ಸುಳ್ಯ: ಜನಪರವಾದ ಕಾರ್ಯ ನಡೆಸಲು ಸಮಾನ ಮನಸ್ಕರು ಸೇರಿ ರೂಪಿಸಿದ ಅಮರ ಸುಳ್ಯ ನಾಗರಿಕ ವೇದಿಕೆಯ ವತಿಯಿಂದ ಮತದಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ನಿರಂತರ ಮಾಡಲಿದೆ ಎಂದು ಅಮರ ಸುಳ್ಯ ನಾಗರಿಕ ವೇದಿಕೆಯ ಪದಾಧಿಕಾರಿಗಳು ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮರ ಸುಳ್ಯ ನಾಗರಿಕ ವೇದಿಕೆಯ ಸಂಚಾಲಕರಾದ ಗೋಪಾಲ ಪೆರಾಜೆ ಸುಳ್ಯ ತಾಲೂಕಿನ ಹಲವು ಭಾಗದಲ್ಲಿ ಅಡಿಕೆ ಎಲೆ ಹಳದಿ ರೋಗ ಹಾಗೂ
ಎಲೆಚುಕ್ಕೆ ರೋಗ ಬಾಧಿಸಿದ್ದು ಹಲವು ಗ್ರಾಮಗಳಲ್ಲಿ ಅಡಿಕೆ ಕೃಷಿಯೇ ಇಲ್ಲದಂತಾಗಿದೆ. ಅದರ ನಿವಾರಣೆಗೆ ವೈಜ್ಞಾನಿಕ ಸಂಶೋಧನೆಗಳನ್ನು ಮಾಡುವಲ್ಲಿ ಸರಕಾರಗಳು ಯಾವುದೇ ಗಂಭೀರ ಪ್ರಯತ್ನ ಮಾಡಿಲ್ಲ. ಕೃಷಿಕರು ಇದರ ನಿವಾರಣೆಗೆ ಒತ್ತಾಯಿಸುತ್ತಲೇ ಇದ್ದಾರೆ. ಆದರೆ ಆಳುವ ಪಕ್ಷಗಳು ಇದನ್ನು ಗಂಭಿರವಾಗಿ ತೆಗೆದುಕೊಂಡಿಲ್ಲ. ಪರ್ಯಾಯ ಬೆಳೆಗೆ ಪ್ರೋತ್ಸಾಹ ನೀಡಿದರೂ ಅದು ಅಡಿಕೆಗೆ ಸಮವಲ್ಲ. ಸಂಶೋಧನೆ ಮಾಡಿದರೂ ನಿರೀಕ್ಷಿತ ಫಲ ಕೊಟ್ಟಿಲ್ಲ. ಆದ್ದರಿಂದ ಅಡಿಕೆ ಹಳದಿ ರೋಗ ಇಲ್ಲದೇ ಆಗುವಂತ ಔಷಧಿ ಬರಬೇಕು ಎಂದವರು ಒತ್ತಾಯಿಸಿದರು.
ದೇಶದ ಉದ್ಯೋಗ ಸಮಸ್ಯೆ ಉಲ್ಬಣಗೊಂಡಿದ್ದು ಕಳೆದ 45 ವರ್ಷಗಳಲ್ಲೇ ಇಲ್ಲದ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ವಿದ್ಯೆ ಪಡೆದವರಿಗೆ ಅದಕ್ಕೆ ಪೂರಕವಾದ ಉದ್ಯೋಗ ಸಿಗದಂತ ಸ್ಥಿತಿ ಇದೆ. ಕೇಂದ್ರ ಮತ್ತು ಅರೆ ಕೇಂದ್ರ ಸರಕಾರಿ ಸೆಕ್ಟರ್ಗಳಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇದ್ದು ಇವುಗಳನ್ನು ಭರ್ತಿ ಮಾಡಲು ಎಲ್ಲಾ ಪಕ್ಷದ ಪ್ರತಿನಿಧಿಗಳು ಪ್ರಯತ್ನಿಸಬೇಕು. ಸರಕಾರಿ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತಿದ್ದು ಇದರಲ್ಲಿ ಉದ್ಯೋಗ ಸೃಷ್ಠಿಸಲು ಸಾಧ್ಯವಿಲ್ಲ. ಆದ್ದರಿಂದ ಇವುಗಳು ಸಾರ್ವಜನಿಕ ವಲಯದಲ್ಲಿಯೇ ಇರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೌಹಾರ್ದತೆ, ಶಾಂತಿ ಇತಬೇಕು. ಆ ನಿಟ್ಟಿನಲ್ಲಿ ಮತದಾರರು ಜಾಗೃತಗೊಳ್ಳಬೇಕು, ಮತದಾರರು ಜಾಗೃತರಾಗಿ ಮತ ಚಲಾಯಿಸಬೇಕು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಪದಾಧಿಕಾರಿಗಳಾದ ದಿವಾಕರ ಪೈ ಮಜಿಗುಂಡಿ, ಭಾರತಿ ಚೆಂಬು, ಪ್ರಮೀಳಾ ಪೆಲ್ತಡ್ಕ, ಭರತ್ ಕುಕ್ಕುಜಡ್ಕ, ಕರುಣಾಕರ ಪಲ್ಲತಡ್ಕ, ಕೇಶವ ಮೊರಂಗಲ್ಲು, ಲೋಲಜಾಕ್ಷ ಭೂತಕಲ್ಲು, ಸುಳ್ಯಕೋಡಿ ಮಾಧವ ಗೌಡ,, ಶಿವರಾಮ ನಾರ್ಕೋಡು ಉಪಸ್ಥಿತರಿದ್ದರು.