ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ ಎಣಿಕೆ ಬುಧವಾರ ಮುಂದುವರಿದಿದ್ದು ಡೊನಾಲ್ಡ್ ಟ್ರಂಪ್ ಗೆಲುವಿನ ಸನಿಹ ಬಂದು ನಿಂತಿದ್ದಾರೆ. ಪ್ರಸ್ತುತ ಫಲಿತಾಂಶದಲ್ಲಿ ರಿಪಬ್ಲಿಕನ್ ಪಕ್ಷ ಅಮೆರಿಕದ ಸೆನೆಟ್ನಲ್ಲಿ ಬಹುಮತ ಪಡೆದಿರುವುದಾಗಿ ಮಾಧ್ಯಮಗಳ ವರದಿ ತಿಳಿಸಿದೆ.
ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ 270ಎಲೆಕ್ಟ್ರೊರಲ್ ಮತಗಳನ್ನು ಪಡೆದು ಮುನ್ನಡೆ ಸಾಧಿಸಿದ್ದು, ಡೆಮಾಕ್ರಟಿಕ್ ಪಕ್ಷದ
ಕಮಲಾ ಹ್ಯಾರಿಸ್ 214 ಎಲೆಕ್ಟ್ರೊರಲ್ ಮತ ಪಡೆದಿದ್ದಾರೆ. ವರದಿ ಪ್ರಕಾರ, ಅಮೆರಿಕ ಕಾಂಗ್ರೆಸ್ ನ ಮೇಲ್ಮನೆಯ 100 ಸದಸ್ಯರಲ್ಲಿ ರಿಪಬ್ಲಿಕನ್ ಪಕ್ಷದ 51 ಸದಸ್ಯರು ಗೆಲುವು ಸಾಧಿಸಿದ್ದು, ಡೆಮಾಕ್ರಟಿಕ್ ಪಕ್ಷದ 42 ಸದಸ್ಯರು ಜಯ ಸಾಧಿಸಿದ್ದಾರೆ.
ಡೊನಾಲ್ಡ್ ಟ್ರಂಪ್ 26 ರಾಜ್ಯಗಳಲ್ಲಿ ಭರ್ಜರಿ ಮತಬೇಟೆ ಮೂಲಕ 270 ಎಲೆಕ್ಟ್ರೊರಲ್ ಮತ ಪಡೆದಿದ್ದು, ಹ್ಯಾರಿಸ್ 214 ಎಲೆಕ್ಟ್ರೊರಲ್ ಮತ ಗಳಿಸದ್ದಾರೆ. ಒಟ್ಟು 538 ಎಲೆಕ್ಟ್ರೊರಲ್ ಮತಗಳಲ್ಲಿ 435 ಹೌಸ್ ಆಫ್ ರೆಪ್ರೆಸೆನ್ ಟೇಟೀವ್ಸ್, 100 ಸೆನೆಟ್ ಸೀಟ್ಸ್ ಹಾಗೂ ವಾಷಿಂಗ್ಟನ್ ಡಿಸಿಯ 3 ಸ್ಥಾನಗಳು ಇದರಲ್ಲಿ ಸೇರಿವೆ ಎಂದು ವರದಿ ವಿವರಿಸಿದೆ.
ಅಮೆರಿಕ ಕೆಳ ಮನೆಯ 435 ಸ್ಥಾನಗಳು ಸೇರಿದಂತೆ ಅಮೆರಿಕ ಸೆನೆಟ್ ನ 34 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಹೌಸ್ ಆಫ್ ರೆಪ್ರೆಸೆನ್ ಟೆಟೀವ್ಸ್ ನ ಎಲ್ಲಾ ಪ್ರತಿನಿಧಿಗಳು ಪುನರಾಯ್ಕೆಯಾಗಬೇಕಾಗಿದೆ.
ಡೊನಾಲ್ಡ್ ಟ್ರಂಪ್ 2017ರಿಂದ 2021ರವರೆಗೆ ಅಮೆರಿಕದ 45ನೇ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದರು. ಇದೀಗ ಮತ್ತೊಮ್ಮೆ ಶ್ವೇತಭವನ ಪ್ರವೇಶಿಸುವ ಸಿದ್ಧತೆಯಲ್ಲಿದ್ದಾರೆ.