ಬೆಂಗಳೂರು: ಅಕ್ರಮ-ಸಕ್ರಮದಲ್ಲಿ ಕೃಷಿ ಜಮೀನು ಮಂಜೂರಾತಿ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸ್ಥಳ ಪರಿಶೀಲನೆ ನಡೆಸದೆ ಸಮಿತಿಯಲ್ಲಿ ಮಂಡಿಸದೇ ಅರ್ಜಿದಾರರಿಗೆ ಯಾವುದೇ ಮಾಹಿತಿ ನೀಡದೆ ನಿಯಮಾನುಸಾರ ತಿರಸ್ಕರಿಸಲು ಅವಕಾಶ ಇದೆಯೇ. ಕಳೆದ ಮೂರು ವರ್ಷದಲ್ಲಿ ಸುಳ್ಯ ಹಾಗೂ ಕಡಬ ತಾಲೂಕಿನಲ್ಲಿ ತಿರಸ್ಕೃತಗೊಂಡ ಅರ್ಜಿಗಳು ಎಷ್ಟು ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ವಿಧಾನಸಭೆಯಲ್ಲಿ ಲಿಖಿತವಾಗಿ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ
ಕಂದಾಯ ಸಚಿವ ಕೃಷ್ಣ ಬೈರೇ ಗೌಡ ಅನರ್ಹ ಅರ್ಜಿಗಳನ್ನು ಸಮಿತಿಯ ಮುಂದೆ ಮಂಡಿಸದೇ ಜಿಲ್ಲಾಧಿಕಾರಿಯವರಿಗೆ ತಿರಸ್ಕರಿಸಲು ಅವಕಾಶವಿರುತ್ತದೆ. ಅಲ್ಲದೇ ಅನರ್ಹ ಅರ್ಜಿಗಳನ್ನು ತಿರಸ್ಕರಿಸಲು ಸಮಿತಿಗೂ ಅವಕಾಶ ಇರುತ್ತದೆ. ಅದರಂತೆ ಸುಳ್ಯ ತಾಲ್ಲೂಕಿನಲ್ಲಿ 1785 ಮತ್ತು ಕಡಬ ತಾಲ್ಲೂಕಿನಲ್ಲಿ 1069 ಅನರ್ಹ ಅರ್ಜಿಗಳನ್ನು ತಿರಸ್ಕರಿಸಲಾಗಿದ ಎಂದು ಅವರು ತಿಳಿಸಿದ್ದಾರೆ. ಅರ್ಜಿಗಳನ್ನು ತಿರಸ್ಕರಿಸಲು ಕಾರಣಗಳೇನು ಎಂದು ಶಾಸಕರ ಪ್ರಶ್ನೆಗೆ ಉತ್ತರಿಸಿದ ಸಚಿವರು ಸರ್ಕಾರಿ ಜಮೀನುಗಳಲ್ಲಿ ಮಾಡುತ್ತಿರುವ – ಸಾಗುವಳಿಯನ್ನು
ಸಕ್ರಮಗೊಳಿಸುವ ಸಲುವಾಗಿ – ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸಾಗುವಳಿ ಮಾಡುವ ಅರ್ಜಿದಾರನಿಗೆ 18
ವರ್ಷ ಪ್ರಾಯ ಹೊಂದಿರಬೇಕು,ಅವನು ಭೂಮಿಯು ಇರುವ ಅಥವಾ ಪಕ್ಕದಲ್ಲಿರುವ ತಾಲ್ಲೂಕಿನಲ್ಲಿ ಖಾಯಂ ನಿವಾಸಿಯಾಗಿರಬೇಕು. ಅವನು ಖುದ್ದಾಗಿ ಸಾಗುವಳಿ ಮಾಡುತ್ತಿರಬೇಕು, ಹಿಂದಿನ ಮೂರು ವರ್ಷಗಳು ಕಡಿಮೆಯಿಲ್ಲದ ಅವಧಿಯ ನಿರಂತರ ಭೂಮಿಯ ಅನಧಿಕೃತ ಅಧಿಭೋಗನಾಗಿರಬೇಕು. ಅರ್ಜಿಸಲ್ಲಿಸುವಾಗ 2005ರ ಜನವರಿ ಮೊದಲ ದಿನಕ್ಕೆ ಮೂರು ವರ್ಷಕ್ಕಿಂತ ಕಡಿಮೆಯಿಲ್ಲದ ಅವಧಿಯವರೆಗೆ ನಿರಂತರ ಅರ್ಜಿಸಲ್ಲಿಸಿದ ಅರ್ಜಿದಾರರು ಅನಧಿಕೃತ ಅಧಿಭೋಗನಾಗಿರಬೇಕು. ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳಿಗೆ ಸೇರಿದ ವ್ಯಕ್ತಿಗಳ ಸಂದರ್ಭದಲ್ಲಿ, ಅಂಥ ಅವಧಿಯು ಒಂದು ವರ್ಷಕ್ಕಿಂತ ಕಡಿಮೆಯಿರತಕ್ಕದ್ದಲ್ಲ. ವಿಶೇಷ ಉದ್ದೇಶಗಳಿಗಾಗಿ ಕಾಯ್ದಿರಿಸಿರುವ ಜಮೀನುಗಳು ಮತ್ತು ದೇವರಕಾಡು, ಉರ್ದುವೆ, ಗುಂಡುತೋಪು, ಕೆರೆಯ ತಳಪಾಯ, ಪೋಟ್ ಖರಾಬ್, ಹಳ್ಳ, ಸ್ಮಶಾನಗಳ ಜಮೀನುಗಳನ್ನು ಮಂಜೂರು ಮಾಡಲು ಅವಕಾಶವಿರುವುದಿಲ್ಲ.
ಹಾಗೂ ಮೇಲ್ಕಂಡ ನಿಯಮಗಳು ಹಾಗೂ ಸುತ್ತೋಲೆಯಲ್ಲಿ ತಿಳಿಸಿರುವ ಮಾನದಂಡಗಳನ್ನು ಪೂರೈಸದ ಹಾಗೂ ಅರಣ್ಯ ಜಮೀನುಗಳು, ಕುಮ್ಮಿ, ಕೆರೆ, ಕಟ್ಟೆ, ಕುಂಟೆ ಹಾಗೂ ಇತರೆ ಜಲಮೂಲ ಜಲಕಾಯ ಜಮೀನುಗಳನ್ನು ಮಂಜೂರು ಮಾಡಲು ಸಲ್ಲಿಸಿರುವ ಅನರ್ಹ ಅರ್ಜಿಗಳನ್ನು ತಿರಸ್ಕರಿಸಲು ಜಿಲ್ಲಾಧಿಕಾರಿಯವರು ಅಧಿಕಾರ ಹೊಂದಿರುತ್ತಾರೆ
ಕಾಯ್ದೆ ಮತ್ತು ನಿಯಮಗಳಲ್ಲಿರುವ ಅವಕಾಶದಂತೆ ಪರಿಶೀಲಿಸಿ ಅನರ್ಹ ಅರ್ಜಿಗಳನ್ನು ಸಮಿತಿಯ ಮುಂದೆ ಮಂಡಿಸಲಾಗುತ್ತಿದೆ ಹಾಗೂ ಅನರ್ಹ ಅರ್ಜಿಗಳನ್ನು ತಿರಸ್ಕರಿಸಲು ಜಿಲ್ಲಾಧಿಕಾರಿಯವರಿಗೆ ಅವಕಾಶವಿದ್ದು ತಿರಸ್ಕರಿಸಿದ ಪ್ರಕರಣಗಳಲ್ಲಿ ಅರ್ಜಿದಾರರಿಗೆ ಹಿಂಬರಹವನ್ನು ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.