ಮುಂಬೈ:ಸುಳ್ಯ ಮೂಲದ ಗುಜರಾತ್ನ ಉದ್ಯಮಿ, ಪರಿಸರ ತಜ್ಞ, ಗ್ರೀನ್ ಹೀರೋ ಆಫ್ ಇಂಡಿಯಾ, ಭಾರತ್ ವನದ ಜನಕ ಡಾ.ಆರ್.ಕೆ.ನಾಯರ್ ಅವರ ಬಗ್ಗೆ ಮಹೀಂದ್ರ ಗ್ರೂಪ್ ಆಫ್ ಕಂಪೆನಿಯ ಚೇರ್ಮೆನ್ ಆನಂದ್ ಮಹೇಂದ್ರ ಅವರು ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು ‘ಮಿಯಾವಾಕಿ ಅರಣ್ಯ ಎಂದರೇನು ಎಂದು ನನಗೆ ತಿಳಿದಿತ್ತು, ಆದರೆ ಡಾ. ನಾಯರ್ ಅವರ ಬಗ್ಗೆ
ಮತ್ತು ಅವರು ಭಾರತದಲ್ಲಿ ವಿಶ್ವದ ಅತಿದೊಡ್ಡ ಅರಣ್ಯವನ್ನು ಹೇಗೆ ರಚಿಸಿದರು ಎಂಬುದರ ಬಗ್ಗೆ ನನಗೆ ತಿಳಿದಿರಲಿಲ್ಲ. ನಮ್ಮ ನಡುವೆ ಅಂತಹ ವೀರರಿದ್ದಾರೆ ಎಂದು ನಾನು ಕೃತಜ್ಞನಾಗಿದ್ದೇನೆ… ಎಂದು ಟ್ವೀಟ್ ಮಾಡಿರುವುದರ ಜೊತೆಗೆ ಭಾರತದಲ್ಲಿ ಡಾ.ಆರ್.ಕೆ.ನಾಯರ್ ಅವರು ರಚಿಸಿದ ಮಿಯಾವಾಕಿ ಅರಣ್ಯಗಳ ಹಾಗೂ ಆ ಕುರಿತು ಡಾ.ಆರ್.ಕೆ.ನಾಯರ್ ವಿವರಿಸುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಆನಂದ್ ಮಹೀಂದ್ರಾ ಅವರು ದೇಶದ ವಿವಿಧ ಹಾಗುಹೋಗುಗಳ ಬಗ್ಗೆ ತಮ್ಮ ಎಕ್ಸ್ ಖಾತೆಯ ಮೂಲಕ ಪ್ರತಿಕ್ರಿಯೆ ನೀಡುತ್ತಾರೆ. ಅವರ ಎಕ್ಸ್ ಖಾತೆಗೆ 11.5 ಮಿಲಿಯನ್ ಫಾಲೋವರ್ಸ್ ಇದ್ದಾರೆ. ನಾಯರ್ ಕುರಿತು ಅವರು ಮಾಡಿದ 2.8 ಲಕ್ಷ ವೀವ್ಸ್ ಬಂದಿದೆ.

ಆನಂದ್ ಮಹೀಂದ್ರ ಅವರಂತಹಾ ವ್ಯಕ್ತಿಗಳು ‘ನಮ್ಮನ್ನು ಗುರುತಿಸಿ ನಮ್ಮ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ತುಂಬಾ ಸಂತಸ ತಂದಿದೆ ಎಂದು ಡಾ.ಆರ್.ಕೆ.ನಾಯರ್ ಪ್ರತಿಕ್ರಿಯಿಸಿದ್ದಾರೆ.
ಜಪಾನ್ನ ಮಿಯಾವಾಕಿ ಮಾದರಿಯಲ್ಲಿ ಡಾ.ಆರ್.ಕೆ.ನಾಯರ್ ಅವರು
32 ಲಕ್ಷಕ್ಕೂ ಅಧಿಕ ಗಿಡಗಳನ್ನು ಬೆಳೆಸುವ ಮೂಲಕ ದೇಶದ ಅರಣ್ಯವನ್ನು ಉಳಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಅವರು ಬೆಳೆಸಿದ ವನಗಳಿಗೆ ‘ಭಾರತ ವನ’ ಎಂದು ನಾಮಕರಣ ಮಾಡಿದ್ದಾರೆ. 2011ರಲ್ಲಿ ತನ್ನ ಪರಿಸರ ಸಂರಕ್ಷಣಾ ಅಭಿಯಾನ ಆರಂಭಿಸಿದ ಡಾ.ನಾಯರ್ ಇದುವರೆಗೆ 12 ರಾಜ್ಯಗಳಲ್ಲಿ 122 ಹೊಸ ಕಾಡುಗಳನ್ನು ನಿರ್ಮಿಸಿದ್ದಾರೆ. 32 ಲಕ್ಷಕ್ಕೂ ಅಧಿಕ ಗಿಡಗಳನ್ನು ನೆಟ್ಟಿದ್ದಾರೆ. ಅದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಲ್ಪನೆಯ ಸ್ಮೃತಿ ವನವೂ ಸೇರಿದೆ. ಕಛ್ ಭೂಕಂಪದಲ್ಲಿ ಮಡಿದವರ ನೆನಪಿಗಾಗಿ ನಿರ್ಮಿಸಿದ ಸ್ಮೃತಿ ವನದಲ್ಲಿ 5.25 ಲಕ್ಷ ಗಿಡ ಬೆಳೆಸಲಾಗಿದೆ. ಡಾ.ಆರ್.ಕೆ.ನಾಯರ್. ಅವರು ಇದುವರೆಗೆ 122 ಕಾಡುಗಳನ್ನು ಸೃಷ್ಠಿಸಿ 32 ಲಕ್ಷಕ್ಕೂ ಅಧಿಕ ಮರ ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ. ಒಂದು ಕೋಟಿ ಗಿಡ ನೆಡುವುದು ಅವರ ಗುರಿ.