ಸುಳ್ಯ:ಜಿದ್ದಾಜಿದ್ದಿನ ಹೊರಾಟದಲ್ಲಿ ತಮಿಳುನಾಡಿನ ದೊರೈ ಸಿಂಗಂ ತಂಡವನ್ನು ಮಣಿಸಿದ ಆಳ್ವಾಸ್ ಮೂಡಬಿದಿರೆ ತಂಡ
ಸುಳ್ಯದಲ್ಲಿ ನಡೆಯುತ್ತಿರುವ ಪ್ರೊ ಮಾದರಿಯ ರಾಷ್ಟ್ರೀಯ ಕಬಡ್ಡಿ ಪಂದ್ಯಾಟದಲ್ಲಿ ಪುರುಷ ವಿಭಾಗದಲ್ಲಿ ಪೂಲ್ ಸಿ ವಿಭಾಗದ ಪಂದ್ಯದಲ್ಲಿ ಎರಡನೇ ಜಯ ದಾಖಲಿಸಿತು. ಆಳ್ವಾಸ್ ತಂಡ ದೊರೈಸಿಂಗಂ ವಿರುದ್ಧ 36-21 ಅಂತರದ ಜಯ ದಾಖಲಿಸಿತು. ಬಿರುಸಿನ ಆಟ ಪ್ರದರ್ಶಿಸಿದ

ಎರಡೂ ತಂಡಗಳು ಸಮಬಲದ ಹೋರಾಟ ನಡೆಸಿದರು. ಆಕರ್ಷಕ ದಾಳಿ ಹಾಗೂ ನಿಖರ ಹಿಡಿತಗಳ ಮೂಲಕ ಎರಡೂ ತಂಡಗಳು ಕಬಡ್ಡಿಯ ರಸದೌತಣ ನೀಡಿದರು. ಆಳ್ವಾಸ್ ಮೊದಲ ಅವಧಿಯ ಮುಕ್ತಾಯಕ್ಕೆ 17-11 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿತು. ಎರಡನೇ ಅವಧಿಯಲ್ಲಿ ತೀವ್ರ ಪೈಪೋಟಿ, ಸಮಬಲದ ಹೋರಾಟ ನೀಡಿದರೂ ಅಂತಿಮವಾಗಿ ಆಳ್ವಾಸ್ ಜಯ ದಾಖಲಿಸಿತು.
ಭರ್ಜರಿ ದಾಳಿ ಮತ್ತು ಹಿಡಿತಗಳ ಮೂಲಕ ಎರಡು ತಂಡಗಳು ಅಂಕಣದಲ್ಲಿ ಮಿಂಚಿನ ಆಟ ಪ್ರದರ್ಶಿಸಿದರು. ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘ ಸುಳ್ಯ ಹಾಗೂ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಪಂದ್ಯಾಟ ಸಂಘಟನಾ ಸಮಿತಿಯ ಆಶ್ರಯದಲ್ಲಿ ರಾಷ್ಟ್ರೀಯ ಅಮೆಚೂರ್ ಕಬಡ್ಡಿ ಫೆಡರೇಷನ್ ಮತ್ತು ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ 3 ದಿನಗಳ
ಪುರುಷರ ಮತ್ತು ಮಹಿಳೆಯರ ಪ್ರೊ ಮಾದರಿಯ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಚಾಂಪಿಯನ್ಶಿಪ್ ಸುಳ್ಯದ ಚೆನ್ನಕೇಶವ ದೇವಸ್ಥಾನದ ಸಮೀಪದ ಪ್ರಭು ಮೈದಾನದಲ್ಲಿ ವಿಶೇಷವಾಗಿ ತಯಾರಿಸಲಾದ ಇಂಡೋರ್ ಸ್ಟೇಡಿಯಂನ ಮ್ಯಾಟ್ ಅಂಕಣದಲ್ಲಿ ನಡೆಯುತಿದೆ.







