ಸುಳ್ಯ:ಎಸ್ಕೆಎಸ್ಎಸ್ಎಫ್ ಅಡ್ಕ ಇರುವಂಬಳ್ಳ ಶಾಖೆಯ ವತಿಯಿಂದ ಆರಂಭಿಸಿದ ಝೈನ್ ಎಕ್ಸಲೆನ್ಸ್ ಫಾರ್ ಮೋರಲ್ ಎಜ್ಯುಕೇಶನ್ ಇದರ ಅಧೀನದಲ್ಲಿ ಕರ್ನಾಟಕದಲ್ಲಿ ಪ್ರಪ್ರಥಮವಾಗಿ ಸ್ಥಾಪಿಸಲ್ಪಡುವ ಎಸ್ಎನ್ಇಸಿ ‘ಶಿ ಸ್ಟ್ರೀಮ್’ ಮಹಿಳಾ ಕಾಲೇಜು ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ಅಜ್ಜಾವರದ
ಬಯಂಬು ಎಜು ಗಾರ್ಡನ್ನಲ್ಲಿ ನಡೆಯಿತು. ಸಮಸ್ತ ಕೇರಳ ಜಮ್ಇಯ್ಯತ್ತುಲ್ ಉಲಮಾ ಅಧ್ಯಕ್ಷರಾದ ಸಯ್ಯದುಲ್ ಉಲಮಾ ಅಸ್ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಅವರು ಶಿಲಾನ್ಯಾಸ ನೆರವೇರಿಸಿದರು. ಅವರು ಮಾತನಾಡಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಅತ್ಯಂತ ಸುರಕ್ಷಿತವಾಗಿರಬೇಕು ಎಂಬ ನಿಟ್ಟಿನಲ್ಲಿ ಸುತ್ತಲು ಆವರಣಗೋಡೆಯನ್ನು ರಚಿಸಿ ಉತ್ತಮ ವಾತಾವರಣ, ವಸತಿ ಸೌಕರ್ಯದೊಂದಿಗೆ, ಗುಣಮಟ್ಟದ ಶಿಕ್ಷಣವನ್ನು ನೀಡಲಾಗುವುದು. ಕಂಪ್ಯೂಟರ್ ಮತ್ತು ಮೊಬೈಲ್ ನ್ನು ಒಳ್ಳೆಯದಕ್ಕೆ ಉಪಯೋಗಿಸಬೇಕೆಂದರು.
ಅತಿಥಿಗಳಾಗಿ ಕೇಂದ್ರ ಮುಶಾವರ ಸದಸ್ಯ ಶೈಖುನಾ ಅಬ್ದುಲ್ ಖಾದರ್ ಮುಸ್ಲಿಯಾರ್ ಬಂಬ್ರಾಣ, ಕೊಡಗು ಖಾಝಿ ಶೈಖುನಾ ಅಬ್ದುಲ್ಲ ಮುಸ್ಲಿಯಾರ್, ಸಯ್ಯದ್ ಹಕೀಂ ತಂಙಳ್ ಆದೂರು, ಹುಸೈನ್ ತಂಙಳ್ ಆದೂರು, ಗೂನಡ್ಕ ತೆಕ್ಕಿಲ್ ಶಿಕ್ಷಣ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್, ರಾಜ್ಯ ವಕ್ಫ್ ಕೌನ್ಸಿಲ್ ಸದಸ್ಯ ಅನೀಸ್ ಕೌಸರಿ, ನ್ಯಾಯವಾದಿ ಪವಾಝ್, ಹಾಜಿ ಇಬ್ರಾಹಿಂ ಕತ್ತರ್, ರಶೀದ್ ಹಾಜಿ ಪರ್ಲಡ್ಕ, ತಮಿಡ್ ಹಾಜಿ ಸುಳ್ಯ, ಎಂ.ಪಿ ಅಬ್ದುಲ್ ರಜಾಕ್ ಹಾಜಿ, ತಾಜ್ ಮೊಹಮ್ಮದ್ ಸಂಪಾಜೆ, ಅಬೂಬಕ್ಕರ್ ಪೋಪಿ ಭಾಗವಹಿಸಿದ್ದರು.
ಝೈನ್ ಎಕ್ಸಲೆನ್ಸ್ ಫಾರ್ ಮೋರಲ್ ಎಜ್ಯುಕೇಶನ್ನ ಸಂಘಟನಾ ಕಾರ್ಯದರ್ಶಿ ಸಿದ್ದಿಕ್ ಅಡ್ಕ,ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶರೀಫ್, ವ್ಯವಸ್ಥಾಪಕರಾದ ಮೊಯಿದೀನ್ ಅನ್ಸಾರಿ, ಕೋಶಾಧಿಕಾರಿ ಮಹಮ್ಮದ್ ಕುಂಞಿ, ಎಸ್ಕೆಎಸ್ಎಸ್ಎಫ್ ಪ್ರಧಾನ ಕಾರ್ಯದರ್ಶಿ ಸಿದ್ದಿಕ್ ಬೋವಿಕಾನ ಹಾರೀಸ್ ಪೆಲ್ತಡ್ಕ ಮೊದಲಾದವರು ಉಪಸ್ಥಿತರಿದ್ದರು. ಚೆಯರ್ಮೆನ್ ಅನ್ವರ್ ಆಲಿ ದಾರಿಮಿ ಸ್ವಾಗತಿಸಿದರು, ಮೊಹಿದ್ದೀನ್ ಅನ್ಸಾರ್ ವಂದಿಸಿದರು.
ಸುಮಾರು 3 ಕೋಟಿ ವೆಚ್ಚದಲ್ಲಿ ಕಾಲೇಜು ಕಟ್ಟಡ ಹಾಗೂ ವಸತಿ ನಿಲಯ ನಿರ್ಮಾಣ ಆಗಲಿದೆ.ಈಗ ಇರುವ ಮಹಿಳಾ ಕಾಲೇಜು ಮುಂದೆ ಸಮಸ್ತದ ಅಡಿಯಲ್ಲಿ’ಸಮಸ್ತ ನ್ಯಾಷನಲ್ ಎಜ್ಯುಕೇಷನ್ ಕೌನ್ಸಿಲ್(ಎಸ್ಎನ್ಇಸಿ)ನ ‘ಶಿ ಸ್ಟ್ರೀಮ್’ ಸಿಲಬಸ್ ಪ್ರಕಾರ ನಡೆಯಲಿದೆ. ಎಸ್ಎಸ್ಎಲ್ಸಿ ನಂತರ ಪಿಯುಸಿ ಮತ್ತು ಪದವಿ ಸೇರಿ 5 ವರ್ಷದ ಶಿಕ್ಷಣವನ್ನು ನೀಡಲಾಗುತ್ತದೆ. ಇಲ್ಲಿ ಕಲಿಯುವ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ವ್ಯವಸ್ಥೆ ಕೂಡ ಲಭ್ಯವಿದೆ. ಸಮಸ್ತದ ಕರ್ನಾಟಕದ ಮೊದಲ ಶಿ ಸ್ಟ್ರೀಮ್ ಮಹಿಳಾ ಕಾಲೇಜು ಇದು ಎಂದು ಝೈನ್ ಎಕ್ಸಲೆನ್ಸ್ ಫಾರ್ ಮೋರಲ್ ಎಜ್ಯುಕೇಶನ್ನ ಪದಾಧಿಕಾರಿಗಳು ತಿಳಿಸಿದ್ದಾರೆ.