜನರ ಬದುಕು ವಿದ್ಯುತ್ ಇರದಿದ್ದ ಕಾಲದಲ್ಲಿ ಜೀವನ ನಿರ್ವಹಣೆ ಮಾಡುವ ಹಂತಕ್ಕೆ ತಲುಪಿದ್ದು ಸುಳ್ಳಲ್ಲ.

ಹೆಚ್ಚಿನವರ ಮೊಬೈಲ್ ಕೂಡಾ ಚಾರ್ಜ್ ಇಲ್ಲದೆ ಸ್ವಿಚ್ ಆಫ್ ಆಗಿತ್ತು. ಕರೆಂಟ್ ಇಲ್ಲದ ಕಾರಣ ಪ್ರತಿದಿನ ಟಿವಿಯಲ್ಲಿ ಧಾರಾವಾಹಿ ನೋಡುವ ಹುಚ್ಚಿದ್ದವರ ಪಾಡಂತೂ ಹೇಳ ತೀರದಾಗಿತ್ತು. ಕೆಲವರಿಗೆ ಧಾರಾವಾಹಿಯಲ್ಲಿದ್ದ ಹಾಸಿಗೆ ಹಿಡಿದ ಅಜ್ಜಿ ಇಹಲೋಕ ತ್ಯಜಿಸಿ ಹೋಗಿರಬಹುದೇನೋ ಎಂಬ ಚಿಂತೆ. ಮತ್ತೆ ಕೆಲವರಿಗೆ ವಿಲನ್ ಪಾತ್ರಾಧಾರಿಯ ಪ್ಲ್ಯಾನ್ ಸಕ್ಸಸ್ ಆಗಿ ಹೀರೋಗೆ ಕಂಟಕ ಅಮರಿರಬಹುದೇನೋ ಎಂಬ ಆತಂಕ. ಇನ್ನು ಹಲವರಿಗೆ ರಿಯಾಲಿಟಿ ಶೋದ ವಿನ್ನರ್ ಯಾರಾಗಿರಬಹುದೆಂಬ ಕುತೂಹಲ. ಆದರೆ ಯಾವುದೇ ಆತಂಕ, ಕುತೂಹಲ ಇದ್ದರೂ ಕರೆಂಟ್ ಇಲ್ಲದೆ ಟಿವಿ ಹಾಕುವಂತಿಲ್ಲವಾದ್ದರಿಂದ ಅನಿವಾರ್ಯವಾಗಿ ತೆಪ್ಪಗಿರುವಂತಾಗಿತ್ತು. ಸದಾ ಮೊಬೈಲ್ ಒತ್ತುವವರೂ ಕೂಡಾ ಹೆಚ್ಚು ಒತ್ತದೆ ನಾಳೆಗಾಗಿ ಮೊಬೈಲ್ ಚಾರ್ಜ್ ಉಳಿಸುವ ನಿರ್ಧಾರ ಕೈಗೊಳ್ಳಬೇಕಾಗಿ ಬಂತು. ಟಿವಿ ನೋಡುತ್ತಲೋ, ಮೊಬೈಲ್ ಉಜ್ಜುತ್ತಲೋ ಹೊಟ್ಟೆಗಿಳಿಸುತ್ತಿದ್ದ ಮಂದಿಯಂತೂ ಬಾಯಿತುಂಬಾ ತಮ್ಮವರೊಂದಿಗೆ ಹರಟೆ ಹೊಡೆಯುವಂತಾಗಿತ್ತು. ಕೆಲವೆಡೆ ಟಿವಿ, ಮೊಬೈಲ್ ಇಲ್ಲದೆ ರಾತ್ರಿ ಎಂಟು ಗಂಟೆಗೇ ತಿಂದುಂಡು ಮಲಗುವಂತಾಗಿತ್ತು. ಸದಾ ಫ್ಯಾನ್ ಹಾಕಿಯೇ ನಿದ್ರಾದೇವಿಯ ಆಲಿಂಗನಕ್ಕೆ ಒಳಗಾಗುತ್ತಿದ್ದವರು ನಿದ್ರೆ ಬರದೆ ಹೊರಳಾಡುವಂತಾಗಿತ್ತು.

ಅದಕ್ಕಿಂತಲೂ ಮಿಗಿಲಾದ ವಿದ್ಯಮಾನ ಯಾವುದೆಂದರೆ ಬೆಳಗ್ಗಿನ ಉಪಹಾರದ ಕತೆ! ಆಗಲೇ ಹೇಳಿದಂತೆ ಕರೆಂಟ್ ಬಂದ ಮೇಲೆ ಹಿಟ್ಟು ರುಬ್ಬುವ ಸಾಂಪ್ರದಾಯಿಕ ಕಡೆಯುವ ಕಲ್ಲು ಹೆಚ್ಚಿನ ಎಲ್ಲಾ ಮನೆಗಳಲ್ಲೀಗ ಮೂಲೆ ಸೇರಿದೆ. ಮಿಕ್ಸಿಯ ಆಗಮನದ ಬಳಿಕ ಕಲ್ಲಿನಲ್ಲಿ ಕಡೆಯುವ ಕೆಲಸಕ್ಕೆ ಯಾರೂ ಹೋಗುವವರಿಲ್ಲದಂತಾಗಿದೆ. ಪರಿಣಾಮ ಕರೆಂಟ್ ಇಲ್ಲದಿದ್ದಾಗ ಎಲ್ಲರ ಮನೆಯಲ್ಲೂ ಬೆಳಗ್ಗಿನ ಉಪಹಾರಕ್ಕೆ ಉಪ್ಪಿಟ್ಟು, ಚಿತ್ರಾನ್ನ, ಪುಲಾವು…, ಹೀಗೆ ಅಕ್ಕಿ ರುಬ್ಬದೆ ಮಾಡುವ ತಿನಿಸುಗಳೇ ಜಾಗ ಪಡೆದುಕೊಳ್ಳುತ್ತವೆ. ಇದು ಎಷ್ಟು ಸಾಮಾನ್ಯ ಎಂದರೆ ಯಾರಾದರೂ ಎದುರಿಗೆ ಸಿಕ್ಕಿದಾಗ ‘ ಚಾ ಕುಡಿದಾಯ್ತಾ? ಎಂತ ಚಾಯಕ್ಕೆ? ‘ ಎಂದು ಕೇಳಿದಾಗ ‘ಸಜ್ಜಿಗೆ, ಪುಲಾವು….’ ಎಂಬ ಉತ್ತರ ಬರುವಂತಾಗಿದೆ. ಒಂದು ವೇಳೆ ಬೆಳಗ್ಗಿನ ತಿಂಡಿಯ ಪಟ್ಟಿಯಲ್ಲಿ ಸಜ್ಜಿಗೆ, ಪುಲಾವ್ಗಳು ಜಾಗ ಪಡೆದುಕೊಂಡರೆ ಆ ಮನೆಯಲ್ಲಿ ಆ ದಿನ ಕರೆಂಟ್ ಕೈ ಕೊಟ್ಟಿದೆ ಎಂದೇ ಅರ್ಥ.
ಒಂದು ಲೆಕ್ಕದಲ್ಲಿ ಅದೂ ಕೂಡಾ ಒಳ್ಳೆಯದೇ ಆಯಿತು. ಏಕೆಂದರೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ ಭಾಗದ ಹೆಚ್ಚಿನ ಕಡೆಗಳಲ್ಲಿ ಬೆಳಗ್ಗಿನ ಉಪಹಾರಕ್ಕೆ ಪ್ರಧಾನ ಪಾತ್ರ ವಹಿಸುವ ತಿಂಡಿ ಅದು ‘ಬಡ್ರೊಟ್ಟಿ’. ಇದಕ್ಕೆ ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ಹೆಸರುಗಳೂ ಇವೆ. ಒಂದರ್ಥದಲ್ಲಿ ‘ದೇವರೊಬ್ಬನೇ ನಾಮ ಹಲವು’ ಎಂಬಂತೆ ಬೆಳ್ತಿಗೆ ಅಕ್ಕಿಯಿಂದ ತಯಾರಿಸುವ ಈ ಅಕ್ಕಿ ರೊಟ್ಟಿಗೆ ಹಲವು ಕಡೆ ಹಲವು ಹೆಸರುಗಳು. ಬಡ್ರೊಟ್ಟಿ, ಅಕ್ಕಿ ರೊಟ್ಟಿ, ರೊಟ್ಟಿ, ಕಲ್ಲು ಕಾವಲಿ ಎಂಬೆಲ್ಲಾ ವಿವಿಧ ಹೆಸರುಗಳಿದ್ದರೂ ಇವುಗಳೆಲ್ಲಾ ಒಂದೇ ಎಂಬುದು ವಾಸ್ತವ. ಎಣ್ಣೆ ಬಳಸದೆ ತಯಾರಿಸುವ ತಿಂಡಿಯಾದ್ದರಿಂದ ಹಾಗೂ ಸುಲಭದಲ್ಲಿ ಮಾಡಬಹುದಾಗಿದ್ದರಿಂದ ಈ ಕಡೆ ಹೆಚ್ಚಿನ ಮಹಿಳೆಯರು ಇದೇ ತಿಂಡಿಯನ್ನು ಮಾಡುತ್ತಾರೆ. ಇದನ್ನೇ ತಿಂದು, ಜಗಿದು ಬೇಸತ್ತ ಕೆಲವರು ಇದಕ್ಕೆ ಕಮ್ಯೂನಿಸ್ಟ್ (ಪಾರ್ಥೇನಿಯಂ) ಎಂಬ ಅಡ್ಡ ನಾಮಧೇಯವನ್ನೂ ಇರಿಸಿದ್ದಾರೆ. ಕಮ್ಯೂನಿಸ್ಟ್ ಎಂದು ಕರೆಯಲ್ಪಡುವ ಈ ಗಿಡ ಹೋದಲ್ಲೆಲ್ಲಾ ಕಾಣಸಿಗುವಂತೆ ಈ ರೊಟ್ಟಿಯೂ ಸರ್ವಂತರ್ಯಾಮಿ ಆದಕಾರಣ ಈ ತಿಂಡಿಗಿರುವ ವ್ಯಂಗ್ಯದ ಹೆಸರದು. ಆದರೆ ಕರೆಂಟ್ ಇಲ್ಲದಿದ್ದರೆ ಈ ಅಕ್ಕಿ ರೊಟ್ಟಿಗೆ ಆ ದಿನ ಆ ಮನೆಯಲ್ಲಿ ಜಾಗ ಇರಲಾರದು. ಅದರ ಜಾಗಕ್ಕೆ ಅಕ್ಕಿ ರುಬ್ಬದೆ ಮಾಡುವ ಉಪ್ಪಿಟ್ಟುನಂತಹ ತಿಂಡಿಗಳು ಎಂಟ್ರಿ ಪಡೆಯುತ್ತವೆ.
ಹಿಂದೆಲ್ಲಾ ಪಾತ್ರೆ ತೊಳೆಯಲು ಸನಿಹದ ಹಳ್ಳ, ಕೊಳ್ಳಕ್ಕೆ ಹೋಗುವುದು ಸರ್ವೇ ಸಾಮಾನ್ಯ ಆಗಿತ್ತು. ಆದರೆ ಕರೆಂಟ್ ಬಂದ ಬಳಿಕ ಮನೆಯೊಳಗೆ ನಳ್ಳಿ ನೀರಿನ ವ್ಯವಸ್ಥೆಯಾದ ನಂತರ ಈ ವಿದ್ಯಮಾನ ಮರೆಯಾಗಿ ಹೋಗಿತ್ತು.

ಮೊನ್ನೆ ಎಂಟು ದಿನ ಕರೆಂಟ್ ಇಲ್ಲದಿದ್ದಾಗ ಹಳ್ಳಿಗಾಡಿನ ಹೆಚ್ಚಿನ ಮಹಿಳೆಯರು ಪಾತ್ರ ತೊಳೆಯಲು ಸನಿಹದ ತೋಡಿಗೆ ಪಾದ ಬೆಳೆಸಿದ್ದರು.
ಯಾಂತ್ರಿಕ ಬದುಕಿಗೆ ಹೊಂದಿಕೊಂಡಿದ್ದ ಕಾರಣ ಹೆಚ್ಚಿನವರ ಮನೆ ಮುಂದೆ ಇದ್ದ ಬಾವಿಗೆ ಹಗ್ಗ ಹಾಕಿ ನೀರೆಳೆಯುವ ಪದ್ಧತಿ ಈಗ ಮರೆಯಾಗಿ ಹೋಗಿದೆ. ಕೆಲವರು ಬಾವಿ ಮುಚ್ಚಿ ಕೊಳವೆ ಬಾವಿ (ಬೋರ್) ಯನ್ನು ನೆಚ್ಚಿಕೊಂಡಿದ್ದಾರೆ. ಮತ್ತೆ ಕೆಲವರ ಮನೆಯಲ್ಲಿ ಬಾವಿ ಇದ್ದರೂ ಅದಕ್ಕೆ ನೀರೆತ್ತುವ ಮೋಟಾರ್ ಪಂಪ್ ಜೋಡಿಸಿದ್ದ ಕಾರಣ ನೀರೆಳೆಯುವ ಹಗ್ಗ ಅಟ್ಟ ಸೇರಿದೆ. ಆದರೆ ಕರೆಂಟ್ ಕೈ ಕೊಟ್ಟ ಕಾರಣ ಮನೆ ಮೇಲಿನ ಟಾಂಕಿಗೆ ನೀರು ಹಾಕುವಂತಿರಲಿಲ್ಲ. ಸಣ್ಣ ಟಾಂಕಿ ಹೊಂದಿರುವವರ ನೀರು ಎರಡೇ ದಿನಕ್ಕೆ ಖಾಲಿಯಾದರೆ ಸ್ವಲ್ಪ ದೊಡ್ಡ ಟಾಂಕಿ ಹೊಂದಿರುವವರದ್ದೂ ಮೂರ್ನಾಲ್ಕು ದಿನಗಳಲ್ಲಿ ಬರಿದಾಗಿ ಹೋಗಿತ್ತು. ಹೀಗಾಗಿ ಕೆಲವರ ಬಾವಿಗೆ ಮೊನ್ನೆ ಹೊಸ ಹಗ್ಗ, ರಾಟೆ ಬರುವಂತಾಗಿತ್ತು. ಮತ್ತೆ ಕೆಲವೆಡೆ ಕೆರೆಯ ಕಡೆ ಸಾಗುವ ದಾರಿಯನ್ನು ಸ್ವಚ್ಛಗೊಳಿಸಲಾಗಿತ್ತು. ಸದಾ ನಳ್ಳಿ ತಿರುಗಿಸುವ ಮಂದಿಯ ಸೊಂಟದಲ್ಲಿ ನೀರು ತುಂಬಿದ ಕೊಡ ಬಳುಕುವಂತಾಗಿತ್ತು. ಲೀಟರ್ ಗಟ್ಟಲೆ ನೀರು ವ್ಯಯಿಸಿ ಬಾತ್ರೂಂ, ಟಾಯ್ಲೆಟ್ ನಲ್ಲಿ ಗಂಟೆಗಟ್ಟಲೆ ಹಾಡು ಹಾಡುವವರೂ ನೀರಿನ ಮಿತವ್ಯಯದ ಮಂತ್ರಪಠನೆ ಮಾಡುವಂತಾಗಿತ್ತು.
ಅಷ್ಟು ಮಾತ್ರವಲ್ಲ. ಒಂದೆರಡು ದಿನಕ್ಕೆ ಕರೆಂಟ್ ಸ್ಟಾಕ್ ಮಾಡಿ ಬೆಳಕು ಕೊಡುತ್ತಿದ್ದ ಇನ್ವರ್ಟರ್ ಕೂಡಾ ‘ನನಗಿನ್ನು ಸಾಧ್ಯವೇ ಇಲ್ಲ’ ಎಂಬಂತೆ ಕೂಗಿ ಹೇಳಿ ನಿದ್ದೆಗೆ ಶರಣಾಗಿ ಹೋಗಿತ್ತು. ಹಾಗಾಗಿ ರಾತ್ರಿಯಾಗುತ್ತಿದ್ದಂತೆ ಕ್ಯಾಂಡಲ್ ನ ಬೆಳಕಿನಲ್ಲಿ ದಿನ ದೂಡುವಂಳತಾಗಿತ್ತು. ಅಂದೆಲ್ಲಾ ಸೀಮೆ ಎಣ್ಣೆ ಬಳಸಿ ಚಿಮಿಣಿ ದೀಪ ಉರಿಸಬಹುದಾಗಿತ್ತಾದರೂ ಸೀಮೆ ಎಣ್ಣೆ ಲಭ್ಯವಿರದ ಕಾರಣ ಆ ದೀಪ ಕೂಡಾ ಇದೀಗ ಮೂಲೆ ಸೇರುವಂತಾಗಿದೆ. ಡೀಸೆಲ್ ಬಳಕೆ ಮಾಡಿ ದೀಪ ಉರಿಸಬಹುದಾದರೂ ಅದು ಉಗುಳುವ ಹೊಗೆಯಿಂದಾಗಿ ಸುಣ್ಣಬಣ್ಣ ಬಳಿದ ಗೋಡೆಗೆ ಕರಿ ಮೆತ್ತುವ ಅಪಾಯ ಇರುವ ಕಾರಣ ಅದರ ಬಳಕೆ ತೀರಾ ವಿರಳ.
ವರ್ಷಗಳ ಹಿಂದೆ ಕೊರೊನಾ ಬಂದಾಗಲೂ ಜಗತ್ತಿನ ದಿನಚರಿ ಹಿಮ್ಮುಖವಾಗಿ ಚಲಿಸಿತ್ತು. ಸದಾ ಹೊರಗಿರುತ್ತಿದ್ದ ಮನೆ ಮಂದಿ ಹಿಂದಿನ ಕಾಲದಂತೆ ಒಟ್ಟಿಗೆ ಕೂತು ಉಣ್ಣುವಂತಾಗಿತ್ತು. ಮಕ್ಕಳು, ಮರಿಗಳಿಗಾಗಿ ಹೆಚ್ಚಿನ ಸಮಯ ಮೀಸಲಿಡುವಂತಾಗಿತ್ತು. ಆದರೆ ಕೊರೊನಾ ಮಾರಿ ಕಾಲ್ಕಿತ್ತ ಪರಿಣಾಮ ಜಗತ್ತು ಮತ್ತೆ ಎಂದಿನ ವೇಗಕ್ಕೆ ಹೊಂದಿಕೊಂಡಿತ್ತು. ಆದರೆ ಆಗಾಗ ಕೈ ಕೊಡುವ ಕರೆಂಟ್ಗೆ ಕೂಡಾ ಒಮ್ಮೊಮ್ಮೆ ಗತಕಾಲದ ನೆನಪುಗಳನ್ನು ಹತ್ತಿರಕ್ಕೆಳೆಯುವ ಶಕ್ತಿ ಇದೆ ಎಂಬುದು ಮೊನ್ನೆ ಸುದೀರ್ಘ ಸಮಯದವರೆಗೆ ಕರೆಂಟ್ ಕೈ ಕೊಟ್ಟಾಗ ಗೊತ್ತಾಗಿ ಹೋಗಿತ್ತು.

(ಗಣೇಶ್ ಮಾವಂಜಿ ಹಿರಿಯ ಪತ್ರಕರ್ತರು, ಅಂಕಣಕಾರರು).





