ಸುಳ್ಯ:ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಅಮೃತ್ 2 ಕುಡಿಯುವ ನೀರಿನ ಯೋಜನೆ ಜ.15ರೊಳಗೆ ಪೂರ್ತಿ ಮಾಡಲಾಗುವುದು ಎಂದು ಕರ್ನಾಟಕ ಒಳಚರಂಡಿ ಹಾಗು ಕುಡಿಯುವ ನೀರು ಸರಬರಾಜು ಮಂಡಳಿಯ ಇಂಜಿನಿಯರ್ಗಳು ತಿಳಿಸಿದ್ದಾರೆ. ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ನಗರದ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಂಜಿನಿಯರ್ಗಳು ಮಾಹಿತಿ ನೀಡಿದರು. ಅಮೃತ್ 2 ಯೋಜನೆಯ ಮಾಹಿತಿ ಪಡೆದ ಶಾಸಕರು ಕಾಮಗಾರಿಯನ್ನು
ಆದಷ್ಟು ಬೇಗ ಪೂರ್ತಿ ಮಾಡಬೇಕು, ಪೈಪ್ ಲೈನ್ ಅಳವಡಿಕೆ ಸಂದರ್ಭ ಕಡಿದು ಹಾಕಿದ ರಸ್ತೆ ಬದಿಯ ಡಾಮರು, ಕಾಂಕ್ರೀಟ್ ಹಾಗು ಇಂಟರ್ಲಾಕ್ಗಳನ್ನು ಕೂಡಲೇ ಮರು ಸ್ಥಾಪನೆ ಮಾಡಬೇಕು ಎಂದು ಸೂಚನೆ ನೀಡಿದರು.
ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಹಣ ಮೀಸಲಿರಿಸಿ ಟೆಂಡರ್ ಆಗಿ ಗುದ್ದಲಿ ಪೂಜೆ ನಡೆದರೂ ಕಾಮಗಾರಿ ನಡೆದಿಲ್ಲ ಎಂದು ನಗರ ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು ಸಭೆಗೆ ತಿಳಿಸಿದರು.
ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಟೆಂಡರ್ ಆಗಿರುವ ಕಾಮಗಾರಿಗಳನ್ನು ಕೂಡಲೇ ಪೂರ್ತಿ ಮಾಡುವಂತೆ ಶಾಸಕರು ಸೂಚಿಸಿದರು.
ಸುಳ್ಯ ನಗರ ಪಂಚಾಯತ್ಗೆ ಖಾಯಂ ಇಂಜಿನಿಯರ್ ನೇಮಕ ಮಾಡಿ ಎಂದು ಶಾಸಕರು ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚಿಸಿದರು.
ಅಮೃತ್ 2 ಯೋಜನೆಯ ಪ್ರಗತಿ:
ಸುಳ್ಯ ನಗರ ವ್ಯಾಪ್ತಿಯಲ್ಲಿ ಅನುಷ್ಠಾನ ಆಗುತ್ತಿರುವ ಅಮೃತ್ 2 ಯೋಜನೆ ಕುಡಿಯುವ ನೀರಿನ ಯೋಜನೆ ಕಾಮಗಾರಿ ಅಂತಿಮ ಹಂತದಲ್ಲಿದ್ದು ಜ.15ರೊಳಗೆ ಪೂರ್ತಿ ಮಾಡುವುದಾಗಿ ಒಳಚರಂಡಿ ಹಾಗು ಕುಡಿಯುವ ನೀರು ಸರಬರಾಜು ಮಂಡಳಿಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶೋಭಾಲಕ್ಷ್ಮಿ ತಿಳಿಸಿದರು. ಕುರುಂಜಿಗುಡ್ಡೆಯಲ್ಲಿ 10 ಲಕ್ಷ ಲೀಟರ್ ಓವರ್ಹೆಡ್ ಟ್ಯಾಂಕ್, ಜಯನಗರದಲ್ಲಿ 5 ಲಕ್ಷ ಲೀಟರ್ ಟ್ಯಾಂಕ್, ಬೋರುಗುಡ್ಡೆ, ಬಂಗ್ಲೆಗುಡ್ಡೆ ಹಾಗೂ ಕಲ್ಲುಮುಟ್ಲುವಿನಲ್ಲಿ ತಲಾ 2.5 ಲಕ್ಷ ಲೀಟರ್ನ ಟ್ಯಾಂಕ್ ನಿರ್ಮಾಣ ಮಾಡಲಾಗಿದೆ. ಪೈಪ್ ಲೈನ್ ಕಾಮಗಾರಿ ಬಹುತೇಕ ಪೂರ್ತಿಗೊಂಡಿದೆ. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಪೈಪ್ ಲೈನ್ ಅಳವಡಿಕೆ ಕಾರ್ಯ ನಡೆಯುತ್ತಿದ್ದು 8 ಕಿ.ಮಿ.ವ್ಯಾಪ್ತಿಯ ಕಾಮಗಾರಿಯಲ್ಲಿ 2 ಕಿ.ಮಿ. ಬಾಕಿ ಇದೆ. 2898 ಮನೆಗಳ ಪೈಕಿ 2700 ಮನೆಗಳಿಗೆ ಸಂಪರ್ಕ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಸಭೆಯಲ್ಲಿ ತಹಶೀಲ್ದಾರ್ ಮಂಜುಳಾ.ಎಂ, ಒಳಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶೋಭಾ ಲಕ್ಷ್ಮಿ, ಸಹಾಯಕ ಇಂಜಿನಿಯರ್ ಶ್ರೀಕಾಂತ್,ನಗರ ಪಂಚಾಯತ್ ಮುಖ್ಯಾಧಿಕಾರಿ ಬಸವರಾಜ್, ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ಶಶಿಕಲಾ ನೀರಬಿದಿರೆ, ವಿನಯಕುಮಾರ್ ಕಂದಡ್ಕ, ಮಾಜಿ ಸದಸ್ಯರಾದ ಬುದ್ಧ ನಾಯ್ಕ್, ಶೀಲಾ ಅರುಣ ಕುರುಂಜಿ, ಕಿಶೋರಿ ಶೇಟ್, ನಾರಾಯಣ, ಪ್ರಮುಖರಾದ ಸುಬೋದ್ ಶೆಟ್ಟಿ ಮೇನಾಲ, ಸಂತೋಷ್ ಜಾಕೆ, ಶಾಸಕರಾದ ಆಪ್ತ ಕಾರ್ಯದರ್ಶಿ ಹರೀಶ್, ಪ್ರಸಾದ್ ಕಾಟೂರು ಮತ್ತಿತರರು ಉಪಸ್ಥಿತರಿದ್ದರು.

















