*ಪಿ.ಜಿ.ಎಸ್.ಎನ್.ಪ್ರಸಾದ್.
” ನೆನೆವುದೆನ್ನ ಮನಂ ಮಲೆನಾಡ .. ಮಳೆನಾಡ ವೈಭವಂ “
ಮಳೆಗಾಲ ಬಂದೇ ಬಿಡ್ತು. ಕರಾವಳಿಯುದ್ದಕ್ಕೂ ವ್ಯಾಪಿಸಿದ ನೈರುತ್ಯ ಮುಂಗಾರು ಮಾರುತ. ಇಂದು ಕರಾವಳಿಯ ಹೆಚ್ಚಿನ ಕಡೆ ಉತ್ತಮ ಮಳೆಯಾಗಿದೆ. ಸಾಮಾನ್ಯವಾಗಿ ಜೂನ್ 6 ನೈರುತ್ಯ ಮುಂಗಾರು ಕರ್ನಾಟಕ ಕರಾವಳಿ ಪ್ರವೇಶಿಸುವ ವಾಡಿಕೆ ದಿನ. ಕಳೆದ 1976 ರಿಂದ
ಅಂದರೆ ಕಳೆದ 48 ವರ್ಷಗಳಲ್ಲಿ ತಡವಾಗಿ ಮುಂಗಾರು ಮಳೆ ಆರಂಭವಾಗಿರುವುದು ಈ ವರ್ಷವೂ ಸೇರಿದಂತೆ ಹದಿಮೂರು ಬಾರಿ. ಈ ಅನೇಕ ವರ್ಷಗಳಲ್ಲಿ ಅರಬ್ಬೀಸಮುದ್ರ ದಲ್ಲಿ ಕಂಡು ಬಂದ ಚಂಡಮಾರುತಗಳು ಮುಂಗಾರು ಮಾರುತದ ಮೇಲೆ ಪ್ರಭಾವ ಬೀರಿದ್ದೂ ಇದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹವನ್ನು ಮೇ 19 ರಂದೇ ನೈರುತ್ಯ ಮುಂಗಾರು ಪ್ರವೇಶಿಸಿತ್ತು.ಮತ್ತೆ ಅಲ್ಲೇ ಅನೇಕ ದಿನ ಝಂಡಾ ಹೂಡಿತ್ತು. ಸಾಮಾನ್ಯವಾಗಿ ಅಂಡಮಾನ್ ಪ್ರವೇಶಿಸಿದ ಮುಂಗಾರು ಇತ್ತ ಕೇರಳ ಪ್ರವೇಶಿಸಲು ಮತ್ತೆ ಹದಿನೈದು ದಿನಗಳ ಕಾಲ ಬೇಕಾಗುತ್ತದೆ. ಎಲ್ಲವೂ ಗಾಳಿಯ ಚಲನೆ, ಬಂಗಾಳಕೊಲ್ಲಿಯ ಚಂಡಮಾರುತ ಅರಬ್ಬೀಸಮುದ್ರ ಪ್ರವೇಶಿಸುವ ಸಾಧ್ಯತೆಯನ್ನು
ಹೊಂದಿಕೊಂಡು ವ್ಯತ್ಯಯ ಆಗುತ್ತದೆ. ಈ ಸಲವೂ ಬಂಗಾಳಕೊಲ್ಲಿಯಲ್ಲಿ ಕಾಣಿಸಿಕೊಂಡ ‘ಮೋಚಾ’ ಚಂಡಮಾರುತ ಮುಂಗಾರು ಮಾರುತದ ನಿಧಾನ ಚಲನೆಯ ಮೇಲೆ ಪ್ರಭಾವ ಬೀರಿದೆ. ಈಗ ಸ್ಪಷ್ಟ ಚಿತ್ರಣ ಸಿಕ್ಕಿದಂತೆ ಅನಿಸುತ್ತದೆ. ಅರಬ್ಬಿ ಸಮುದ್ರದಲ್ಲಿ ಜೂನ್ ಪ್ರಥಮ ವಾರವೇ ರೂಪುಗೊಂಡ ‘ಬಿಪರ್ಜಾಯ್’ ಚಂಡಮಾರುತ ದೂರ ಸರಿಯುತ್ತಿದ್ದಂತೆ ಮುಂಗಾರು ಕಾಲಿಟ್ಟಿದೆ. ಕಳೆದ ಕೆಲದಿನಗಳಿಂದ ಉತ್ತರ ಭಾರತದಲ್ಲಿನ ತಾಪಮಾನ ಸಾಮಾನ್ಯಕ್ಕಿಂತ ಅಧಿಕವಾಗಿರುವುದು ಕೂಡಾ ತಮಿಳುನಾಡು, ಕೇರಳ, ಕರ್ನಾಟಕದ ಅನೇಕ ಕಡೆ ಮಳೆ ಸುರಿಯಲು ಕಾರಣವಾಗಿದೆ. ಮೇ ತಿಂಗಳ ಮಧ್ಯಭಾಗದ ನಂತರ ಉತ್ತರಭಾರತದಲ್ಲಿ ತಾಪಮಾನ ಗರಿಷ್ಟ ಪ್ರಮಾಣ ತಲುಪಿ ಮುಂಗಾರು ಭಾರತೀಯ ಉಪಖಂಡ ಪ್ರವೇಶಿಸಲು ಅನುಕೂಲಕರ ವಾತಾವರಣ ನಿರ್ಮಾಣವಾಗುವುದು ಸರ್ವೇಸಾಮಾನ್ಯ. ಆದರೆ ಚಂಡಮಾರುತಗಳು ಮುಂಗಾರು ಪ್ರವೇಶದ ಲೆಕ್ಕಾಚಾರ ಅಡಿಮೇಲು ಮಾಡಿದ ಪ್ರಸಂಗಗಳು ಹಲವಾರು ಇವೆ. ಮುಂಗಾರು ಅವಧಿಪೂರ್ವ ಆರಂಭವಾದಾಗಲೂ ದುರ್ಬಲವಾಗಿಯೇ ಸಾಗಿದ ಉದಾಹರಣೆಗಳೂ ಇವೆ. ಅಂದ ಹಾಗೆ 2019 ರಲ್ಲಿ ಬಹಳಷ್ಟು ತಡವಾಗಿ ಅಂದರೆ ಜೂನ್ 14 ರಂದು ಕರಾವಳಿ ಸಮೀಪ ಬಂದ ಮುಂಗಾರು ದ.ಕ ದ ಒಳಭಾಗವನ್ನು ಪ್ರವೇಶಿಸಿದ್ದು ಜೂನ್ 19 ರಂದು. (1976 ರಿಂದ ಈಚೆಗೆ ತಡವಾಗಿ ಮಳೆಗಾಲ ಆರಂಭವಾದ ವರ್ಷಗಳ ವಿವರವನ್ನು ಕೋಷ್ಟಕದಲ್ಲಿ ಕಾಣಬಹುದು) ಎಲ್ ನಿನೋ ಪ್ರಭಾವದಿಂದ ಈ ವರ್ಷದ
ಮಳೆ ಸರಾಸರಿಗಿಂತ ಸ್ವಲ್ಪ ಕಡಿಮೆ ಇರಬಹುದು ಎನ್ನಲಾಗಿದೆ. ಸ್ವಾಭಾವಿಕವಾಗಿ ಮೂರು ವರ್ಷ ಸರಾಸರಿಗಿಂತ ಅಧಿಕ ಮಳೆ ಸುರಿದರೆ ನಂತರದ ಎರಡು ವರ್ಷ ಸರಾಸರಿಗಿಂತ ಕಡಿಮೆ ಮಳೆ ಇರುತ್ತದೆ. ಆದರೆ ಕಳೆದ ಐದು ವರ್ಷಗಳಲ್ಲಿ ಅಪರೂಪದ ವಿದ್ಯಮಾನವೆಂಬಂತೆ ಸರಾಸರಿಗಿಂತ ಅಧಿಕ ಮಳೆ ಸುರಿದಿದೆ ಆ ದೃಷ್ಟಿಯಿಂದ ನೋಡಿದಾಗಲೂ ಈ ವರ್ಷ ಸರಾಸರಿಗಿಂತ ಸ್ವಲ್ಪ ಕಡಿಮೆ ಇರಬಹುದು.
(ಪಿಜಿಎಸ್ಎನ್ ಪ್ರಸಾದ್ ಪ್ರಗತಿಪರ ಕೃಷಿಕರು. ಹವಾಮಾನ ಅಧ್ಯಯನಾಸಕ್ತರು, ಮಳೆ ದಾಖಲೆಗಾರರು)
ಪಿಜಿಎಸ್ಎನ್ ಪ್ರಸಾದ್ .