ಸುಳ್ಯ: ಸುಳ್ಯ ಹಾಗೂ ಕಡಬ ತಾಲೂಕು ಸೇರಿದ ಸುಳ್ಯ ವಿಧಾನಸಭಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯನ್ನು(ಅಕ್ರಮ ಸಕ್ರಮ ಸಮಿತಿ) ರಚಿಸಿ ಸರಕಾರ ಆದೇಶ ನೀಡಿದೆ. ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷರಾಗಿರು ಸಮಿತಿ ಸದಸ್ಯರಾಗಿ ಕಾಂಗ್ರೆಸ್ ಮುಖಂಡರಾದ ಗೀತಾ ಕೋಲ್ಚಾರ್, ಪಿ.ಪಿ.ವರ್ಗೀಸ್ ಹಾಗೂ ಕಡಬ ರಾಮಕುಂಜದ ಹೆಚ್.ಆದಂ ಅವರನ್ನು
ನೇಮಕ ಮಾಡಲಾಗಿದೆ. ಗೀತಾ ಕೋಲ್ಚಾರ್ ಸುಳ್ಯ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ಕಡಬದ ಕಾಂಗ್ರೆಸ್ ಮುಖಂಡರಾದ ಪಿ.ಪಿ.ವರ್ಗೀಸ್ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು. ಆದಂ ಅವರು ಕಡಬದ ಕಾಂಗ್ರೆಸ್ ಮುಖಂಡರಾಗಿದ್ದಾರೆ.
ಕೆಲವು ತಿಂಗಳ ಹಿಂದೆ ಬಿಜೆಪಿ ಮುಖಂಡರನ್ನು ಒಳಗೊಂಡ ಅಕ್ರಮ ಸಕ್ರಮ ಸಮಿತಿ ರಚಿಸಿ ಆದೇಶ ಆಗಿತ್ತು. ಕಾಂಗ್ರೆಸ್ ಆಡಳಿತದಲ್ಲಿ ಬಿಜೆಪಿ ಮುಖಂಡರನ್ನು ಅಕ್ರಮ ಸಕ್ರಮ ಸಮಿತಿ ಸದಸ್ಯರಾಗಿ ನೇಮಕ ಮಾಡಿರುವುದು ವಿವಾದಕ್ಕೆ ಕಾರಣವಾಗಿತ್ತು.ಬಳಿಕ ಅದನ್ನು ತಡೆ ಹಿಡಿಯಲಾಗಿತ್ತು. ಇದೀಗ ನೂತನ ಸಮಿತಿ ರಚಿಸಿ ಆದೇಶ ಆಗಿದೆ ಎಂದು ತಿಳಿದು ಬಂದಿದೆ.














