ಡಲ್ಲಾಸ್: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಇಂದು ನಡೆದ ‘ಎ’ ಗುಂಪಿನ ಮೊದಲ ಪಂದ್ಯದಲ್ಲಿ ಅತಿಥೇಯ ಅಮೆರಿಕ ತಂಡವು ಕೆನಡಾ ವಿರುದ್ಧ ಏಳು ವಿಕೆಟ್ ಅಂತರದ ಜಯ ಗಳಿಸಿದ್ದು, ಶುಭಾರಂಭ ಮಾಡಿಕೊಂಡಿದೆ.ಇದೇ ಮೊದಲ ಬಾರಿಗೆ ಅಮೆರಿಕ ನೆಲದಲ್ಲಿ ಕ್ರಿಕೆಟ್ ವಿಶ್ವಕಪ್ ಆಯೋಜನೆಯಾಗುತ್ತಿದೆ. ಉದ್ಘಾಟನಾ ಪಂದ್ಯದಲ್ಲಿ
195 ರನ್ಗಳ ಗೆಲುವಿನ ಗುರಿ ಬೆನ್ನಟ್ಟಿದ ಅಮೆರಿಕ ಇನ್ನೂ 14 ಎಸೆತಗಳು ಬಾಕಿ ಉಳಿದಿರುವಂತೆಯೇ 17.4 ಓವರ್ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಆ್ಯರನ್ ಜೋನ್ಸ್ ಕೇವಲ 40 ಎಸೆತಗಳಲ್ಲಿ ಅಜೇಯ 94 ರನ್ ಗಳಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಅಲ್ಲದೆ 10 ಸಿಕ್ಸರ್ ಹಾಗೂ ನಾಲ್ಕು ಬೌಂಡರಿ ಬಾರಿಸಿ ಅಬ್ಬರಿಸಿದರು. ಸ್ಟೀವನ್ ಟೇಲರ್ (0) ಹಾಗೂ ನಾಯಕ ಮೊನಾಂಕ್ ಪಟೇಲ್ (16) ವಿಕೆಟ್ಗಳನ್ನು ಬೇಗನೇ ಕಳೆದುಕೊಂಡ
ಅಮೆರಿಕ ಆತಂಕಕ್ಕೆ ಒಳಗಾಗಿತ್ತು. ಆದರೆ ಮೂರನೇ ವಿಕೆಟ್ಗೆ ಆ್ಯಂಡ್ರಿಸ್ ಗೌಸ್ ಅವರೊಂದಿಗೆ ಜೋನ್ಸ್ 131 ರನ್ಗಳ ಜೊತೆಯಾಟ ಕಟ್ಟಿದರು. ಗೌಸ್ 46 ಎಸೆತಗಳಲ್ಲಿ 65 ರನ್ ಗಳಿಸಿ (7 ಬೌಂಡರಿ, 3 ಸಿಕ್ಸರ್) ಮಿಂಚಿದರು. ಬಿರುಸಿನ ಆಟವಾಡಿದ ಜೋನ್ಸ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದರೊಂದಿಗೆ ಅಮೆರಿಕ ಎರಡು ಅಂಕ ಕಲೆ ಹಾಕಿದೆ.
ಗ್ರ್ಯಾಂಡ್ ಪ್ರಿಯರಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಅಮೆರಿಕದ ನಾಯಕ ಮೊನಾಂಕ್ ಪಟೇಲ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಇದರಂತೆ ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಕೆನಡಾ 20 ಓವರ್ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿತ್ತು.
ಕೆನಡಾ ಪರ ಆರಂಭಿಕ ನವನೀತ್ ಧಲಿವಾಲ್ (61) ಹಾಗೂ ನಿಕೊಲಸ್ ಕಿರ್ಟನ್ (51) ಬಿರುಸಿನ ಅರ್ಧಶತಕ ಗಳಿಸಿ ಮಿಂಚಿದರು.
ನವನೀತ್ 44 ಎಸೆತಗಳಲ್ಲಿ 61 ರನ್ ಗಳಿಸಿದರು. ಅವರ ಅಮೋಘ ಆಟದಲ್ಲಿ ಆರು ಬೌಂಡರಿ ಹಾಗೂ ಮೂರು ಸಿಕ್ಸರ್ ಸೇರಿತ್ತು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ನಿಕೋಲಸ್ ಕೇವಲ 31 ಎಸೆತಗಳಲ್ಲಿ 51 ರನ್ (3 ಬೌಂಡರಿ, 2 ಸಿಕ್ಸರ್) ಗಳಿಸಿದರು.ಆರಂಭಿಕ ಆ್ಯರನ್ ಜಾನ್ಸನ್ (23) ಹಾಗೂ ಶ್ರೇಯಸ್ ಮೊವ್ವಾ (ಅಜೇಯ 32, ಎಸೆತ 16) ಉಪಯುಕ್ತ ಕಾಣಿಕೆ ನೀಡಿದರು.