ಪುತ್ತೂರು:ಜಲ ಜೀವನ್ ಮಿಷನ್ ಕಾಮಗಾರಿ ಕೂಡಲೇ ಪೂರ್ಣಗೊಳಿಸಲು ಹಾಗೂ ಸುಳ್ಯ ತಾಲೂಕಿನ ಅಮರಮುಡ್ನೂರಿನಲ್ಲಿ ನೂತನ ಎಂಆರ್ಎಫ್ ಸ್ಥಾಪನೆಗೆ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ.ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲದ ಅಧಿವೇಶನದಲ್ಲಿ ಕೇಳಲಾದ ಚುಕ್ಕೆ ಗುರುತಿನ ಪ್ರಶ್ನೆಗೆ ದೊರೆತ ಉತ್ತರದ ಪ್ರಕಾರ, ಗ್ರಾಮೀಣ ಭಾಗದ
ಪ್ರತಿಯೊಂದು ಮನೆಗೂ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಜಲ ಜೀವನ್ ಮಿಷನ್ (ಹರ್ ಘರ್ ಜಲ್) ಯೋಜನೆಯಡಿ, ದಕ್ಷಿಣ ಕನ್ನಡ ಜಿಲ್ಲೆಯ 230 ಗ್ರಾಮ ಪಂಚಾಯತಿಗಳಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, 42 ಗ್ರಾಮ ಪಂಚಾಯತಿಗಳಲ್ಲಿ ಕಾಮಗಾರಿ ಇನ್ನೂ ಪ್ರಗತಿಯ ಹಂತದಲ್ಲಿದೆ. ಅದೇ ರೀತಿ, ಉಡುಪಿ ಜಿಲ್ಲೆಯ 155 ಗ್ರಾಮ ಪಂಚಾಯತಿಗಳಲ್ಲಿ ಕಾಮಗಾರಿ ಮುಕ್ತಾಯಗೊಂಡಿದ್ದು, 39 ಗ್ರಾಮ ಪಂಚಾಯತಿಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂಬ ಮಾಹಿತಿ ತಿಳಿದುಬಂದಿದೆ.ಯೋಜನೆ ಪ್ರಾರಂಭವಾಗಿ ಸುಮಾರು 5 ವರ್ಷಗಳು ಕಳೆದಿದ್ದರೂ, ಹಲವೆಡೆ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ, ಉಭಯ ಜಿಲ್ಲೆಗಳ ಸಾವಿರಾರು ಗ್ರಾಮೀಣ ಮನೆಗಳಿಗೆ ಜಲ ಜೀವನ್ ಮಿಷನ್ ಯೋಜನೆಯ ಸಂಪೂರ್ಣ ಪ್ರಯೋಜನ ಸಿಗಲು ವಿಳಂಬವಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ.ಈ ಕುರಿತು ತಕ್ಷಣ ಪರಿಶೀಲನೆ ನಡೆಸಿ, ಇನ್ನೂ ಬಾಕಿ ಇರುವ ಕಾಮಗಾರಿಗಳನ್ನು ನಿಗದಿತ ಕಾಲಮಿತಿಯೊಳಗೆ ಗುಣಮಟ್ಟದೊಂದಿಗೆ ಪೂರ್ಣಗೊಳಿಸುವಂತೆ ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿ ರಂದೀಪ್ ಅವರಿಗೆ ಕಿಶೋರ್ ಕುಮಾರ್ ಮನವಿ ಸಲ್ಲಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ ಹಾಗೂ ಕಡಬ ತಾಲೂಕಿನ 68 ಗ್ರಾಮ ಪಂಚಾಯತಿಗಳಿಂದ ಸಂಗ್ರಹವಾಗುವ ಒಣಕಸವನ್ನು ಪ್ರಸ್ತುತ ಪುತ್ತೂರು ತಾಲೂಕಿನ ಕೆದಂಬಾಡಿಯಲ್ಲಿ ಇರುವ ಸಮಗ್ರ ಘನ ತ್ಯಾಜ್ಯ ನಿರ್ವಹಣಾ ಕೇಂದ್ರದಲ್ಲಿ (MRF) ಸಂಸ್ಕರಿಸಲಾಗುತ್ತಿದೆ. ಆದರೆ, ಈ ಘಟಕದ ಸಾಮರ್ಥ್ಯ ಕೇವಲ 7 ಟನ್ ಆಗಿದ್ದು, ಪ್ರಸ್ತುತ ಸಂಗ್ರಹವಾಗುತ್ತಿರುವ ಒಣಕಸದ ಪ್ರಮಾಣ ಸಾಮರ್ಥ್ಯ ಮೀರಿರುವುದರ ಜೊತೆಗೆ, ಭೌಗೋಳಿಕ ವ್ಯಾಪ್ತಿ ವಿಸ್ತಾರವಾಗಿರುವುದರಿಂದ ಕಸದ ನಿರ್ವಹಣೆಯಲ್ಲಿ ತೀವ್ರ ಅಡಚಣೆಗಳು ಎದುರಾಗುತ್ತಿವೆ ಎಂದು ಶಾಸಕರು ಆಯುಕ್ತರ ಗಮನಕ್ಕೆ ತಂದರು.
ಈ ಹಿನ್ನಲೆಯಲ್ಲಿ, ಸುಳ್ಯ ತಾಲೂಕಿನ ಅಮರಮಡ್ನೂರಿನಲ್ಲಿ ‘ಕೆ-ಶೋರ್’ ಯೋಜನೆಯಡಿ 10 ಟನ್ ಸಾಮರ್ಥ್ಯದ ನೂತನ ಸಮಗ್ರ ಘನ ತ್ಯಾಜ್ಯ ನಿರ್ವಹಣಾ ಕೇಂದ್ರ (MRF) ನಿರ್ಮಿಸುವ ಅಗತ್ಯವಿದೆ ಎಂದು ಶಾಸಕರು ಒತ್ತಾಯಿಸಿದರು. ಈ ಯೋಜನೆಗಾಗಿ ರೂ. 595.00 ಲಕ್ಷಗಳ ಅಂದಾಜು ವೆಚ್ಚದ ವಿಸ್ತೃತ ಯೋಜನಾ ವರದಿಯನ್ನು ಈಗಾಗಲೇ ಸಿದ್ಧಪಡಿಸಲಾಗಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಸದರಿ ವರದಿಯ ಆಧಾರದಲ್ಲಿ ಅಮರಮೂಡ್ನೂರಿನಲ್ಲಿ ನೂತನ MRF ಅನ್ನು ಆದಷ್ಟು ಶೀಘ್ರವಾಗಿ ನಿರ್ಮಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಮನವಿ ಸಲ್ಲಿಸಿದರು.
ಇದಕ್ಕೆ ಹೆಚ್ಚುವರಿಯಾಗಿ, ಜಿಲ್ಲೆಯಲ್ಲಿನ ಬಯೋ ಹಾಗೂ ಮೆಡಿಕಲ್ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಜಿಲ್ಲೆಯಲ್ಲಿ Incinerator Machine ಘಟಕದ ಅಗತ್ಯವಿದೆ ಎಂಬುದನ್ನು ಶಾಸಕರು ಆಯುಕ್ತರಾ ರಂದೀಪ್ ಅವರ ಗಮನಕ್ಕೆ ತಂದರು. ಈ ಮನವಿಗೆ ಪೂರಕವಾಗಿ ಸ್ಪಂದಿಸಿದ ಆಯುಕ್ತರು, ಸೂಕ್ತ ಘಟಕಗಳಿಗೆ ಅನುದಾನ ಒದಗಿಸುವ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಶಾಸಕರ ಮನವಿಗೆ ಸ್ಪಂದಿಸಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಯುಕ್ತರು, ಉಲ್ಲೇಖಿತ ಎಲ್ಲಾ ವಿಷಯಗಳನ್ನು ಸಮಗ್ರವಾಗಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.












