ಸುಳ್ಯ: ಅತ್ಯಂತ ಸಂಕೀರ್ಣವಾದ ಮತ್ತು ಅಪರೂಪವಾದ ಶಸ್ತ್ರ ಚಿಕಿತ್ಸೆಯ ಮೂಲಕ ಸುಳ್ಯದ ಪಶು ವೈದ್ಯಾಧಿಕಾರಿಗಳ ತಂಡ ಹಸುವಿನ ಹೊಟ್ಟೆಯಿಂದ ಕರುವನ್ನು ಹೊರ ತೆಗೆದು ಹಸುವನ್ನು ಬದುಕಿಸಿದ ಪ್ರಸಂಗ ನಡೆದಿದೆ. ಕೌಡಿಚಾರಿನ ಸುದೇಶ ಅವರ ಮನೆಯಲ್ಲಿ ಜರ್ಸಿ ಮಿಶ್ರ ತಳಿಯ ಹಸುವೊಂದು ಪ್ರಸವ ವೇದನೆಯಲ್ಲಿ ಬಳಲುತ್ತಿತ್ತು.
ವಿಷಯ ತಿಳಿದ ಸುಳ್ಯದ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ
ಸಹಾಯಕ ನಿರ್ದೇಶಕರು ಹಾಗೂ ಪಶು ಆಸ್ಪತ್ರೆಯ ಹಿರಿಯ ಪಶು ವೈದ್ಯಾಧಿಕಾರಿಗಳಾದ ಡಾ ನಿತಿನ್ ಪ್ರಭು ನೇತೃತ್ವದಲ್ಲಿ
ಸುಳ್ಯದ ಪಶು ಆಸ್ಪತ್ರೆ ವೈದ್ಯರ ತಂಡದಿಂದ ಪಶು ಸಂಜೀವಿನಿ ಸಂಚಾರಿ ಪಶು ಚಿಕಿತ್ಸಾ ಘಟಕದ ಸೇವೆಯೊಂದಿಗೆ ಶಸ್ತ್ರಚಿಕಿತ್ಸೆಯ ಮೂಲಕ ಕರುವನ್ನು ಹೊರ ತೆಗೆಯಲಾಗಿದೆ. ಗರ್ಭಕೋಶದೊಳಗೆ ಅಸಹಜ ಬೆಳವಣಿಗೆಯಿಂದ ಕುರೂಪವಾಗಿದ್ದ ಕರುವನ್ನು ಹೊರತೆಗೆಯಲಾಗಿದ್ದು ಹಸು ಆರೋಗ್ಯದಿಂದ ಇದೆ. ಹಸುಗಳಲ್ಲಿ ಕಂಡು ಬರುವ ಈ ಸಮಸ್ಯೆಗೆ ‘ಸಿಸ್ಟೋಝೋಮ ರೆಫ್ಲೆಕ್ಸ್’ ಎಂದು ಕರೆಯಲಾಗುತ್ತದೆ
ಕರು ಗರ್ಭಕೋಶದ ಒಳಗೆ ಸುಮಾರು ಎರಡು ದಿನಗಳ ಹಿಂದೆಯೇ ಸತ್ತಿರಬಹುದು. ಅದರ ಬೆಳವಣಿಗೆ ತೀರ ಅಸಹಜವಾಗಿದ್ದು ಅದರ ಹೊಟ್ಟೆಯ ಭಾಗ ಮುಚ್ಚಿಕೊಳ್ಳದೆ ಅಂಗಾಂಗಗಳೆಲ್ಲ ಗರ್ಭಕೋಶದ ಒಳಗೆ ತೇಲಾಡುತ್ತಾ ಇದ್ದವು. ಸ್ವಾಭಾವಿಕವಾಗಿ ಈ ಕರುವಿಗೆ ತಾಯಿ ಜನ್ಮ ನೀಡಲು ಸಾಧ್ಯವಿರಲಿಲ್ಲ ಎಂದು ಡಾ.ನಿತಿನ್ ಪ್ರಭು ಹೇಳುತ್ತಾರೆ. ಈ ಶಸ್ತ್ರ ಚಿಕಿತ್ಸೆಯ ಮೂಲಕ ಕರುವನ್ನು ಹೊರ ತೆಗೆಯಲಾಗಿದ್ದು ಹಸು ಆರೋಗ್ಯದಿಂದಿದೆ ಎಂದು ಅವರು ತಿಳಿಸಿದ್ದಾರೆ. ಪಶು ಆಸ್ಪತ್ರೆಯ
ಹಿರಿಯ ಪಶುವೈದ್ಯಾಧಿಕಾರಿ ಡಾ ನಿತಿನ್ ಪ್ರಭು ಜೊತೆ ತಂಡದಲ್ಲಿ ಪಶು ಆಸ್ಪತ್ರೆ ಸುಳ್ಯದ ಸಂಚಾರಿ ಪಶು ಚಿಕಿತ್ಸಾಲಯ ಪಶು ಸಂಜೀವಿನಿ ಘಟಕದ ವೈದ್ಯರಾದ ಡಾ. ನಾಗರಾಜ್ , ಸಿಬ್ಬಂದಿ ಶ್ರೀವತ್ಸ ವಾಹನ ಚಾಲಕರದ ಪ್ರಜ್ವಲ್ ಬರೆಮೇಲು. ಮತ್ತು ಡಿ ದರ್ಜೆ ನೌಕರರಾದ ಹರೀಶ ಇದ್ದರು