ಸುಳ್ಯ:ಮೀಸಲು ಕ್ಷೇತ್ರವಾಗಿದ್ದರೂ ಒಂದು ಅಂಬೇಡ್ಕರ್ ಭವನ ಆಗದೇ ಇರುವುದು ಸುಳ್ಯಕ್ಕೆ ಕಪ್ಪು ಚುಕ್ಕೆಯಾಗಿದೆ ಆದುದರಿಂದ ಅಂಬೇಡ್ಕರ್ ಭವನ ಪೂರ್ತಿ ಮಾಡಲು ಕೂಡಲೇ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಖಡಕ್ ಸೂಚನೆ ನೀಡಿದ್ದಾರೆ. ಸುಳ್ಯ ತಾಲೂಕು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ಯಾವಾಗ
ಪೂರ್ತಿ ಮಾಡುತ್ತೀರಿ ಎಂದು ಶಾಸಕರು ಪ್ರಶ್ನಿಸಿದರು. ಅನುದಾನದ ಕೊರತೆಯಿಂದ ಅಂಬೇಡ್ಕರ್ ಭವನ ಕಾಮಗಾರಿ ಪೂರ್ತಿಯಾಗಿಲ್ಲ ಎಂದು ಕಾಮಗಾರಿ ನಡೆಸುವ ನಿರ್ಮಿತಿ ಕೇಂದ್ರದ ಇಂಜಿನಿಯರ್ ಹೇಳಿದರು.ಎರಡು ಕೋಟಿ ಮಂಜೂರಾಗಿದ್ದು ಕೇವಲ 50 ಲಕ್ಷ ಅನುದಾನ ಮಾತ್ರ ಬಿಡುಗಡೆ ಆಗಿದೆ. ಕಾಮಗಾರಿಗೆ ಬಾಕಿ ಅನುದಾನ ಬಿಡುಗಡೆಗೆ ಪ್ರಯತ್ನ ನಡೆಸಲಾಗುವುದು. ಆದಷ್ಟು ಬೇಗ ಕಾಮಗಾರಿ ಮುಗಿದು ಉದ್ಘಾಟನೆ ಆಗಿ ಕಾರ್ಯ ಚಟುವಟಿಕೆ ಆರಂಭವಾಗಬೇಕಾಗಿದೆ ಎಂದು ಶಾಸಕರು ಹೇಳಿದರು. ಮೀಸಲು ಕ್ಷೇತ್ರವಾಗಿರುವ ಸುಳ್ಯದಲ್ಲಿ ಅಂಬೇಡ್ಕರ್ ಭವನ ಇಲ್ಲಾ ಎಂದರೆ ಅದು ದೊಡ್ಡ ಹಿನ್ನಡೆ ಎಂದು ಶಾಸಕರು ಬೊಟ್ಟು ಮಾಡಿದರು. ಅಂಬೇಡ್ಕರ್ ಭವನ ಪೂರ್ತಿ ಮಾಡಲು ಇರುವ ಎಲ್ಲಾ ಅಡೆ ತಡೆ ಪರಿಹರಿಸಬೇಕಾಗಿದೆ. ಈ ಬಗ್ಗೆ ಅಗತ್ಯ ಪರಿಶೀಲನೆ, ಚರ್ಚೆ ನಡೆಸಲಾಗುವುದು ಎಂದು ತಾ.ಪಂ.ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ ಹೇಳಿದರು.







