ಸುಳ್ಯ:ಸುಳ್ಯ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ನಗರದ ಕಲ್ಲುಮುಟ್ಲುವಿನಲ್ಲಿ ನಿರ್ಮಾಣಗೊಂಡಿರುವ ವೆಂಟೆಡ್ ಡ್ಯಾಮನ್ನು ಮಾಜಿ ಸಚಿವ ಎಸ್.ಅಂಗಾರ ಅವರು ವೀಕ್ಷಿಸಿದರು. ಅಂಗಾರ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆಯ ವತಿಯಿಂದ 17 ಕೋಟಿ ಅನುದಾನ ಬಿಡುಗಡೆಯಾಗಿ ವೆಂಟೆಡ್ ಡ್ಯಾಂ ನಿರ್ಮಾಣ ಆಗಿದೆ.ಕೇವಲ 6 ತಿಂಗಳಲ್ಲಿ ಪೂರ್ಣಗೊಂಡಿದೆ. ಕಾಮಗಾರಿ ಬಹುತೇಕ
ಪೂರ್ಣಗೊಂಡಿದ್ದು ಉದ್ಘಾಟನೆಗೆ ಸಿದ್ಧಗೊಂಡಿದೆ.
ಸುಳ್ಯ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಒದಗಿಸಲು ಮತ್ತು ಅಂತರ್ಜಲ ವೃದ್ಧಿಗೆ ಪೂರಕವಾಗಿ ಇಲ್ಲಿ ವೆಂಟೆಡ್ ಡ್ಯಾಂ ನಿರ್ಮಾಣ ಅಗಿದೆ ಎಂದು ಅಂಗಾರರು ಹೇಳಿದರು. ನಗರ ಪಂಚಯತ್ ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಜ, ಸದಸ್ಯರಾದ ಬುದ್ಧ ನಾಯ್ಕ್, ಸುಧಾಕರ ಕುರುಂಜಿಗುಡ್ಡೆ, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ, ಜಗದೀಶ್ ಸರಳಿಕುಂಜ,ಮುರಳಿ ಭೀಮಾಜಿಗೋಡ್ಲು, ಲೋಕೇಶ್ ಕುಂಚಡ್ಕ ಮತ್ತಿತರರು ಉಪಸ್ಥಿತರಿದ್ದರು.
ದಾಖಲೆ ವೇಗದಲ್ಲಿ ನಿರ್ಮಾಣ:
ವೆಂಟೆಡ್ ಡ್ಯಾಂ ನಿರ್ಮಣ ಕಾಮಗಾರಿ ದಾಖಲೆ ವೇಗದಲ್ಲಿ ಪೂರ್ತಿಗೊಂಡಿದೆ. ಡಿಸೆಂಬರ್ ತಿಂಗಳಲ್ಲಿ ಎಸ್.ಅಂಗಾರ ಅವರು ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಕೇವಲ 6 ತಿಂಗಳಲ್ಲಿ ವೆಂಟೆಡ್ ಡ್ಯಾಂನ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಕಾಮಗಾರಿ ಮುಗಿಸಲು 11 ತಿಂಗಳ ಕಾಲಾವಕಾಶ ಇದ್ದರೂ ಮಳೆಗಾಲಕ್ಕೆ ಮುನ್ನ ಕಾಮಗಾರಿ ನಡೆದಿದೆ. 10.5 ಮೀಟರ್ ಎತ್ತರದಲ್ಲಿ ಡ್ಯಾಂ ನಿರ್ಮಾಣವಾಗಿದೆ. ಡ್ಯಾಂನ ಮೇಲೆ ಸೇತುವೆ ಮಾದರಿಯಲ್ಲಿ ರಸ್ತೆ, ವಾಕಿಂಗ್ ಬ್ರಿಡ್ಜ್ ನಿರ್ಮಿಸಲಾಗಿದೆ. ಗೇಟ್ಗಳು ಹಾಗೂ ಡ್ಯಾಂನ ನಿರ್ವಹಣೆಗಾಗಿ ರಸ್ತೆ ನಿರ್ಮಾಣ ಮಾಡಲಾಗಿದೆ. ಕಳೆದ ತಿಂಗಳು ಪ್ರಾಯೋಗಿಕವಾಗಿ ಗೇಟ್ ಅಳವಡಿಸಿ ನೀರು ಶೇಖರಣೆ ಮಾಡಲಾಗಿದೆ. ಈ ವರ್ಷ ಪ್ರಯೋಗಿಕವಾಗಿ ಗೇಟ್ ಹಾಕಿ ನೀರು ಸಂಗ್ರಹ ಮಾಡಲಾಗುವುದು. ಮುಂದಿನ ಬೇಸಿಗೆಯಲ್ಲಿ ಡ್ಯಾಂನಲ್ಲಿ ನೀರು ಸಂಗ್ರಹ ನಡೆಯಲಿದೆ. 3 ಮೀಟರ್ ಎತ್ತರದಲ್ಲಿ ನೀರು ಸಂಗ್ರಹ ಮಾಡಲಾಗುತ್ತದೆ.
ಸುಳ್ಯ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ತೀರಾ ಹಳೆಯದಾದ ವ್ಯವಸ್ಥೆಯಿಂದಾಗಿ ಕಳೆದ ಹಲವು ವರ್ಷಗಳಿಂದ ಸುಳ್ಯ ನಗರಕ್ಕೆ ನೀರು ಸರಬರಾಜು ದೊಡ್ಡ ತಲೆ ನೋವಾಗಿ ಪರಿಣಮಿಸಿತ್ತು.
ಬೇಸಿಗೆಯಲ್ಲಿ ಪಯಸ್ವಿನಿ ನದಿಯಲ್ಲಿ ನೀರಿನ ಹರಿವು ತೀರಾ ಕಡಿಮೆಯಾಗುತ್ತದೆ. ಈ ಸಂದರ್ಭದಲ್ಲಿ ಕಲ್ಲುಮುಟ್ಲುವಿನಲ್ಲಿ ಮರಳು ತುಂಬಿದ ಗೋಣಿ ಚೀಲ ಇರಿಸಿ ತಾತ್ಕಾಲಿಕ ಕಟ್ಟ ನಿರ್ಮಿಸಲಾಗುತ್ತಿತ್ತು. ಇದೇ ಸ್ಥಳದಲ್ಲಿ ಶಾಶ್ವತ ವೆಂಟೆಡ್ ಡ್ಯಾಂ ನಿರ್ಮಾಣಗೊಂಡಿದೆ.
ಈ ಹಿನ್ನಲೆಯಲ್ಲಿ ಸುಳ್ಯ ನಗರಕ್ಕೆ ನೀರು ಸರಬರಾಜು ಮಾಡಲು ಶಾಶ್ವತ ಯೋಜನೆ ರೂಪಿಸಲು ವೆಂಟೆಡ್ ಡ್ಯಾಂ ಮತ್ತು ಸಮಗ್ರ ಕುಡಿಯುವ ನೀರಿನ ಯೋಜನೆ ಮಂಜೂರಾಗಿದೆ.
ಸಣ್ಣ ನೀರಾವರಿ ಇಲಾಖೆಯಿಂದ ವೆಂಟೆಡ್ ಡ್ಯಾಂ ನಿರ್ಮಾಣಕ್ಕೆ 17 ಕೋಟಿ ರೂ ಅನುದಾನ ಮಂಜೂರಾಗಿ ಡ್ಯಾಂ ಪೂರ್ತಿಗೊಂಡಿದೆ. ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ 60 ಕೋಟಿ ರೂ ವೆಚ್ಚದಲ್ಲಿ ಸಮಗ್ರ ಕುಡಿಯುವ ನೀರಿನ ಯೋಜನೆ ಮಂಜೂರಾಗಿದ್ದು ಟೆಂಡರ್ ಹಂತದಲ್ಲಿದ್ದು ಮುಂದಿನ ಹಂತದಲ್ಲಿ ಕಾಮಗಾರಿ ನಡೆಯಲಿದೆ. ಹಲವು ದಶಕಗಳ ಸುಳ್ಯದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಆಗಲಿದೆ ಎಂದು ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಹೇಳಿದ್ದಾರೆ.