ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಿದೆ. ಡಿ.11ರಂದು ಸರಕಾರಿ ರಜೆ ಘೋಷಣೆ ಮಾಡಲಾಗಿದೆ. ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾಗಿದ್ದ .ಎಸ್.ಎಂ.ಕೃಷ್ಣ ರವರು ಡಿ.10ರಂದು ಮಂಗಳವಾರ ಬೆಳಗಿನ ಜಾವ 02:30ಕ್ಕೆ ನಿಧನರಾಗಿದ್ದಾರೆ. ಅಂತ್ಯಕ್ರಿಯೆ ಡಿ.11 ಬುಧವಾರದಂದು
ಹುಟ್ಟೂರಾದ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಸೋಮನಹಳ್ಳಿ ಸ್ವಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು. ದಿವಂಗತರ ಗೌರವಾರ್ಥವಾಗಿ ಡಿ.11 ಬುಧವಾರದಂದು ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಮತ್ತು ಎಲ್ಲಾ ಶಾಲಾ ಕಾಲೇಜುಗಳಿಗೆ (ಎಲ್ಲಾ ಅನುದಾನಿತ ವಿದ್ಯಾ ಸಂಸ್ಥೆಗಳು ಸೇರಿದಂತೆ) ಸಾರ್ವಜನಿಕ ರಜೆಯನ್ನು ಘೋಷಿಸಲಾಗಿದೆ.ಡಿ.10ರಿಂದ 12ರ ತನಕ ಮೂರು ದಿನಗಳು ರಾಜ್ಯಾದ್ಯಂತ ಶೋಕಾಚರಣೆ ಮಾಡಲಾಗುವುದು ಹಾಗೂ ಈ ಅವಧಿಯಲ್ಲಿ ಯಾವುದೇ ಸಾರ್ವಜನಿಕ ಮನೋರಂಜನಾ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ನಿಯತವಾಗಿ ರಾಜ್ಯ ಸರ್ಕಾರದ ಎಲ್ಲಾ ಕಟ್ಟಡಗಳ ಮೇಲೆ ರಾಷ್ಟ್ರ ಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸುವುದು ಎಂದು ಸರಕಾರಿ ಆದೇಶದಲ್ಲಿ ತಿಳಿಸಿದೆ.