ಸುಳ್ಯ: ಕಳೆದ 10 ವರ್ಷಗಳಿಂದ ಕುಂಟುತ್ತಾ ಸಾಗಿರುವ ಸುಳ್ಯದ ಅಂಬೇಡ್ಕರ್ ಭವನ ಕಾಮಗಾರಿಯನ್ನು ಶಾಸಕಿ ಭಾಗೀರಥಿ ಮುರುಳ್ಯ ವೀಕ್ಷಣೆ ಮಾಡಿ ಪರಿಶೀಲನೆ ನಡೆಸಿದರು. 6 ತಿಂಗಳಲ್ಲಿ ಕಾಮಗಾರಿ ಪೂರ್ತಿ ಮಾಡಬೇಕು ಎಂದು ಅವರು ಇಂಜಿನಿಯರ್ಗಳಿಗೆ ಸೂಚನೆ ನೀಡಿದರು. ಕಾಮಗಾರಿ ಪರಿಶೀಲನೆ ನಡೆಸಿದ ಅವರು ಅಧಿಕಾರಿಗಳು, ಇಂಜಿನಿಯರ್ಗಳ ಜೊತೆ ಚರ್ಚೆ ನಡೆಸಿದರು. ಒಂದು ವಾರದಲ್ಲಿ
ಕಾಮಗಾರಿ ಆರಂಭಿಸಿ ಆರು ತಿಂಗಳಲ್ಲಿ ಕಾಮಗಾರಿ ಪೂರ್ತಿ ಮಾಡಬೇಕು ಎಂದು ಶಾಸಕರು ನಿರ್ದೇಶನ ನೀಡಿದರು.
3.5 ಕೋಟಿಯ ಯೋಜನೆ-1.60 ಕೋಟಿ ಹೆಚ್ಚುವರಿ ಕ್ರಿಯಾ ಯೋಜನೆ:
2012-13ನೇ ಸಾಲಿನಲ್ಲಿ ಆರಂಭಗೊಂಡ ಸುಳ್ಯ ಅಂಬೇಡ್ಕರ್ ಭವನ ಒಟ್ಟು 3.5 ಕೋಟಿಯ ಯೋಜನೆ.ಮೊದಲ ಹಂತದಲ್ಲಿ ಒಂದೂವರೆ ಕೋಟಿ ಅನುದಾನ ಬಿಡುಗಡೆ ಆಗಿ ಕಾಮಗಾರಿ ನಡೆದಿತ್ತು. ಬಳಿಕ ಸರಕಾರದಿಂದ ಎರಡು ಕೋಟಿ ಮಂಜೂರಾಗಿ 50 ಲಕ್ಚ ಬಿಡುಗಡೆ ಆಗಿ ಒಟ್ಟು ಎರಡು ಕೋಟಿ ಅನುದಾನ ಬಿಡುಗಡೆಯಾಗಿ ಕಾಮಗಾರಿ ಪೂರ್ತಿಗೊಂಡಿದೆ. ಇನ್ನೂ ಒಂದೂವರೆ ಕೋಟಿ ಅನುದಾನ ಬಿಡುಗಡೆಯಾಗಲು ಬಾಕಿ ಇದೆ. ಪೃಥಮ ಮಹಡಿಯ ಸ್ಲಾಬ್ನ
ಕಾಂಕ್ರೀಟ್, ಗೋಡೆ, ಫ್ಲೋರಿಂಗ್, ಪ್ಲಾಸ್ಟರಿಂಗ್ ಮತ್ತಿತರ ಕಾಮಗಾರಿಗಳು ನಡೆಯಲು ಬಾಕಿ ಇದೆ. ನೆಲ ಅಂತಸ್ತಿನಲ್ಲಿ ಕಿಚನ್, ಡೈನಿಂಗ್ ಹಾಲ್, ಮೊದಲ ಮಹಡಿಯಲ್ಲಿ ಸುಮಾರು 600 ಜನ ಕುಳಿತು ಕೊಳ್ಳಬಹುದಾದ ವಿಶಾಲವಾದ ಸಭಾಂಗಣ, ಮೂರನೆ ಮಹಡಿಯಲ್ಲಿ ಅತಿಥಿ ಗೃಹ ನಿರ್ಮಾಣ ಆಗಲಿದೆ. ಇಲೆಕ್ಟ್ರಿಕ್ ಕೆಲಸ, ಕಂಪೌಂಡ್, ಇತರ ಕೆಲಸಗಳಿಗೆ 1.60 ಕೋಟಿಯ ಹೆಚ್ಚುವರಿ ಕ್ರಿಯಾ ಯೋಜನೆ ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ಕಾಮಗಾರಿ ನಡೆಸುವ ದ.ಕ.ನಿರ್ಮಿತಿ ಕೇಂದ್ರದ ಇಂಜಿನಿಯರ್
ಹರೀಶ್ ಮಾಹಿತಿ ನೀಡಿದ್ದಾರೆ. 2012-13ರಲ್ಲಿ ಅಂಬೇಡ್ಕರ್ ಭವನ ಕಾಮಗಾರಿ ಆರಂಭಗೊಂಡಿತ್ತು. ದಾರಿ ವಿವಾದ ಇದ್ದ ಕಾರಣ ಕಾಮಗಾರಿ ಕೆಲವು ವರ್ಷ ತಡವಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ, ಪ್ರಮುಖರಾದ ಎಸ್.ಎನ್.ಮನ್ಮಥ, ಎ.ವಿ.ತೀರ್ಥರಾಮ, ವಿನಯಕುಮಾರ್ ಕಂದಡ್ಕ, ಚನಿಯ ಕಲ್ತಡ್ಕ, ಬಾಲಕೃಷ್ಣ ಕೀಲಾಡಿ, ಜಿನ್ನಪ್ಪ ಪೂಜಾರಿ, ಶಾಂತಾರಾಮ ಕಣಿಲೆಗುಂಡಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಧನಂಜಯ ಉಪಸ್ಥಿತರಿದ್ದರು